ಬೆಂಗಳೂರು: 2023 ಮೇ ತಿಂಗಳಿನಲ್ಲಿ ಇವಿಎಂ ಮೂಲಕ ಚುನಾಯಿತವಾದ ಕಾಂಗ್ರೆಸ್ಸಿನ ಈ ರಾಜ್ಯ ಸರಕಾರ ಅಧಿಕಾರಕ್ಕೆ ಬಂದಿದೆ. ಇವಿಎಂ ಬಗ್ಗೆ ನಿಮಗೆ ಸಂಶಯ ಇದ್ದಲ್ಲಿ ನೀವು ಅಸೆಂಬ್ಲಿ ವಿಸರ್ಜಿಸಿ ಚುನಾವಣೆಗೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಸುರೇಶ್ ಕುಮಾರ್ ಅವರು ಅವರು ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಗೆದ್ದಾಗಲೆಲ್ಲ ಚೆನ್ನಾಗಿದೆ. ಗೆಲ್ಲದೇ ಇದ್ದಾಗ ಇವಿಎಂ ಎಂಬ ಧೋರಣೆಯು ಅತ್ಯಂತ ಹಳೆಯ ರಾಜಕೀಯ ಪಕ್ಷ ಎಂದು ತನ್ನನ್ನೇ ತಾನು ಬಣ್ಣಿಸಿಕೊಳ್ಳುವ ರಾಜಕೀಯ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ನಿನ್ನೆ ನಡೆದ ಸಚಿವಸಂಪುಟ ಸಭೆ ರಾಜ್ಯದ ದೃಷ್ಟಿಯಿಂದ ಅತ್ಯಂತ ಮಾರಕ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಟೀಕಿಸಿದರು. ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಈ ಕಾಲದಲ್ಲಿ ಕೃತಕ ಅಜ್ಞಾನದಿಂದ (ಆರ್ಟಿಫಿಶಿಯಲ್ ಇಗ್ನೊರೆನ್ಸ್) ಕೂಡಿದ ನಿರ್ಧಾರಗಳನ್ನು ಕೈಗೊಂಡ ಕ್ಯಾಬಿನೆಟ್ ಸಭೆ ಇದು ಎಂದು ದೂರಿದರು.
ಬಹುಮತ ಇದೆ ಎಂದ ತಕ್ಷಣ ನಾವು ಮಾಡಿದ್ದೇ ಸರಿ ಎಂಬ ಅಹಂಕಾರ, ಠೇಂಕಾರವು ಸರಕಾರದ ಅಧಃಪತನಕ್ಕೆ ಹಾದಿ ಎಂದು ವಿಶ್ಲೇಷಿಸಿದರು. ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬದಲಾಗಿ ಮತಪತ್ರ (ಬ್ಯಾಲೆಟ್ ಪೇಪರ್) ಜಾರಿ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿದೆ. ಸಿಲಿಕಾನ್ ಸಿಟಿ ಎಂಬ ಹೆಸರಿಗೇ ಇವರು ತೋರಿಸುವ ದೊಡ್ಡ ತಿರಸ್ಕಾರ ಇದು ಎಂದು ಖಂಡಿಸಿದರು.
ತಮ್ಮ ನಾಯಕನನ್ನು ಮೆಚ್ಚಿಸಲು, ಆ ತಾಳಕ್ಕೆ ಕುಣಿಯಲು
ಇನ್ನು ಫೋನ್ ಪೇ, ಡಿಜಿಟಲ್ ಪೇಮೆಂಟ್ ಬೇಡ; ಬರಿ ಕರೆನ್ಸಿ ಇರಲಿ ಎಂಬ ನಿರ್ಧಾರ ತೆಗೆದುಕೊಂಡಾರು ಎಂಬ ಭಯ ನಮಗಿದೆ ಎಂದು ಎಸ್.ಸುರೇಶ್ ಕುಮಾರ್ ಅವರು ಹೇಳಿದರು.
ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಬೇರೆ ದೇಶಗಳೂ ಭಾರತದ ಚುನಾವಣಾ ಪದ್ಧತಿಯನ್ನು ಮೆಚ್ಚಿಕೊಂಡಿವೆ. ಅದನ್ನು ಅನುಸರಿಸುತ್ತ ಇವೆ. ಆದರೆ, ತಮ್ಮ ನಾಯಕನನ್ನು ಮೆಚ್ಚಿಸಲು, ಆ ತಾಳಕ್ಕೆ ಕುಣಿಯಲು ಇವಿಎಂ ಬಳಸುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ್ದಾರೆ. ಉಪ ಮುಖ್ಯಮಂತ್ರಿಗಳು, ಬೃಹತ್ ಕೈಗಾರಿಕಾ ಸಚಿವರು, ಎಲ್ಲರೂ ಇದನ್ನು ಭಾರಿ ಸಮರ್ಥನೆ ಮಾಡಿದ್ದಾರೆ ಎಂದು ಟೀಕಿಸಿದರು. ಹಳೆಯ ಯುಗಕ್ಕೆ ಒಯ್ಯುವ ರಾಜ್ಯ ಸರಕಾರದ ನಿರ್ಧಾರವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಇವತ್ತು ಅನೇಕ ಯೋಜನೆಗಳು, ಅನೇಕ ಕಾರ್ಯಕ್ರಮಗಳು ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತಿವೆ. ಪ್ರಧಾನಮಂತ್ರಿಯವರು ಒಂದು ಬಟನ್ ಒತ್ತಿದಾಕ್ಷಣ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗೆ ಒಂದೆರಡು ನಿಮಿಷದಲ್ಲಿ ಹಣ ತಲುಪುತ್ತದೆ. ಅಂಥ ಪ್ರಗತಿ ಕಾಣುತ್ತಿರುವ ದೇಶದಲ್ಲಿ ಕಾಂಗ್ರೆಸ್ ಮತ್ತು ಪ್ರೋಗ್ರೆಸ್ ಆರ್ ಇನ್ ಒಪೊಸಿಟ್ ಟರ್ಮ್‍ಸ್ ಎಂದು ಟೀಕಿಸಿದರು. ಪ್ರೋಗ್ರೆಸ್ ಎಂದರೆ ಭವಿಷ್ಯದ ದೃಷ್ಟಿ. ಕಾಂಗ್ರೆಸ್ ಎಂದರೆ ಮಾರಕ ದೃಷ್ಟಿ ಎಂದು ಆರೋಪಿಸಿದರು.
ಹೆಂಗ್ ಗುದ್ತಾ ಇದ್ವಿ ಗೊತ್ತಾ..
ಸಚಿವ ಡಾ.ಪರಮೇಶ್ವರ್ ಅವರು ‘ಹೆಂಗ್ ಗುದ್ತಾ ಇದ್ವಿ ಗೊತ್ತಾ’ ಎಂದು ಹೇಳಿದ್ದರು. ಆ ಕಾಲಕ್ಕೆ ರಾಜ್ಯವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೊಂದೆಡೆ ಮತಚೋರಿ ಎನ್ನುತ್ತಾರೆ. 1991ನೇ ಇಸವಿಯಲ್ಲಿ ನಾನು ಕೊಪ್ಪಳದಿಂದ ಚುನಾವಣೆಗೆ ನಿಂತಾಗ ಕಾಂಗ್ರೆಸ್ಸಿನವರು ಮೋಸ ಮಾಡಿ ನನ್ನನ್ನು ಸೋಲಿಸಿದ್ದರು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಿದ್ದರಾಮಯ್ಯನವರ ಬಹಳ ಆಪ್ತರಾದ ಸಿ.ಎಂ. ಇಬ್ರಾಹಿಂ ಅವರು, ಬಾದಾಮಿಯಲ್ಲಿ ಸೋಲುತ್ತಿದ್ದೆವು. ಒಂದೊಂದು ಮತಕ್ಕೆ 3 ಸಾವಿರ ರೂ. ಕೊಟ್ಟು ನಾವು ಗೆಲ್ಲಿಸಿದ್ದೇವೆ. ಆ ಹಣವನ್ನು ಸಿದ್ದರಾಮಯ್ಯನವರು ಆಮೇಲೆ ವಾಪಸ್ ಕೊಟ್ಟರೆಂದು ಹೇಳಿದ್ದಾರೆ ಎಂದು ಸುರೇಶ್‍ಕುಮಾರ್ ಅವರು ವಿವರಿಸಿದರು.
ಇದು ಕಾಂಗ್ರೆಸ್ ಪಕ್ಷದ ಬೌದ್ಧಿಕ, ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಹೇಳಿದರು.
ಸತ್ಯ ಹೇಳಿದ ರಾಜಣ್ಣ ತಲೆದಂಡ..
ರಾಹುಲ್ ಗಾಂಧಿಯವರು ವಯನಾಡು, ಅಮೇಥಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ವಯನಾಡು- ಅಮೇಥಿಯಲ್ಲಿ ಅವರು ಇವಿಎಂ ಮೂಲಕ ಗೆದ್ದವರು. ನಾವು ಒಂದೆಡೆ ಸೋತರೆ ಅವಲೋಕನ ಮಾಡುತ್ತೇವೆ. ಅಂಕಿಅಂಶಗಳ ಪ್ರಕಾರ ಇವಿಎಂ ಬಂದ ಮೇಲೆ ಕಾಂಗ್ರೆಸ್ ಪಕ್ಷ 2 ಬಾರಿ ಕೇಂದ್ರದಲ್ಲಿ ಆಡಳಿತ ಪಕ್ಷವಾಗಿದೆ. ಹಲವಾರು ರಾಜ್ಯಗಳಲ್ಲಿ ರಾಜ್ಯ ಸರಕಾರವಾಗಿ ಅಧಿಕಾರ ನಡೆಸಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಮಾತನಾಡುವುದು ಅಪರಾಧ. ಅದಕ್ಕೆ ಸಾಕ್ಷ್ಯ ಬೇಕೆಂದರೆ ರಾಜಣ್ಣ ಹೇಳುತ್ತಾರೆ. 2024 ಲೋಕಸಭಾ ಚುನಾವಣೆಯಲ್ಲಿ ಮತಚೋರಿ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ. ಆ ಮತಪತ್ರ ತಯಾರಿಸಿದ್ದೇ ನಮ್ಮ ಸರಕಾರ ಇದ್ದಾಗ ಎಂದು ರಾಜಣ್ಣ ಸತ್ಯ ಹೇಳಿದ್ದರು. ಅದಕ್ಕೆ ಅವರ ತಲೆದಂಡ ಆಗಿದೆ ಎಂದು ವಿವರಿಸಿದರು.
ಶಿಲಾಯುಗಕ್ಕೆ ಹೋಗಲು ಹೊರಟಿದ್ದಾರೆ..
ಮತಪತ್ರ ಇದ್ದಾಗ ಒಂದು ದಿನದ ಬಳಿಕ ಎಣಿಕೆ ನಡೆದು ಫಲಿತಾಂಶ ಬಂದುದನ್ನು ನೋಡಿದ್ದೇನೆ. ಇವತ್ತು ಇವಿಎಂನಲ್ಲಿ ಹಿನ್ನಡೆ, ಮುನ್ನಡೆಯ ಮಾಹಿತಿ ಬರುತ್ತದೆ. ಕಾಗದರಹಿತ ವ್ಯವಹಾರ, ಕಾಗದರಹಿತ ಆಡಳಿತ ಎಂಬುದು ಎಲ್ಲ ಕಡೆ ಚಾಲ್ತಿಯಲ್ಲಿದೆ. ಇವುಗಳಿಗೆ ಇವರು ತಿಲಾಂಜಲಿ ಕೊಟ್ಟು, ಮತ್ತೆ ನಾವು ಶಿಲಾಯುಗಕ್ಕೆ ಹೋಗಲು ಹೊರಟಿದ್ದಾರೆ ಎಂದು ಟೀಕಿಸಿದರು. ಕಾಗದ ಬಳಕೆಯೂ ಉಳಿದಿದೆ ಎಂದರು.
ಇದು ಆತಂಕದಿಂದ ಕರೆದ ಪತ್ರಿಕಾಗೋಷ್ಠಿಯಲ್ಲ; ನಾವು ಕಳ್ಳರೂ ಅಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಸಚಿವಸಂಪುಟ ಸಭೆ ಎಂದರೆ ರಾಜ್ಯದ ಭವಿಷ್ಯದ ದೃಷ್ಟಿಯಿಂದ ಮಾಡಬೇಕಾದ ಸಭೆ. ಆ ಸಭೆಯ ನಿರ್ಧಾರ ಎಂದರೆ ಅದು ರಾಜ್ಯದ ನಾಗರಿಕರಿಗೆ ಭರವಸೆ ಬರುವಂತಿರಬೇಕಿತ್ತು ಎಂದು ನುಡಿದರು.
ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಮತ್ತು ಕೊಪ್ಪಳ ಜಿಲ್ಲಾಧ್ಯಕ್ಷ ದಡೇಸಗೂರು ಬಸವರಾಜ್ ಅವರು ಉಪಸ್ಥಿತರಿದ್ದರು.
ರಾಜಮನೆತನದ ಹಿರಿಯ ಸದಸ್ಯೆ, ಕೆಂಟ್ ಡಚೆಸ್ ಕ್ಯಾಥರೀನ್ ನಿಧನ | Duchess of Kent Katharine