ಮುಂಬೈ : ಪತಿ ಮತ್ತು ಅತ್ತೆ-ಮಾವನ ವಿರುದ್ಧದ ದೂರಿನ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನ ಮುಂಬೈನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಪತಿ ತನ್ನ ತಾಯಿಗೆ ಸಮಯ ಮತ್ತು ಹಣವನ್ನ ನೀಡುವುದನ್ನು ಕೌಟುಂಬಿಕ ಹಿಂಸೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ ನ್ಯಾಯಾಲಯ) ಆಶಿಶ್ ಅಯಾಚಿತ್ ಮಂಗಳವಾರ ಹೊರಡಿಸಿದ ಆದೇಶದಲ್ಲಿ, ಪ್ರತಿವಾದಿಗಳ ವಿರುದ್ಧದ ಆರೋಪಗಳು ಅಸ್ಪಷ್ಟವಾಗಿವೆ ಮತ್ತು ಅವರು ಅರ್ಜಿದಾರರನ್ನ (ಮಹಿಳೆ) ಕೌಟುಂಬಿಕ ಹಿಂಸೆಗೆ ಒಳಪಡಿಸಿದ್ದಾರೆ ಎಂದು ಸಾಬೀತುಪಡಿಸಲು ಏನೂ ಇಲ್ಲ ಎಂದು ಹೇಳಿದರು.
ಮಂತ್ರಾಲಯದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.
ಇನ್ನು ತನ್ನ ತಾಯಿಯ ಮಾನಸಿಕ ಅಸ್ವಸ್ಥತೆಯನ್ನ ಮರೆಮಾಚಿ ಪತಿ ತನ್ನನ್ನ ಮದುವೆಯಾಗಿದ್ದಾನೆ ಮತ್ತು ಮೋಸ ಮಾಡಿದ್ದಾನೆ ಎಂದು ಆಕೆ ಆರೋಪಿಸಿದಳು. ಇನ್ನು ತನ್ನ ಅತ್ತೆ ತನ್ನ ಕೆಲಸವನ್ನ ವಿರೋಧಿಸುತ್ತಿದ್ದು, ತನಗೆ ಕಿರುಕುಳ ನೀಡುತ್ತಿದ್ದರು ಮತ್ತು ತನ್ನ ಪತಿ ಮತ್ತು ಅವನ ತಾಯಿ ತನ್ನೊಂದಿಗೆ ಜಗಳವಾಡುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ.
ತನ್ನ ಪತಿ ಸೆಪ್ಟೆಂಬರ್ 1993 ರಿಂದ ಡಿಸೆಂಬರ್ 2004 ರವರೆಗೆ ಕೆಲಸಕ್ಕಾಗಿ ವಿದೇಶದಲ್ಲಿದ್ದರು ಎಂದು ಅವರು ಹೇಳಿದರು. ಅವರು ರಜೆಯ ಮೇಲೆ ಭಾರತಕ್ಕೆ ಬಂದಾಗಲೆಲ್ಲಾ, ಅವರು ತಮ್ಮ ತಾಯಿಯನ್ನು ಭೇಟಿ ಮಾಡುತ್ತಿದ್ದರು ಮತ್ತು ಪ್ರತಿವರ್ಷ ₹ 10,000 ಕಳುಹಿಸುತ್ತಿದ್ದರು. ತನ್ನ ತಾಯಿಯ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿಯೂ ಅವನು ಹಣವನ್ನ ಖರ್ಚು ಮಾಡಿದ್ದಾನೆ ಎಂದು ಮಹಿಳೆ ಹೇಳಿದರು.