ನವದೆಹಲಿ: ದೇಶದ ಎಲ್ಲಾ ವಿಮಾನ ನಿಲ್ದಾಣಗಳನ್ನು ಉದ್ಯಮಿ ಗೌತಮ್ ಅದಾನಿಗೆ ಹಸ್ತಾಂತರಿಸಿದ್ದು ಹೇಗೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರ ಹೆಸರನ್ನು ಭಾಷಣಗಳಲ್ಲಿ ಉಲ್ಲೇಖಿಸಿಲ್ಲ ಮತ್ತು ಕಾಂಗ್ರೆಸ್ ಅವರಿಂದ “ಟೆಂಪೊಗಳಲ್ಲಿ” ಹಣವನ್ನು ಸ್ವೀಕರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಏಷ್ಯಾದ ಇಬ್ಬರು ಶ್ರೀಮಂತರಾದ ಅದಾನಿ ಮತ್ತು ಅಂಬಾನಿ ಮೋದಿಗೆ ಆಪ್ತರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಇಂದು ನಾನು ಲಕ್ನೋ ವಿಮಾನ ನಿಲ್ದಾಣದಲ್ಲಿದ್ದೆ. ಇಲ್ಲಿಂದ ಮುಂಬೈಗೆ ಮತ್ತು ಗುವಾಹಟಿಯಿಂದ ಅಹಮದಾಬಾದ್ ವರೆಗೆ ಪ್ರಧಾನಿ ಎಲ್ಲಾ ವಿಮಾನ ನಿಲ್ದಾಣಗಳನ್ನು ತಮ್ಮ ‘ಟೆಂಪೋ ಸ್ನೇಹಿತ’ನಿಗೆ ಹಸ್ತಾಂತರಿಸಿದ್ದಾರೆ. ದೇಶದ ಆಸ್ತಿಗಳನ್ನು ಎಷ್ಟು ಟೆಂಪೋಗಳಿಗೆ ಮಾರಾಟ ಮಾಡಲಾಗಿದೆ ಎಂದು ನರೇಂದ್ರ ಮೋದಿ ಸಾರ್ವಜನಿಕರಿಗೆ ಹೇಳುತ್ತಾರಾ? ಎಂದು ರಾಹುಲ್ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೀಡಿಯೊದಲ್ಲಿ, ರಾಹುಲ್ ಗಾಂಧಿ ಅವರು ಲಕ್ನೋ ವಿಮಾನ ನಿಲ್ದಾಣದಲ್ಲಿ “ಚರಣ್ ಸಿಂಗ್ ಅವರ ಹೆಸರಿನಲ್ಲಿ” ಬಂದಿಳಿದಿದ್ದಾರೆ ಎಂಬ ಅಂಶವನ್ನು ವಿವರಿಸುತ್ತಿರುವುದು ಕಂಡುಬರುತ್ತದೆ.
“2020 ಮತ್ತು 2021 ರ ನಡುವೆ, ತೆರಿಗೆದಾರರ ಹಣದಿಂದ ನಿರ್ಮಿಸಲಾದ ಈ ರೀತಿಯ ಏಳು ವಿಮಾನ ನಿಲ್ದಾಣಗಳನ್ನು ಗೌತಮ್ ಭಾಯ್ ಅವರಿಗೆ 50 ವರ್ಷಗಳ ಕಾಲ ಹಸ್ತಾಂತರಿಸಲಾಗಿದೆ” ಎಂದು ಅವರು ಹಿಂದಿಯಲ್ಲಿ ಹೇಳಿದ್ದಾರೆ.
ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಗುವಾಹಟಿ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.