ತುಮಕೂರು: ರಾಜ್ಯ ಸರಕಾರದ ಕೃಷಿ ಸಚಿವರ ಅವಿವೇಕತನದಿಂದ ರೈತರು ರಸಗೊಬ್ಬರಕ್ಕಾಗಿ ಹೋರಾಟ ಮಾಡುವ ಸ್ಥಿತಿ ಬಂದಿದೆ. ರೈತಪರವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಇಂದು ಇಲ್ಲಿ ಬಿಜೆಪಿ ಹಾಗೂ ರೈತ ಮೋರ್ಚಾದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ರೈತರ ಕಣ್ಣೀರು ಒರೆಸಲು ಈ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ರೈತರ ಕಣ್ಣೀರು ಒರೆಸದ ಸರಕಾರಕ್ಕೆ ರಾಜ್ಯದಲ್ಲಿ ಉಳಿದಿಲ್ಲ ಎಂದು ಅವರು ಎಚ್ಚರಿಸಿದರು. ರೈತರ ಕಣ್ಣಲ್ಲಿ ನೀರು ಬರಿಸಿದರೆ ಆ ಮುಖ್ಯಮಂತ್ರಿಗಳಿಗೆ ಒಳ್ಳೆಯದಾಗಿಲ್ಲ. ರೈತರನ್ನು ದುಸ್ಥಿತಿಗೆ ತಂದ ಕೃಷಿ ಸಚಿವರಿಗೂ ಒಳ್ಳೆಯದಾಗದು ಎಂದು ನುಡಿದರು. ಹವಾಮಾನ ಇಲಾಖೆಯಿಂದ ಸಾಕಷ್ಟು ಮಳೆಯ ಮುನ್ಸೂಚನೆ ಇದ್ದರೂ ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದರು ಎಂದು ಟೀಕಿಸಿದರು.
ರಾಹುಲ್, ಸೋನಿಯಾ ಮನೆ ಗೇಟ್ ಬಳಿ ಕಾಯುವ ಸಿಎಂ, ಡಿಸಿಎಂ
ಕೃಷಿ ಸಚಿವರೂ ಎಲ್ಲ ಜಿಲ್ಲೆಗಳಿಗೆ ಹೋಗಿ ವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡಿಲ್ಲ. ಮುಖ್ಯಮಂತ್ರಿಗಳೂ ಜಿಲ್ಲಾಧಿಕಾರಿಗಳ ಜೊತೆ ಸಮಗ್ರ ಚರ್ಚೆ ಮಾಡಿಲ್ಲ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ತಿಂಗಳಿಗೆ 4 ಬಾರಿ ದೆಹಲಿಗೆ ಹೋಗಿ ಕುಳಿತುಕೊಳ್ಳುತ್ತಾರೆ. ಪ್ರಧಾನಮಂತ್ರಿ ಮೋದಿಜೀ, ಸಂಬಂಧಿತ ಸಚಿವರನ್ನು ಭೇಟಿ ಮಾಡದೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ಮನೆಯ ಗೇಟ್ ಬಳಿ ಕಾಯುತ್ತಿರುತ್ತಾರೆ ಎಂದು ಟೀಕಿಸಿದರು. ಪ್ರತಿ ತಿಂಗಳಿಗೆ 4 ಬಾರಿ ದೆಹಲಿಗೆ ಹೋಗಿ ಕುಳಿತುಕೊಂಡರೆ ರಾಜ್ಯದ ಆಡಳಿತ ನಡೆಸುವವರು ಯಾರು ಎಂದು ಕೇಳಿದರು. ರೈತ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ರೈತರ ಕಣ್ಣೊರೆಸಲು ಸದಾ ಮುಂದಾದವರು ಎಂದು ವಿವರಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಶಾಸಕರಾದ ಸುರೇಶ್ ಗೌಡ, ಜಿ.ಬಿ. ಜ್ಯೋತಿಗಣೇಶ್, ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡ, ಮಾಜಿ ಶಾಸಕ ಜಯರಾಮ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಅಂಬಿಕಾ ಹುಲಿನಾಯ್ಕರ್ ಮತ್ತು ಪ್ರಮುಖರು ಭಾಗವಹಿಸಿದ್ದರು.
ಪಕ್ಷದ ಮುಖಂಡರು ಮಾತನಾಡಿ, ಇದು ರೈತ ವಿರೋಧಿ ಸರಕಾರ. ಹಗರಣಗಳ ಸರಕಾರ ಎಂದು ಟೀಕಿಸಿದರು.ರೈತರ ಕುರಿತು ಜವಾಬ್ದಾರಿಯಿಂದ ಮಾತನಾಡದೆ ಕೇಂದ್ರವನ್ನು ದೂಷಿಸಿದರೆ ಒಳ್ಳೆಯದಾಗದು ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
ತುಮಕೂರು ಬಿ.ಜಿ.ಎಸ್. ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾವಿರಾರು ಜನರು, ರೈತರು, ಕಾರ್ಯಕರ್ತರು ಭಾಗವಹಿಸಿದ್ದರು. ಕೇಂದ್ರ ಸರಕಾರವು ಸಮರ್ಪಕವಾಗಿ ರಸಗೊಬ್ಬರ ನೀಡಿದ್ದರೂ ಅದನ್ನು ರೈತರಿಗೆ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಮುಖಂಡರು ಆಕ್ಷೇಪಿಸಿದರು. ತೊಲಗಲಿ ತೊಲಗಲಿ ಕಾಂಗ್ರೆಸ್ ತೊಲಗಲಿ, ರೈತ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು.
ರಾಜ್ಯದಲ್ಲಿ ‘ಪೊದ್ದಾರ್ ಪ್ಲಂಬಿಂಗ್’ನಿಂದ 758 ಕೋಟಿ ಹೂಡಿಕೆ, 3,000 ಉದ್ಯೋಗ ಸೃಷ್ಠಿ: ಸಚಿವ ಎಂ.ಬಿ ಪಾಟೀಲ್