ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ್ ಪಾಲ್ಸ್ ನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಯತ್ನಕ್ಕೆ ಮುಂದಾಗಿದ್ದಾನೆ. ಆದರೇ ಆ ವ್ಯಕ್ತಿಯನ್ನು ಮನವೊಲಿಸಿದಂತ ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್ ಅವರು, ಆತ್ಮಹತ್ಯೆ ಯತ್ನದಿಂದ ಪಾರು ಮಾಡಿ, ಬದುಕಿನ ಪಾಠ ಮಾಡಿದ್ದಾರೆ. ಅಲ್ಲದೇ ಜೀವದ ಅಮೂಲ್ಯತೆಯ ಬಗ್ಗೆ ತಿಳಿಹೇಳಿ, ಊರಿಗೆ ಮರಳಿಸುವಂತ ಕೆಲಸವನ್ನು ಮಾಡಿದ್ದಾರೆ.
ಆಟೋ ಚಾಲಕ ಸುಳಿವು
ಕಳೆದ ಆಗಸ್ಟ್.25, 2025ರಂದು ಮಧ್ಯಾಹ್ನ 1.30ರ ಸುಮಾರಿಗೆ ಆಟೋ ಚಾಲಕ ಶಿಯಾಬ್ ಎಂಬುವರು ಜೋಗ್ ಫಾಲ್ಸ್ ರೌಂಡ್ಸ್ ನಲ್ಲಿದ್ದಂತ ಪೊಲೀಸರಿಗೆ ಒಬ್ಬ ವ್ಯಕ್ತಿ ಜೋಗ್ ಫಾಲ್ಸ್ ಅಪಾಯಕಾರಿ ಸ್ಥಳಗಳ ಬಗ್ಗೆ ವಿಚಾರಿಸಿದಂತ ಮಾಹಿತಿಯನ್ನು ನೀಡಿದ್ದಾರೆ. ಆತ ಆತ್ಮಹತ್ಯೆಗೆ ಮುಂದಾಗಿರುವಂತ ಸುಳಿವು ಅದರೊಂದಿಗೆ ಪೊಲೀಸರಿಗೆ ಸಿಕ್ಕಿದೆ. ಕೂಡಲೇ ಅಲರ್ಟ್ ಆದಂತ ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್.ಹೆಚ್.ಎನ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಆ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.
20 ದಿನಗಳ ಹಿಂದೆಯೇ ಮನೆ ಬಿಟ್ಟಿದ್ದ ವ್ಯಕ್ತಿ
ಆ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತ ಸಾಲದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಯನ್ನು ಬೆಂಗಳೂರು ಮೂಲದ ಬಟ್ಟೆ ವ್ಯಾಪಾರಿಯಾಗಿದ್ದರು. ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಬಂದಿದ್ದರು. ವಿವಿಧ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ ಮಾಡಿ, ನಂತರ ಸಾಯುವ ನಿರ್ಧಾರಕ್ಕೆ ಬಂದಿದ್ದರು. ಇದಕ್ಕಾಗಿ ಜೋಗ್ ಫಾಲ್ಸ್ ಗೆ ಆ ವ್ಯಾಪಾರಿ ಬಂದು, ಆಟೋ ಚಾಲಕನ ಮೂಲಕ ಜೋಗ್ ಫಾಲ್ಸ್ ಅಪಾಯಕಾರಿ ಸ್ಥಳಗಳ ಮಾಹಿತಿ ಪಡೆದಿದ್ದರು. ಅಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ನಿರ್ಧರಿಸಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾನೆ.
35 ಲಕ್ಷ ಸಾಲಕ್ಕೆ ಆತ್ಮಹತ್ಯೆಗೆ ನಿರ್ಧಾರ
ತಾನು ಸುಮಾರು 20 ರಿಂದ 25 ಲಕ್ಷ ಬಟ್ಟೆ ವ್ಯಾಪಾರದಲ್ಲಿ ನಷ್ಟ ಅನುಭವಿಸದ್ದೇನೆ. ತಂದೆ-ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದು ಅವರ ಚಿಕಿತ್ಸೆ ಸೇರಿದಂತೆ 35 ಲಕ್ಷದವರೆಗೆ ಸಾಲ ಮಾಡಿದ್ದೇನೆ. ಹೀಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು, ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಜೋಗ್ ಫಾಲ್ಸ್ ಗೆ ಬಂದಿರುವುದಾಗಿ ಕಾರ್ಗಲ್ ಠಾಣೆಯ ಪೊಲೀಸರಿಗೆ ಹೇಳಿದ್ದಾನೆ.
ಸಾಧಕರ ಕತೆ ಹೇಳಿ ಆತ್ಮಸ್ಥೈರ್ಯ ತುಂಬಿದ ಕಾರ್ಗಲ್ ಠಾಣೆ ಪಿಎಸ್ಐ
ಹೀಗೆ ಜೋಗ್ ಫಾಲ್ಸ್ ನಲ್ಲಿ ಆತ್ಮಹತ್ಯೆಗೆ ಬಂದಿದ್ದಂತ ಬೆಂಗಳೂರು ಮೂಲದ ವ್ಯಕ್ತಿಯ ಕತೆ ಕೇಳಿದಂತ ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್ ಆತ ಹೇಳಿದ್ದನ್ನು ಸಮಾಧಾನದಿಂದ ಕೇಳಿದ್ದಾರೆ. ಆತನ ಕಷ್ಟಕ್ಕೆ ಮರುಕ ವ್ಯಕ್ತ ಪಡಿಸಿದ್ದಾರೆ. ಆ ಬಳಿಕ ಬಟ್ಟೆ ವ್ಯಾಪಾರಿಗೆ ಆತ್ಮಸ್ಥೈರ್ಯ ತುಂಬಿದ್ದಲ್ಲದೇ, ಉನ್ನತ ಸ್ಥಾನದಲ್ಲಿರುವಂತ ಸಾಧಕರ ಹಿಂದಿನ ಒಂದಷ್ಟು ಕಷ್ಟ-ನಷ್ಟದ ಕತೆ ಹೇಳಿದ್ದಾರೆ. ಅವರ ಸಾಧನೆಯ ಹಿಂದೆ ಎಷ್ಟೆಲ್ಲ ಕಷ್ಟವಿತ್ತು ಎಂಬುದನ್ನು ಇಂಚಿಂಚೂ ವಿವರಿಸಿದ್ದಾರೆ. ಅಲ್ಲದೇ ಅವರ ತಂದೆ-ತಾಯಿಗೆ ಪೋನ್ ಮಾಡಿ, ಮಗನೊಂದಿಗೆ ಮಾತನಾಡಿಸಿ, ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಗಲ್ ಠಾಣೆ ಪೊಲೀಸರ ಕಾರ್ಯಕ್ಕೆ ಶಿವಮೊಗ್ಗ ಎಸ್ಪಿ, ಸಾಗರ ಡಿವೈಎಸ್ಪಿ ಶ್ಲಾಘನೆ
ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್.ಹೆಚ್.ಎನ್ ಅವರ ಮಾತಿನಿಂದ ಮನವೊಲಿದಂತ ಬೆಂಗಳೂರು ಮೂಲದ ಬಟ್ಟೆ ವ್ಯಾಪಾರಿ, ಕಾರ್ಗಲ್ ನಿಂದ ಸಾಗರದ ಮೂಲಕ ಬೆಂಗಳೂರಿಗೆ ವಾಪಾಸ್ ಆಗುವುದಕ್ಕೆ ಎಲ್ಲಾ ವ್ಯವಸ್ಥೆಯನ್ನು ಪೊಲೀಸ್ ಸಿಬ್ಬಂದಿಗಳು ಮಾಡಿ ಕಳುಹಿಸಿಕೊಟ್ಟಿದ್ದಾರೆ. ಈ ಮೂಲಕ ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ನಲ್ಲಿ ಆತ್ಮಹತ್ಯೆಗಾಗಿ ಬಂದಿದ್ದಂತ ವ್ಯಕ್ತಿಯನ್ನು ಮರಳಿ ಮನೆಗೆ ಸೇರಿಸುವಲ್ಲಿ ಕಾರ್ಗಲ್ ಠಾಣೆಯ ಪಿಎಸ್ಐ ನಾಗರಾಜ್ ಹೆಚ್.ಎನ್ ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅವರ ಈ ಕಾರ್ಯವನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಸಾಗರ ಡಿವೈಎಸ್ಪಿ ಶ್ಲಾಘಿಸಿ, ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ.
ಅಂದಹಾಗೇ ಬೆಂಗಳೂರು ಮೂಲದ ಬಟ್ಟೆ ಉದ್ಯಮಿಯನ್ನು ಆತ್ಮಹತ್ಯೆ ನಿರ್ಧಾರದಿಂದ ಮರಳಿ ಕರೆತರೋದಕ್ಕೆ ಕಾರ್ಗಲ್ ಠಾಣೆಯ ಸಿಬ್ಬಂದಿಗಳಾದಂತ ಸಿಹೆಚ್ ಸಿ ಅಣ್ಣಪ್ಪ, ಜಯೇಂದ್ರ, ಎಪಿಸಿ ಮಲ್ಲಪ್ಪ ಪಿಡಶೆಟ್ಟಿ ಅವರುಗಳು ಪಿಎಸ್ಐ ನಾಗರಾಜ್ ಗೆ ಸಾಥ್ ನೀಡಿದ್ದಾರೆ. ಈ ಮೂಲಕ ಸಾವನ್ನು ಬಯಸಿ ಬಂದಂತ ವ್ಯಕ್ತಿಗೆ ಜೀವನದ ಪಾಠ ಮಾಡಿ, ಜೀವನ ಮುನ್ನಡೆಸುವಂತ ಧೈರ್ಯ ತುಂಬಿ ಕಾರ್ಗಲ್ ಠಾಣೆಯ ಪೊಲೀಸರು ಮರಳಿ ಕಳುಹಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಭಾರೀ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
ಅಪ್ರಾಪ್ತರಿಗೆ ಬೈಕ್ ಕೊಡೋ ಪೋಷಕರೇ ಎಚ್ಚರ! 25,000 ದಂಡ ವಿಧಿಸಿದ ಕೋರ್ಟ್
ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಗುಡ್ ನ್ಯೂಸ್: 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ