ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-2’ಕ್ಕೆ ಸಂಬಂಧಿಸಿದಂತೆ ಮಹತ್ವದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಮೊದಲ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ ಅಥವಾ ಗೈರಾದ ವಿದ್ಯಾರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಪರೀಕ್ಷಾ ಪ್ರಕ್ರಿಯೆಯ ಸಂಪೂರ್ಣ ವಿವರಗಳು ಇಲ್ಲಿವೆ.
ನೋಂದಣಿ ಪ್ರಕ್ರಿಯೆ ಮತ್ತು ದಿನಾಂಕಗಳು
2026ರ ದ್ವಿತೀಯ ಪಿಯುಸಿ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಲು ಮಂಡಲಿಯು ದಿನಾಂಕ: 09-04-2026 ರಿಂದ 17-04-2026ರವರೆಗೆ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ಈ ಕೆಳಗಿನ ವಿಧಾನಗಳ ಮೂಲಕ ನೋಂದಾಯಿಸಿಕೊಳ್ಳಬಹುದು:
-
ಆನ್‌ಲೈನ್ ಮೂಲಕ: ವಿದ್ಯಾರ್ಥಿಗಳು ನೇರವಾಗಿ ಮಂಡಲಿ ಒದಗಿಸಿರುವ ಲಿಂಕ್ (http://tinyurl.com/mvp9k6es) ಬಳಸಿ ನೋಂದಾಯಿಸಿಕೊಳ್ಳಬಹುದು.
-
ಕಾಲೇಜಿನ ಮೂಲಕ: ಅಭ್ಯರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ‘PU EXAM PORTAL’ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
ಉಚಿತ ನೋಂದಣಿ ಯಾರಿಗೆ?
2026ನೇ ಸಾಲಿನಲ್ಲಿ ರೆಗ್ಯೂಲರ್ ವಿದ್ಯಾರ್ಥಿಗಳಾಗಿ (Regular Fresh) ನೋಂದಾಯಿಸಿಕೊಂಡು, ಮೊದಲನೇ ಪರೀಕ್ಷೆಯಲ್ಲಿ ಫಲಿತಾಂಶ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಅಂತಹ ವಿದ್ಯಾರ್ಥಿಗಳು ಯಾವುದೇ ಶುಲ್ಕ ಪಾವತಿಸದೆ ಪರೀಕ್ಷೆ-2ಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ.
ಪರೀಕ್ಷಾ ದಿನಾಂಕ ಮತ್ತು ಪ್ರವೇಶ ಪತ್ರ
ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಮರುನಿಗಧಿಪಡಿಸಲಾಗಿದ್ದು, ಪರೀಕ್ಷೆಗಳು ದಿನಾಂಕ: 30-04-2026ರಿಂದ ಪ್ರಾರಂಭವಾಗಲಿವೆ. ನೋಂದಾಯಿಸಿಕೊಂಡ ಎಲ್ಲಾ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು (Hall Tickets) ನಿಗಧಿತ ಸಮಯದಲ್ಲಿ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರ ಲಾಗಿನ್‌ನಲ್ಲಿ ಲಭ್ಯಗೊಳಿಸಲಾಗುವುದು.
ಸಿದ್ಧತೆಗಾಗಿ ಮಂಡಲಿಯ ಸಲಹೆಗಳು
ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಎದುರಿಸಲು ಮಂಡಲಿಯು ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಿದೆ:
-
ಮಂಡಲಿಯ ಅಧಿಕೃತ ಜಾಲತಾಣದ ‘ಪಿಯುಸಿ ವಿದ್ಯಾರ್ಥಿ ಅಂಕಣ’ದಲ್ಲಿ ಪ್ರಶ್ನೆ ಕೋಠಿ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಲಭ್ಯಗೊಳಿಸಲಾಗಿದೆ.
-
ವಿದ್ಯಾರ್ಥಿಗಳು ಇವುಗಳ ಸಹಾಯದೊಂದಿಗೆ ಶಾಂತಚಿತ್ತತೆಯಿಂದ ಪರೀಕ್ಷೆಗೆ ಸಿದ್ಧತೆ ನಡೆಸಲು ಅಧ್ಯಕ್ಷರು ಕೋರಿದ್ದಾರೆ.
ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ನೋಂದಣಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕೆಂದು ಮಂಡಲಿ ಸೂಚಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









