ಬೆಂಗಳೂರು: ಮಾರ್ಚ್.1ರಿಂದ 20ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-1 ನಡೆಯಲಿದೆ. ಮಾರ್ಚ್.21ರಿಂದ ಏಪ್ರಿಲ್.4ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-1 ನಡೆಯಲಿದೆ. ಈ ಪರೀಕ್ಷೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಹತ್ವದ ಮಾಹಿತಿಯನ್ನು ನೀಡಲಾಗಿದೆ. ಅದೇನು ಅಂತ ಮುಂದೆ ಓದಿ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾಹಿತಿ ನೀಡಲಾಗಿದ್ದು, 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ-1 ಅನ್ನು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಸಲಾಗುತ್ತಿದೆ ಎಂದಿದೆ.
ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಈ ಪರೀಕ್ಷೆಗೆ ಸಂಬಂಧ ಪಟ್ಟಂತೆ ಅಂಕಿ ಅಂಶಗಳನ್ನು ಈ ಕೆಳಕಂಡಂತಿವೆ ಎಂದಿದೆ.
2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ಕ್ಕೆ 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 6,61,474 ವಿದ್ಯಾರ್ಥಿಗಳು ಹೊಸಬರು. 34,071 ಪುನರಾವರ್ತಿತ ವಿದ್ಯಾರ್ಥಿಗಳು. 18,317 ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದಿದೆ.
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-1ಕ್ಕೆ 8,96,447 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಹೊಸಬರು 8,42,817, ಪುನರಾವರ್ತಿತರು 38,091, ಖಾಸಗಿ ಅಭ್ಯರ್ಥಿಗಳು 15,539 ಆಗಿದ್ದಾರೆ ಎಂಬುದಾಗಿ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ 5050, ಎಸ್ ಎಸ್ ಎಲ್ ಸಿ ಪರೀಕ್ಷೆಗೆ 15,881 ಶಾಲಾ-ಕಾಲೇಜುಗಳು ನೋಂದಾಯಿಸಿಕೊಂಡಿದ್ದಾವೆ. ದ್ವಿತೀಯ ಪಿಯುಸಿ ಪರೀಕ್ಷೆಯು 1171 ಕೇಂದ್ರಗಳಲ್ಲಿ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆ 2818 ಕೇಂದ್ರಗಳಲ್ಲಿ ನಡೆಯಲಿದೆ ಎಂದಿದೆ.
ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ದ್ವಿತೀಯ ಪಿಯುಸಿಗಾಗಿ ಸ್ಥಾನಿಕ ಜಾಗೃತ ದಳ 2342 ಮಂದಿಯನ್ನು, ಎಸ್ ಎಸ್ ಎಲ್ ಸಿ ಗೆ 2818 ಮಂದಿಯನ್ನು ನೇಮಿಸಲಾಗಿದೆ. ವಿಚಕ್ಷಣ ಜಾಗೃತ ದಳದ ಸಂಖ್ಯೆ ದ್ವಿತೀಯ ಪಿಯುಸಿಗೆ 504, ಎಸ್ ಎಸ್ ಎಲ್ ಸಿ ಗೆ ಜಿಲ್ಲಾ ಹಂತದಲ್ಲಿ 410, ತಾಲ್ಲೂಕು ಹಂತದಲ್ಲಿ 1662 ಮಂದಿಯನ್ನು ನಿಯೋಜಿಸಿರುವುದಾಗಿ ಹೇಳಿದೆ.
ಪರೀಕ್ಷಾ ಸಂಬಂಧ ಕೈಗೊಂಡಿರುವ ಇತರೆ ಕ್ರಮಗಳು
2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮಧ್ಯವಾರ್ಷಿಕ (ಎಸ್-01) ಪರೀಕ್ಷೆಯನ್ನು ದಿನಾಂಕ:24.09.2024 ರಿಂದ 01.10.2024ರವರೆಗೆ ನಡೆಸಲಾಗಿರುತ್ತದೆ.
ಪೂರ್ವ ಸಿದ್ಧತಾ ಪರೀಕ್ಷೆಯನ್ನು ದಿನಾಂಕ:25.02.2025 ರಿಂದ 04.03.2025ರವರೆಗೆ ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರ ಹಂತದಲ್ಲಿ ನಡೆಸಲಾಗುತ್ತಿದೆ.
ಸದರಿ ಪರೀಕ್ಷೆ ನಡೆದ ಮರುದಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶ ಮತ್ತು ಕಲಿಕೆಯ ಕೊರತೆಯನ್ನು ವಿದ್ಯಾರ್ಥಿ ಮತ್ತು ಪೋಷಕರ ಗಮನಕ್ಕೆ ತರಲಾಗುವುದು. ನಂತರದ ಉಳಿದ ದಿನಗಳಲ್ಲಿ ವಿದ್ಯಾರ್ಥಿಯು ಕಲಿಯದೇ ಇರುವ ಅಂಶಗಳ ಬಗ್ಗೆ ಕಲಿಕೆಯಾಗುವಂತೆ ಅಗತ್ಯ ಕ್ರಮವಹಿಸಲಾಗುವುದು. ಪ್ರಸ್ತುತ ವಾರ್ಷಿಕವಾಗಿ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ಸದರಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಫಲಿತಾಂಶದ ಸುಧಾರಣೆಗೆ ಅಗತ್ಯಕುಮ ಕೈಗೊಳ್ಳಲಾಗಿರುತ್ತದೆ.
ದ್ವಿತೀಯ ಪಿ.ಯು.ಸಿ ಪರೀಕ್ಷೆ-1ರ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ:18.02.2025ರಂದು ಎಲ್ಲಾ ಪ್ರಾಂಶುಪಾಲರುಗಳಿಗೆ ಲಭ್ಯಗೊಳಿಸಲಾಗಿದೆ. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳ ಫಲಿತಾಂಶ ವೃದ್ಧಿಗಾಗಿ ಪ್ರತಿ ಮಾಹೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಸಿ.ಇ.ಓ ರವರುಗಳೊಂದಿಗೆ ಸಭೆಮಾಡಿ ಫಲಿತಾಂಶ ವೃದ್ಧಿಯ ಕುರಿತು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲಾಗಿರುತ್ತದೆ.
ಪ್ರತಿ 15 ದಿನಗಳಿಗೊಮ್ಮೆ ಪೋಷಕರ ಸಭೆಯನ್ನು ನಡೆಸಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ವರದಿಯನ್ನು ಫೋಷಕರಿಗೆ ತಿಳಿಸಲಾಗುತ್ತಿದೆ.
ಫಲಿತಾಂಶದ ಅಭಿವೃದ್ಧಿಗಾಗಿ 20 ಅಂಶಗಳ ಕಾರ್ಯಕ್ರಮಗಳನ್ನು ರೂಪಿಸಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಜಿಲ್ಲಾ ಉಪನಿರ್ದೇಶಕರು (ಆಡಳಿತ), (ಅಭಿವೃದ್ಧಿ) ಮತ್ತು ಪದವಿ ಪೂರ್ವ ಶಿಕ್ಷಣ ರವರುಗಳು ಎಲ್ಲಾ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಯನ್ನು ನಿರ್ವಹಿಸಿರುತ್ತಾರೆ.
ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಒಟ್ಟು 03 ಸೆಟ್ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಂಡಲಿ ಜಾಲತಾಣದಲ್ಲಿ ಲಭ್ಯಗೊಳಿಸಲಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಪಟ್ಟಂತೆ ಒಟ್ಟು 04 ಸಟ್ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮಂಡಲಿ ಜಾಲತಾಣದಲ್ಲಿ ಲಭ್ಯಗೊಳಿಸಲಾಗಿದೆ.
ದ್ವಿತೀಯ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಮುಖಾಂತರ ವೀಕ್ಷಣೆ ಮಾಡಲಾಗುವುದು.
ಪರೀಕ್ಷಾ ದಿನಗಳಂದು ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಾ 200 ಮೀಟರ್ ಪ್ರದೇಶವನ್ನು ನಿಷೇಧಿತ ವುದೇಶವೆಂದು ಘೋಷಿಸುವುದು ಹಾಗೂ ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್/ಸೈಬರ್/ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮವಹಿಸಲಾಗುವುದು.
ಜಿಲ್ಲೆಯಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ಶಿಕ್ಷಣ ಕಾಯ್ದೆ ನಿಯಮಗಳಡಿಯಲ್ಲಿ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪರೀಕ್ಷೆ ನಡೆಸಲು ಬೇಕಾಗಿರುವ ಸೂಕ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ