ಬೆಂಗಳೂರು: ನಟ ದರ್ಶನ್ ಪ್ರಕರಣವನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನ್ಯಾಯ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹೀಗಾಗಿ ನಾನು ಯಾವುದೇ ಕಾರಣಕ್ಕೂ ನಟ ದರ್ಶನ್ ಪ್ರಕರಣದಲ್ಲಿ ಹಸ್ತ ಕ್ಷೇಪ ಮಾಡುವುದಿಲ್ಲ. ಕಾನೂನಿನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟ ಪಡಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಟ ದರ್ಶನ್ ಗೆ ಅನ್ಯಾಯ ಆಗಿದ್ದರೆ ನ್ಯಾಯ ಕೊಡಿಸಲಾಗುವುದು ಎಂದು ರಾಮನಗರದಲ್ಲಿ ನೀಡಿದ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದಾಗ, “ನಿನ್ನೆ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ವಿಜಯಲಕ್ಷ್ಮಿ ಅವರು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲೆಂದರಲ್ಲಿ ಭೇಟಿ ಮಾಡಲು ಸಾಧ್ಯವಿಲ್ಲ. ಮನೆಗೆ ಬಂದು ಭೇಟಿ ಮಾಡಿ ಎಂದು ಇಂದು ಬೆಳಗ್ಗೆ ಸಮಯಾವಕಾಶ ನೀಡಿದ್ದೆ. ಅವರು ನಿನ್ನೆ ಭೇಟಿಗೆ ಯತ್ನಿಸಿದಾಗ ಬಹುಶಹ ದರ್ಶನ್ ಪ್ರಕರಣದ ವಿಚಾರವಾಗಿ ಮಾತನಾಡಲು ಬರುತ್ತಾರೆ ಎಂದು ಭಾವಿಸಿದ್ದೆ” ಎಂದರು.
“ಮಂಗಳವಾರ ರಾತ್ರಿ ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಕರಗ ಸಮಾರಂಭದಲ್ಲಿ ನೆರೆದಿದ್ದ ಯುವಕರು ದರ್ಶನ್ ಮೇಲಿನ ಅಭಿಮಾನದಿಂದ ನ್ಯಾಯ ಕೊಡಿಸಿ ಎಂದು ಗಲಾಟೆ ಮಾಡುತ್ತಿದ್ದರು. ಭಾಷಣ ಮಾಡಲು ಅವಕಾಶವೇ ನೀಡುತ್ತಿರಲಿಲ್ಲ. ನಮ್ಮ ಕ್ಷೇತ್ರದ ಹುಡುಗರು, ದರ್ಶನ್ ಅಭಿಮಾನಿಗಳು ಎಂದು ಕಾಣುತ್ತದೆ. ಬಾಸ್, ಬಾಸ್ ಎಂದು ಕೂಗುತ್ತಿದ್ದರು. ನಾನು ಯಾರಪ್ಪ ಬಾಸ್ ಎಂದು ನೋಡಿದಾಗ ದರ್ಶನ್ ಫೋಟೋ ಹಿಡಿದುಕೊಂಡಿದ್ದರು. ಆಗ ಅವರ ಸಮಾಧಾನಕ್ಕೆ ನ್ಯಾಯ ಕೊಡಿಸೋಣ ಎಂದು ಹೇಳಿದೆ” ಎಂದು ತಿಳಿಸಿದರು.
“ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್ ತನಿಖೆ ನಡೆಯುತ್ತಿದೆ. ನಾವು ಯಾವುದೇ ಕಾರಣಕ್ಕೂ ಪೊಲೀಸ್ ವಿಚಾರಣೆ, ನ್ಯಾಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಮಾಡಲೂಬಾರದು. ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಕಾನೂನಿದೆ. ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಒಂದೇ. ಏನೂ ಬೇಕಾದರೂ ಆಗಬಹುದು” ಎಂದರು.
ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಲಾಗುವುದು ಎನ್ನುವ ಹೇಳಿಕೆಯ ಬಗ್ಗೆ ಮತ್ತೆ ಕೇಳಿದಾಗ “ಒಂದೊಂದು ಮಾಧ್ಯಮಗಳಲ್ಲಿ ಒಂದೊಂದು ರೀತಿಯ ವರದಿ ಬರುತ್ತಿವೆ. ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ಸಂಪೂರ್ಣವಾಗಿ ಗಮನಿಸಿಲ್ಲ, ನೋಡಲು ಸಮಯವೂ ಇಲ್ಲ. ಮಾಧ್ಯಮಗಳ ವರದಿಯ ಆಧಾರದ ಮೇಲೆ ತೀರ್ಮಾನಕ್ಕೆ ಬರಲು ಆಗುವುದಿಲ್ಲ. ನಾನು ಈ ಪ್ರಶ್ನೆಗೆ ಉತ್ತರ ನೀಡಲು ಗೃಹ ಸಚಿವನೂ ಅಲ್ಲ” ಎಂದರು.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ‘ಡಿಸಿಎಂ ಡಿ.ಕೆ ಶಿವಕುಮಾರ್’ ಭೇಟಿಯಾಗಿದ್ದು ಏಕೆ ಗೊತ್ತೇ?
ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ‘ಗ್ರಾಮಠಾಣ’ ಒಳಗಿನ, ಹೊರಗಿನ ‘ಆಸ್ತಿ ಅಳತೆ’ಗೆ ಅವಕಾಶ