ಬೆಂಗಳೂರು: ವಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ನೂರಾರು ಕೋಟಿ ಭೂ ಹಗರಣದ ಹೊಸ ಬಾಂಬ್ ಅನ್ನು ಸಚಿವ ಡಾ.ಜಿ ಪರಮೇಶ್ವರ್ ಸಿಡಿಸಿದ್ದಾರೆ. ಅಲ್ಲದೇ ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದಂತ ಅವರು, ಮುಖ್ಯಮಂತ್ರಿಯವರ ಧರ್ಮಪತ್ನಿಯವರು ತಾವು ಕಳೆದುಕೊಂಡ ಜಮೀನಿಗೆ ಪರಿಹಾರ ರೂಪದಲ್ಲಿ ಬಂದಂತಹ ನಿವೇಶನಗಳನ್ನು ಮೂಡಾಗ ವಾಪಸ್ಸು ಕೊಟ್ಟಾಗ ಈ ವಿಷಯವನ್ನು ದೊಡ್ಡ ಅಪರಾಧವೆಂದು ಅಬ್ಬರಿಸುತ್ತಾ ವಿಪಕ್ಷ ನಾಯಕರಾದ ದಾನವೀರ ಸಾಮ್ರಾಟ ಶ್ರೀ ಆರ್. ಅಶೋಕ್ ಅವರ ಹಾಗೂ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಒಂದು ರೋಚಕ ರಿರ್ಟನ್ ಗಿಫ್ಟ್ ಕಥೆ ಇಲ್ಲಿದೆ ಎಂದರು.
ನೂರಾರು ಕೋಟಿ ರೂ.ಗಳ ಲೊಟ್ಟೆಗೊಲ್ಲಹಳ್ಳಿ ಭೂ ಹಗರಣವನ್ನು ಮುಚ್ಚಿ ಹಾಕಿ ಅದರ ಮೇಲೆ ವಿಜೃಂಭಿಸುತ್ತಿರುವ ಬಿಜೆಪಿ ನಾಯಕರು. ಸರ್ಕಾರದ ಜಾಗವನ್ನೇ ಕಬಳಿಸಿ, ಸಿಕ್ಕಿ ಬೀಳುವ ಹಂತದಲ್ಲಿ ಕಬಳಿಸಿದ ಭೂಮಿಯನ್ನು ಸರ್ಕಾರಕ್ಕೆಗಿಫ್ಟ್ ಡೀಡ್ ಕೊಟ್ಟ ದಾನ ಶೂರ ಕರ್ಣ ಸಾಮ್ರಾಟ್ ಅಶೋಕ ಅವರ ಹೀನ ವೃತ್ತಾಂತ ಇದು. ತಮ್ಮ ತಟ್ಟೆಯಲ್ಲಿ ಹಂದಿ ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ಇಲ್ಲದ ನೊಣ ಹುಡುಕಲು ಹೊರಟಿರುವ ಬಿಜೆಪಿ ಮತ್ತು ಅವರ ಹೊಸ ಸಂಗಾತಿ ಜೆಡಿಎಸ್ ನಾಯಕರ ಇದೊಂದು ಸಣ್ಣ ಉದಾಹರಣೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ವಿಧಾನಸಭೆಯ ಹಾಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಭಾಗಿಯಾಗಿರುವ ಭೂ ಹಗರಣದ ಕರ್ಮಕಾಂಡ ಇದು.
ಮೂಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎಳ್ಳಷ್ಟೂ ತಪ್ಪು ಇರದಿದ್ದರೂ ಹಗರಣಗಳನ್ನು ಮೈ ತುಂಬಾ ಮೆತ್ತಿಕೊಂಡು ಸತ್ಯ ಹರಿಶ್ಚಂದ್ರರಂತೆ ಫೋಸು ಕೊಡುತ್ತಿರುವ ಅಶೋಕ್ ಅವರು ತಮ್ಮದೇ ಲೊಟ್ಟೆಗೊಲ್ಲಹಳ್ಳಿ ಹಗರಣದ ಬಗ್ಗೆ ಮಾತನಾಡುವರೇ? ಈ ಹಗರಣದ ಬಗ್ಗೆ ಇಲ್ಲಿ ಈಗ ನಾವು ಬೆಳಕು ಚೆಲ್ಲುತ್ತೇವೆ. ಇದೇ ಹಗರಣದಲ್ಲಿ ಕೈ ಆಡಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ ಶೆಟ್ಟರ್ ಅವರಾದರೂ ಸತ್ಯ ನುಡಿಯುವರೇ ಎಂದು ಕಾದು ನೋಡೋಣ.
ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗುವನೇ ಎಂದಿರುವ ಅಶೋಕ್ ಅವರೇ, ಸರ್ಕಾರಿ ಜಾಗವನ್ನೇ ಕಬಳಿಸಿ ಸರ್ಕಾರಕ್ಕೆ ವಾಪಸ್ ಗಿಫ್ಟ್ ಕೊಟ್ಟ ಕೂಡಲೇ ನಿಮ್ಮ ಹಗಲು ದರೋಡೆ ಮಾಫಿ ಆಗುವುದೇ? ನಿಮ್ಮದು ಆಚಾರ ಇಲ್ಲದ ನಾಲಿಗೆ ಅಲ್ಲವೇ? ಗಾಂಧಿ ಜಯಂತಿಯ ದಿನವಾದರೂ ನಿಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವ ಪ್ರಮಾಣ ಮಾಡುವಿರೇ? ಎಂದಿದ್ದಾರೆ.
ಕೆದಕುತ್ತಾ ಹೋದರೆ ಸಾಲು ಸಾಲು ಹಗರಣಗಳು ಹೊರ ಬರುತ್ತಲೇ ಇದೆ. ಲೊಟ್ಟೆಗೊಲ್ಲಹಳ್ಳಿ ಹಗರಣ ಸಾಲದೇ ನಿಮ್ಮ ಮುಖವಾಡ ಕಳಚಿ ಬೀಳಲು. ಇನ್ನಾದರೂ ಸತ್ಯವಂತರಂತೆ ಮಾತನಾಡುವ ನಿಮ್ಮ ಬಾಯಿಯನ್ನು ಶುದ್ಧ ಮಾಡಿಕೊಳ್ಳಿ. ಮಾಡಿರುವ ತಪ್ಪುಗಳನ್ನು ಮುಚ್ಚಿಕೊಂಡು ಕೂತ ಮಾತ್ರಕ್ಕೆ ಯಾರೂ ನಿಮ್ಮ ಕಡೆ ಬೆರಳು ತೋರಿಸಲಾರರು ಎಂದು ಭಾವಿಸಿದ್ದರೆ ಅದು ನಿಮ್ಮ ಮೂರ್ಖತನ ಅಷ್ಟೇ.
ಹಗರಣದ ಮುಖ್ಯಾಂಶಗಳು:-
•ಲೊಟ್ಟೆಗೊಲ್ಲಹಳ್ಳಿಯ ಸರ್ವೆ ನಂಬರ್ 10/1, 10/11, ಎಫ್ 1 ಮತ್ತು 10/11 ಎಫ್ 2ರ 32 ಗುಂಟೆ ಪ್ರದೇಶವನ್ನು ಬಿಡಿಎ ಗುರುತಿಸಿ 24.02.1977ರಲ್ಲಿ ಅಧಿಸೂಚನೆ ಹೊರಡಿಸಿತ್ತು.ಈ ಸಂಬಂಧ ಬಿಡಿಎ 27.02.1977ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ 31.08.1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿತ್ತು.
· 26-02-2003 ಹಾಗೂ 12-11-2007 ರಂದು ಎರಡು ಶುದ್ಧಕ್ರಯ ಪತ್ರದ ಮುಖಾಂತರ ಮೇಲೆ ನಮೂದಿಸಿದ ಬಿಡಿಎ ಮಾಲೀಕತ್ವದ ನೋಟಿಫೈಡ್ ಜಾಗವನ್ನು ಮೂಲ ಮಾಲೀಕರಿಂದ ಕ್ರಯ ಪತ್ರದ ಮೂಲಕ ಆರ್.ಅಶೋಕ್ ಅವರು ಖರೀದಿ ಮಾಡಿರುತ್ತಾರೆ.
ತದನಂತರ 16-10-2009 ಕ್ಕೆ ಯಾರು ಮೂಲ ಮಾಲೀಕರಾದ ರಾಮಸ್ವಾಮಿ ಅವರ ಹೆಸರಿನಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರಿಗೆ ಈ ಜಮೀನಿನನ್ನು ಭೂ ಸ್ವಾಧೀನದಿಂದ ಕೈ ಬಿಡುವಂತೆ ಅರ್ಜಿ ಸಲ್ಲಿಸುತ್ತಾರೆ. ಆ ಪತ್ರದ ಮೇಲೆ “ಕೂಡಲೇ ಕಡತದಲ್ಲಿ ಮಂಡಿಸಿ” ಎಂದು ಷರಾ ನಮೂದಿಸಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಆದೇಶ ನೀಡಿರುತ್ತಾರೆ. ಎರಡೇ ತಿಂಗಳಲ್ಲಿ ಈ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಟ್ಟು ಭಾರತೀಯ ಜನತಾ ಪಕ್ಷದ ಅಂದಿನ ಮುಖ್ಯಮಂತ್ರಿಗಳು ಆದೇಶ ಹೊರಡಿಸುತ್ತಾರೆ.
• ಈ ಜಮೀನಿನ ವ್ಯಾಜ್ಯ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಒಂದು ಕೇಸ್ ಸಹ ಬಾಕಿ ಉಳಿದಿರುತ್ತದೆ.
ವಿಷಯ ಗಂಭೀರವಾಗುತ್ತಿದ್ದಂತೆ ಅಶೋಕ್ ಅವರು ಮೂಲ ಮಾಲೀಕರಿಂದ ಖರೀದಿ ಮಾಡಿದ ಜಾಗವನ್ನು ಬಿಡಿಎಗೆ 27.08.2011ರಲ್ಲಿ ರಿಜಿಸ್ಟರ್ಡ್ ಗಿಫ್ಟ್ ಡೀಡ್ ಮುಖಾಂತರ ಸರ್ಕಾರಕ್ಕೆ ಸರ್ಕಾರದ ಜಾಗವನ್ನೇ ರಿರ್ಟನ್ ಗಿಫ್ಟ್ ಮಾಡಿಕೊಟ್ಟುಬಿಡುತ್ತಾರೆ. ಈ ಗಿಫ್ಟ್ ಡೀಡ್ ನ ಪ್ಯಾರಾ 1 ರಲ್ಲಿ ತಮ್ಮದಲ್ಲದ – ಈಗಾಗಲೇ ಬಿಡಿಎ ಮಾಲೀಕತ್ವದಲ್ಲೇ ಇದ್ದ We “Donor has a true and lawful owner herby gift, assign, convey and set-over possession of all the Schedule Properties unto and in favour of the DONEE, free from all encumbrances and clogs and DONEE has accepted the Gift from the DONOR.” ನಮೂದಿಸಿರುತ್ತಾರೆ. ಬಿಡಿಎ ಪರವಾಗಿ ಆಗಿನ ಉಪಕಾರ್ಯದರ್ಶಿ -1, ಸಿ.ಎ. ನಿವೇಶನ ವಿಭಾಗ ಅವರು ಈ ದೊಡ್ಡ ಗಿಫ್ಟ್ ನ್ನು ಸ್ವೀಕರಿಸಿರುತ್ತಾರೆ. 22.11.2011ರಲ್ಲಿ ಬಿಡಿಎ ಕಾರ್ಯದರ್ಶಿಗಳ ಮೂಲಕ ಹಕ್ಕು ಸಹ ಬದಲಾವಣೆ ಆಗುತ್ತದೆ.
ಸ್ವಂತ ಜಾಗವನ್ನು ಸರ್ಕಾರಕ್ಕೆ ದಾನವಾಗಿ ಕೊಟ್ಟ ಭೂಪ ಅಶೋಕ್ ಅವರು. ಈ ಜಾಗದ ಬಗ್ಗೆ ಖುದ್ದು ಹೋರಾಟ ಮಾಡಿ ನಾನಾ ಕಚೇರಿಗಳ ಬಾಗಿಲು ತಟ್ಟಿದವರು ನಿವೃತ್ತ ವಿಂಗ್ ಕಮಾಂಡರ್ ಜಿ.ವಿ. ಅತ್ರಿ ಅವರು.
• ಈ ವಿವಾದ ಸಂಬಂಧ ಅವರು ನ್ಯಾಯಾಲಯದ ಮೆಟ್ಟಿಲು ಏರುತ್ತಾರೆ. ವಿಷಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ದಿನೇಶ್ ಮಹೇಶ್ವರಿ ಮತ್ತು ಜಸ್ಟೀಸ್ ಅರವಿಂದ ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರುತ್ತದೆ. ಅಶೋಕ್ ಅವರು ಜಮೀನನ್ನು ಈಗಾಗಲೇ ಸರ್ಕಾರಕ್ಕೆ ವಾಪಸ್ ಕೊಟ್ಟಿರುವುದರಿಂದ ಯಾವುದೇ ತನಿಖೆ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಮೂರ್ತಿಗಳು ತೀರ್ಪು ಕೊಟ್ಟು ಅತ್ರಿ ಅವರ ರಿಟ್ ಪಿಟಿಷನ್ ನ್ನು Dispose ಮಾಡಿರುತ್ತಾರೆ. ಈ ಹಗರಣದ ಪಾತ್ರಧಾರಿಗಳು ಅಶೋಕ್ ಅವರ ಜೊತೆಗೆ ಅಂದಿನ ಮುಖ್ಯ ಮಂತ್ರಿಗಳಾದ ಶ್ರೀಜಗದೀಶ್ ಶೆಟ್ಟರ್ ಹಾಗೂ ಶ್ರೀ ಬಿ.ಎಸ್. ಯಡಿಯೂರಪ್ಪ ಅಂತ ವಿಂಗ್ ಕಮ್ಯಾಂಡರ್ ಅತ್ರಿ ಅವರು ಸ್ಪಷ್ಟವಾಗಿ ನಮೂದಿಸಿರುತ್ತಾರೆ.
• ಮತ್ತೊಂದು ಕುತೂಹಲಕಾರಿ ವಿಷಯ ಏನೆಂದರೆ ವಿವಾದಿತ ಜಮೀನಿನಲ್ಲಿ ಅಶೋಕ್ ಅವರು 15 ಶೆಡ್ ಗಳು, 2 ಕಾರ್ ಗ್ಯಾರೇಜ್ ಹಾಗೂ ಗೋಡೌನ್‌ಗಳನ್ನು ನಿರ್ಮಿಸಿ 2003 ರಿಂದ ಈ ಜಮೀನನ್ನು ದಾನವಾಗಿ ಕೊಡುವವರೆಗೂ ಕೋಟ್ಯಾಂತರ ರೂಪಾಯಿ ಬಾಡಿಗೆ ಸಂಪಾದಿಸಿದ್ದಾರೆ. ಇದು ಅಕ್ರಮವಾಗಿ ಸಂಪಾದಿಸಿದ ಆಸ್ತಿ (Proceeds of Crime) ಮೂಲಕ ಹಣ ಸಂಪಾದನೆ ಇಲ್ಲವೆ? ಇದು Prevention of Money Laundering Act ಪ್ರಕಾರ ಇಡಿ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಅಪರಾಧವಾ, ಅಲ್ಲವಾ?
• ಹಕ್ಕು ಬದಲಾವಣೆ ಬಳಿಕ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡಗಳನ್ನು ತೆರವುಗೊಳಿಸಿ 40 ಕೋಟಿ ರೂ. ಮೌಲ್ಯದ 38 ಗುಂಟೆ ಜಾಗವನ್ನು ತನ್ನ ವಶಕ್ಕೆ ಬಿಡಿಎ ಪಡೆದುಕೊಂಡಿತ್ತು.
ಈಗ ನಮ್ಮ ಪ್ರಶ್ನೆಗಳು
ಬಿಡಿಎ ಈ ಜಾಗವನ್ನು ಗುರುತಿಸಿ ಅಧಿಸೂಚನೆ ಹೊರಡಿಸಿದ ಬಳಿಕವೂ ಅಶೋಕ್ ಖರೀದಿ ಮಾಡಿದ್ದು ಏಕೆ?
• ಖರೀದಿ ಮಾಡಿದ ಬಳಿಕ ಮೂಲ ಮಾಲೀಕರಿಂದ ಡಿನೋಟಿಫೈಗೆ ಅರ್ಜಿ ಹಾಕಿಸಿದ್ದು ಏಕೆ?
· ಅರ್ಜಿ ನೀಡಿದ ಎರಡು ತಿಂಗಳಲ್ಲೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದು ಏಕೆ?
ಅಲ್ಲಿಯವರೆಗೆ ಸುಮ್ಮನಿದ್ದ ಅಶೋಕ್ ಅವರು ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಾಗುತ್ತಿದ್ದಂತೆ (ಸಂಖ್ಯೆ :19772/2018) ಜಮೀನನ್ನು ಗಿಫ್ಟ್ ಡೀಡ್ ಮೂಲಕ ಬಿಡಿಎಗೆ ವಾಪಸ್ ಕೊಟ್ಟಿದ್ದು ಏಕೆ? ಅಂತಹ ಗಿಫ್ಟ್ ಡೀಡ್ ತೆಗೆದುಕೊಳ್ಳುವುದಕ್ಕೆ ಬಿಡಿಎಗೆ ಸರ್ಕಾರ ಅನುಮತಿ ನೀಡಿದ್ದತಾ? ಆ ಅನುಮತಿ ಇದ್ದರೆ ಅದು ಕಾನೂನಿನ ಪ್ರಕಾರವೇ? ಗಿಫ್ಟ್ ತೆಗೆದುಕೊಳ್ಳುವಾಗ ಬಿಡಿಎ ಅಧಿಕಾರಿಗಳು, ಅಂದಿನ ನಗರಾಭಿವೃದ್ಧಿ ಸಚಿವರು ಹಾಗೂ ಅಂದಿನ ಮುಖ್ಯಮಂತ್ರಿಗಳು ದಾಖಲೆ ಪರಿಶೀಲನೆ ಯಾಕೆ ಮಾಡಿಲ್ಲ?
• ಗಿಫ್ಟ್ ಡೀಡ್ ಕೊಟ್ಟ ಬಳಿಕ ಬಾಡಿಗೆ ಮೂಲಕ ಪಡೆದುಕೊಂಡಿರುವ ಕೋಟ್ಯಾಂತರ ರೂಪಾಯಿಗಳನ್ನು ಸರ್ಕಾರಕ್ಕೆ ಏಕೆ ವಾಪಸ್ ಕೊಡಲಿಲ್ಲ. ಆ ಹಣ ಯಾರಿಗೆ ಸೇರಿದ್ದು? ಆ ಹಣ ಎಲ್ಲಿಗೆ ಹೋಯಿತು. ಈ ಹಗರಣದಲ್ಲಿ ಭಾಗಿಯಾದವರು ಯಾರ್ಯಾರು?
ದಾನಶೂರ ಸಾಮ್ರಾಟ್ ಅಶೋಕ್ ಅವರು ಈ ಆಸ್ತಿ ಮಾತ್ರ ಸರ್ಕಾರಕ್ಕೆ ಯಾಕೆ ಗಿಫ್ಟ್ ಕೊಟ್ಟರು? ಅವರ ವಾಸದ ಮನೆಗಳು, ಇತರೆ ಆಸ್ತಿಗಳು ಅವರು ಸರ್ಕಾರಕ್ಕೆ ಯಾಕೆ ಗಿಫ್ಟ್ ಕೊಟ್ಟಿಲ್ಲ?
• ಭಾರತೀಯ ಜನತಾ ಪಾರ್ಟಿ, ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಅವರು ಅಶೋಕ್ ಅವರ ರಾಜೀನಾಮೆ ಪಡೆಯುತ್ತಾರಾ? ಅದರ ಜೊತೆಗೆ ಗಿಫ್ಟ್ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ತಾವೇ ಯಾಕೆ ರಾಜೀನಾಮೆ ಸಲ್ಲಿಸುತ್ತಿಲ್ಲ?
ಮುಖ್ಯಮಂತ್ರಿಯವರ ಧರ್ಮಪತ್ನಿಯವರಿಗೆ ಮೂಡಾದಿಂದ ಪರಿಹಾರ ರೂಪದಲ್ಲಿ ಬಂದತಂಹ ಜಾಗ ವಾಪಸ್ಸು ಕೊಟ್ಟರೆ ಅಪರಾಧ ಅಂತ ಹೇಳುವ ಅಶೋಕ್ ಅವರೇ, ಸರ್ಕಾರದ ಜಾಗ ಕಬಳಿಸಿ, ಸಿಕ್ಕಿ ಬೀಳುವ ಭಯದಲ್ಲಿ ಸರ್ಕಾರಕ್ಕೆ ರಿರ್ಟನ್ ಗಿಫ್ಟ್ ಕೊಟ್ಟಿದ ಬಗ್ಗೆ ಏನು ಹೇಳುತ್ತೀರಿ? ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ತಕ್ಷಣ ಈ ಮೂರು ಜನರ ರಾಜಿನಾಮೆಯನ್ನು ಕೇಳಬೇಕೆಂದು ನಾವು ಆಗ್ರಹಿಸಿದ್ದಾರೆ.
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ
‘ಬಿಯರ್’ ಪ್ರಿಯರಿಗೆ ಗುಡ್ ನ್ಯೂಸ್..! ‘ಅಧ್ಯಯನ’ದಿಂದ ಸೂಪರ್ ಸಂಗತಿ ಬಹಿರಂಗ