ಬೆಂಗಳೂರು: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಅಭ್ಯರ್ಥಿಗಳ ಕಡ್ಡಾಯ ಸೇವಾ ಕಾಯ್ದೆ-2012 ರ ಅಡಿಯಲ್ಲಿನ ಗೊಂದಲಗಳಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ಸ್ಪಷ್ಟೀಕರಣವನ್ನು ನೀಡಿ ಆದೇಶ ಹೊರಡಿಸಲಾಗಿದೆ. ಅದೇನು ಅಂತ ಮುಂದೆ ಓದಿ.
1) ಪದವಿ ಪ್ರಮಾಣಪತ್ರಗಳ ವಿತರಣೆ (Final Degree Certificate):
ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸಬೇಕಾದ ಬಾಧ್ಯತೆ ಇರುವ ಅಭ್ಯರ್ಥಿಗಳಿಗೆ ಅಂತಿಮ ಪದವಿ ಪ್ರಮಾಣಪತ್ರ ಅಥವಾ ಕೋರ್ಸ್ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ನೀಡಲು 2012 ರ ಕಡ್ಡಾಯ ಸೇವಾ ಕಾಯ್ದೆಯಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
2) ಮೂಲ ದಾಖಲೆಗಳ ವಾಪಸಾತಿ (Returning of Original Documents):
ಪಿಜಿ (PG) ಪ್ರವೇಶದ ಸಮಯದಲ್ಲಿ ಕಾಲೇಜುಗಳಲ್ಲಿ ಅಭ್ಯರ್ಥಿಗಳು ಸಲ್ಲಿಸಿದ ಮೂಲ ದಾಖಲೆಗಳನ್ನು ಹಿಂತಿರುಗಿಸುವುದಕ್ಕೂ ಮತ್ತು ಕಡ್ಡಾಯ ಸೇವೆಗೂ ಯಾವುದೇ ಸಂಬಂಧವಿರುವುದಿಲ್ಲ. ಅಭ್ಯರ್ಥಿಗಳ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿಲ್ಲದ ಕಾರಣ, ಅವುಗಳನ್ನು ಹಿಂತಿರುಗಿಸತಕ್ಕದ್ದು.
3) ಷರತ್ತುಬದ್ಧ ಅಥವಾ ತಾತ್ಕಾಲಿಕ ನೋಂದಣಿ (Conditional Registration):
* ಕಡ್ಡಾಯ ಸೇವೆ ಸಲ್ಲಿಸದ ಅಭ್ಯರ್ಥಿಗಳಿಗೆ ಸ್ವತಂತ್ರವಾಗಿ ಚಿಕಿತ್ಸೆ ನೀಡಲು ಮತ್ತು ಔಷಧಿಯನ್ನು ಶಿಫಾರಸು ಮಾಡಲು ‘ತಾತ್ಕಾಲಿಕ ನೋಂದಣಿ’ಯನ್ನು ನೀಡಬಹುದು.
* ಕರ್ನಾಟಕ ಮೆಡಿಕಲ್ ಕೌನ್ಸಿಲ್ (KMC) ತನ್ನ ರಿಜಿಸ್ಟರ್‌ನಲ್ಲಿ “ಅಭ್ಯರ್ಥಿಯು ಕರೆದಾಗ ಕಡ್ಡಾಯ ಸೇವೆಗೆ ಹಾಜರಾಗಬೇಕು” ಎಂಬ ಷರತ್ತನ್ನು ನಮೂದಿಸಿ ನೋಂದಣಿ ನೀಡಲಿದೆ.
* ಒಂದು ವೇಳೆ ಅಭ್ಯರ್ಥಿಯು ಈ ಷರತ್ತನ್ನು ಉಲ್ಲಂಘಿಸಿದರೆ, ಕೆ.ಎಂ.ಸಿ ರಿಜಿಸ್ಟರ್‌ನಿಂದ ಅವರ ಹೆಸರನ್ನು ತೆಗೆದುಹಾಕುವ ಅಧಿಕಾರ ಇರುತ್ತದೆ.
4) NOC ಮತ್ತು ಬಾಂಡ್ ಪ್ರಕ್ರಿಯೆ ಸರಳೀಕರಣ:
* ಇನ್ನು ಮುಂದೆ ಅಭ್ಯರ್ಥಿಗಳು ನೋಂದಣಿಗಾಗಿ ಆರೋಗ್ಯ ಇಲಾಖೆಯ ಕಮಿಷನರ್ ಕಚೇರಿಯಿಂದ ಯಾವುದೇ NOC (ನಿರಾಕ್ಷೇಪಣಾ ಪತ್ರ) ಪಡೆಯುವ ಅಗತ್ಯವಿರುವುದಿಲ್ಲ.
* ಕೌನ್ಸೆಲಿಂಗ್ ಸಮಯದಲ್ಲಿ ಕೆ.ಇ.ಎ (KEA) ಈಗಾಗಲೇ ಅಭ್ಯರ್ಥಿಗಳಿಂದ ಬಾಂಡ್ ಅಥವಾ ಮುಚ್ಚಳಿಕೆ ಪತ್ರವನ್ನು ಪಡೆದಿರುತ್ತದೆ. ಹಾಗಾಗಿ, ಯಾವುದೇ ಹೆಚ್ಚುವರಿ ಬಾಂಡ್ ನೀಡುವ ಅವಶ್ಯಕತೆಯಿಲ್ಲ.
* ಒಂದು ವೇಳೆ ಅಭ್ಯರ್ಥಿಯು ಈ ಹಿಂದೆ KEA ಗೆ ಮುಚ್ಚಳಿಕೆ ಪತ್ರ ನೀಡದಿದ್ದರೆ ಮಾತ್ರ, KMC ಅಂತಹವರಿಂದ ಮುಚ್ಚಳಿಕೆ ಪತ್ರವನ್ನು ಪಡೆಯಬಹುದು.
ಈ ಆದೇಶವು ರಾಜ್ಯದ ಸಾವಿರಾರು ವೈದ್ಯಕೀಯ ಪದವೀಧರರಿಗೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಗುತ್ತಿದ್ದ ಅನಗತ್ಯ ವಿಳಂಬ ಮತ್ತು ತೊಂದರೆಗಳನ್ನು ತಪ್ಪಿಸಿ, ಯುವ ವೈದ್ಯರ ಶೈಕ್ಷಣಿಕ ಮತ್ತು ವೃತ್ತಿಜೀವನದ ಹಾದಿಯನ್ನು ಸುಗಮಗೊಳಿಸಲಿದೆ.
ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ವಕ್ತಾರರಲ್ಲ, ಅವರು ಸಂವಿಧಾನದ ರಕ್ಷಕರು: ವಿಪಕ್ಷ ನಾಯಕ ಆರ್.ಅಶೋಕ್
BREAKING: ರಾಜ್ಯದಲ್ಲಿ ವಾಹನಗಳ FC, ಸಾಗರೇತರ ನೋಂದಣಿ ನವೀಕರಣಕ್ಕೆ ಮಾರ್ಗಸೂಚಿ ಪ್ರಕಟ: ಈ ನಿಯಮ ಪಾಲನೆ ಕಡ್ಡಾಯ








