ಬೆಳಗಾವಿ ಸುವರ್ಣ ವಿಧಾನಸೌಧ: ಮೋದಿ ಅವರು ಅಧಿಕಾರಕ್ಕೆ ಬಂದರೆ ರೈತರ ಆದಾಯ ದ್ವಿಗುಣ ಮಾಡುತ್ತೇನೆ ಅಂತ ಹೇಳಿದ್ದರು. ಅವರು ಅಧಿಕಾರಕ್ಕೆ ಬಂದು ಇಷ್ಟು ವರ್ಷ ಆಯಿತು. ಆದರೆ ಅನ್ನದಾತರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ದೇಶದ ರೈತರ ಕಷ್ಟ ತೀರಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ವಿಧಾನ ಪರಿಷತ್ತಿನ ಕಲಾಪದಲ್ಲಿ ಹೇಳಿದರು.
ಬಿಜೆಪಿ ಸದಸ್ಯ ಸಿ ಟಿ ರವಿ ಅವರು ಎಥೆನಾಲ್ ಹಂಚಿಕೆ ಬಗ್ಗೆ ಮಾತನಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಲಾಡ್ ಅವರು, ಪ್ರಧಾನಿ ಮೋದಿ ಅವರು ಹೇಳಿದಂತೆ ಏನೂ ಮಾಡಲಿಲ್ಲ. ಇಡೀ ದೇಶದ ರೈತರ ಆದಾಯ ಏರಲಿಲ್ಲ. ಅವರ ಸಮಸ್ಯೆ ಹಾಗೇ ಇದೆ. ಈ ದೇಶದ ಸಾಲದ ಬಗ್ಗೆಯೂ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಹತ್ತುಪಟ್ಟು ಕೊಟ್ಟಿದೆ ಎಂಬುದಕ್ಕೆ ಸ್ಪಷ್ಟೀಕರಣ ಕೊಡಬೇಕು.
ಹಾರಿಕೆ ಉತ್ತರ ಕೊಟ್ಟು ಮನಸ್ಸಿಗೆ ಬಂದಂಗೆ ಮಾತನಾಡುವುದಲ್ಲ ಎಂದು ಲಾಡ್ ಅವರು ತಿರುಗೇಟು ನೀಡಿದರು.
ದೇಶದಲ್ಲಿ ಸಾಲ ಹತ್ತುಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ. ಬಿಜೆಪಿಯವರು ತಮಗೆ ಅನುಕೂಲಕರವೊ ಅದರ ಬಗ್ಗೆಯೇ ಮಾತನಾಡುತ್ತಾರೆ. ವಿಷಯ ಇದ್ದರೆ ಮಾತನಾಡಲಿ. ಸರ್ಕಾರ ಉತ್ತರ ಕೊಡುತ್ತೆ ಎಂದು ಲಾಡ್ ಅವರು ಹೇಳಿದರು.
ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಹಾಗೂ ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿದೆ. ಅದನ್ನು ಮಾತನಾಡಲು ನಿಮ್ಮ ಸಂಸದರು ಬಾಯಿಗೆ ಕಡುಬು ಹಾಕಿಕೊಂಡಿದ್ದಾರೆಯೇ ಎಂದು ರವಿ ಅವರು ಹೇಳಿದ್ದಕ್ಕೆ ಆಕ್ರೋಶಗೊಂಡ ಸಚಿವ ಲಾಡ್ ಅವರು, ಬಿಜೆಪಿ ಸಂಸದರು ಕರ್ನಾಟಕದ ಬಗ್ಗೆ ಸಂಸತ್ತಿನಲ್ಲಿ ಚಕಾರ ಎತ್ತುವುದಿಲ್ಲ. ಕಳೆದ ಹನ್ನೊಂದು ವರ್ಷದಲ್ಲಿ ಯಾರು ಮಾತನಾಡಿದ್ದಾರೆ ಎಂಬುದನ್ನು ಹೇಳಿ ಎಂದು ಪ್ರಶ್ನಿಸಿದರು.








