ಬೆಂಗಳೂರು: ಸುಮಾರು ₹600 ಕೋಟಿ ಬಂಡವಾಳ ಹೂಡಿಕೆಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕವು ಶೀಘ್ರದಲ್ಲಿಯೇ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಜಪಾನಿನ ಹೋಂಡಾ ಕಂಪನಿಯು, ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗಕ್ಕೆ ತಿಳಿಸಿದೆ.
ಭಾರತದಲ್ಲಿನ ತನ್ನ ಮೊದಲ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕವು ಬೆಂಗಳೂರಿನ ಸಮೀಪದ ನರಸಾಪುರದಲ್ಲಿ ಕಾರ್ಯಾರಂಭ ಮಾಡಲಿದೆ. ಫೆಬ್ರುವರಿಯಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಈ ಒಪ್ಪಂದಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದು ಕಂಪನಿಯು ರಾಜ್ಯದ ನಿಯೋಗಕ್ಕೆ ಮಾಹಿತಿ ನೀಡಿದೆ.
ʼಹೋಂಡಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ನೋರಿಯಾ ಕೈಹರಾ ಅವರ ಜೊತೆಗಿನ ಭೇಟಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಇದರಿಂದ ರಾಜ್ಯದಲ್ಲಿ ವಾಹನ ತಯಾರಿಕಾ ವಲಯದಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಲಿವೆʼ ಎಂದು ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ಸಚಿವರ ನೇತೃತ್ವದಲ್ಲಿ ಜಪಾನ್‌ಗೆ ಭೇಟಿ ನೀಡಿರುವ ರಾಜ್ಯದ ಉನ್ನತ ಮಟ್ಟದ ನಿಯೋಗವು, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಮತ್ತು ಅತ್ಯಾಧುನಿಕ ತಯಾರಿಕಾ ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಲ್ಲಿಯ ಬಹುರಾಷ್ಟ್ರೀಯ ಪ್ರಮುಖ ಕಂಪನಿಗಳ ಜೊತೆಗೆ ಸೋಮವಾರ ಫಲಪ್ರದ ಮಾತುಕತೆ ನಡೆಸಿದೆ.
ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚುವರಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ನಿಯೋಗವು ಜಪಾನ್‌ಗೆ ಭೇಟಿ ನೀಡುತ್ತಿದೆ. ಟೋಕಿಯೊ ಎಲೆಕ್ಟ್ರಾನ್, ಮಿತ್ಸುಬಿಸಿ ಎಲೆಕ್ಟ್ರಿಕ್, ಹೋಂಡಾ, ಯೋಕೊಗವಾ ಎಲೆಕ್ಟ್ರಿಕ್ ಮತ್ತು ರೆಸ್ಟರ್ ಹೋಲ್ಡಿಂಗ್ಸ್ ಕಂಪನಿಗಳ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸುವ ಮತ್ತು ಹೊಸ ಬಂಡವಾಳ ಹೂಡಿಕೆ ಸಾಧ್ಯತೆಗಳನ್ನು ಪ್ರಮುಖವಾಗಿ ಚರ್ಚಿಸಲಾಗಿದೆ.
ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ಪ್ರತಿಭಾನ್ವಿತ ತಂತ್ರಜ್ಞರ ಲಭ್ಯತೆಯೂ ಸೇರಿದಂತೆ ರಾಜ್ಯದಲ್ಲಿ ಪೂರಕ ಪರಿಸರ ಇದೆ. ಕಂಪನಿಯ ಭವಿಷ್ಯದ ಬೆಳವಣಿಗೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ಟೋಕಿಯೊ ಎಲೆಕ್ಟ್ರಾನ್‌ನ ಉನ್ನತ ಅಧಿಕಾರಿಗಳಿಗೆ ಸಚಿವರು ಮನದಟ್ಟು ಮಾಡಿಕೊಟ್ಟರು.
ಮಿತ್ಸುಬಿಸಿ ಎಲೆಕ್ಟ್ರಿಕ್ ಜೊತೆಗಿನ ಭೇಟಿ ಸಂದರ್ಭದಲ್ಲಿ, ಕಂಪನಿಯು ಕರ್ನಾಟಕದಲ್ಲಿನ ತನ್ನ ತಯಾರಿಕಾ ಚಟುವಟಿಕೆಗಳ ಮಾಹಿತಿ ಹಂಚಿಕೊಂಡಿತು. ಕಂಪನಿಯ ಭವಿಷ್ಯದ ವಿಸ್ತರಣಾ ಯೋಜನೆಗಳಿಗೆ ಅಗತ್ಯ ನೆರವು ಕಲ್ಪಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.
ಕರ್ನಾಟಕದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವು ಶೀಘ್ರದಲ್ಲಿಯೇ ಪೂರ್ಣ ಪ್ರಮಾಣಕ್ಕೆ ತಲುಪಲಿದ್ದು, ವಿಸ್ತರಣಾ ಅವಕಾಶಗಳನ್ನು ಪರಿಶೀಲಿಸುತ್ತಿರುವುದಾಗಿ ಯೋಕೊಗವಾ ಎಲೆಕ್ಟಿಕ್ ತಿಳಿಸಿದೆ.
ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ತಯಾರಿಕಾ ಸೇವೆಗಳನ್ನು (ಇಎಂಎಸ್) ಆರಂಭಿಸಲು ಮುಂದಾಗಬೇಕು ಎಂದು ಸಚಿವರು, ಜಪಾನಿನ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ವಲಯದ ಪ್ರಮುಖ ಕಂಪನಿಯಾಗಿರುವ ರೆಸ್ಟರ್ ಹೋಲ್ಡಿಂಗ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ.
ಉನ್ನತ ಮಟ್ಟದ ನಿಯೋಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಇದ್ದಾರೆ.
BREAKING : ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ವಿರೋಧಿಸಿ ಬೃಹತ್ ಪ್ರತಿಭಟನೆ ; ಒರ್ವ ಸಾವು, 80 ಜನರಿಗೆ ಗಾಯ
ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri
ಭಾರತೀಯ ಸೇನೆಗೆ ಸೇರ ಬಯಸೋರಿಗೆ ಗುಡ್ ನ್ಯೂಸ್: ಉಚಿತ ಮಾರ್ಗದರ್ಶನ, ತರಬೇತಿಗೆ ಅರ್ಜಿ ಆಹ್ವಾನ