ಬೆಂಗಳೂರು: ದ್ವಿತೀಯ ಪಿಯುಸಿ 3 ನೇ ಪರೀಕ್ಷೆಯನ್ನು ಜೂ.9 ರಿಂದ 20 ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಮೇ.28 ಕೊನೆಯ ದಿನವಾಗಿದೆ.
ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ-2 ಕ್ಕೆ ಅವಕಾಶ ಕಲ್ಪಿಸಿತ್ತು. ಅದರಿಂದ ರಾಜ್ಯದಲ್ಲಿ 60,692 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈಗ 3 ನೇ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಫಲಿತಾಂಶ ಪೂರ್ಣಗಳ್ಳದ ಎಲ್ಲಾ ವಿದ್ಯಾರ್ಥಿಗಳು ನೊಂದಾಯಿಸಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿಯನ್ನು ನೀಡಲಾಗಿದೆ. ಹಾಗೂ ನೊಂದಾಯಿಸಿಕೊಂಡ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮಕೈಗೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನಾ ತರಗತಿಯನ್ನು ನಡೆಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಪುನರಾವರ್ತಿತ/ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ರಂತೆ ಪರೀಕ್ಷೆ-3ರಲ್ಲೂ ಪರೀಕ್ಷಾ ಶುಲ್ಕ ಪಾವತಿಗೆ ವಿನಾಯಿತಿ ನೀಡಲಾಗಿದೆ. 2024-25 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ನೊಂದಾಯಿಸಿಕೊಂಡು ಹಾಜರಾತಿ ಕೊರತೆಯಿಂದ ಪರೀಕ್ಷೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಗೆ 2025ರ ದ್ವಿತೀಯ ಪಿಯುಸಿ ಪರೀಕ್ಷೆ-3 ರಲ್ಲಿ ಖಾಸಗಿ ಅಭ್ಯರ್ಥಿಯಾಗಿ ನೊಂದಾಯಿಸಿ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ತಾವು ಇಚ್ಚಿಸಿದ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅನುತ್ತೀರ್ಣರಾದ/ಫಲಿತಾಂಶ ಪೂರ್ಣಗೊಳ್ಳದ ವಿದ್ಯಾರ್ಥಿಗಳನ್ನು ಪರೀಕ್ಷೆ-3ರಲ್ಲಿ ಕಡ್ಡಾಯವಾಗಿ ನೊಂದಾಯಿಸಲು ಕ್ರಮಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
ಪರೀಕ್ಷೆ-1ರಲ್ಲಿ ನೊಂದಾಯಿಸಿಕೊAಡು ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಬರೆಯದೇ ಇರುವ ವಿದ್ಯಾರ್ಥಿಗಳು ಪರೀಕ್ಷೆ-3 ರಲ್ಲಿ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಬಹುದಾಗಿದೆ. 2006 ರಿಂದ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೂ ಪರೀಕ್ಷೆ-3 ರಲ್ಲಿ ನೊಂದಾಯಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೇ ನಿಗದಿತ ದಿನಾಂಕದೊಳಗೆ ಪರೀಕ್ಷೆ-3 ರಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.