ಶಿವಮೊಗ್ಗ : ರಾಜ್ಯದಲ್ಲಿ 56ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ತಮ್ಮ ಹುಟ್ಟು ಹಬ್ಬದ ನಿಮಿತ್ತ ಶಿವಮೊಗ್ಗ ಜಿಲ್ಲೆಯ ಸಾಗರದ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮೀಸಲಾತಿ ನಿಗಧಿಪಡಿಸದೆ ನೇಮಕಾತಿ ಮಾಡಿಕೊಂಡರೆ ಕೆಲವು ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ಹೆಚ್ಚು ಜನರು ಉದ್ಯೋಗಾಕಾಂಕ್ಷಿಗಳಿದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್ ಪುಗಸಟ್ಟೆ ಭಾಷಣ ಮಾಡುತ್ತಾರೆ. 2 ಲಕ್ಷ ಉದ್ಯೋಗ ಭರ್ತಿ ಮಾಡಬೇಕು ಎಂದು ಹೇಳಿಕೆ ನೀಡುತ್ತಾರೆ. ಅವರೇನು ಕತ್ತೆ ಕಾಯುತ್ತಿದ್ದರಾ, ಮೂರು ಜನ ಉಪಮುಖ್ಯಮಂತ್ರಿಗಳು ಹಿಂದಿನ ಸರ್ಕಾರದಲ್ಲಿ ಇದ್ದರು. ಏನು ಸೆಗಣಿ ತಿನ್ನುತ್ತಿದ್ದರಾ ಎಂದು ಪ್ರಶ್ನಿಸಿದ ಸಚಿವರು, 56ಸಾವಿರ ಜನರನ್ನು ಏಕಕಾಲಕ್ಕೆ ಭರ್ತಿ ಮಾಡುತ್ತಿರುವುದು ಇತಿಹಾಸ. ನಮ್ಮ ಮೂರು ವರ್ಷದಲ್ಲಿ ಅಷ್ಟು ಜನ ನಿವೃತ್ತಿಯೇ ಆಗಿಲ್ಲ. ಓದಿರುವ ಮಕ್ಕಳಿಗೆ ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿ. ಮುಂದೆಯೂ ಇನ್ನೊಂದು ಹಂತದಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರ ಕೈನಲ್ಲಿಯೆ ಹಿಂದೆ ಕೇಂದ್ರ ಮತ್ತು ರಾಜ್ಯದ ಅಧಿಕಾರ ಇತ್ತು. ಅರ್ಜಿಗಳನ್ನು ವಜಾ ಮಾಡಿ ಈಗ ಹೋರಾಟ ಎನ್ನುತ್ತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರ ಪರ ನಾವು ಹೋರಾಟ ಮಾಡುತ್ತೇವೆ. ಅಂತಿಮವಾಗಿ ಕಾನೂನು ಏನು ಹೇಳುತ್ತದೆಯೋ ಅದನ್ನೆ ನಾವು ಮಾಡುವುದು ಅನಿವಾರ್ಯ. ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನಾವು ಕಾಗೋಡು ತಿಮ್ಮಪ್ಪ ಅವರ ಎದುರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಅದನ್ನು ಖಂಡಿತಾ ಈಡೇರಿಸುತ್ತೇವೆ. ಈಗಾಗಲೆ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ. ಶರಾವತಿ, ಚಕ್ರ, ವರಾಹಿ ಎಲ್ಲರಿಗೂ ನ್ಯಾಯ ಸಿಗುತ್ತದೆ. ಈಗ ಭಾಷಣ ಹೊಡೆಯುವವರು ಹಿಂದೆ ಅಧಿಕಾರದಲ್ಲಿದ್ದಾಗ ಪರಿಭಾವಿತ ಅರಣ್ಯ ಕಾಯ್ದೆ ಜಾರಿಗೆ ತಂದಿದ್ದರು. ಡೀಮ್ಡ್ ಫಾರೆಸ್ಟ್ ಕಾಯ್ದೆ ತಿದ್ದುಪಡಿಗೆ ಸಹ ಅವಕಾಶ ಸಿಕ್ಕಿದೆ. ನ್ಯಾಯಾಲಯ ಆದೇಶ ಹೊರತುಪಡಿಸಿ ಇತರೆ ಸಂದರ್ಭದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಜೆಟ್‌ನಲ್ಲಿ ಜಿಲ್ಲೆಗೆ ಬೇರೆಬೇರೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದರ ಜೊತೆಗೆ ಬಜೆಟ್ ಹೊರತುಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟನೆಗೆ ಶಿವಮೊಗ್ಗಕ್ಕೆ ಆಗಮಿಸುತ್ತಾರೆ. ಆಗ ಜಿಲ್ಲೆಗೆ ಬೇಕಾದ ಒಂದಷ್ಟು ಯೋಜನೆ ಅವರೆ ಘೋಷಣೆ ಮಾಡುತ್ತಾರೆ. ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡಿದ ವಿನೂತನ ಕಾರ್ಯಕ್ರಮ ನಮ್ಮ ಸರ್ಕಾರ ಮಾಡಿದೆ. ಕಾಗೋಡು ತಿಮ್ಮಪ್ಪ ಅವರ ಭೂಮಿ ನೀಡಬೇಕು ಎನ್ನುವ ಕನಸು ನಮ್ಮ ಸರ್ಕಾರ ಸಾಕಾರಗೊಳಿಸಿದೆ. ಕಾಗೋಡು ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಲು ಆಗಲಿಲ್ಲ. ನಮ್ಮ ಕ್ಷೇತ್ರದಲ್ಲಿ ಇನ್ನು ಒಂದೆರಡು ತಿಂಗಳಿನಲ್ಲಿ ಸುಮಾರು 5ಸಾವಿರ ಜನರಿಗೆ ಹಕ್ಕುಪತ್ರ ಕೊಡುವ ಕಾರ್ಯಕ್ರಮ ಕಾಗೋಡು ನೇತೃತ್ವದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು. ಈ ಸಂದರ್ಭದಲ್ಲಿ ದೀಪಾ ಕಾಗೋಡು, ಅನಿತಾ ಕುಮಾರಿ, ಕಲಸೆ ಚಂದ್ರಪ್ಪ, ಗಿರೀಶ್ ಕೋವಿ, ಲೋಕೇಶ್ ಗಾಳಿಪುರ, ತಾರಾಮೂರ್ತಿ, ಮಹಾಬಲೇಶ್ವರ ಕುಗ್ವೆ, ಡಿ.ದಿನೇಶ್, ನಾರಾಯಣ ಅರಮನೆಕೇರಿ ಇನ್ನಿತರರು ಹಾಜರಿದ್ದರು.
ಸಿಗಂಧೂರು ಸೇತುವೆ ಬಳಿ ರಸ್ತೆ ತಡೆ ನಡೆಸಿ ರೈತರು ಪ್ರತಿಭಟನೆ: ಜನಪ್ರತಿನಿಧಿಗಳಿಗೆ ತೀ.ನಾ.ಶ್ರೀನಿವಾಸ್ ಈ ಸವಾಲು
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ








