ಬೆಂಗಳೂರು : ರಾಜ್ಯಾದ್ಯಂತ ಏಪ್ರಿಲ್ 29 ರ ಇಂದಿನಿಂದ ಮೇ 16 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ನಡೆಯಲಿದೆ. ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಅವಶ್ಯಕವಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಪರೀಕ್ಷೆಗಳು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ದಿನಾಂಕ 16.05.2024 ರಂದು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 02.15 ರಿಂದ ಸಂಜೆ 04.30 ರವರೆಗೆ ನಡೆಯಲಿದೆ.
ಪ್ರಶ್ನೆ ಪತ್ರಿಕೆ ಸಾಗಾಟ ಮಾಡಲು ತ್ರಿಸದಸ್ಯ ಸಮಿತಿ ನೇಮಿಸಲಾಗಿದೆ, ಮುಖ್ಯ ಅಧೀಕ್ಷಕರು ಹಾಗೂ ಉತ್ತರ ಪತ್ರಿಕೆ ಪಾಲಕರ ನೇಮಕವಾಗಿದೆ. ಹಾಗೂ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ಸಹ ಮುಖ್ಯ ಅಧೀಕ್ಷಕರು ಮತ್ತು ಜಾಗೃತ ದಳದ ಸದಸ್ಯರನ್ನು ನೇಮಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಆದೇಶಿಸಲಾಗಿದೆ. ಪರೀಕ್ಷೆಯು ದ್ವಿತೀಯ ಪಿಯುಸಿ ಪರೀಕ್ಷೆ ನಡೆದ ಮಾದರಿಯಲ್ಲೇ ನಡೆಯಲಿದೆ. ಆದರೆ ಈ ಬಾರಿ ಪರೀಕ್ಷೆ ನಡೆಯುವುದನ್ನು ವೆಬ್ ಕ್ಯಾಮೆರಾ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನಗಳ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಪರೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ ಅವರು ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಸೂಚನೆ ನೀಡಲಾಗಿದೆ.
ಈ ನಿಯಮಗಳ ಪಾಲನೆ ಕಡ್ಡಾಯ
1) ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್ಗಳನ್ನು ಮಾತ್ರ ಬಳಸಲು ಅವಕಾಶ
2) ಸ್ಟ್ರಾಟಿಸ್ಟಿಕ್ಸ್ ವಿಷಯದಲ್ಲಿ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಬಳಸಲು ಅನುಮತಿ
3) ಪರೀಕ್ಷೆಯ ಅಂತಿಮ ಬೆಲ್ ಹೊಡೆಯುವ ಮುನ್ನ ಪರೀಕ್ಷಾ ಕೊಠಡಿಯಿಂದ ಹೊರಡುವ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.
4) ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯ
5) ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ.
6) ಮೊಬೈಲ್ ಫೋನ್ , ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧ
7) ಪರೀಕ್ಷಾ ಅವಧಿಗಿಂತ ಮುಂಚೆ ಹೊರಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಲಾಗುವುದಿಲ್ಲ.
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್ ಪೇಜರ್, ಝರಾಕ್ಸ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರ ಪಡೆದ ಹಾಗೂ ನಿಯೋಜಿತ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಇನ್ನುಳಿದವರಿಗೆ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ನಕಲು ಮಾಡುವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ಕಾಪಿ ಬರೆದು ಪರೀಕ್ಷಾ ಕೇಂದ್ರಗಳಲ್ಲಿ ಪೂರೈಸುವುದನ್ನು ನಿರ್ಬಂಧಿಸಲಾಗಿದೆ. 200 ಮೀಟರ್ ಪರೀಕ್ಷಾ ಕೇಂದ್ರಗಳ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ
ಏಪ್ರಿಲ್ 29 ರ ನಾಳೆಯಿಂದ ಮೇ 16 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಈ ಅವಧಿಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಬಿಎಂಟಿಸಿ, ಕೆಎಸ್ ಆರ್ ಟಿಸಿಯ ನಗರ, ಹೊರ ವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
29-04-2024- ಕನ್ನಡ, ಅರೇಬಿಕ್
30-04-2024-ಇತಿಹಾಸ / ಭೌತಶಾಸ್ತ್ರ
02-05-2024-ಇಂಗ್ಲಿಷ್
03-05-2024-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
04-05-2024-ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ
09-05-2024-ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ
11-05-2024-ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
13-05-2024-ಅರ್ಥಶಾಸ್ತ್ರ
14-05-2024-ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
15-05-2024-ಹಿಂದಿ
16-05-2024-ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್
16-05-2024-ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್‌ನೆಸ್ , ಆಟೋಮೊಬೈಲ್, ರೀಟೈಲ್