ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಇಂದು ಸಮೀಕ್ಷೆ ಮುಕ್ತಾಯಗೊಳ್ಳಬೇಕಿತ್ತು. ಆದರೇ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ಅಕ್ಟೋಬರ್.18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆಯನ್ನು ನೀಡಲು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇಂದು ಈ ಸಂಬಂಧ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸದಸ್ಯರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಜಾತಿಗಣತಿ ಸಮೀಕ್ಷೆ ಮುಕ್ತಾಯವಾಗದ ಹಿನ್ನಲೆಯಲ್ಲಿ ರಾಜ್ಯದ ಶಾಲೆಗಳಿಗೆ ರಜೆಯನ್ನು ಮುಂದುವರೆಸಲು ನಿರ್ಧರಿಸಲಾಯಿತು. ಅದರಂತೆ ಅಕ್ಟೋಬರ್.18ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ರಜೆಯನ್ನು ನೀಡಲು ನಿರ್ಧರಿಸಲಾಗಿದೆ.
ಶಿಕ್ಷಕರನ್ನು ಸಮೀಕ್ಷೆಗೆ ಸಂಪೂರ್ಣವಾಗಿ ಬಳಸಿಕೊಳ್ಳಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಹೀಗಾಗಿ ಶಾಲೆಗಳಿಗೆ ನೀಡಲಾಗಿದ್ದಂತ ದಸರಾ ರಜೆಯನ್ನು ಅಕ್ಟೋಬರ್.18ರವರೆಗೆ ದಸರಾ ರಜೆಯನ್ನು ವಿಸ್ತರಣೆ ಮಾಡಲು ಸಿಎಂ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು ಕೊಪ್ಪಳ ಜಿಲ್ಲೆಯಲ್ಲಿ ಜಾತಿಗಣತಿ ಸಮೀಕ್ಷೆ ಶೇ.90ರಷ್ಟು ಆಗಿದೆ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ.68, 69ರಷ್ಟು ಆಗಿದೆ. ಇಡೀ ರಾಜ್ಯದಲ್ಲಿ ನಮ್ಮ ನಿರೀಕ್ಷೆ ಏನಿತ್ತೋ ಅದು ಸಾಧ್ಯವಾಗಿಲ್ಲ. ಇಂದು ಸಂಜೆ ಜಾತಿಗಣತಿ ಸಮೀಕ್ಷೆ ಎಷ್ಟು ಆಗಲಿದೆ ಎಂಬುದು ತಿಳಿಯಲಿದೆ. ನನಗೆ ಬಂದಿರುವಂತ ಮಾಹಿತಿಯಂತೆ ಎಲ್ಲಾ ಜಿಲ್ಲೆಯಲ್ಲಿ ಸಂಪೂರ್ಣ ಸಮೀಕ್ಷೆಯಾಗಿಲ್ಲ ಎಂದರು.
ನಿನ್ನೆ ಶಿಕ್ಷಣ ಇಲಾಖೆಯಿಂದ ಒಂದು ಆದೇಶ ಮಾಡಲಾಗಿದೆ. ಹಿಂದುಳಿದ ಆಯೋಗದ ಜೊತೆಗೆ ಚರ್ಚಿಸಿ ಮಾಡಿರುವಂತ ಆದೇಶವಾಗಿದೆ. ಆ ಬಳಿಕ ಇಂದು ಚರ್ಚಿಸಿ ಎಲ್ಲಾ ಶಿಕ್ಷಕರನ್ನು ಸಮೀಕ್ಷೆಗೆ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಒಂದು ದಿನಕ್ಕೆ ಕನಿಷ್ಠ 15 ಮನೆಗಳನ್ನು ಮಾಡಲು ಹೇಳಲಾಗಿತ್ತು. ಆದರೇ ಅದು ಸಾಧ್ಯವಾಗಿಲ್ಲ. ರಜೆ ವಿಸ್ತರಣೆ ಮಾಡಬೇಕು ಎಂಬುದಾಗಿ ಶಿಕ್ಷಕರ ಸಂಘವು ಮನವಿ ಮಾಡಿದೆ. ಅದುದ್ದರಿಂದ ನಾಳೆಯಿಂದ 10 ದಿನಗಳ ಕಾಲ ದಸರಾ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಈ 12 ವರ್ಕಿಂಗ್ ಡೇಸ್ ನಲ್ಲಿ ಸಂಪೂರ್ಣ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಯಾರು ಸರ್ವೆ ಕಾರ್ಯದಲ್ಲಿ ತೊಡಗಿಸಿಕೊಳ್ಳೋದಿಲ್ಲ. ಸಮೀಕ್ಷೆ ಮಾಡಲು ಒಪ್ಪೋದಿಲ್ಲ ಅವರ ವಿರುದ್ಧ ರಾಜ್ಯ ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಲಿದೆ. ಅಕ್ಟೋಬರ್.19ಕ್ಕೆ ಮೊದಲು ರಾಜ್ಯದಲ್ಲಿ ಸಂಪೂರ್ಣವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಮುಕ್ತಾಯಗೊಳಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದರು.
ಜಾತಿಗಣತಿ ಸಮೀಕ್ಷೆಯ ಸಂದರ್ಭದಲ್ಲಿ ಮೂವರು ಶಿಕ್ಷಕರು ಸಾವನ್ನಪ್ಪಿದ್ದಾರೆ. ಅವರೆಲ್ಲರಿಗೂ 20 ಲಕ್ಷ ಪರಿಹಾರವನ್ನು ಸರ್ಕಾರದಿಂದ ನೀಡಲು ಸರ್ಕಾರ ನಿರ್ಧರಿಸಿರುವುದಾಗಿ ಸಿಎಂ ಸಿದ್ಧರಾಮಯ್ಯ ಇದೇ ಸಂದರ್ಭದಲ್ಲಿ ಘೋಷಿಸಿದರು.