ಬೆಂಗಳೂರು: ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ವತಿಯಿಂದ ಬೆಂಗಳೂರಿನ ರಾಮ ಮಂದಿರ ಮೈದಾನದಲ್ಲಿ ಅದ್ದೂರಿ ಹೋಳಿ ರಂಗ ಪಂಚಮಿ ಕಾರ್ಯಕ್ರಮ ಆಚರಿಸಲಾಯಿತು.ಕಾಮದಹನ ಮಾಡಿ ಬಣ್ಣದೋಕುಳಿ ಆಡುವ ಮೂಲಕ ಮಹಿಳೆಯರು ಮಕ್ಕಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಹಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ಮಾತನಾಡಿ, ನಮ್ಮ ಮಹಾ ಸಂಸ್ಥೆ ವತಿಯಿಂದ ಪ್ರತಿ ವರ್ಷ ಬೆಂಗಳೂರಿನಲ್ಲಿ ಕಾಮ ದಹನ ಮಾಡುವ ಮೂಲಕ ಹೋಳಿ ಆಚರಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಕುಳ್ಳು ಕಟ್ಟಿಗೆ ಕದ್ದು ಕಾಮಣ್ಣನ ಸುಡುವುದೇ ಸಂಭ್ರಮವಾಗಿರುತ್ತದೆ. ಬೆಂಗಳೂರಿನಲ್ಲಿರುವ ನಾವೆಲ್ಲ ಇಲ್ಲಿಯೂ ನಮ್ಮ ಭಾಗದ ಸಂಸ್ಕೃತಿ ಸಂಭ್ರಮ ಉಳಿಸಿಕೊಂಡು ಹೋಗೋಣ ಎಂದರು.
ಮಹಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ ಮಾತನಾಡಿ ಉತ್ತರ ಕರ್ನಾಟಕ ಭಾಗದ ಸಾಂಸ್ಕೃತಿಕ ಹಬ್ಬಗಳಾದ ರಂಗ ಪಂಚಮಿ, ಬನ್ನಿ ಹಬ್ಬ, ರೊಟ್ಟಿ ಪಂಚಮಿ ಹಬ್ಬಗಳನ್ನು ಆಚರಿಸುತ್ತ ಬೆಂಗಳೂರಿನಲ್ಲಿಯೂ ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಭಾಗದ ಸಂಸ್ಕೃತಿ ಹಾಗೂ ಹಬ್ಬಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಚಲನಚಿತ್ರ ನಟಿ ಶ್ರೀದೇವಿ ಮೆಳ್ಳಿಗಟ್ಟಿ ಮಾತನಾಡಿ, ನಾವೆಲ್ಲರೂ ಒಗ್ಗಟ್ಟನ್ನು ತೋರಿಸಲು ಸೇರಿರುವುದು ಸಂತಸದ ವಿಷಯ, ಎಲ್ಲಿ ಸಾಧ್ಯವೋ ಅಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶನ ಮಾಡಬೇಕು. ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಹಬ್ಬ ಹರಿದಿನಗಳ ಆಚರಣೆ ಮಾಡುವುದರಿಂದ ನಮ್ಮ ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ಹೇಳಿದರು.
ಮಹಾ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಸ್. ಜೆ. ಮೇಟಿ ಮಾತನಾಡಿ, ಬೆಂಗಳೂರಿನಲ್ಲಿ ಸುಮಾರು ಇಪ್ಪತೈದು ಲಕ್ಷ ಜನ ಉತ್ತರ ಕರ್ನಾಟಕ ಭಾಗದ ಜನರಿದ್ದೇವೆ. ನಾವು ಒಗ್ಗಟ್ಟಿನಿಂದ ಇದ್ದರೆ ನಮ್ಮ ಭಾಗದ ಅಭಿವೃದ್ದಿ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಬಸಯ್ಯ ನಂದಿಕೋಲ್, ಖಜಾಂಚಿ ಜಯಪ್ರಕಾಶ ಜಾಲಿಗಿಡದ, ಪದಾಧಿಕಾರಿಗಳಾದ ಶಾಂತೇಶ್ ಹಿರೇಮಠ, ದೇವರಾಜ ಕವಳಿಕಾಯಿ, ಅಶೋಕ ನೀಲೂರ, ಯಲಹಂಕದ ನಮ್ಮ ಉತ್ತರ ಕರ್ನಾಟಕ ಸಂಘದ ಅಧ್ಯಕ್ಷ ಶರಣಪ್ಪ ಸಾಹುಕಾರ, ಶಿವಕುಮಾರ ಸರಶೆಟ್ಟಿ, ವೀರೇಶ್ ಹೋಟಿ ಸೇರಿದಂತೆ, ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘಗಗಳ ಪದಾಧಿಕಾರಿಗಳು ಮಹಿಳೆಯರು ಮಕ್ಕಳು ಹಾಜರಿದ್ದರು.








