ಬೆಳಗಾವಿ: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ನಾನು ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಿದ್ದೇನೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಯಾರು ತೆರಿಗೆ ಕಟ್ಟುವುದಿಲ್ಲ ಅಂತಹವರಿಗೆ ಗೃಹಲಕ್ಷ್ಮೀ ಹಣ ಸಂದಾಯ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
80 ಸಾವಿರ ಬಿಪಿಎಲ್ ಕಾರ್ಡ್ ಗಳನ್ನ ರದ್ದತಿ ಮಾಡುವ ಬದಲಿಗೆ ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿರುವುದರಿಂದ ಯಾವುದೇ ಗೊಂದಲ ಇಲ್ಲ, ಎಪಿಎಲ್, ಬಿಪಿಎಲ್ ಇದ್ದವರಿಗೆ ಗೃಹಲಕ್ಷ್ಮೀ ಹಣ ಬಂದೇ ಬರುತ್ತೆ ಎಂದು ಸಚಿವರು ಹೇಳಿದರು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿರುವ (ಬೀಮ್ಸ್) ಅವ್ಯವಸ್ಥೆಗಳಿಗೆ ಸರ್ಜರಿ ಆಗಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ವೈದ್ಯರ ನಿರ್ಲಕ್ಷ್ಯ ದಿಂದ ಬಾಣಂತಿ ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಾಗಬೇಕು. ಶಿಸ್ತು, ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ಕೆಲವೊಂದು ವ್ಯವಸ್ಥೆಗಳನ್ನು ಸರಿಪಡಿಸಬೇಕಿದೆ ಎಂದು ಹೇಳಿದರು.