ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, 2024ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆರ್.ಜಿ. ಕರ್ (RG Kar) ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿ ರತ್ನ ದೇವನಾಥ್ ಅವರು ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಬುಧವಾರ ಬಿಜೆಪಿ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ ಅವರಿಗೆ ಪನಿಹಟಿ (Panihati) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ.
”ನನ್ನ ಮಗಳ ನ್ಯಾಯಕ್ಕಾಗಿ ಈ ಹೋರಾಟ”
ಟಿಕೆಟ್ ಘೋಷಣೆಯಾದ ನಂತರ ಭಾವನಾತ್ಮಕವಾಗಿ ಮಾತನಾಡಿದ ಅವರು, ರಾಜಕೀಯ ಪ್ರವೇಶದ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.”ನನ್ನ ಮಗಳಿಗೆ ಸಂಭವಿಸಿದ ಕ್ರೌರ್ಯಕ್ಕೆ ಇಂದಿಗೂ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಈ ವ್ಯವಸ್ಥೆಯ ವಿರುದ್ಧ ಹೋರಾಡಲು ನನಗೆ ಒಂದು ವೇದಿಕೆ ಬೇಕಿತ್ತು, ಹಾಗಾಗಿ ನಾನು ಈ ನಿರ್ಧಾರ ತಳೆದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
“ಬಂಗಾಳದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇನ್ನು ಮುಂದೆ ಯಾವ ತಾಯಿಗೂ ಇಂತಹ ಪರಿಸ್ಥಿತಿ ಬರಬಾರದು. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಧ್ವನಿ ಎತ್ತಲು ನಾನು ಸಿದ್ಧಳಿದ್ದೇನೆ” ಎಂದು ಅವರು ಘೋಷಿಸಿದ್ದಾರೆ.ತೃಣಮೂಲ ಕಾಂಗ್ರೆಸ್ ಸರ್ಕಾರವು ತನಿಖೆಯನ್ನು ಹಾದಿತಪ್ಪಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿರುವ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತವನ್ನು ಅಂತ್ಯಗೊಳಿಸುವುದೇ ತಮ್ಮ ಗುರಿ ಎಂದಿದ್ದಾರೆ.








