ಬೆಂಗಳೂರು: ನಗರದ ಜನರು ವಿದ್ಯುತ್, ನೀರಿನ ಸಂಪರ್ಕ ಪಡೆಯೋದಕ್ಕೆ, ಬಿಬಿಎಂಪಿ ನೀಡುವಂತ ಈ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂಗೆ ವಿದ್ಯುತ್ ಸಂಪರ್ಕ ಕೋರಿ ಸುಮಾರು 66,400 ಸಂಪರ್ಕಗಳಿಗಾಗಿ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ಮಾಹಿತಿ ಇರುತ್ತದೆ. ಘನ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:14605/2024 (WC ಸಂಖ್ಯೆ:46342/2013 ರ ಪ್ರಕರಣದಲ್ಲಿ) ದಿನಾಂಕ:17-12-2024 ರಂದು ನೀಡಿರುವ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರ ಪಡೆದಿರುವ ಕಟ್ಟಡಗಳಿಗೆ ಮಾತ್ರ ವಿದ್ಯುತ್ ಸಂಪರ್ಕ, ನೀರು ಸರಬರಾಜು / ಒಳಚರಂಡಿ ಸಂಪರ್ಕ ನೀಡುವಂತೆ ಆದೇಶಿಸಲಾಗಿದೆ.
ಘನ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕೋರಿರುವ ಕಟ್ಟಡಗಳಿಗೆ ಬಿಬಿಎಂಪಿ ಯಿಂದ ‘ಎ’ ಖಾತಾ ಅಥವಾ ‘ಬಿ’ ಖಾತಾ ಪಡೆಯಲಾಗಿರುವ ಬಗ್ಗೆ, ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯಲಾಗಿರುವ ಬಗ್ಗೆ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ / ಪೂರ್ಣತಾ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿರುವ / ಸಲ್ಲಿಸುವ ವಿವರಗಳನ್ನು ಪಡೆಯಲು ಬಿಬಿಎಂಪಿಯಿಂದ SMS ಮತ್ತು ದೂರವಾಣಿ ಕರೆ ಮುಖಾಂತರ ವಿದ್ಯುತ್ ಸಂಪರ್ಕಕ್ಕಾಗಿ ಬಾಕಿ ಇರುವ ಅರ್ಜಿದಾರರನ್ನು ಸಂಪರ್ಕಿಸಲಾಗುವುದು. ಬಿಬಿಎಂಪಿ ಕೋರುವ ಮಾಹಿತಿಯನ್ನು ಒದಗಿಸಲು ಹಾಗೂ ಈ ಕೆಳಕಂಡ ಆನ್ಲೈನ್ ಲಿಂಕ್ ನಲ್ಲಿ ನೊಂದಾಯಿತ Architect/ Engineer ಗಳ ಮುಖಾಂತರ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಬೆಂಗಳೂರು ನಾಗರೀಕರನ್ನು ಮುಖ್ಯ ಆಯುಕ್ತರು ಕೋರಿರುತ್ತಾರೆ.