ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ʻHRMSʼ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿಸಿರುವ ಕೆ.ಜಿ ಐಡಿ ಪ್ರಥಮ ಪಾಲಿಸಿ ಸಂಖ್ಯೆಯನ್ನು ಸರಿಪಡಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಈ ಬಗ್ಗೆ ಆದೇಶವನ್ನು ಕೂಡ ಹೊರಡಿಸಲಾಗಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯವು ಪ್ರಗತಿಯಲ್ಲಿದ್ದು, ಅದರಲ್ಲಿ ಪ್ರಸ್ತುತ ವಿಮಾದಾರರಿಗೆ online ಮೂಲಕ ಸೇವೆಯನ್ನು ನೀಡಲು ಪ್ರಾರಂಭಿಸಲಾಗಿದೆ. ಈ ಸಂಬಂಧ ಗಣಕೀಕೃತ ಮಾಹಿತಿಯಲ್ಲಿನ ವಿಮಾದಾರರ ಪ್ರಥಮ ಕೆ.ಜಿ.ಐಡಿ ಸಂಖ್ಯೆಯ ದತ್ತಾಂಶವನ್ನು ಹೆಚ್.ಆರ್ .ಎಂ.ಎಸ್. ತಂತ್ರಾಂಶದಲ್ಲಿರುವ ವಿಮಾದಾರರ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆಯ ದತ್ತಾಂಶದೊಂದಿಗೆ ಪರಿಶೀಲಿಸಲಾಗಿ ಈ ಕೆಳಕಂಡ ಅಂಶಗಳನ್ನು ಗಮನಿಸಲಾಗಿದೆ.
1) ರಾಜ್ಯ ಸರ್ಕಾರದ ವಿವಿಧ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ಪ್ರಥಮ ಕೆ.ಜಿ.ಐ.ಡಿ. ಪಾಲಿಸಿ ಸಂಖ್ಯೆಯನ್ನು ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನಮೂದಿಸದೆ ಇತರೆ ಸಂಖ್ಯೆಯನ್ನು ನಮೂದಿಸಿ ವೇತನವನ್ನು ಸೆಳೆಯಲಾಗುತ್ತಿದೆ.
2) ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ಇತರೆ ವಿಮಾದಾರರ ಪ್ರಥಮ/ ತರುವಾಯದ ಪಾಲಿಸಿ ಸಂಖ್ಯೆಯನ್ನು ಪ್ರಥಮ ಪಾಲಿಸಿ ಸಂಖ್ಯೆಯನ್ನಾಗಿ ಹೆಚ್.ಆರ್.ಎಂ.ಎಸ್.ತಂತ್ರಾಂಶದಲ್ಲಿ ನಮೂದಾಗಿರುವುದು ಕಂಡುಬರುತ್ತಿದೆ.
3) ಕೆಲವು ಅಧಿಕಾರಿ/ನೌಕರರ ಪ್ರಕರಣಗಳಲ್ಲಿ ವಿಮಾ ಪಾಲಿಸಿಗಳಲ್ಲಿ ನಮೂದಿಸಿರುವ ಜನ್ಮ ದಿನಾಂಕ ಹಾಗೂ ಹೆಚ್.ಆರ್.ಎಂ.ಎಸ್. ತಂತ್ರಾಂಶದಲ್ಲಿ ನಮೂದಿಸಿರುವ ಜನ್ಮದಿನಾಂಕದಲ್ಲಿ ವ್ಯತ್ಯಾಸವಿರುವುದು ಕಂಡುಬರುತ್ತಿದೆ.
ಇದರಿಂದಾಗಿ ವಿಮಾದಾರರ ವೇತನದಲ್ಲಿ ಕಟಾವಣೆ ಮಾಡಲಾಗಿರುವ ವಿಮಾ ಕಂತು ಹಾಗೂ ಸಾಲದ ಕಂತುಗಳ ಮಾಹಿತಿಯು ವಿಮಾದಾರರ ಖಾತೆಗೆ ಜಮಾವಣೆಗೊಂಡಿರುವುದಿಲ್ಲ. ಅದರಿಂದ ವಿಮಾ ಕಂತುಗಳು ಹಾಗೂ ಸಾಲದ ಕಂತುಗಳು ಬಾಕಿ ಎಂದು ಪರಿಗಣಿಸಲಾಗುತ್ತಿದೆ. ಇಂತಹ ವಿಮಾದಾರರು ವಿಮಾ ಇಲಾಖೆಯಿಂದ ನೀಡಲಾಗುತ್ತಿರುವ ಆನ್‌ಲೈನ್ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೇ ವಿಮಾ ಇಲಾಖೆಯೂ ಸಹ ವಿಮಾದಾರರ ಹಕ್ಕು ಪ್ರಕರಣಗಳನ್ನು (ಫಲಪ್ರದ, ಮರಣಜನ್ಯ ಹಾಗೂ ವಿಮಾತ್ಯಾಗ ಮೌಲ್ಯ) ಸಕಾಲದಲ್ಲಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿಲ್ಲ.
ಈ ಹಿನ್ನಲೆಯಲ್ಲಿ, ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತೆ ಹೆಚ್.ಆರ್.ಎಂ.ಎಸ್. ನಿರ್ದೇಶನಾಲಯವು ಇಎಸ್‌ಎಸ್ (Employee Self Service) ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ. ಈ ವೆಬ್ ಸೈಟ್ https://hrmsess.karnataka.gov.in/login/loadLogin ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಲ್ಲಿ ಎಲ್ಲಾ ಸರ್ಕಾರಿ ನೌಕರರು ಸದರಿ ಸೇವೆಯಲ್ಲಿ ಲಭ್ಯವಿರುವ ವೇತನ ಪತ್ರ/ಚೀಟಿಯನ್ನು ಪಡೆಯಲು, ಕರ್ನಾಟಕ ಆರೋಗ್ಯ ಸಂಜೀವಿನಿ ಸೇವೆಯಡಿ ತಮ್ಮ ಕುಟುಂಬದ ಸದಸ್ಯರುಗಳನ್ನು ನೋಂದಾಯಿಸಲು, ತಮ್ಮ ಎಲ್ಲಾ ಕೆ.ಜಿ.ಐ.ಡಿ ಪಾಲಿಸಿಗಳ ಮಾಹಿತಿಯನ್ನು ಪರಿಶೀಲಿಸಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಇದರಿಂದ ತಮ್ಮ ಎಲ್ಲಾ ಪಾಲಿಸಿಗಳ ಸರಿಯಾದ ವಿವರಗಳನ್ನು ಹೆಚ್‌ಆರ್‌ಎಂಎಸ್-2 ನಲ್ಲಿ ದಾಖಲಿಸಲು ಅನುಕೂಲವಾಗುವುದಲ್ಲದೇ, ತಮ್ಮ ಕೆಜಿಐಡಿ ಪಾಲಿಸಿಗಳ ಸರಿಯಾದ ಮಾಹಿತಿಯ ಸಾಫ್ಟ್ ಪ್ರತಿಯನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ಪಾಲಿಸಿಯ ವ್ಯವಹಾರಗಳು ಕೆ.ಜಿ.ಐ.ಡಿ, ಖಜಾನೆ ಹಾಗೂ ಹೆಚ್.ಆರ್.ಎಂ.ಎಸ್. ನಲ್ಲಿ ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ.
ಆದ್ದರಿಂದ ಈ ಕಾರ್ಯವನ್ನು ಸುಗಮವಾಗಿ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ ವಿಮಾ ಇಲಾಖೆಯಿಂದ ಈ ಕೆಳಕಂಡ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲಾ ವಿಮಾಧಿಕಾರಿಯನ್ನಾಗಲೀ ಅಥವಾ ಈ ಕೆಳಕಂಡ ನೋಡಲ್ ಅಧಿಕಾರಿಯನ್ನಾಗಲೀ ಸಂಪರ್ಕಿಸಬಹುದಾಗಿದೆ ಅಂತ ತಿಳಿಸಿದೆ.
‘ಬಾಸ್ ಇಸ್ ಅಲ್ವೇಸ್ ರೈಟ್’ : ಶೋಭಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂಬ BSY ಹೇಳಿಕೆಗೆ CT ರವಿ ತಿರುಗೇಟು
ಕರ್ನಾಟಕದ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ !