ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಕರಿಗೆ ಮಹತ್ವದ ಮಾಹಿತಿ ಎನ್ನುವಂತೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕ್ರಿಯೆ ಕುರಿತಾದ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆ ಜೊತೆಗೆ ಆಯ್ಕೆ ಸಮಿತಿಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ” ಪ್ರಶಸ್ತಿಗೆ ಅರ್ಹ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಶಾಲಾ ಶಿಕ್ಷಣ ಇಲಾಖೆಯ ಆನ್-ಲೈನ್ ಪೋರ್ಟಲ್ https://schooleducation.karnataka.gov.in/en ರ ಮೂಲಕ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಲು ವಹಿಸಬೇಕಾದ ಕ್ರಮಗಳ ಕುರಿತು, ಸದರಿ ಪ್ರಕ್ರಿಯೆಗೆ ಸಂಬಂಧಿಸಿದ ವೇಳಾಪಟ್ಟಿಯ ಬಗ್ಗೆ ಹಾಗೂ ಈ ಪ್ರಶಸ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹರು ಮೇಲ್ಕಂಡಂತೆ ಅರ್ಜಿಗಳನ್ನು ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಇಲಾಖಾಧಿಕಾರಿಗಳು ಜರುಗಿಸಬೇಕಾದ ಕ್ರಮಗಳ ಕುರಿತು ಈಗಾಗಲೇ ವಿಸೃತವಾಗಿ ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಈ ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆಯನ್ನು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೈಗೊಳ್ಳಲು ಸರ್ಕಾರದ ಪತ್ರಗಳಂತೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಆಯ್ಕೆ ಸಮಿತಿಗಳನ್ನು ಕೆಳಕಂಡಂತೆ ರಚಿಸಲಾಗಿದೆ ಮತ್ತು ಪುನರ್-ರಚಿಸಲಾಗಿದೆ.
ಅದರಂತೆ, 2024-25 ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯಿಂದ ಪ್ರಾರಂಭವಾಗಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳ ಶಿಫಾರಸ್ಸು ಪ್ರಕ್ರಿಯೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಸಮಿತಿ ಕೈಗೊಳ್ಳುವ ಅಂತಿಮ ಆಯ್ಕೆಪಟ್ಟಿಯವರೆಗಿನ ಎಲ್ಲಾ ಹಂತಗಳನ್ನು | ಪ್ರಕ್ರಿಯೆಗಳನ್ನು ಕೆಳಕಂಡ ಪರಿಷ್ಕೃತ ವೇಳಾಪಟ್ಟಿಯ ಅನುಸಾರ ಸಂಪೂರ್ಣವಾಗಿ ಆನ್-ಲೈನ್ ಮೂಲಕ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಹೀಗಿದೆ ಪರಿಷ್ಕೃತ ವೇಳಾಪಟ್ಟಿ
- ಅರ್ಹ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಅರ್ಜಿ ಸಲ್ಲಿಸಲು ಮರು ನಿಗದಿಪಡಿಸಿರುವ ಅವಧಿ – ದಿನಾಂಕ 03-08-2024 ರಿಂದ 21-08-2024ರವರೆಗೆ.
- ತಾಲ್ಲೂಕು ಮಟ್ಟದ ಆಯ್ಕೆ ಸಮಿತಿಗಳಿಗೆ ಮರು ನಿಗದಿ ಪಡಿಸಿರುವ ಅವಧಿ – ದಿನಾಂಕ 22-08-2024ರಿಂದ 26-08-2024.
- ಜಿಲ್ಲಾ ಮಟ್ಟದ ಆಯ್ಕೆ ಸಮಿತಿಗಳಿಗೆ ಮರು ನಿಗದಿಪಡಿಸಿರುವ ಅವಧಿ – ದಿನಾಂಕ 27-08-2024 ರಿಂದ 29-08-2024.
- ರಾಜ್ಯ ಮಟ್ಟದ ಆಯ್ಕೆ ಸಮಿತಿಗೆ ಮರು ನಿಗದಿಪಡಿಸಿರುವ ಅವಧಿ – ದಿನಾಂಕ 30-08-2024ರಿಂದ 01-09-2024.
- ಸರ್ಕಾರಕ್ಕೆ ವರದಿ ಮಾಡುವುದು – ದಿನಾಂಕ 02-09-2024
- ಪ್ರಶಸ್ತಿಗೆ ಆಯ್ಕೆಯಾದವರಿಗೆ ಮಾಹಿತಿ ನೀಡುವುದು – ದಿನಾಂಕ 03-09-2024
- ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ – ದಿನಾಂಕ 05-09-2024ರ ಗುರುವಾರದಂದು.
2024-25 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯಾ ಜಿಲ್ಲೆಗಳ ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಕಂಡಂತೆ ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವುದನ್ನು ಪ್ರೋತ್ಸಾಹಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳು ಈಗಾಗಲೇ ತಿಳಿಸಿರುವ ಕ್ರಮಗಳನ್ನು ವಹಿಸುವಂತೆ ಮತ್ತೊಮ್ಮೆ ತಿಳಿಸಲಾಗಿದೆ.
ಮುಂದುವರೆದು, ಈ ಪ್ರಶಸ್ತಿ ಕುರಿತಾದ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಆಯ್ಕೆ ಸಮಿತಿಗಳ ಸಮಗ್ರ ಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ಶಾಲಾ & ಪ್ರೌಢ ಶಾಲಾ ವಿಭಾಗಗಳಲ್ಲಿ ಪ್ರತಿ ಅಭ್ಯರ್ಥಿಗೆ ನೀಡಬಹುದಾದ ಗರಿಷ್ಟ 100 ಅಂಕಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಕುರಿತಾದ ಸಮಗ್ರವಾದ ಮೌಲ್ಯ ಮಾಪನವನ್ನು ಮತ್ತಷ್ಟು ಸುಧಾರಿಸುವ ಮೂಲಕ ಸದರಿ ಪ್ರಶಸ್ತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುವ ಸದುದ್ದೇಶದಿಂದ ಸದರಿ 100 ಅಂಕಗಳನ್ನು ಮರು-ಹಂಚಿಕೆ ಮಾಡಲಾಗಿದೆ ಎಂದಿದ್ದಾರೆ.
ಈ ಪೈಕಿ ಪ್ರಾಥಮಿಕ ಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿಯಲ್ಲಿ ಇರುವ ಅಂಶಗಳನ್ನು ಆಧರಿಸಿ, ಅನುಬಂಧ ಭಾಗ-02 ರಲ್ಲಿ FLN ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮತ್ತು ಬೋಧನಾ ವಿಷಯದಲ್ಲಿ ಕಳೆದ ಐದು ವರ್ಷಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಹಾಗೂ ವಿವಿಧ
ಸ್ಪರ್ಧೆಗಳಲ್ಲಿ & ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರುವ ಕುರಿತಾದ ಅಂಶಗಳಿಗೆ ಒಟ್ಟು 30 ಅಂಕಗಳನ್ನು ಹೊಸದಾಗಿ ನಿಗದಿಪಡಿಸಲಾಗಿದೆ. ಪ್ರೌಢ ಶಾಲಾ ವಿಭಾಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರ್ಜಿಯಲ್ಲಿ ಇರುವ ಅಂಶಗಳನ್ನು ಆಧರಿಸಿ, 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ, 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶಾಲೆ ಪಡೆದಿರುವ ಶ್ರೇಣಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ & ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿರುವ ಕುರಿತಾದ ಅಂಶಗಳಿಗೆ ಒಟ್ಟು 30 ಅಂಕಗಳನ್ನು ಹೊಸದಾಗಿ ನಿಗದಿಪಡಿಸಲಾಗಿದೆ. ಇನ್ನುಳಿದ ಅಂಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!
ನಾಳೆ ರಾಜ್ಯಪಾಲರ ನಡೆ ವಿರುದ್ಧ ರಾಜ್ಯಾಧ್ಯಂತ ಕಾಂಗ್ರೆಸ್ ಪ್ರತಿಭಟನೆ: ಡಿಸಿಎಂ ಡಿ.ಕೆ ಶಿವಕುಮಾರ್