ಶಿವಮೊಗ್ಗ : ಜಿಲ್ಲೆಯ ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಉತ್ಸುಕವಾಗಿದ್ದು, ರಾಜ್ಯದ ಮಾನ್ಯ ಮುಖ್ಯಮಂತ್ರಿಗಳ ಮಾರ್ಗದರ್ಶನ ಹಾಗೂ ಸಲಹೆಯಂತೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಕುವೆಂಪು ರಂಗಮಂದಿರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತವು ಆಯೋಜಿಸಲಾಗಿದ್ದ ಜನ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜನಸ್ಪಂದನ ಕಾರ್ಯಕ್ರಮದಲ್ಲಿ ಆಲಿಸುವ ಜನರ ಸಮಸ್ಯೆಗಳಿಗೆ ಸರ್ಕಾರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಲಿದ್ದಾರೆ. ಜನಪರವಾಗಿರುವ ಈ ಕಾರ್ಯಕ್ರಮ ಜನಸ್ನೇಹಿಯಾಗಿದೆ ಎಂದವರು ನುಡಿದರು.

ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಸೂಚಿಸಿದ ಅವರು ಇಲಾಖೆಗಳು ಜನಸ್ನೇಹಿಯಾಗಿರಬೇಕು ಎಂದರು. ಕೆಲವು ಜಟಿಲವಾದ ಹಾಗೂ ಇತ್ಯರ್ಥವಾಗದ ಸಮಸ್ಯೆಗಳಿದ್ದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಸಲಹೆ ಪಡೆಯಬೇಕು. ಅಗತ್ಯವಿದ್ದಲ್ಲಿ ಸಚಿವರ ಗಮನ ಸೆಳೆಯುವಂತೆ ಅವರು ಸಲಹೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಗಾಜನೂರಿನ ವಿಕಲಚೇತನ ಸತ್ಯನಾರಾಯಣ ಅವರು ಸಚಿವರಿಗೆ ಮನವಿ ಸಲ್ಲಿಸಿ, ತಮ್ಮ ಮನೆ ಮತ್ತು ಜಮೀನಿಗೆ ಕಾಲುದಾರಿ ಬಿಡಿಸಿಕೊಡುವಂತೆ ಈಗಾಗಲೇ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ಆಗಿರುವುದಿಲ್ಲ ಎಂದರು. ಸಚಿವರು ತಕ್ಷಣ ಪ್ರತಿಕ್ರಿಯಿಸಿ, ಅರ್ಜಿದಾರರಿಗೆ ಕೂಡಲೇ ಸ್ಪಂದಿಸಬೇಕು ಈ ಕಾರ್ಯದಲ್ಲಿ ನಿರ್ಲಕ್ಷದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ನಗರದ ಮೌಲಾನಾ ಆಜಾದ್ ಮಾದರಿ ಶಾಲೆಯಲ್ಲಿ ಸುಮಾರು 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದು ವರ್ಷದಿಂದ ಮಧ್ಯಾಹ್ನದ ಬಿಸಿ ಊಟ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡುತ್ತಿಲ್ಲ. ಈ ಸೌಲಭ್ಯಗಳನ್ನು ಒದಗಿಸುವಂತೆ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವರು ಮುಂದಿನ ಎರಡು ದಿನಗಳೊಳಗಾಗಿ ರಾಗಿ ಗಂಜಿ, ಹಾಲು, ಮೊಟ್ಟೆ, ಊಟ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಏತ ನೀರಾವರಿ, ಕೆರೆಕಟ್ಟೆ ಕಾಲುವೆಗಳ ವ್ಯವಸ್ಥಿತ ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ಸಾಕಷ್ಟು ದೂರುಗಳಿವೆ. ದೂರಿಗೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿ ಸಣ್ಣ ಮತ್ತು ಬೃಹತ್ ನೀರಾವರಿ ಯೋಜನೆಗಳ ಅಧಿಕಾರಿಗಳು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು ಕೂಡಲೇ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆಗಳನ್ನು ಕರೆದು ಇವುಗಳ ನಿರ್ವಹಣೆಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಸೂಚಿಸಿದರು. ಸಮಸ್ಯೆಗಳು ಜಟಿಲವಾಗಿದ್ದು ಇತ್ಯರ್ಥಗೊಳ್ಳದಿದ್ದಲ್ಲಿ ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಕೆಲವು ಬಡಾವಣೆಗಳಲ್ಲಿ ಮೂಲ ಸೌಲಭ್ಯ ಕೊರತೆ ಇದ್ದು ಕುಡಿಯುವ ನೀರು, ಚರಂಡಿ, ವಿದ್ಯುತ್ ಸೌಲಭ್ಯ ಸಂಪರ್ಕ ಕಲ್ಪಿಸಿ ಕೊಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಜನ ಸ್ಪಂದನದಲ್ಲಿ ಪ್ರಮುಖವಾಗಿ ಜಮೀನು ಮತ್ತು ಮನೆಗಳಿಗೆ ಹಕ್ಕುಪತ್ರ ನೀಡಿ, ಬುದ್ಧಿಮಾಂಧ್ಯರಿಗೆ ಆರ್ಥಿಕ ನೆರವು ನೀಡಿ, ಕೆ.ಎ.ಎಸ್. ಹುದ್ದೆಗೆ ಕೋಚಿಂಗ್ ಕೊಡಿಸಿ, ಸರ್ಕಾರಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿ, ಅಂತರಾಷ್ಟ್ರೀಯ ಪ್ಯಾರಾ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಹಾಯಧನ ಕೊಡಿಸಿ, ಸಮುದಾಯ ಭವನಕ್ಕೆ ಅನುದಾನ ಕೊಡಿ, ಗ್ರಾಮ ಠಾಣಾ ಭೂಮಿಯಲ್ಲಿ ನಿವೇಶನ ಕಲ್ಪಿಸಿ, ವಿಕಲಚೇತನರಿಗೆ ಮಾಶಾಸನ ಕೊಡಿ ಮುಂತಾದ ವಿಷಯಗಳ ಅರ್ಜಿಗಳು ಸಲ್ಲಿಕೆಯಾದವು ಕಾರ್ಯಕ್ರಮದಲ್ಲಿ ಭೋವಿ ಸಮಾಜದ ರಾಜ್ಯಾಧ್ಯಕ್ಷ ರವಿಕುಮಾರ್ ಸೂಡಾ ಅಧ್ಯಕ್ಷ ಸುಂದರೇಶ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ ಸಾಗರದ ಉಪವಿಭಾಗಾಧಿಕಾರಿ ಯತೀಶ್, ಪ್ರವೇಶನದ ಅಧಿಕಾರಿ ದೃಷ್ಟಿ ಜೈಪಾಲ್ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ ಕೆ. ಆರ್., ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಊರುಗಡೂರಿನಲ್ಲಿ ವಸತಿ ಯೋಜನೆಯಡಿ ಸೂಡಾವು ರೈತರಿಂದ 67 ಎಕರೆ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ರೈತರಿಗೆ ತಲಾ 2 ನಿವೇಶನ ಮತ್ತು ಪರಿಹಾರ ಮೊತ್ತ ನೀಡುವುದಾಗಿ ಭರವಸೆ ನೀಡಿದ್ದರು. ನಂತರ ಸೂಡಾದಿಂದ ನೀಡಲಾಗುವ ಮೊತ್ತ ಕಡಿಮೆ ಇದೆ ಎಂದು ಕೋರ್ಟ್ ಮೊರೆ ಹೋಗಲಾಗಿತ್ತು. 2005 ರಲ್ಲಿ ಸೂಡಾದವರು ಕೋರ್ಟ್‍ಗೆ ಪರಿಹಾರದ ಮೊತ್ತವನ್ನು ಭರ್ತಿಮಾಡಿದ್ದು, ಈ ಪರಿಹಾರ ಸಮಂಜಸವಾಗಿಲ್ಲ ಹಾಗೂ ನಿವೇಶನ ನೀಡದಿರುವ ಕಾರಣ ಸಚಿವರು ಇದನ್ನು ಸರಿಪಡಿಸಿಕೊಡುವಂತೆ ಸೈಯದ್ ಲಿಯಾಖತ್, ಭೀಮಣ್ಣ, ಶಿವಕುಮಾರ್ ಇತರರು ಮನವಿ ಮಾಡಿದರು.

ಹೊಳೆಹೊನ್ನೂರಿನಲ್ಲಿ ಒಂದು ಬಾಲಕಿಯರ ವಸತಿನಿಲಯ ಮಂಜೂರು ಮಾಡುವಂತೆ ಹಾಗೂ ಸರ್ಕಾರಿ ಬಸ್ ನಿಲುಗಡೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ 275 ಹೆಚ್ಚಿನ ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಹಾವೇರಿ ಅಪಘಾತ ಪ್ರಕರಣ :ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

BREAKING : ಸಿಎಂ ಬದಲಾದರೆ ಆ ಸ್ಥಾನ ವೀರಶೈವ ಲಿಂಗಾಯತರಿಗೆ ನೀಡಬೇಕು : ಶ್ರೀಶೈಲ್ ಜಗದ್ಗುರು ಆಗ್ರಹ

Share.
Exit mobile version