ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಸೇವಾ ವಿವರಗಳನ್ನು ಹೆಚ್.ಆರ್.ಎಂ.ಎಸ್ ತಂತ್ರಾಂಶದಲ್ಲಿ ದಾಖಲಿಸುವಂತೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶವನ್ನು ಅನುಷ್ಠಾನಗೊಳಿಸುವ ಸಂಬಂಧ ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ ಅಂಗವಾದ ವಿದ್ಯುನ್ಮಾನ ಸೇವಾ ವಹಿಯನ್ನು (Electronic Service Register- ESR) ಯನ್ನು ಸಿದ್ಧಪಡಿಸಲಾಗಿದೆ. 2021-22 ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಈಗಾಗಲೇ ನೇಮಕಗೊಂಡಿರುವ ಮತ್ತು ಇನ್ನೂ ಮುಂದೆ ನೇಮಕಗೊಳ್ಳುವ ಎಲ್ಲಾ ಅಧಿಕಾರಿಗಳು / ನೌಕರರುಗಳ ಸೇವಾ ವಹಿಯನ್ನು ಹೆಚ್.ಆರ್.ಎಮ್.ಎಸ್.2.0 ತಂತ್ರಾಂಶದ “ವಿದ್ಯುನ್ಮಾನ ಸೇವಾವಹಿ” ಯಲ್ಲಿಯೇ ನಿರ್ವಹಿಸುವಂತೆ ಉಲ್ಲೇಖದ 1,2,3,4,5 ಮತ್ತು 6 ರ ಸರ್ಕಾರದ ಆದೇಶಗಳಲ್ಲಿ ತಿಳಿಸಲಾಗಿರುತ್ತದೆ.
ಈ ಸಂಬಂಧ ಈಗಾಗಲೇ ದಿನಾಂಕ : 04-09-2024 ಮತ್ತು 21-11-2024 ರಂದು ಎರಡು ಬಾರಿ ತರಬೇತಿಯನ್ನು ನೀಡಲಾಗಿರುತ್ತದೆ. ಅಲ್ಲದೇ ಈ ಕಚೇರಿಯ ಸಮ ಸಂಖ್ಯೆ ಜ್ಞಾಪನ ದಿನಾಂಕ : 10-12-2024 ರಲ್ಲಿ ವಿದ್ಯುನ್ಮಾನ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯಕ್ಕಾಗಿ ನೋಡಲ್ ಅಧಿಕಾರಿಗಳು ಮತ್ತು ಸಂಪನ್ಮೂಲ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸದರಿ ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳ ಮತ್ತು ಜವಾಬ್ದಾರಿಗಳ ಬಗ್ಗೆ ಸೂಚಿಸಲಾಗಿರುತ್ತದೆ. ಆದರೂ ಸಹ ವಿದ್ಯುನ್ಮಾನ ಸೇವಾವಹಿ ಅನುಷ್ಠಾನಗೊಳಿಸುವ ಕಾರ್ಯವೂ ತೃಪ್ತಿಕರವಾಗಿರುವುದಿಲ್ಲ.
ಉಲ್ಲೇಖ-7 ರ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಪತ್ರದಲ್ಲಿ ಈಗಾಗಲೇ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಇಎಸ್‌ಆರ್ ಅನುಷ್ಠಾನ ಮಾಡಲು ಸುತ್ತೋಲೆಗಳನ್ನು ಹೊರಡಿಸಿ ಹಾಗೂ ಎಲ್ಲಾ ಕಛೇರಿ ಮುಖ್ಯಸ್ಥರು / ಡಿಡಿಓ ಗಳಿಗೆ ಇಎಸ್‌ಆರ್ ತರಬೇತಿಯನ್ನು ನೀಡಲಾಗಿರುತ್ತದೆ. ಆದರೂ ಸಹ ಇಎಸ್‌ಆರ್ ಅನುಷ್ಠಾನದ ಪ್ರಗತಿ ತೃಪ್ತಿಕರವಾಗಿರುವುದಿಲ್ಲ. ಹೆಚ್.ಆರ್.ಎಂ.ಎಸ್-2 ತಂತ್ರಾಂಶವನ್ನು ಸರ್ಕಾರಿ ನೌಕರರಿಗೆ ನೀಡುವಂತಹ ಎಲ್ಲಾ ಸೇವೆಗಳು Online ಮುಖಾಂತರವೇ ನೀಡಲಾಗುವುದರಿಂದ ನೌಕರರ ಇಲ್ಲಿಯವರೆಗಿನ ಸೇವಾ ವಿವರಗಳ ಮಾಹಿತಿಯನ್ನು ವಿದ್ಯುನ್ಮಾನ ರೂಪದಲ್ಲಿ ವರ್ಗಾಯಿಸುವುದು ಅತ್ಯವಶ್ಯಕವಾಗಿರುತ್ತದೆ. ಆದ್ದರಿಂದ ವಿದ್ಯುನ್ಮಾನ ಸೇವಾ ವಹಿಯ ಅನುಷ್ಠಾನವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲು ತಾವು ತಮ್ಮ ಎಲ್ಲಾ ಹಣ ಸೆಳೆಯುವ ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದೆ.” ಎಂದು ಪತ್ರದಲ್ಲಿ ತಿಳಿಸಿರುತ್ತಾರೆ.