ಶಿವಮೊಗ್ಗ: ರಾಜಕೀಯವಾಗಿ ಅನುನುಭವಿಯಾಗಿದ್ದ ನನಗೆ ರಾಜಕೀಯ ಪ್ರಜ್ಞೆ ಮೂಡಲು ತಾಲ್ಲೂಕಿನ ಪತ್ರಕರ್ತರಿಂದ ಸಲಹೆ, ಸಹಕಾರ ಪಡೆದು ಸುಶಿಕ್ಷಿತನಾಗಲು ಸಾಧ್ಯವಾಗಿದೆ ಎಂದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಮಂಗಳವಾರ ಪಟ್ಟಣದ ಶ್ರೀರಂಗ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ,ಕಾರ್ಯಾಂಗ,ಶಾಸಕಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮರ್ಥವಾಗಿರುವ ಪತ್ರಿಕಾ ರಂಗ ತನ್ನದೇ ಆದ ಶಕ್ತಿ ಉಳಿಸಿಕೊಂಡಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಬಂದ ಮೇಲೆ ಪತ್ರಿಕಾ ರಂಗದ ನಿಜವಾದ ದಿಕ್ಕು,ದಿಸೆ ಬದಲಾಗಿದೆ. ಸಮಾಜಕ್ಕೆ ಸರಿ ದಾರಿ ತೋರಿಸುವ ಕ್ಷೇತ್ರ ತನ್ನ ನಿಜತನವನ್ನು ಬದಲಾಯಿಸಿಕೊಂಡರೆ ಯಾರಿಗೆ ಪ್ರಶ್ನೆ ಮಾಡಲು ಸಾಧ್ಯ. ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಎಲ್ಲರೂ ತಮ್ಮ ತನವನ್ನು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಚಿವನಾಗಿ ಉತ್ತಮ ಕೆಲಸ ಮಾಡಿದ್ದರೂ ತಿರುಚಿ ಹಾಕಿದಾಗ ಬಹಳ ಬೇಸರವಾಗುತ್ತದೆ. ಸಾರ್ವಜನಿಕರು ರಾಜಕಾರಣಿಗಳನ್ನು ದೂರಿದಂತೆ ಪತ್ರಕರ್ತರನ್ನು ದೂರುವ ಸಂದರ್ಭ ಹೆಚ್ಚಾಗಿದೆ. ವೃತ್ತಿಯಲ್ಲಿ ಬದ್ಧತೆ, ನೈತಿಕತೆ ಕಾಪಾಡಿಕೊಳ್ಳುವ ಮೂಲಜ ನಿಮ್ಮನ್ನು ನೀವು ತಿದ್ದಿಕೊಳ್ಳಿ ಎಂದು ಸಲಹೆ ನೀಡಿದರು.
ಜಡೆ ಮಠದ ಡಾ.ಮಹಾಂತ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಪತ್ರಿಕೆಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಗೊಳ್ಳು ಸಾಧ್ಯ. ಈ ನಿಟ್ಟಿನಲ್ಲಿ ತಾಲ್ಲೂಕಿನ ಮಾಧ್ಯಮ ಸ್ನೇಹಿತರು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ದಿನದ ಬಹುತೇಕ ಸಮಯವನ್ನು ಸಮಾಜದ ಅಭಿವೃದ್ಧಿಗೆ ಕಳೆಯುತ್ತಿರುವ ಪತ್ರಕರ್ತರಿಗೆ ಸರ್ಕಾರದಿಂದ ಸವಲತ್ತುಗಳು ಸಿಗಬೇಕಿದೆ. ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ನಾನೂ ಕೂಡ ಮಠದ ವತಿಯಿಂದ ಸಹಾಯ ಮಾಡುತ್ತೇನೆ ಎಂದರು.
ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ವ್ಯೆಯಕ್ತಿಕ ಬದುಕನ್ನು ತ್ಯಾಗ ಮಾಡಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರು ರಾಜ್ಯದಲ್ಲಿ ಕೋವಿಡ್ ಕಾಲದಲ್ಲಿ 54 ಜನ ಮೃತಪಟ್ಟರು.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಹೊಸ ಪೀಳಿಗೆಯ ಪತ್ರಕರ್ತರಾಗಲು ಬಯಸುವವರು ಆಸ್ತಿ,ಮನೆ ಭದ್ರವಿದ್ದರೆ ಮಾತ್ರ ಸೇವೆ ಸಲ್ಲಿಸುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಕಾವ್ಯಾ ಭಾವೆ ಪ್ರಾರ್ಥಿಸಿ, ಪತ್ರಕರ್ತರಾದ ಡಾ.ಎಸ್.ಎಂ.ನಿಲೇಶ್ ಸ್ವಾಗತಿಸಿ, ಶಿವಪ್ಪ ಹಿತ್ಲರ್ ವಂದಿಸಿ, ರವಿ ಕಲ್ಲಂಬಿ ನಿರೂಪಿಸಿದರು. ಈ ಹಿಂದೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷ ವೈದ್ಯ, ಪ್ರಧಾನ ಕಾರ್ಯದರ್ಶಿ ಹಾಲಸ್ವಾಮಿ, ರಾಜ್ಯ ಚುನಾವಣಾಧಿಕಾರಿ ರವಿಕುಮಾರ್ ಟೆಲೆಕ್ಸ್, ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಕಾರ್ಯದರ್ಶಿ ದೀಪಕ್ ಸಾಗರ್, ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ಜಿ.ಎಂ.ತೋಟಪ್ಪ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬಾಪಟ್, ಮಾಜಿ ಅಧ್ಯಕ್ಷ ನಾಗರಾಜ್ ಜೈನ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜೈಶೀಲಗೌಡ ಅಂಕರವಳ್ಳಿ, ತಾಲ್ಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ,ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ, ಪುರಸಭೆ ಮುಖ್ಯಾಧಿಕಾರಿ ಚಂದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.








