ನಮ್ಮ ಸುತ್ತಮುತ್ತಲೇ ಸುಲಭವಾಗಿ ಸಿಗುವ ಕಹಿಬೇವು (Neem) ಕೇವಲ ಒಂದು ಮರವಲ್ಲ, ಅದೊಂದು ಅದ್ಭುತ ಔಷಧೀಯ ಭಂಡಾರ. ಆಯುರ್ವೇದದಲ್ಲಿ ಕಹಿಬೇವಿಗೆ ಅಗ್ರಸ್ಥಾನವಿದೆ. ದಿನಕ್ಕೆ ಕೇವಲ ನಾಲ್ಕು ಕಹಿಬೇವು ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಎಂತಹ ಆರೋಗ್ಯ ಸಮಸ್ಯೆಗಳನ್ನು ದೂರವಿಡಬಹುದು ಎಂಬ ಮಾಹಿತಿ ಇಲ್ಲಿದೆ.
ಪೋಷಕಾಂಶಗಳ ಆಗರ
ಕಹಿಬೇವಿನಲ್ಲಿ ಪ್ರೋಟೀನ್, ನಾರು, ಆಂಟಿಆಕ್ಸಿಡೆಂಟ್, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಹೇರಳವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ, ವೈರಲ್ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ.
ಪ್ರತಿದಿನ ಕಹಿಬೇವು ಸೇವಿಸುವುದರಿಂದಾಗುವ ಲಾಭಗಳು:
ಜೀರ್ಣಶಕ್ತಿ ವೃದ್ಧಿ: ಕಹಿಬೇವಿನ ಕಹಿಯು ಜೀರ್ಣರಸಗಳನ್ನು ಉತ್ತೇಜಿಸುತ್ತದೆ. ಇದರಿಂದ ಮಲಬದ್ಧತೆ, ಎಸಿಡಿಟಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ.
ರಕ್ತ ಶುದ್ಧೀಕರಣ: ಇದು ರಕ್ತದಲ್ಲಿರುವ ಕಲ್ಮಶಗಳನ್ನು ಹೊರಹಾಕಿ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸುತ್ತದೆ. ಇದರಲ್ಲಿರುವ ನಿಂಬಿಡಿನ್ ಮತ್ತು ನಿಂಬಿನಿನ್ ಎಂಬ ಅಂಶಗಳು ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ಮಧುಮೇಹ ನಿಯಂತ್ರಣ: ಡಯಾಬಿಟಿಸ್ ಇರುವವರಿಗೆ ಕಹಿಬೇವು ರಾಮಬಾಣ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಟ್ಟು, ಇನ್ಸುಲಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಹೊಳೆಯುವ ಚರ್ಮ: ರಕ್ತ ಶುದ್ಧಿಯಾಗುವುದರಿಂದ ಮೊಡವೆ ಮತ್ತು ಕಲೆಗಳು ಕಡಿಮೆಯಾಗಿ ಚರ್ಮವು ನೈಸರ್ಗಿಕವಾಗಿ ಹೊಳೆಯಲು ಪ್ರಾರಂಭಿಸುತ್ತದೆ.
ಲಿವರ್ ಆರೋಗ್ಯ: ಕಹಿಬೇವು ದೇಹದ ಕಲ್ಮಶಗಳನ್ನು ಹೊರಹಾಕುವುದರಿಂದ ಲಿವರ್ ಮೇಲಿನ ಒತ್ತಡ ಕಡಿಮೆಯಾಗಿ ಅದರ ಕಾರ್ಯಕ್ಷಮತೆ ಹೆಚ್ಚುತ್ತದೆ.
ಬಾಯಿ ಆರೋಗ್ಯ: ಬಾಯಿಯ ದುರ್ವಾಸನೆ ತಡೆಯಲು ಮತ್ತು ಹಲ್ಲುಗಳನ್ನು ಬಲಪಡಿಸಲು ಕಹಿಬೇವು ಸಹಕಾರಿ. ಇದೇ ಕಾರಣಕ್ಕೆ ಇಂದಿಗೂ ಅನೇಕರು ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಾರೆ.
ತೂಕ ಇಳಿಕೆ: ದೇಹದ ಮೆಟಬಾಲಿಸಂ (ಜೀವಕ್ರಿಯೆ) ಹೆಚ್ಚಿಸುವ ಮೂಲಕ ಬೊಜ್ಜು ಕರಗಿಸಲು ಇದು ನೆರವಾಗುತ್ತದೆ.
ಸೇವಿಸುವ ಸರಿಯಾದ ಕ್ರಮ:
ನೇರವಾಗಿ ಅಗಿಯಿರಿ: ಪ್ರತಿದಿನ ಬೆಳಗ್ಗೆ 4-5 ಎಲೆಗಳನ್ನು ಚೆನ್ನಾಗಿ ತೊಳೆದು ಖಾಲಿ ಹೊಟ್ಟೆಯಲ್ಲಿ ಅಗಿಯಿರಿ. ನಂತರ ಒಂದು ಲೋಟ ಉಗುರುಬೆಚ್ಚಗಿನ ನೀರು ಕುಡಿಯಿರಿ.
ಬೇವಿನ ಕಷಾಯ: ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯದಂತೆ ಕುಡಿಯಬಹುದು. ತುಂಬಾ ಕಹಿಯೆನಿಸಿದರೆ ಸ್ವಲ್ಪ ಜೇನುತುಪ್ಪ ಸೇರಿಸಬಹುದು.
ಪುಡಿ ರೂಪದಲ್ಲಿ: ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಅರ್ಧ ಚಮಚ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು.
ಪವರ್‌ಫುಲ್ ಕಾಂಬಿನೇಷನ್: ಕಹಿಬೇವಿನ ಜೊತೆಗೆ ಚಿಟಿಕೆ ಅರಿಶಿನ ಮತ್ತು ಕರಿಮೆಣಸಿನ ಪುಡಿ ಸೇರಿಸಿ ಸೇವಿಸಿದರೆ ರೋಗನಿರೋಧಕ ಶಕ್ತಿ ದುಪ್ಪಟ್ಟಾಗುತ್ತದೆ.
ಸೂಚನೆ: ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ದೀರ್ಘಕಾಲದ ಕಾಯಿಲೆ ಇರುವವರು ಕಹಿಬೇವಿನ ನಿಯಮಿತ ಸೇವನೆ ಆರಂಭಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.








