ಮಂಡ್ಯ : ಪ್ರಾಮಾಣಿಕವಾಗಿ ಉನ್ನತ ಹುದ್ದೆ ಅಲಂಕರಿಸಿ ಆದರೆ ಆ ಹುದ್ದೆಯನ್ನು ಖರೀದಿ ಮಾಡಬೇಡಿ ಎಂದು ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯ ಆರ್.ಕೆ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಮಾಣಿಕವಾಗಿ ಉನ್ನತ ವಿದ್ಯಾಬ್ಯಾಸ ಮಾಡಿದ ಮೇಲೆ ಭ್ರಷ್ಟ ವ್ಯವಸ್ಥೆಯಿಂದ ಕೂಡಿರುವ ಈ ಸಮಾಜದಲ್ಲಿ ಲಂಚ ಕೊಟ್ಟು ಸರ್ಕಾರಿ ನೌಕರಿ ಹುದ್ದೆಗಿಟ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರಾಮಾಣಿಕವಾಗಿ ಉನ್ನತ ಹುದ್ದೆ ಅಲಂಕರಿಸಿ ಆದರೆ ಆ ಹುದ್ದೆಯನ್ನು ಖರೀದಿ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮನುಷ್ಯರಲ್ಲಿ ಹೆಚ್ಚಾಗಿರುವ ದುರಾಸೆ ಎಂಬ ರೋಗದಿಂದ ಇಂದು ಸಮಾಜದಲ್ಲಿ ಯಾರು ಎಷ್ಟೇ ತಪ್ಪು ಮಾಡಿದರೂ ಅವರನ್ನು ಪುರಸ್ಕರಿಸುವಂತ ಸಮಾಜದಲ್ಲಿ ನಾವಿದ್ದೇವೆ. ಮಕ್ಕಳಲ್ಲಿ ಶಾಲಾ ಶಿಕ್ಷಣ ಹಂತದಲ್ಲೇ ಪಠ್ಯಕ್ರಮದ ಮೂಲಕ ಭ್ರಷ್ಟಾಚಾರ ನಿಯಂತ್ರಣ ಹಾಗೂ ಜಾಗೃತಿಗೊಳಿಸುವ ಕೆಲಸವಾಗಬೇಕು ಆಗ ಸಮಸಮಾಜ ನಿರ್ಮಾಣಕ್ಕೆ ಆಗ ಭದ್ರ ಬುನಾದಿ ಹಾಕಬಹುದಾಗಿದೆ ಎಂದರು.
ತಪ್ಪು ಮಾಡಿ ಜೈಲಿಗೆ ಹೋಗಿ ಪ್ರಕರಣದಲ್ಲಿ ಖಲಾಸೆಯಾಗದಿದ್ದರೂ ಜಾಮೀನಿನ ಮೇಲೆ ಬಂದವರನ್ನು ಸನ್ಮಾನಿಸುವ ಮನಸ್ಥಿತಿ ಜನರಲ್ಲಿದೆ ಎಂದು ವಿಷಾದಿಸಿದರು.
ಭ್ರಷ್ಟಾಚಾರ ನಿರ್ಮೂಲನೆ ಒಬ್ಬರಿಂದ ಅಸಾಧ್ಯ, ಈ ದಾಹ ನೀಗಿಸಲು ಸಾಮಾಜಿಕವಾಗಿ ಪ್ರತಿಯೊಬ್ಬರು ಪ್ರಯತ್ನಿಸಿದ್ದಲ್ಲಿ ಅಂಕುಶ ಹಾಕಬಹುದು. ಆಳುವ ಸರ್ಕಾರ ಅಥವಾ ಕಾನೂನುಗಳಿಂದ ನಿಯಂತ್ರಣಕ್ಕೆ ಅಲ್ಪ ಪ್ರಮಾಣದ ಯಶಸ್ಸು ಸಿಗಬಹುದು. ಆದರೆ, ಸಮಾಜವೇ ಎಚ್ಚೆತ್ತುಕೊಳ್ಳುವುದರಿಂದ ಸಂಪೂರ್ಣ ನಿಯಂತ್ರಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಸಂಸ್ಕೃತಿ ಚಿಂತಕ ಪ್ರೊ ಎಂ.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಿದರು.
ಇದೇ ವೇಳೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಸಿಇಓ ಕೀರ್ತನ ಆರ್ ನಿಖಿಲ್, ಸಂಸ್ಥೆಯ ನಿರ್ದೇಶಕ ತುಕಾರಾಂ, ಆಡಳಿತಾಧಿಕಾರಿ ಮರಿಸ್ವಾಮಿಗೌಡ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಬಾಬು, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಂಶುಪಾಲರು, ಬೋಧಕರು, ವಿದ್ಯಾರ್ಥಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ರಾಜ್ಯದ ‘ಕಟ್ಟಡ ಕಾರ್ಮಿಕ’ರಿಗೆ ಗುಡ್ ನ್ಯೂಸ್: ‘ಧನ ಸಹಾಯ, ಪರಿಹಾರ’ದ ಮೊತ್ತ ಹೆಚ್ಚಿಸಿ ಸರ್ಕಾರ ಆದೇಶ
IFS ಗೋಕುಲ್ ಅಧಿಕಾರಿ ಹಿಂಬಡ್ತಿ ನೀಡಿ ಅಮಾನತು ರದ್ದಿಗೆ ಶಿಫಾರಸು: ಸಚಿವ ಈಶ್ವರ ಖಂಡ್ರೆ