ಬೆಂಗಳೂರು: “ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ನನ್ನ ವೈಯಕ್ತಿಕ ನಂಬಿಕೆ, ನಾನು ಪಾಲಿಸುತ್ತೇನೆ. ಇದಕ್ಕೆ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.
ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿ ನೀವೇ ಮುಂದುವರಿಯಬೇಕು ಎಂದು ಮನವಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಕೇಳಿದಾಗ, “ಇದು ಸುಳ್ಳು. ಇದೆಲ್ಲವೂ ಸೃಷ್ಟಿ ಮಾಡಲಾಗಿರುವ ಸುದ್ದಿ. ಇನ್ನು ಅನೇಕ ವಿಚಾರಗಳಲ್ಲಿ ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸದ್ಗುರು ಅವರು ನನ್ನ ಮನೆಗೆ ಬಂದು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದರು. ಅವರು ನಮ್ಮ ಮೈಸೂರಿನವರು. ಅವರ ಜ್ಞಾನವನ್ನು ನಾನು ಮೆಚ್ಚುತ್ತೇನೆ. ಕಳೆದ ವರ್ಷ ನನ್ನ ಮಗಳು ಆ ಕಾರ್ಯಕ್ರಮಕ್ಕೆ ಹೋಗಿದ್ದಳು. ಈ ಬಾರಿ ಅವರು ನಮ್ಮ ಮನೆಗೆ ಬಂದು ನನ್ನ ಹಾಗೂ ನನ್ನ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ಈಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಇಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ತಿಳಿಸಿದರು.
“ನಾನು ಹಿಂದು, ಎಲ್ಲಾ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಿದ್ಧಾಂತ ಹೊಂದಿದೆ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರು ಇದನ್ನೇ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಆಚರಣೆ ಮಾಡುವುದನ್ನು ನೋಡಿದ್ದೇನೆ. ಅವರು ನಮಗಿಂತ ಹೆಚ್ಚಾಗಿ ಭಾರತೀಯತೆಯನ್ನು ಅಳವಡಿಸಿಕೊಂಡಿದ್ದಾರೆ. ನಾವು ಅಂತಹ ನಾಯಕತ್ವವನ್ನು ಹೊಂದಿದ್ದೇವೆ. ನಮ್ಮ ಅಧ್ಯಕ್ಷರ ಹೆಸರು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಎಂದರೆ ಶಿವ. ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರಾ?” ಎಂದು ಹೇಳಿದರು.
ಟೀಕೆ ಮಾಡುವವರು ಮಾಡಲಿ, ಅದನ್ನು ಸ್ವಾಗತಿಸುತ್ತೇನೆ
ಸ್ಟೀಲ್ ಬ್ರಿಡ್ಜ್ ವಿರೋಧಿಸಿದಂತೆ ಬೆಂಗಳೂರಿನಲ್ಲಿ ಟನಲ್ ರಸ್ತೆಗೆ ವಿರೋಧಿಸಿ ಬಿಜೆಪಿ 28 ಕ್ಷೇತ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕೇಳಿದಾಗ. “ಅಂದು ಜಾರ್ಜ್ ಅವರು ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾಗಿದ್ದರು, ಬಿಜೆಪಿ ವಿರೋಧಿಸಿತ್ತು. ಬೆಂಗಳೂರಿನ ರಸ್ತೆ ಪರಿಸ್ಥಿತಿಯನ್ನು ದೇವರೇ ಬಂದರೂ ಒಂದೆರಡು ವರ್ಷದಲ್ಲಿ ಸರಿಪಡಿಸಲು ಆಗುವುದಿಲ್ಲ ಎಂದು ಹೇಳಿದ್ದನ್ನು ಟೀಕಿಸಿದ್ದಾರೆ. ಅವರು ಟೀಕೆ ಮಾಡಲಿ, ನಾನು ಅದನ್ನು ಸ್ವಾಗತಿಸುತ್ತೇನೆ. ಅವರು ಟೀಕೆ ಮಾಡಿದಷ್ಟು ಒಳ್ಳೆಯದು. ಅವರು ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ನಾನು ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಿಲ್ಲ. ನಾನು ದೀರ್ಘಾವಧಿಯ ಪರಿಹಾರಕ್ಕೆ ಮುಂದಾಗಿದ್ದೇನೆ. ಬೆಂಗಳೂರು ನಗರದಲ್ಲಿ ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದೆ ಏನು ಮಾಡಲು ಆಗುವುದಿಲ್ಲ. ಅರಮನೆ ಜಾಗಕ್ಕೆ 3 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಕೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟನಲ್ ರಸ್ತೆ ಬದಲು ಬೆಂಗಳೂರಿನ ರಸ್ತೆಗಳ ಅಗಲೀಕರಣ ಮಾಡಲು ಮುಂದಾದರೆ ಭೂಸ್ವಾಧೀನ ಪ್ರಕ್ರಿಯೆ ಮಾಡುವುದಕ್ಕೇ 3 ಲಕ್ಷ ಕೋಟಿ ಅಗತ್ಯವಿದೆ. ಎಲ್ಲಾ ಕಡೆಯು 1:2 ಅನುಪಾತದಲ್ಲಿ ಪರಿಹಾರ ನೀಡಬೇಕಿದೆ. ಈಗ ಆಗಿರುವ ಮೆಟ್ರೋಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೆತುವೆ ಮಾಡಿದ್ದರೆ ಈಗ ನಮಗೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಹೀಗಾಗಿ ಮುಂದಿನ ಎಲ್ಲಾ ಮೆಟ್ರೋ ಮಾರ್ಗಗಳಲ್ಲೂ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು. ಇದಕ್ಕೆ ಪಾಲಿಕೆ ವತಿಯಿಂದ ಶೇ.50ರಷ್ಟು ವೆಚ್ಚ ಭರಿಸಲಾಗುವುದು. ಇನ್ನು 160 ಕಿ.ಮೀ ಉದ್ದದಷ್ಟು ಮೇಲ್ಸೇತುವೆ, ರಾಜಕಾಲುವೆಗಳ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದ ರಸ್ತೆಗಳನ್ನು ಮಾಡಲು ಮುಂದಾಗಿದ್ದೇವೆ. ಹೀಗೆ ಹಂತಹಂತವಾಗಿ ಯೋಜನೆ ಜಾರಿ ಮಾಡುತ್ತಿದ್ದು, ಇದಕ್ಕೆ ಕಾಲಾವಕಾಶಗಳು ಬೇಕು” ಎಂದರು.
“ರಾಜ್ಯ ಸರ್ಕಾರ 60 ಸಾವಿರ ಕೋಟಿ ಮೊತ್ತದ ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಹೀಗಾಗಿ ನಾವು ತೆರಿಗೆ ಮೂಲಕ ಹೆಚ್ಚು ಆದಾಯ ಸಂಗ್ರಹಿಸಿದ್ದೇವೆ. ನಗರದಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮಾಡಿ ಮನೆಬಾಗಿಲಿಗೆ ಆಸ್ತಿಪತ್ರ ತಲುಪಿಸುತ್ತಿದ್ದೇವೆ. ಬೈಯುವವರೆಲ್ಲರೂ ಬೈಯುತ್ತಿರಲಿ. ಎಲ್ಲದಕ್ಕೂ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಅವರು ಉತ್ತಮ ಸಲಹೆ ನೀಡಿದರೆ ಅದನ್ನು ಪರಿಗಣಿಸಲು ನಾನು ಸಿದ್ಧನಿದ್ದೇನೆ. ನಾನು ಮುಂಬೈ, ಹೈದರಾಬಾದ್, ದೆಹಲಿ ರಸ್ತೆಗಳನ್ನು ನೋಡಿದ್ದೇನೆ. ಎಲ್ಲವೂ ಬೆಂಗಳೂರು ರಸ್ತೆಗಳಿಗಿಂತ ಹದಗೆಟ್ಟಿವೆ. ಅಧಿವೇಶನದಲ್ಲಿ ಬೇರೆ ನಗರಗಳಲ್ಲಿ ವಾಹನ ಸಂಚಾರದ ಸಮಯವನ್ನು ಹೇಳುತ್ತೇನೆ. ಬೆಂಗಳೂರು ಜಗತ್ತಿನ ಗಮನ ಸೆಳೆದಿದ್ದು, ಹೀಗಾಗಿ ಬೆಂಗಳೂರಿನ ಸಂಚಾರ ದಟ್ಟಣೆ ಎದ್ದು ಕಾಣುತ್ತಿದೆ. ಬೆಂಗಳೂರಿನ ಮೇಲೆ ಒತ್ತಡ ಇಳಿಸಲು ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಕುಮಾರಸ್ವಾಮಿದ್ದು ಬರೀ ರಾಜಕೀಯ
ಬಿಬಿಎಂಪಿ ವಿಭಜನೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಟೀಕೆ ಮಾಡಿದ್ದು ಕೇಂಪೇಗೌಡರ ಹೆಸರು ನಾಶ ಮಾಡಲು ಹೊರಟಿದ್ದಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಬರೀ ರಾಜಕೀಯ ಮಾಡುತ್ತಾರೆ. ಕುಮಾರಸ್ವಾಮಿ ಅವರ ಕಾಲದಲ್ಲಿ ಏನು ಮಾಡಿದ್ದಾರೆ? ನಾನು ಕೃಷ್ಣಾ ಅವರ ಕಾಲದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರು ಪಾಲಿಕೆ ವ್ಯಾಪ್ತಿ ಹೆಬ್ಬಾಳ, ಆರ್ ಆರ್ ನಗರ ಮುಖ್ಯದ್ವಾರ, ಬನಶಂಕರಿ, ಕೆ.ಆರ್ ಪುರಂದವರೆಗೂ ಮಾತ್ರ ಇತ್ತು. ಅವರ ಸರ್ಕಾರ ಬಂದ ನಂತರ ಇದನ್ನು ವಿಸ್ತರಣೆ ಮಾಡಿದ್ದು ಯಾಕೆ? ಬೆಂಗಳೂರು ವಿಸ್ತರಣೆಯಾಗುತ್ತಿದೆ. ಎಲೆಕ್ಟಾನಿಕ್ ಸಿಟಿಯೋ ಪ್ರತ್ಯೇಕ ಬೆಂಗಳೂರು ಆಗಿದೆ. ಅಲ್ಲಿನ ಆದಾಯ, ಯೋಜನೆ ಏನಾಗಬೇಕು? ಬೆಂಗಳೂರು ಎಂದರೆ, ಸದಾಶಿವನಗರ, ವಿಧಾನಸೌಧ ಸುತ್ತಮುತ್ತಲಿನ ಪ್ರದೇಶ ಮಾತ್ರವಲ್ಲ. 2023 ಮಾರ್ಚ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಒಂದು ನೋಟಿಫಿಕೇಶನ್ ಮಾಡಿ ವೈಟ್ ಫೀಲ್ಡ್ ಭಾಗದಲ್ಲಿ 90 ಮೀಟರ್ ರಸ್ತೆ (ಐಆರ್ ಆರ್) ಮಾಡಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಒಳಗೆ 19 ಕಿ.ಮೀ ಉದ್ದದ ರಸ್ತೆ ಮಾಡಲು ಭೂಸ್ವಾಧಿನಕ್ಕಾಗಿಯೇ 25 ಸಾವಿರ ಕೋಟಿ ಅಗತ್ಯವಿದೆ. ಇದನ್ನು ಯಾರಿಗಾಗಿ ಮಾಡಿದ್ದಾರೋ ಗೊತ್ತಿಲ್ಲ. ಈ ಭಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಕಟ್ಟಲಾಗಿದೆ. ಇದನ್ನು ನೋಡದೇ ಅವರು ನೋಟಿಫಿಕೇಶನ್ ಹೊರಡಿಸಿದ್ದರು. ಟೀಕೆ ಮಾಡುವವರು ಮಾಡಲಿ. ನಾನು ಪ್ರಗತಿ ಮಾರ್ಗದಲ್ಲಿ ಮುನ್ನಡೆಯಲು ಬಯಸುತ್ತೇವೆ” ಎಂದು ತಿಳಿಸಿದರು.
ನಮ್ಮ ಊರಿನ ಹೆಸರು ಹೇಗೆ ಇಟ್ಟುಕೊಳ್ಳಬೇಕು ಎಂದು ಗೊತ್ತಿದೆ
ಕೆಂಪೇಗೌಡರ ಹೆಸರು ಬಳಸಿಕೊಂಡು ಈಗ ಹಾಳು ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಎಲ್ಲಾ ಸಮಿತಿ ಶಿಫಾರಸ್ಸು ಮಾಡಿವೆ. ಆದರೆ ಇವರು ಕೇಂದ್ರ ಗೃಹ ಸಚಿವರ ಬಳಿ ಹೋಗಿ ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಗೃಹ ಸಚಿವರು ಇದು ಕಾರ್ಯಸಾಧುವಲ್ಲ ಎಂದು ಬರೆದಿದ್ದಾರೆ. ಈ ಜಿಲ್ಲೆಯನ್ನು ಹೇಗೆ ಬೆಂಗಳೂರು ದಕ್ಷಿಣ ಎಂದು ಮಾಡಬೇಕು, ನಮ್ಮ ಊರಿನ ಹೆಸರನ್ನು ನಾವು ಹೇಗೆ ಇಟ್ಟುಕೊಳ್ಳಬೇಕು ಎಂದು ನಮಗೆ ಗೊತ್ತಿದೆ. ಈಗ ಆ ವಿಚಾರವಾಗಿ ಮಾತನಾಡುವುದಿಲ್ಲ. ಕುಮಾರಸ್ವಾಮಿ ಮಾತಿಗೆ ಕಿಮ್ಮತ್ತು ನೀಡುವ ಅಗತ್ಯವಿಲ್ಲ. ಅವರು ಮಾತನಾಡುತ್ತಾರೆ ಹೋಗುತ್ತಾರೆ. ಅವರ ವಿಚಾರ ಏನೇ ಇದ್ದರೂ ಅಧಿವೇಶನದಲ್ಲಿ ಅವರ ಶಾಸಕರ ಮೂಲಕ ಚರ್ಚೆ ಮಾಡಲಿ” ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಮಾಡಲಾಗದಿದ್ದರೆ ಶಿವಕುಮಾರ್ ಅವರು ರಾಜೀನಾಮೆ ಕೊಟ್ಟು ಹೋಗಲಿ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ನನ್ನ ರಾಜೀನಾಮೆಗಾಗಿ ಕಾಯುತ್ತಿರಲಿ” ಎಂದು ತಿಳಿಸಿದರು.
ಮೋಹನ್ ದಾಸ್ ಪೈ ರಾಜಕೀಯ ಪ್ರವೇಶಿಸಲಿ:
ಮೋಹನ್ ದಾಸ್ ಪೈ ಅವರು ನಿರಂತರವಾಗಿ ನಿಮ್ಮ ಹಾಗೂ ಬಿಬಿಎಂಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಮೋಹನ್ ದಾಸ್ ಪೈ ಹಿರಿಯರು, ಅವರ ಬಗ್ಗೆ ನಮಗೆ ಗೌರವವಿದೆ. ಅವರು ಕೂಡ ರಾಜಕೀಯಕ್ಕೆ ಬರಲಿ. ರಾಜಕೀಯದ ಪ್ರಕ್ರಿಯೆಯಲ್ಲಿ ಭಾಗಿಯಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸಿ ಸಚಿವರಾಗಲಿ, ಸಂಸದರಾಗಲಿ. ಆಗ ಅವರಿಗೆ ಇಲ್ಲಿನ ಕಷ್ಟಗಲು ಅರ್ಥವಾಗುತ್ತದೆ. ಸಲಹೆ ನೀಡುವವರು ನಮ್ಮಲ್ಲಿ ಬಹಳಷ್ಟು ಜನರಿದ್ದಾರೆ. ಅವರು ಬೆಂಗಳೂರಿಗೆ ಕೊಡುಗೆ ನೀಡಿದ್ದಾರೆ. ಚುನಾವಣೆ ರಾಜಕೀಯಕ್ಕೂ ಬರಲಿ, ಆಗ ಅವರಿಗೆ ವ್ಯವಸ್ಥೆ ಅರಿವಾಗುತ್ತದೆ. ಈಗ ಪಾಲಿಕೆಗೆ 50-60 ಸಾವಿರ ಕೋಟಿಯಷ್ಟು ಬ್ಯಾಂಕ್ ಗ್ಯಾರಂಟಿ ನೀಡಲಾಗಿದೆ. ಈ ಹಿಂದೆ ಯಾವಾಗ ಕೊಟ್ಟಿದ್ದರು? ಒಂದು ಒಳ್ಳೆಯ ಕೆಲಸ ಮಾಡುವಾಗ ವಿರೋಧ, ಟೀಕೆ ಇದ್ದೇ ಇರುತ್ತದೆ. ಇನ್ನು ಕಸದ ವಿಚಾರವಾಗಿ ಕೋರ್ಟ್ ನಲ್ಲಿ ನಮಗೆ ಅವಕಾಶವನ್ನೇ ಕೊಟ್ಟಿಲ್ಲ. ಆದರೂ ಶಿವಕುಮಾರ್ 15 ಸಾವಿರ ಕೋಟಿ ಹೊಡೆದಿದ್ದಾರೆ ಎಂದು ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಾರೆ. ನಾನು ಅದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಇರಲಾ? ಇಲ್ಲಿ ಯಾರು ಕಿಕ್ ಬ್ಯಾಕ್ ಕೊಟ್ಟಿದ್ದಾರೆ ಎಂಬುದು ಗೊತ್ತಾಗಬೇಕಲ್ಲವೇ? ಕೊಡಲಿ ಸಿಬಿಐಗೆ. ಕುಮಾರಸ್ವಾಮಿ ಸಂಸದರಾಗುವ ಮುನ್ನ ಕಸ ಹೊಡೆದು ಅಭ್ಯಾಸವಿದೆ. ಹಿಂದೆ ಕಸದ ಲಾರಿ ಇಟ್ಟುಕೊಂಡಿದ್ದರು” ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಪ್ರಕರಣದ ಬಗ್ಗೆ ಅಶೋಕ್, ವಿಜಯೇಂದ್ರ ಪ್ರತಿಕ್ರಿಯಿಸಲಿ
ಕುಮಾರಸ್ವಾಮಿ ವಿರುದ್ಧ ಪ್ರಕರಣ ವಜಾಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ರಾಜೀನಾಮೆಗೆ ಒತ್ತಾಯಿಸುತ್ತೀರ ಎಂದು ಕೇಳಿದಾಗ, “ಕುಮಾರಸ್ವಾಮಿ ಅವರ ಪ್ರಕರಣದ ಬಗ್ಗೆ ಮಾಧ್ಯಮಗಳ ವರದಿ ಮಾತ್ರ ನೋಡಿದ್ದೇನೆ. ಅದರ ಹೊರತಾಗಿ ಹೆಚ್ಚಿನ ಮಾಹಿತಿ ಇಲ್ಲ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷರು ಪ್ರತಿಕ್ರಿಯೆ ನೀಡಲಿ, ನಂತರ ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ನೀಡಲಿದೆ. ಅವರಿಬ್ಬರೂ ಸ್ನೇಹಿತರಲ್ಲವೇ ಈ ವಿಚಾರದಲ್ಲಿ ಅವರ ನಿಲುವೇನು? ಎಂದು ಸ್ಪಷ್ಟಪಡಿಸಲಿ. ಬಿಜೆಪಿಯವರು ನನ್ನ ಹೇಳಿಕೆ, ಸಂಸದ ಕುಮಾರ್ ನಾಯಕ್ ಅವರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ, ಈಗ ಈ ವಿಚಾರದಲ್ಲಿ ತಮ್ಮ ನುಡಿಮುತ್ತುಗಳನ್ನು ಹೇಳಲಿ” ಎಂದು ತಿಳಿಸಿದರು.
ಜಾತಿಗಣತಿಯನ್ನು ನಾವು ಒಪ್ಪುವುದಿಲ್ಲ ಎಂಬ ಶಾಸಕ ಶಿವಗಂಗಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ರಾಜಕೀಯ ವಿಚಾರವಾಗಿದ್ದು ನಾವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಮಾಡುತ್ತೇವೆ. ಈ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯಕ್ಕಿಂತ ಪಕ್ಷದ ಅಭಿಪ್ರಾಯ ಮುಖ್ಯ” ಎಂದು ತಿಳಿಸಿದರು.
ಎಐಸಿಸಿ ಕಚೇರಿ ನನ್ನ ಪಾಲಿನ ದೇವಾಲಯ
ನಿನ್ನೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಕೇಳಿದಾಗ, “ನಾನು ಪಕ್ಷದ ಅಧ್ಯಕ್ಷ. ಎಐಸಿಸಿ ಕಚೇರಿ ನನಗೆ ದೇವಾಲಯವಿದ್ದಂತೆ, ಯಾರನ್ನೂ ಭೇಟಿ ಮಾಡದಿದ್ದರೂ ಎಐಸಿಸಿ ಕಚೇರಿಗೆ ಭೇಟಿ ನೀಡಿ ಬರುತ್ತೇನೆ. ಅದೇ ಕಚೇರಿ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ. ನಾನು ಕಾಂಗ್ರೆಸ್ ಕಚೇರಿಗೆ ಹೋಗದೇ ಬಿಜೆಪಿ ಕಚೇರಿಗೆ ಹೋಗಲು ಸಾಧ್ಯವೇ? ಕೇಶವಕೃಪಾಕ್ಕೆ ಹೋಗಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಆ ದೇವಾಲಯಕ್ಕೆ ಹೋಗಿ ಏನು ಪ್ರಾರ್ಥನೆ ಮಾಡಿಕೊಂಡಿರಿ ಎಂದು ಕೇಳಿದಾಗ, “ನಾನು ಯಾವ ಪ್ರಾರ್ಥನೆ ಮಾಡುವ ಅವಶ್ಯಕತೆ ಇಲ್ಲ. ನಾನು ಯಾರ ಸಮಯವನ್ನು ಕೇಳಿರಲಿಲ್ಲ. ನನ್ನ ಪಾಡಿಗೆ ನಾನು ಹೋಗಿ ಅಲ್ಲಿರುವ ಸಿಬ್ಬಂದಿಯನ್ನು ಮಾತನಾಡಿಸಿಕೊಂಡು ಬರುತ್ತೇನೆ” ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ತಮಿಳುನಾಡು ಸರ್ಕಾರ ಹೋರಾಟ ಮಾಡುತ್ತಿದ್ದು ಸರ್ವಪಕ್ಷಗಳ ಸಭೆ ಕರೆದಿದ್ದು, ನೀವು ಅದೇ ರೀತಿ ಆಲೋಚನೆ ಮಾಡುತ್ತೀರ ಎಂದು ಕೇಳಿದಾಗ, “ಇದೊಂದು ಗಂಭೀರ ವಿಚಾರವಾಗಿದ್ದು, ನಮ್ಮ ರಾಷ್ಟ್ರೀಯ ನಾಯಕರು ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇದರ ಕುರಿತು ನಾನು ಇನ್ನಷ್ಟು ಅಧ್ಯಯನ ಮಾಡಬೇಕಿದೆ” ಎಂದು ತಿಳಿಸಿದರು.
ಪಕ್ಷದ ತೀರ್ಮಾನ ಗೌರವಿಸುವೆ
ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆವರೆಗೂ ಸಿಎಂ ಆಗಿ ಮುಂದುವರಿಯುತ್ತಾರಾ ಎಂದು ಕೇಳಿದಾಗ, “ನಮ್ಮ ಪಕ್ಷ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ನಾನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿದ್ದು, ನಾನು ಪಕ್ಷದ ತೀರ್ಮಾನವನ್ನು ಗೌರವಿಸುತ್ತೇವೆ” ಎಂದು ತಿಳಿಸಿದರು.
ಪಕ್ಷದಲ್ಲಿ ಕೆಲವರು ಒಬ್ಬರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದಾಗ, “ಅದಕ್ಕೆಲ್ಲಾ ಎಐಸಿಸಿ ನಾಯಕರು ಉತ್ತರ ನೀಡುತ್ತಾರೆ” ಎಂದರು.
ನಿಮಗೆ ಏನಾದರೂ ಸಂದೇಶ ನೀಡಿದ್ದಾರಾ ಎಂದು ಕೇಳಿದಾಗ, “ನಾನು ಯಾರಿಗೂ ಮಾತನಾಡುವುದಿಲ್ಲ. ನನಗೆ ಕೆಲಸ ಮಾಡಬೇಕಿದ್ದು, ಗಾಂಧಿ ನಗರದಲ್ಲಿರುವ ಕಾಂಗ್ರೆಸ್ ಕಟ್ಟಡ ನೆಲಸಮ ಮಾಡಿದ್ದು, ಅಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಇದರ ಜತೆಗೆ ನೂರು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ತಯಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಜಮೀನು ಇದ್ದರೆ ಮಾತ್ರ ಅಲ್ಲಿ ಪಕ್ಷದ ಕಚೇರಿಗೆ ಶಂಕುಸ್ಥಾಪನೆ ಮಾಡಲಾಗುವುದು. ಬೇರೆಯವರ ಹೆಸರಿನಲ್ಲಿದ್ದರೆ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಶಿವಾಜಿನಗರ, ಯಶವಂತಪುರ ಸೇರಿದಂತೆ ಮೂರು ಕಡೆ ಶಂಕುಸ್ಥಾಪನೆ ನೆರವೇರಲಿದೆ. ರಾಮನಗರದ ಕಚೇರಿಗೆ ನಾನು ನನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿ ಪಕ್ಷದ ಹೆಸರಿನಲ್ಲಿ ನೋಂದಣಿ ಮಾಡಲಾಗುವುದು. ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಶಕ್ತಿ ಯೋಜನೆ ಬಗ್ಗೆ ಮಾತನಾಡಿದಾಗ ಮಾಧ್ಯಮಗಳು ಅದನ್ನು ಬೇರೆ ರೀತಿ ಬಿಂಬಿಸಿದವು. ಪರಮೇಶ್ವರ್ ಅವರು ನೇತೃತ್ವದ ಪ್ರಣಾಳಿಕೆ ಸಮಿತಿ ಸಲಹೆ ಮೇರೆಗೆ ಪಕ್ಷ ಪ್ರಣಾಳಿಕೆ ತಯಾರಿಸಿದೆ. ಅವರು ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಿ ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ಮಾಧ್ಯಮಗಳ ಮುಂದೆ ಕೊಟ್ಟ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ
ವಿಧಾನಸಭೆ ಚುನಾವಣೆ ಟಿಕೆಟ್ ತೆಗೆದುಕೊಂಡಿರುವವರ ಹೊರತಾಗಿ ಬೇರೆವರಿಗೆ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ರಾಜಣ್ಣ ಅವರ ಬೇಡಿಕೆ ಬಗ್ಗೆ ಕೇಳಿದಾಗ, “ಅವರು ನನ್ನ ಬಳಿ ಮಾತನಾಡಿಲ್ಲ. ಮಾಧ್ಯಮಗಳ ಮುಂದೆ ಮಾತನಾಡಿರುವ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಬಳಿ ಚರ್ಚೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ಕೆಲಸ ಮಾಡುವವರಿಗೆ ಪಕ್ಷದ ಜವಾಬ್ದಾರಿ
ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದಲ್ಲಿ ಮೂರು ಹಂತಗಳಿವೆ. ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು. ಕಾರ್ಯದರ್ಶಿಗಳ ಪಟ್ಟಿಯನ್ನು ನೀಡಿದ್ದೆ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಅವರನ್ನು ಕರೆದು ಚರ್ಚೆ ಮಾಡಿದ್ದೆ. ಈಗ ಸಚಿವರ ಜತೆ ಚರ್ಚೆ ಮಾಡಿದ್ದು, ಅವರ ಜಿಲ್ಲೆಯಲ್ಲಿ ಪಕ್ಷಕ್ಕೆ ಸಮಯ ಕೊಟ್ಟು ದುಡಿಯುವವರಿದ್ದರೆ ಹೆಸರು ನೀಡಿ ಎಂದು ಹೇಳಿದ್ದೇನೆ. ನನ್ನ ಹಿಂದೆ ತಿರುಗುವವರಿಗೆ ಹುದ್ದೆ ನೀಡುವುದಲ್ಲ. ನಾವು ನೇಮಕ ಮಾಡಿದರೆ ಮುಂದಿನ ಮೂರು ವರ್ಷ ಕೆಲಸ ಮಾಡಬೇಕು. ಅಂತಹವರ ಹೆಸರು ನೀಡಿ ಎಂದು ಕೇಳಿದ್ದೇನೆ” ಎಂದರು.
ವಿಧಾನ ಪರಿಷತ್ ನಾಮನಿರ್ದೇಶನದ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನಾನು ಹಾಗೂ ಸಿಎಂ ದೆಹಲಿಗೆ ಹೋಗಬೇಕು. ಬಜೆಟ್ ತಯಾರಿ ಮುಗಿದ ಬಳಿಕ ಈ ವಿಚಾರದ ಬಗ್ಗೆ ಗಮನಹರಿಸುತ್ತೇವೆ. ಮುಖ್ಯಮಂತ್ರಿಗಳು ಚೇತರಿಸಿಕೊಂಡಿದ್ದು, ಇನ್ನು ನಡೆದಾಡಲು ಸಾಧ್ಯವಾಗಿಲ್ಲ” ಎಂದು ತಿಳಿಸಿದರು.
ಖರ್ಗೆ ಅವರ ಎಚ್ಚರಿಕೆ ಹೊರತಾಗಿಯೂ ಜಮೀರ್ ಅಹ್ಮದ್ ಖಾನ್ ಅವರು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ನಿಮ್ಮ ಮಾತಿನ ಮೇಲೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
ನೀವು ಬಹಳ ನಾಜೂಕಾಗಿ ಉತ್ತರ ನೀಡುತ್ತಿದ್ದೀರಿ ಎಂದು ಕೇಳಿದಾಗ, “ನೀವು (ಮಾಧ್ಯಮದವರು) ನನ್ನನ್ನು ಆ ರೀತಿ ಮಾಡಿದ್ದೀರಿ” ಎಂದು ಚಟಾಕಿ ಹಾರಿಸಿದರು.
ರಾಜ್ಯದ ‘ಶಕ್ತಿ ಯೋಜನೆ’ ಫಲಾನುಭವಿ ಮಹಿಳೆಯರಿಗೆ ‘ಸಿಎಂ ಸಿದ್ಧರಾಮಯ್ಯ’ ಗುಡ್ ನ್ಯೂಸ್ | Shakti Scheme
BIG NEWS : ಫೆ.28ರಿಂದ 3 ದಿನ `ಹಂಪಿ ಉತ್ಸವ’ : CM ಸಿದ್ದರಾಮಯ್ಯ ಚಾಲನೆ.!
‘ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ’ರಿಗೆ ‘ಡಿಸಿಎಂ ಡಿ.ಕೆ ಶಿವಕುಮಾರ್’ ಗುಡ್ ನ್ಯೂಸ್