ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ನಡೆದ ಗಲಾಟೆಯು ಗೃಹಿಣಿಯೊಬ್ಬರ ಬಲಿ ಪಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಾಡಿದ ಸಾಂಬಾರ್ ಅನ್ನೇ ಪತಿಗೆ ಬಡಿಸಿದ್ದಕ್ಕೆ ನಡೆದ ಜಗಳವು ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಡೆದಿದೆ.
ಏನಿದು ಘಟನೆ?
ಮೃತರನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಇವರು ರಂಗಸ್ವಾಮಿ ಎಂಬುವವರನ್ನು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಕಾವ್ಯ ಅವರು ಮೂರು ದಿನಗಳ ಹಿಂದೆ ಸಾಂಬಾರ್ ತಯಾರಿಸಿದ್ದರು. ಅದೇ ಸಾಂಬಾರನ್ನು ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಿ ಕಳೆದ ಮೂರು ದಿನಗಳಿಂದ ಪತಿಗೆ ಬಡಿಸುತ್ತಿದ್ದರು ಎನ್ನಲಾಗಿದೆ.
ವಿಕೋಪಕ್ಕೆ ತಿರುಗಿದ ಜಗಳ
ಸತತವಾಗಿ ಮೂರು ದಿನಗಳಿಂದ ಒಂದೇ ಸಾಂಬಾರ್ ನೀಡಿದ್ದಕ್ಕೆ ಆಕ್ರೋಶಗೊಂಡ ಪತಿ ರಂಗಸ್ವಾಮಿ, ಪತ್ನಿಯ ಜೊತೆ ತೀವ್ರ ಜಗಳವಾಡಿದ್ದಾರೆ. ಕಾವ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಕಾವ್ಯ, ಮನೆಯಲ್ಲಿದ್ದ ವಿಷಕಾರಿ ಪದಾರ್ಥವನ್ನು ಸೇವಿಸಿದ್ದಾರೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು
ವಿಷ ಸೇವಿಸಿ ಕಾವ್ಯ ಅವರು ವಾಂತಿ ಮಾಡಿಕೊಳ್ಳಲಾರಂಭಿಸಿದಾಗ ಗಾಬರಿಗೊಂಡ ಕುಟುಂಬಸ್ಥರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಕಾವ್ಯ ಅವರು ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾವ್ಯ ಅವರ ಸಾವಿನಿಂದಾಗಿ ನಾಲ್ಕು ವರ್ಷದ ಮಗು ಈಗ ತಾಯಿಯಿಲ್ಲದೆ ಅನಾಥವಾಗಿದೆ.
ಪೊಲೀಸ್ ತನಿಖೆ:
ಕಾವ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪತಿ ರಂಗಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
BREAKING : ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ








