ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಸಾವಿರಾರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನೌಕರರಿಗೆ ಮಹತ್ವದ ಮಾಹಿತಿ ಎನ್ನುವಂತೆ ನಿಮಗೆ ಸಿಗುವಂತ ರಜಾ ಸೌಲಭ್ಯಗಳು ಯಾವುವು ಅನ್ನುವ ಬಗ್ಗೆ ಮುಂದೆ ಸಂಪೂರ್ಣ ಮಾಹಿತಿ ಇದೆ ಓದಿ.
ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿಗಳು ದಿನಾಂಕ 10-02-2023ರಲ್ಲೇ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಅದರಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ, ಸಮಾಲೋಚಕರು, ವ್ಯವಸ್ಥಾಪಕರು ಮತ್ತು ಇತರ ಎಲ್ಲಾ ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ರಜಾ ಸೌಲಭ್ಯವನ್ನು ನೀಡಲಾಗುತ್ತಿರುತ್ತದೆ ಎಂದಿದ್ದಾರೆ.
1. ನೇರಗುತ್ತಿಗೆ ಹಾಗೂ ಮಾನವ ಸಂಪನ್ಮೂಲ ಸಂಸ್ಥೆಯಿಂದ ಒದಗಿಸುವ ಸಿಬ್ಬಂದಿಗಳಿಗೆ ವಾರ್ಷಿಕ 10 ದಿನಗಳ ಸಾಂದರ್ಭಿಕ ರಜಾ ಸೌಲಭ್ಯ ಒದಗಿಸಲಾಗಿದೆ.
2. ನೇರಗುತ್ತಿಗೆ ಹಾಗೂ ಮಾನವ ಸಂಪನ್ಮೂಲ ಸಂಸ್ಥೆಯಿಂದ ಒದಗಿಸುವ ಸಿಬ್ಬಂದಿಗಳಿಗೆ ವಾರ್ಷಿಕ 10 ದಿನಗಳ ವೈದ್ಯಕೀಯ ರಜಾ ಸೌಲಭ್ಯ ಒದಗಿಸಲಾಗಿದೆ (ನೋಂದಣಿ ಹೊಂದಿರುವ ವೈದ್ಯರಿಂದ ವೈದ್ಯಕೀಯ ದೃಢೀಕರಣ ಸಲ್ಲಿಸತಕ್ಕದ್ದು)
3. ಮಹಿಳೆಯರಿಗೆ ಹೆರಿಗೆ ರಜೆ – 180 ದಿನಗಳ ಹೆರಿಗೆ ರಜೆ ಸೌಲಭ್ಯವನ್ನು ಎರಡು ಮಕ್ಕಳಿಗೆ ಮಿತಿಗೊಳಿಸಿ, ನೇರ ಗುತ್ತಿಗೆ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. (ನಿಯಮಾನುಸಾರ ನೋಂದಾಯಿತ ವೈದ್ಯಕೀಯ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು).
4. ಪುರುಷ ನೌಕರರ ಪತ್ನಿಗೆ ಹರಿಗೆಯಾದ ದಿನಾಂಕದಿಂದ 15 ದಿವಸಗಳ ಪಿತೃತ್ವ ರಜೆಯನ್ನು ಮಂಜೂರು ಮಾಡಲಾಗಿರುತ್ತದೆ.
ಕರ್ನಾಟಕ ಸರ್ಕಾರ ಸಚಿವಾಲಯ, ಆರ್ಥಿಕ ಇಲಾಖೆ ರವರ ಅಧಿಕೃತ ಜ್ಞಾಪನದಲ್ಲಿ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ (ಹರಿಗೆ) ರಜೆಯ ಸೌಲಭ್ಯವನ್ನು ವಿಸ್ತರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ರಜಾ ಸೌಲಭ್ಯ ಮಂಜೂರು ಮಾಡಿದೆ ಎಂದಿದ್ದಾರೆ.
1. ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ (ಒಂದು ನೂರ ಎಂಭತ್ತು ದಿನಗಳು) ಮಂಜೂರು ಮಾಡಲಾಗಿದೆ.
2.ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು 6 ವಾರಗಳನ್ನು ಮೀರಬಾರದು.
3.ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿತ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥಿತವಾಗಿರಬೇಕು.
4. ಮಾತೃತ್ವ ರಜೆಯ ಮೇಲೆ ತೆರಳುವ ಸಿಬ್ಬಂದಿಗಳಿಗೆ ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ. 5.ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಸಿಬ್ಬಂದಿಗಳಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡತಕ್ಕದ್ದಲ್ಲ.
6. ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಮಹಿಳಾ ಸಿಬ್ಬಂದಿಗಳು ಈ ಕುರಿತು ಸ್ವಯಂ-ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸತಕ್ಕದ್ದು.
7. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮಹಿಳಾ ಸಿಬ್ಬಂದಿಗಳಿಗೆ ಗರಿಷ್ಠ 180 ದಿನಗಳವರೆಗೆ ಮಾತೃತ್ವ ರಜೆಯನ್ನು ಈ ಕೆಳಕಂಡಂತೆ ನಿಯತಗೊಳಿಸತಕ್ಕದ್ದು.
ಶ್ರೀಮತಿ X ಇವರ ಒಪ್ಪಂದದ ಅವಧಿ ದಿನಾಂಕ: 15.07.2021 ರಿಂದ ಪ್ರಾರಂಭವಾಗಿ ದಿನಾಂಕ: 14.07.2022ಕ್ಕೆ ಮುಕ್ತಾಯವಾಗುತ್ತದೆ. ಅವರು ದಿನಾಂಕ: 01.05.2022 ರಂದು ಮಾತೃತ್ವ ರಜೆಯ ಮೇಲೆ ತೆರಳಿದ್ದಲ್ಲಿ ಹಾಗೂ ಅವರ ಗುತ್ತಿಗೆ ಅವಧಿಯು ವಿಸ್ತರಿಸಲ್ಪಡದಿದ್ದಲ್ಲಿ ಅವರ ಮಾತೃತ್ವ ರಜೆಯ ಅವಧಿಯನ್ನು ಒಪ್ಪಂದದ ಗರಿಷ್ಠ ಅವಧಿಯವರಗೆ ಅಂದರೆ ದಿನಾಂಕ: 14.07.2022 ರವರೆಗೆ ಸೀಮಿತಗೊಳಿಸತಕ್ಕದ್ದು.
ಒಂದು ವೇಳೆ ಅವರ ಗುತ್ತಿಗೆ ಅವಧಿಯು ವಿಸ್ತರಿಸಲ್ಪಟ್ಟಲ್ಲಿ ಆಗ ಅವರು ಗರಿಷ್ಟ 180 ದಿನಗಳ ಮಾತೃತ್ವ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳ ಮೇಲಾಧಿಕಾರಿಗಳು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ದಿನನಿತ್ಯ ಕಾರ್ಯ ನಿರ್ವಹಿಸುವ ವೇಳಾ ಪಟ್ಟಿ (Roaster Time Table) ಅನ್ನು ಅಳವಡಿಸಿಕೊಂಡು ಪತಿ ವಾರದಲ್ಲಿ ಒಂದು ದಿನ ರಜಾ ಸೌಲಭ್ಯವನ್ನು ಎಲ್ಲಾ ಸಿಬ್ಬಂದಿಗಳಿಗೆ ನಿಯಮಾನುಸಾರ ದೂರಕುವಂತೆ ಆದೇಶಿಸಲಾಗಿರುತ್ತದೆ.
ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆ ಸೌಲಭ್ಯದಿಂದ ವಂಚಿತರಾಗಿರುವುದರಿಂದ ಈ ವೃಂದದ ನೌಕರರಿಗೆ ಈ ಹಿಂದಿನಂತೆ ಪ್ರತಿ ಕ್ಯಾಲೆಂಡರ್ ವರ್ಷಕ್ಕೆ 15 ದಿವಸಗಳ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿರುತ್ತದೆ.
ಸದರಿ ಆದೇಶದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ವೈದ್ಯರು, ತಜ್ಞರುಗಳು ಹಾಗೂ ಶುಶೂಷಕರಿಗೆ ಮಾತ್ರ ಅನ್ವಯಿಸುವಂತೆ 15 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದೆ ಎಂದಿದ್ದಾರೆ.
ಬೆಂಗಳೂರು ಜನತೆ ಗಮನಕ್ಕೆ: ಸೆ.21ರಂದು ಈ ಮತ್ತಷ್ಟು ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಮುಂದುವರಿದ ಟೆಕ್ ಕಂಪನಿಗಳ ಉದ್ಯೋಗ ಕಡಿತ: ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ CISCO | Lay offs