ಬೆಂಗಳೂರು: ಕರ್ನಾಟಕದಲ್ಲಿ ಎರಡೂವರೆ ವರ್ಷದ ಆಡಳಿತ ಸಂಬಂಧ ಸಮರ ಮುಂದುವರೆದಿದೆ. ಇಂಡಿಯಾ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನೂ ಸಂತೋಷದಲ್ಲಿ ಇಡಲು ಒಂದು ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇಂಡಿ ಒಕ್ಕೂಟದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು.
ದಾವಣಗೆರೆಯಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಇಂಥವರಿಗಾಗಿ ಮತವನ್ನು ಹಾಳು ಮಾಡಬೇಕೇ ಎಂದು ಪ್ರಶ್ನಿಸಿದರು. ಮೌಲ್ಯಯುತ ಮತವನ್ನು ಹಾಳು ಮಾಡದಿರಿ ಎಂದು ವಿನಂತಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಎಸ್‍ಸಿ, ಎಸ್‍ಟಿಗಳಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಬೇರೆಡೆ ವರ್ಗಾಯಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ಬಿಜೆಪಿ ಸರಕಾರ 4 ಸಾವಿರ ಕೊಡುತ್ತಿತ್ತು. ಆ 4 ಸಾವಿರ ಕೊಡುವುದನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿತು. ಈಗ ಕೇವಲ 6 ಸಾವಿರ ಮಾತ್ರ ಸಿಗುತ್ತಿದೆ. ಕಾಂಗ್ರೆಸ್ಸಿನವರಿಗೆ ರೈತರ ಮೇಲೆ ದ್ವೇಷ ಇದೆಯೇ? ಎಂದು ಕೇಳಿದರು. ಒಬಿಸಿ ಮೀಸಲಾತಿಯಡಿ ಅಲ್ಪಸಂಖ್ಯಾತರನ್ನು ತಂದಿದೆ ಎಂದು ಆಕ್ಷೇಪಿಸಿದರು.
ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಕಟ್ಟುವಂತೆ ಸೂಚಿಸುವ ಪ್ರಯತ್ನ ಕಾಂಗ್ರೆಸ್ಸಿನದು. ಮಕ್ಕಳ ಒಳಿತಿಗಾಗಿ ಕೂಡಿಟ್ಟ ಹಣದ ಮೇಲೆ ಶೇ 55 ತೆರಿಗೆ ಕಟ್ಟಲು ಸೂಚಿಸಿ ಡಕಾಯಿತಿ ನಡೆಸಿ, ಅದನ್ನು ಬೇರೆಯವರಿಗೆ ಹಂಚುವ ಪ್ರಯತ್ನ ಇವರದು ಎಂದು ವಿಶ್ಲೇಷಿಸಿದರು.
ಕಾನೂನು- ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆ ಬರಲು ಸಾಧ್ಯವೇ? ಕರ್ನಾಟಕದ ಕಾನೂನು- ಸುವ್ಯವಸ್ಥೆ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ನಾಗರಿಕರು ಅಸುರಕ್ಷಿತತೆಯ ಚಿಂತೆಯಲ್ಲಿದ್ದಾರೆ. ಕೆಫೆಯಲ್ಲಿ ಬಾಂಬ್ ಸ್ಫೋಟವಾದರೆ ಗ್ಯಾಸ್ ಸಿಲಿಂಡರ್ ಸ್ಫೋಟ ಎನ್ನುತ್ತಾರೆ. ಬಳಿಕ ಬಿಸಿನೆಸ್ ಸಂಬಂಧ ವೈಷಮ್ಯ ಎನ್ನುತ್ತಾರೆ. ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿದೆ. ಅದರಲ್ಲೂ ಕಾಂಗ್ರೆಸ್ ವೋಟ್‍ಬ್ಯಾಂಕ್ ಹುಡುಕಿತು ಎಂದು ಟೀಕಿಸಿದರು.
ನೇಹಾರ ಹತ್ಯೆ ಸಾಮಾನ್ಯ ಘಟನೆ ಅಲ್ಲ. ಸರಕಾರ ನಡೆಸುತ್ತಿರುವವರು ಮತಬ್ಯಾಂಕ್ ಚಿಂತೆಯಲ್ಲಿದ್ದಾರೆ. ಪ್ರತಿಬಂಧಿತ ಪಿಎಫ್‍ಐ, ಎಸ್‍ಡಿಪಿಐ ಜೊತೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕದ ಪ್ರತಿ ಕಡೆಯಿಂದ ಮೋದಿ ಮತ್ತೊಮ್ಮೆ ಎಂಬ ಸ್ವರ ಕೇಳಿಸುತ್ತಿದೆ. ಕರ್ನಾಟಕದಲ್ಲಿ ಜೂನ್ 4ರಂದು ವಿಜೃಂಭಣೆಯಿಂದ ವಿಜಯೋತ್ಸವ ನಡೆಯಲಿದೆ. ದಾವಣಗೆರೆಯಲ್ಲಿ ಬೆಣ್ಣೆದೋಸೆಯ ಸಂಭ್ರಮ ಇರಲಿದೆ ಎಂದರು. ಜನರಿಗಾಗಿ ಸದಾ ಕೆಲಸ ಮಾಡುವ ಗ್ಯಾರಂಟಿಯನ್ನು ನಿಮಗೆ ನೀಡಿದ್ದೇನೆ. ಅದನ್ನು ಈಡೇರಿಸಿದ್ದೇನೆ ಎಂದು ನುಡಿದರು.
ಮೋದಿ ವಿಕಸಿತ ಭಾರತಕ್ಕಾಗಿ 24-7 ಗಂಟೆಗಳ ನಿರಂತರ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ 2047ರ ವಿಕಸಿತ ಭಾರತದ ಸಂಕಲ್ಪ ನಮ್ಮದು. ಬ್ರೇಕ್ ಕರೋ ಯಾ ಥೋ ಬ್ರೇಕ್ ಲಗಾವೋ ಎಂಬ ನೀತಿ ಕಾಂಗ್ರೆಸ್ಸಿನದು. ಎನ್‍ಡಿಎ ಸರಕಾರ ಕರ್ನಾಟಕದ ವಿಕಾಸಕ್ಕಾಗಿ ಗರಿಷ್ಠ ಕೆಲಸ ಮಾಡಿದೆ. ಯಡಿಯೂರಪ್ಪ, ಬೊಮ್ಮಾಯಿಯವರ ಪ್ರಯತ್ನವನ್ನು ಕಾಂಗ್ರೆಸ್ ಹಾಳು ಮಾಡಿದೆ. ಕರ್ನಾಟಕದ ಕಾಂಗ್ರೆಸ್‍ನಲ್ಲಿ ನಂಬರ್ 1, ನಂಬರ್ 2 ನಡುವೆ ಅಂತರ್‍ಯುದ್ಧ ಮುಂದುವರೆದಿದೆ ಎಂದು ಟೀಕಿಸಿದರು.
ನೂತನ ಶಿಕ್ಷಣ ನೀತಿಗೆ (ಎನ್‍ಇಪಿ) ಬ್ರೇಕ್ ಹಾಕಲಾಗಿದೆ. ಇದರಿಂದ ಯುವಜನರಿಗೆ ದೊಡ್ಡ ನಷ್ಟ ಉಂಟಾಗಿದೆ. ರಾಜಕೀಯ ಮತಭೇದ ಇರಲಿ; ಆದರೆ ಯುವಜನರ ಭವಿಷ್ಯದ ಮೇಲೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ ಎಂದು ಕೇಳಿದರು. ಕಾಂಗ್ರೆಸ್ ಪಕ್ಷವು ಪಾಪ- ತಪ್ಪು ಮಾಡುತ್ತಿದೆ. ಗರಿಷ್ಠ ಭ್ರಷ್ಟಾಚಾರ, ಲಕ್ಷಗಟ್ಟಲೆ ಮೊತ್ತದ ಹಗರಣಗಳನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಇವರ ಮೇಲೆ ಭರವಸೆ ಇಡಲು ಸಾಧ್ಯವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಕಾಂಗ್ರೆಸ್‍ನ ಹಿಂದಿನ ಪ್ರಧಾನಿಯವರು 1 ರೂಪಾಯಿಯಲ್ಲಿ 15 ಪೈಸೆಯಷ್ಟೇ ಬಡವರನ್ನು ತಲುಪುವ ಮಾತನಾಡಿದ್ದರು. ಹಣ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನಕಲಿ ನಾಗರಿಕರ ಮೋಸವನ್ನು ನಾವು ಬಯಲು ಮಾಡಿದೆವು. ಆಧಾರ್, ಡಿಬಿಟಿ ಮೂಲಕ ಹಣವು ಭ್ರಷ್ಟರ ಪಾಲಾಗದಂತೆ ಮೋದಿ ನೋಡಿಕೊಂಡರು. ಒಂದು ರೂಪಾಯಿ ಕೊಟ್ಟರೆ 100 ಪೈಸೆ ತಲುಪುತ್ತಿದೆ ಎಂದು ವಿವರಿಸಿದರು.
ದೇಶದ ಸುರಕ್ಷತೆ, ಅಭಿವೃದ್ಧಿಯ ಹೆಸರು ಮೋದಿ. ನನ್ನನ್ನು 10 ವರ್ಷಗಳಿಂದ ನೋಡಿದ್ದೀರಿ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಕೇವಲ 25 ಇದ್ದುದು 47ಕ್ಕೆ ಏರಿದೆ. ರೈಲ್ವೆ ಲೈನ್‍ಗಳ ಅಭಿವೃದ್ಧಿ, ದಾವಣಗೆರೆಯಲ್ಲಿ ಯುವಜನರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಮೇ 7ರಂದು ದೇಶ ವಿಕಾಸಕ್ಕಾಗಿ ಮತ ಕೊಡಿ ಎಂದು ಮನವಿ ಮಾಡಿದರು. ಗಾಯತ್ರಿ ಸಿದ್ದೇಶ್ವರ, ಬಸವರಾಜ ಬೊಮ್ಮಾಯಿ ಅವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ವಿನಂತಿಸಿದರು.
ಕರ್ನಾಟಕವು ಏ.26ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಿದೆ. ಇಲ್ಲಿನ ಮಾತೆಯರು, ಸೋದರಿಯರು, ಮೊದಲ ಬಾರಿ ಮತದಾನ ಮಾಡಿದವರಿಂದ ಕಾಂಗ್ರೆಸ್ ಪಕ್ಷ ಆತಂಕಗೊಂಡಿದೆ. ಮೇ 7ರಂದು ಏನಾದರೂ ಮಾಡಿ ಖಾತೆ ತೆರೆಯಬೇಕೆಂದು ಕಾಂಗ್ರೆಸ್ ಪ್ರಯತ್ನದಲ್ಲಿದೆ. ದೆಹಲಿಯಲ್ಲಿ ಖಾತೆ ತೆರೆಯುವುದೇ ಅವರಿಗೆ ಕಷ್ಟವಾಗಿದೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ ಮಿತ್ರ ಪಕ್ಷಗಳ ನಡುವೆ ಬೀದಿಕಾಳಗ ನಡೆಯಲಿದೆ. ಹಿಂದೆ ಇವಿಎಂ ಮೇಲೆ ಆರೋಪ ಹೊರಿಸುತ್ತಿದ್ದರು. ಸುಪ್ರೀಂ ಕೋರ್ಟ್ ಇವರಿಗೆ ತಕ್ಕ ಏಟು ನೀಡಿದೆ. ಈಗ ಸೋಲಿಗೆ ಯಾರನ್ನು ಹೊಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ತಮಿಳುನಾಡು, ಕೇರಳ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರವಾಸ ಮಾಡಿದ್ದೇನೆ. 2024ರ ಉತ್ಸಾಹ ವಿಭಿನ್ನವಾದುದು. ಮೋದಿಯವರ ಸಾಧನೆಯನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ. ಮೋದಿಯ ವರ್ತನೆ, ಸಮರ್ಥನೆ, 10 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಗಮನಿಸಿದ್ದಾರೆ. ನಿಮ್ಮ ಪರಿಚಿತ, ನಿಮಗಾಗಿ ಜೀವ ಕೊಡಬಲ್ಲ ಮೋದಿ ಇಲ್ಲಿದ್ದಾನೆ. ಈ ಬಾರಿ ಮಹಿಳೆಯರು ಮತ್ತು ಪುಟಾಣಿಗಳೂ ಮೋದಿಯ ರಕ್ಷಾಕವಚವಾಗಿ ಹೊರಹೊಮ್ಮಿದ್ದಾರೆ ಎಂದು ನುಡಿದರು.
ಮೋದಿಗೆ ಪ್ರೀತಿ, ಆಶೀರ್ವಾದ ಅನೇಕ ಜನ್ಮಗಳ ಪುಣ್ಯದಂತೆ ಲಭಿಸುತ್ತಿದೆ. ಪರಮಾತ್ಮನಿಗೆ ಅಭಾರಿ ಎನ್ನಲೇ? ಜನರು, ಯುವಜನರಿಗೆ ಧನ್ಯವಾದ ಹೇಳಲೇ? ಕೃತಜ್ಞ ಎನ್ನಲು ಶಬ್ದಗಳ ಕೊರತೆ ನನ್ನನ್ನು ಕಾಡುತ್ತಿದೆ ಎಂದು ತಿಳಿಸಿದರು. ದೇಶವಾಸಿಗಳಿಗೆ ಸದಾ ಸರ್ವದಾ ತಲೆ ಬಗ್ಗಿಸಿ ಪ್ರಣಾಮ ಸಲ್ಲಿಸುತ್ತೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದರು, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ರಾಜ್ಯ- ಜಿಲ್ಲಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ವೇದಿಕೆಯಲ್ಲಿದ್ದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ, ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ ಕರೆ
BREAKING: ಹಾಸನ ‘ಪೆನ್ ಡ್ರೈವ್’ ಕೇಸ್: ತನಿಖೆಗೆ ‘SIT ತಂಡ’ ರಚಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ