ಮಂಡ್ಯ : ರಾಮನಗರದ ಅರ್ಕಾವತಿ ನದಿಯನ್ನು ಥೇಮ್ಸ್ ನದಿ ಮಾದರಿಯಲ್ಲಿ ಅಭಿವೃದ್ಧಿಗೆ ಮುಂದಾಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರವರು ಮೊದಲು ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸೋಮವಾರ ಸವಾಲು ಹಾಕಿದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಕೊಪ್ಪ, ಬಿದರಕೋಟೆ ಗ್ರಾಮಗಳಲ್ಲಿ 3 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಲೋಕಸಭಾ ಚುನಾವಣೆಯ ವೇಳೆ ನಾನು ಜಯಭೇರಿಯಾದರೇ ಮೇಕೆದಾಟು ಯೋಜನೆಗೆ ಐದು ನಿಮಿಷದಲ್ಲಿಯೇ ಕೇಂದ್ರದಿಂದ ಅನುಮತಿ ಕೊಡಿಸುತ್ತೇನೆ ಎಂದು ಜಿಲ್ಲೆಯ ಜನತೆಗೆ ಹೇಳಿದವರು ವರ್ಷಗಳು ಕಳೆಯುತ್ತಿವೆ. ಈಗ ರಾಮನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಕೈಗಾರಿಕಾ ಸಚಿವರಾಗಿ ಸಿಎಸ್ಆರ್ ನಿಧಿಯಿಂದ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ. ಅದನ್ನು ಹೊರತುಪಡಿಸಿ ಜಿಲ್ಲೆಯ ಅಭಿವೃದ್ಧಿಗೆ ಬೇರೆ ಎಷ್ಟು ಅನುದಾನ ತಂದಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆರಂಭವಾಗಿರುವ ಜಾತಿ ಸಮೀಕ್ಷೆಯ ವಿಷಯದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆ ಇಂದು ಆರಂಭಗೊಳ್ಳುತ್ತಿದೆ. ಒಂದು ವೇಳೆ 15 ದಿನಗಳಲ್ಲಿ ಸಮೀಕ್ಷೆ ಮುಗಿಯದಿದ್ದರೆ ಮತ್ತಷ್ಟು ಕಾಲಾವಕಾಶ ಕೊಟ್ಟು ಪೂರ್ಣ ಗೊಳಿಸಲಾಗುವುದು. ಆದರೆ ಈ ವಿಷಯದಲ್ಲಿ ವಿಪಕ್ಷ ನಾಯಕರು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ, ಕೇಂದ್ರ ಸರ್ಕಾರವು ಕೇವಲ ಜಾತಿ ಗಣತಿ ಮಾಡುವುದಾಗಿ ಹೇಳಿದೆ ಆದರೆ ನಾವು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆಯನ್ನು ರಾಜ್ಯದಲ್ಲಿ ನಡೆಸುತ್ತಿದ್ದೇವೆ ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ದಿನೇಶ್ ಗೂಳಿಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾ.ಪಂ.ಮಾಜಿ ಸದಸ್ಯ ಬೆಕ್ಕಳಲೆ ರಘು, ಮುಖಂಡರಾದ ಕೆ.ಟಿ.ಬಾಬು,
ತೋಯಾಜಾಕ್ಷ, ಕುಮಾರ್ ಕೊಪ್ಪ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
‘ಪಂಡಿತ್ ವೆಂಕಟೇಶ್ ಕುಮಾರ್’ಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ ಪ್ರದಾನ ಮಾಡಿದ ಸಿಎಂ ಸಿದ್ಧರಾಮಯ್ಯ
ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚದ ಗುತ್ತಿಗೆದಾರರ ಟೆಂಡರ್ ರದ್ದು: ಆಯುಕ್ತ ರಾಜೇಂದ್ರ ಚೋಳನ್ ಎಚ್ಚರಿಕೆ