ಬೆಂಗಳೂರು: ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಉತ್ತರ ನೀಡಿದರು. ಅವರ ಭಾಷಣದ ಸಂಪೂರ್ಣ ಹೈಲೈಟ್ಸ್ ಮುಂದಿದೆ ಓದಿ.
ರಾಜ್ಯಪಾಲರ ಭಾಷಣದಲ್ಲಿ ಸಾಂಪ್ರದಾಯಿಕವಾಗಿ ಸರ್ಕಾರದ ಸಾಧನೆಗಳನ್ನು ಸದನದ ಮುಂದಿಡುವ ಭಾಷಣವಿರುತ್ತದೆ. ಕೆಲವರು ಟೀಕಿಸಿದ್ದಾರೆ, ಹಲವರು ವಾಸ್ತವಿಕವಾಗಿ ಮಾತನಾಡಿದ್ದಾರೆ, ಕೆಲವರು ಸಮರ್ಥಿಸಿದ್ದಾರೆ, ಕೇಲವರು ವಿರೋಧಿಸಲೆಂದೇ ವಿರೋಧಿಸಿ ಮಾತನಾಡಿದ್ದಾರೆ. ಅವರೆಲ್ಲರ ಸಲಹೆ ಸೂಚನೆಗಳನ್ನು ಸರ್ಕಾರ ಸ್ವಾಗತಿಸಿ, ಸರ್ಕಾರದ ನಿಲುವನ್ನು ಸದನಕ್ಕೆ ತಿಳಿಸಿ ವಂದನಾ ನಿರ್ಣಯವನ್ನು ಅಂಗೀಕಾರ ಮಾಡಬೇಕೆಂದು ವಿನಂತಿಸಿದರು.
ವಿರೋಧ ಪಕ್ಷದ ನಾಯಕರಾದಿಯಾಗಿ 14 ಜನ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರು ಮಾತನಾಡಿದ್ದಾರೆ. ರಾಜ್ಯಪಾಲರು ಒಂದು ಗಂಟೆಗೂ ಮೀರಿ ಸುದೀರ್ಘವಾಗಿ ಮಾತನಾಡಿ ಸರ್ಕಾರದ ಸಾಧನೆಗಳನ್ನು ಓದಿ ಹೇಳಿದ್ದಾರೆ. ವಾಸ್ತವವನ್ನು ಸದನಕ್ಕೆ ತಿಳಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ವಾಸ್ತವಾಂಶಗಳನ್ನು ಸದನದ ಸದಸ್ಯರಿಗೆ ತಿಳಿಸುತ್ತೇನೆ.
ನಮ್ಮ ಸರ್ಕಾರ ಜನರ ಆಶೀರ್ವಾದದಿಂದ 2023 ಮೇ 22 ರಂದು ಅಧಿಕಾರಕ್ಕೆ ಬಂದಿತು. ನಮ್ಮ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದು 2 ವರ್ಷಗಾಳಾಗುತ್ತಿದೆ. ಇದು ಸರ್ಕಾರ ಬಂದ ನಂತರ ರಾಜ್ಯಪಾಲರ ಎರಡನೇ ಭಾಷಣ.
ಅಧಿಕಾರಕ್ಕಾಗಿ ಅಧಿಕಾರ ಮಾಡುವುದಲ್ಲ. ಜನರ ಕಲ್ಯಾಣಕ್ಕೆ ಅಧಿಕಾರ ಬಳಕೆಯಾಗಬೇಕು ಎನ್ನುವ ಕಾಳಜಿಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇವೆಲ್ಲವೂ ವಾಸ್ತವ ಕಾರ್ಯಕ್ರಮಗಳಾಗಿರುವುದರಿಂದ ರಾಜ್ಯಪಾಲರು ಶ್ಲಾಘಿಸಿದ್ದಾರೆ. ಸದನದ ಚರ್ಚೆಗಳು ಬಸವಣ್ಣ ಹೇಳಿದಂತೆ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನುವಂತಿರಬೇಕು. ಸದನದಲ್ಲಿ ಮಾತನಾಡಿದರೆ ಜನರ ಅಭಿರುಚಿಯನ್ನು ಹೆಚ್ಚಿಸಬೇಕು. ವಿದ್ಯಾವಂತರು ಸದನಕ್ಕೆ ಬರುತ್ತಿರುವುದರಿಂದ ಚರ್ಚೆ ಅರ್ಥ ಪೂರ್ಣ, ಆರೋಗ್ಯಕರವಾಗಿರಬೇಕು. ಜನರೂ, ಸಧನವೂ ಇದನ್ನೇ ನಿರೀಕ್ಷಿಸುತ್ತದೆ.
ಅಶೋಕ್ ಹಾಗು ಸುನೀಲ್ ಕುಮಾರ್ ಅವರು ಮಾತನಾಡುವಾಗ ಕರಿಮಣಿ ಮಾಲೀಕ ಯಾರು ಎಂದು ಪ್ರಶ್ನಿಸಿದ್ದಾರೆ. ನನ್ನ ಹಾಗು ಬಹುತೇಕ ಸದಸ್ಯರ ಪ್ರಕಾರ ಅರ್ಥಹೀನ ಮಾತುಗಳು. ನನಗೂ ಹಿರಿಯ ಸದಸ್ಯರಿಂದ ಇಂಥ ಮಾತುಗಳನ್ನು ನಿರೀಕ್ಷೆ ಇರಲಿಲ್ಲ.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕರಿಮಣಿ ಮಾಲೀಕ ಯಾರು ಎನ್ನುವುದು ಕೀಳು ಅಭಿರುಚಿಯ ಪ್ರಯೋಗ. ನಿಮ್ಮ ಪಕ್ಷದಲ್ಲಿ ಭಿನಾಭಿಪ್ರಯಗಳಿಲ್ಲವೇ? ನಿಮ್ಮ ಭಿನ್ನಾಭಿಪ್ರಾಯಗಳು ಯಾವ ಮಟ್ಟಕ್ಕೆ ಹೋಗಿವೆ ಎಂಬ ಚರ್ಚೆ ಬೇಡ. ಅಭಿರುಚಿ ಹೀನ ಎಂದಷ್ಟೇ ಹೇಳಿದ್ದೇನೆ. ನಿಮಗೆ ಸರಿಯಿದ್ದರೆ ಓಕೆ. ಜನ ಅಂತಿಮವಾಗಿ ತೀರ್ಮಾನ ಮಾಡುತ್ತಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸದನಕ್ಕೆ ದೊಡ್ಡ ಸುಳ್ಳು ಹೇಳಿದ್ದಾರೆ. ಆರ್.ಎಸ್.ಎಸ್ ಬೈಠಕ್ ನಲ್ಲಿದ್ದಾರೋ, ಸದನದಲ್ಲಿದ್ದಾರೋ ಗೊತ್ತಿಲ್ಲ. ಕೃಷ್ಣ ಭಾಗ್ಯ ಜಲ ನಿಗಮಕ್ಕೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ 3300 ಕೋಟಿ, ವಿಶ್ವೇಶ್ವರ ಜಲನಿಗಮ ಸೇರಿ ಕರ್ನಾಟಕ ನೀರಾವರಿಗೆ ಒಟ್ಟು 10 ಸಾವಿರ ಕೋಟಿ ರೂಪಾಯಿ ರಾಜ್ಯದ ನೀರಾವರಿ ನಿಗಮಕ್ಕೆ ಕೊಟ್ಟಿದೆ ಎಂದು ಹೇಳಿದ್ದಾರೆ. ಮಾಹಿತಿ ಕೊರತೆಯೋ ಉದ್ದೇಶಪೂರ್ವಕ, ಟೀಕೆಗಾಗಿ ಹೇಳಿದ್ದಾರೋ ಗೊತ್ತಿಲ್ಲ. ವಾಸ್ತವ ಏನೆಂದರೆ 24-1-2025 ರಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸ್ಕೀಂ ಆಫ್ ಸ್ಪೆಶಲ್ ಅಸಿಸ್ಟೆನ್ಸ್ ಕೊಟ್ಟಿದ್ದು, 50 ವರ್ಷಗಳ ಕಾಲ ಬಡ್ಡಿ ರಹಿತವಾಗಿ ವಿಶೇಷ ನೆರವು ನೀಡಿದೆ. ಮುಳವಾಡ ಏತ ನೀರಾವರಿಗೆ 200 ಕೋಟಿ, ಮಹಾಲಕ್ಷ್ಮಿ ಮಲಪ್ರಭಾ ಯೋಜನೆಗೆ 200, ಭ್ರದಾ ಮೇಲ್ದಂಡೆ, 300 ಒಟ್ಟು 1030 ಕೋಟಿ ಕೊಟ್ಟಿದ್ದಾರೆ. ಮಾಹಿತಿ ಕೊರತೆಯಿದ್ದರೆ ಸರಿಯಾಗಿ ಪಡೆದು ಮಾತನಾಡಿ. ಇದು ಸಂಪೂರ್ಣ ಸುಳ್ಳು ಮಾಹಿತಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೇಂದ್ರ ಸರ್ಕಾರ ನಮಗೆ ಕೊಟ್ಟಿರುವುದು ನಮ್ಮ ಪಾಲಿನ ಅನುದಾನವಲ್ಲ: ಸಾಲ ಮಾತ್ರ: ಸಿ.ಎಂ.ಸಿದ್ದರಾಮಯ್ಯ
ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೊಟ್ಟಿರುವುದು ನಮ್ಮ ಪಾಲಿನ ಅನುದಾನವಲ್ಲ. ಬದಲಿಗೆ ಅವರು ಕೊಟ್ಟಿರುವುದು ಬಡ್ಡಿ ರಹಿತ ಸಾಲ ಮಾತ್ರ. ವಿರೋಧಪಕ್ಷದವರಿಗೆ ಮಾತನಾಡಲು ಏನೂ ಸಿಗದೆ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ.
ನಮ್ಮ ಕಾರ್ಯಕ್ರಮಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘಿಸಿದ್ದಾರೆ. ಕ್ಯಾಮರೂನ್ ದೇಶದ ಸುಲೇಮಾನ್ ಹ್ಯಾಂಕ್, ವಿಶ್ವಸಂಸ್ಥೆ ಜನರಲ್ ಬಾಡಿ ಅಧ್ಯಕ್ಷರು ಗ್ಯಾರಂಟಿಗಳನ್ನು ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.
ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳು ಗ್ಯಾರಂಟಿಗಳನ್ನು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ.
2020 ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ. ನೀವೆಲ್ಲಾ ಇದನ್ನು ವಿರೋದಿಸಿದ್ದೀರಿ.
ರಾಜ್ಯಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ. ಅನೇಕ ರಾಜ್ಯಗಳಲ್ಲಿ ಇದನ್ನು ನಕಲು ಮಾಡಿದ್ದೀರಿ.
ಬಿಜೆಪಿಯವರು ವ್ಯಕ್ತಿ ಪೂಜೆಯನ್ನು ಕಲಿತಿದ್ದಾರೆ. ನಾವು ವ್ಯಕ್ತಿ ಪೂಜೆ ಮಾಡುವುದಿಲ್ಲವಾದ್ದರಿಂದ ಸಿದ್ದರಾಮಯ್ಯ ಗ್ಯಾರಂಟಿ ಎಂದು ಘೋಷಣೆ ಮಾಡಿಲ್ಲ. ನಾವು ರಾಜ್ಯದ ಜನರ ಗ್ಯಾರಂಟಿ ಎಂದು ಘೋಷಿಸಿದ್ದಾಗಿ ಟೀಕಿಸಿದರು.
NDA-BJP ಸರ್ಕಾರದ ಸಚಿವರುಗಳು, ಅಧಿಕಾರಿಗಳು ನನ್ನಲ್ಲಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಿದ್ದು ಏಕೆ: ಬಿಜೆಪಿಯವರಿಗೆ ನೇರ ಪ್ರಶ್ನೆ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ: ಇಲ್ಲಿ ನೀವು ವಿರೋಧಿಸುತ್ತಿದ್ದೀರಿ, ಏನಿದು: ಸಿ.ಎಂ ಪ್ರಶ್ನೆ
ಗ್ಯಾರಂಟಿ ಯೋಜನೆಗಳನ್ನು ನೀವು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಕಲು ಮಾಡಿದ್ದೀರಿ.
ವಿರೋಧ ಮಾಡುವುದಾದರೆ ನಕಲು ಏಕೆ ಮಾಡಬೇಕಿತ್ತು. ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ನಾವು ವಾಸ್ತವವನ್ನು ಹೇಳುತ್ತಿದ್ದೇವೆ.
ದಿನಾಂಕ 3-1-2025 ರಂದು ಚಂದ್ರ ಬಾಬು ನಾಯ್ದು ಅವರ ಸರ್ಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಅಧ್ಯಯನ ಮಾಡಿ ಹೋಗಿದ್ದಾರೆ.
ಸಚಿವ ರಾಮಲಿಂಗಾರೆಡ್ಡಿ ಹಾಗೂ ನನ್ನನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
2-2-2025 ರಂದು ಮಹಾರಾಷ್ಟ್ರದ ಸಾರಿಗೆ ಸಚಿವರಾದ ಪ್ರತಾಪ್ ಸರ್ನಾಯಕ್ ಶಕ್ತಿ ಯೋಜನೆ ಬಗ್ಗೆ ಚರ್ಚಿಸಿ ತೆರಳಿದ್ದಾರೆ. ಅಲ್ಲಿರುವುದು ಬಿಜೆಪಿ ಸರ್ಕಾರ.
5-3-2025 ರಂದು ಕೇರಳದಿಂದ ಸಚಿವರು ಬಂದು ಅಧ್ಯಯನ ಮಾಡಿ ಹೋದರು. ಇವರೆಲ್ಲಾ ಸುಮ್ಮನೆ ಬಂದು ಹೋಗುತ್ತಾರೆಯೇ? ಎಂದು ಮುಖ್ಯಮಂತ್ರಿಗಳು ನೇರವಾಗಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ Indian institute of Public Administration ಸಂಸ್ಥೆಯ ಅಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಸಚಿವ ಜಿತೇಂದ್ರ ಸಿಂಗ್ ಪ್ರಶಂಸೆಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದಾರೆ. ಈ ಎರಡೂ ವರದಿಗಳು ಸರ್ಕಾರಕ್ಕೆ ಉಪಯುಕ್ತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೀರಿ. ನಿಮಗೆ ಎಷ್ಟು ಹುಡುಕಿದರೂ ಮೊಸರಲ್ಲಿ ಕಲ್ಲು ಸಿಗುವುದಿಲ್ಲ.
ನೀವು ಮಾಡುತ್ತಿರುವುದು ಇದೊಂದು ರಾಜಕೀಯ ಪ್ರೇರಿತ ಕೆಲಸ. ಈಗಲಾದರೂ ಸಕಾರಾತ್ಮಕವಾಗಿ ಟೀಕೆ ಮಾಡಬೇಕೆಂದು ಸಿಎಂ ಮನವಿ ಮಾಡಿದರು.
ತಪ್ಪುಗಳಿದ್ದರೆ ಸರ್ಕಾರದ ಖಜಾನೆಗೆ ತೊಂದರೆಯಿದ್ದಾರೆ ಸರ್ಕಾರದ ಗಮನಕ್ಕೆ ತರುವುದು ವಿರೋಧಪಕ್ಷದ ಕೆಲಸ. ಆ ಕೆಲಸ ಮಾಡಬೇಕು.
ಗ್ಯಾರಂಟಿ ಯೋಜನೆಗಳಿಗೆ ಫೆಬ್ರವರಿ ವರೆಗೆ ನಾವು, ನಮ್ಮ ಸರ್ಕಾರ ಬರೋಬ್ಬರಿ 76,509 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದು ಸತ್ಯ ಎನ್ನುವುದು ಸದನದಲ್ಲಿರುವ ಪ್ರತಿಯೊಬ್ಬರಿಗೂ ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಸರ್ಕಾರ ದಿವಾಳಿಯಾಗಿದ್ದರೆ 76509 ಕೋಟಿ ಕೊಡಲು ಸಾಧ್ಯವಿತ್ತೆ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ನಿಲ್ಲಿಸಿಬಿಡತ್ತೆ ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದ್ರಲ್ಲಾ, ನಿಂತೋಯ್ತೇನ್ರೀ: ಸಿಎಂ ಪ್ರಶ್ನೆ
ಲೋಕಸಭಾ ಚುನಾವಣೆ ನಂತರದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಸುಳ್ಳು ಆರೋಪ, ಅಪಪ್ರಚಾರ ಮಾಡಿದಿರಿ. ಜನರಿಗೆ ಈ ಕಾರ್ಯಕ್ರಮಗಳ ಸತ್ಯಾಸತ್ಯತೆ ಗೊತ್ತಿದೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿದೆ. ಜೂನ್ 11, 2023 ರಿಂದ 410 ಕೋಟಿ ಜನ ಶಕ್ತಿ ಯೋಜನೆಯಡಿ ಓಡಾಡಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಉಪಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಸೋತಿದ್ದೀರಿ.
ನಿಮ್ಮ ಟೀಕೆ, ಆಪಾದನೆಗಳು ಮಾಡಿದ ನಂತರ ಉಪಚುನಾವಣೆಗಳು ನಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆದ್ದಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ13 ಸಾವಿರ ಅಂತರದಿಂದ ಹಾಗೂ ಸಂಡೂರು ಕ್ಷೇತ್ರದಲ್ಲಿ 9 ಸಾವಿರ ಅಂತರದಲ್ಲಿ ಗೆದ್ದಿದ್ದೇವೆ. ಮೂರೂ ಕಡೆ ಮಕಾಡೆ ಮಲಗಿದಿರಿ ನೀವು. ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದರೆ ಸಾಧ್ಯವಿಲ್ಲ ಎಂದರು.
ಎರಡು ಬಾರಿ ಅಧಿಕಾರ ಮಾಡಿರುವ ನೀವು ಜನರ ಆಶೀರ್ವಾದದಿಂದ ಗೆದ್ದಿದ್ದೀರೇ? ಆಪರೇಶನ್ ಕಮಲ ಮಾಡಿ 18 ಕ್ಷೇತ್ರಗಳನ್ನು ಗೆದ್ದಿರಿ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಅವರ ಮಗನ ವಿರುದ್ಧ ಗೆಲ್ಲಬೇಕಾದರೆ ಎಲ್ಲಾ ಜಾತಿ ಜನರು ಮತ ನೀಡಿದ್ದರಿಂದ ನಾವು ಗೆದ್ದಿದ್ದೇವೆ. ನಾವು ಅಪರೇಶನ್ ಕಾಂಗ್ರೆಸ್ ಮಾಡಿಲ್ಲ. ನಾವು ಗ್ಯಾರಂಟಿ ಕೊಡದೇ ಹೋಗಿದ್ದರೆ ಬಡವರು ಮತ ಹಾಕುತ್ತಿರಲಿಲ್ಲ . ಮಧ್ಯವರ್ತಿಗಳಿಲ್ಲದೇ ನೇರವಾಗಿ ಫಲಾನುಭವಿಗಳ ಖಾತೆಗೆ ತಲುಪುವ ಈ ಯೋಜನೆಗಳು ಬಡವರ ಬದುಕಿಗೆ ಭರವಸೆ ನೀಡಿವೆ.
ನಾವು ಬಿಜೆಪಿಯವರಂತೆ ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರನ್ನು ಕೈ ಬಿಟ್ಟಿಲ್ಲ: ಸಿ.ಎಂ ಸಿದ್ದರಾಮಯ್ಯ
ಬಿಜೆಪಿ ಮತ್ತು ಕಾಂಗ್ರೆಸ್ ನ ಆರ್ಥಿಕ ನೀತಿ, ನಿಲುವುಗಳು ಯಾರ ಪರವಾಗಿವೆ ಎನ್ನುವ ವ್ಯತ್ಯಾಸವನ್ನು ಸದನದಲ್ಲಿ ಮುಖ್ಯಮಂತ್ರಿಗಳು ವಿವರಿಸಿದರು
2024-25 ಕ್ಕೆ 52,0009 ಕೋಟಿ ಇಟ್ಟು, 41509 ಕೋಟಿ ರೂಪಾಯಿ ವೆಚ್ಚ ಮಾಡಿದ್ದೇವೆ. ಖಜಾನೆ ಖಾಲಿ ಯಾಗಿದೆ ಎಂಬ ಮಾತು ಸತ್ಯಕ್ಕೆ ದೂರ ತಾನೇ ಎಂದು ಅಂಕಿ ಅಂಶಗಳನ್ನು ಮುಂದಿಟ್ಟು ಸಿಎಂ ಪ್ರಶ್ನಿಸಿದರು.
1.26 ಕೋಟಿ ಕುಟುಂಬಗಳಿಗೆ ಯೋಜನೆಗಳು ತಲುಪುತ್ತಿದ್ದು, ಕೊಟ್ಟ ಮಾತಿನಂತೆ ನಡೆದಿದ್ದೇವೆ. ಯಾವ ಕಾರಣಕ್ಕೂ ಯಾವ ಕಾರ್ಯಕ್ರಮವನ್ನೂ ನಿಲ್ಲಿಸುವುದಿಲ್ಲ. ಸಾಲಮನ್ನಾ ಮಾಡಿ ಅಂದರೆ ಹಣ ಎಲ್ಲಿಂದ ತರುವುದು ಎಂದು ಹೇಳಿದ ಬಿಜೆಪಿ, ಅದಾನಿ ಯವರಿಗೆ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ರಾಜಕೀಯ ದುರುದ್ದೇಶ ಬಿಟ್ಟು ಮಾತನಾಡಬೇಕೆಂದು ವಿರೋಧ ಪಕ್ಷದವರಿಗೆ ಮನವಿ ಮಾಡಿದ ಸಿಎಂ, ದೇಶದ 100 ಕೋಟಿ ಜನರಿಗೆ ಕೊಳ್ಳುವ ಆಯ್ಕೆಗಳೇ ಇಲ್ಲ ಎಂದು ವರದಿ ಬಂದಿತ್ತು. 20.5 ಕೋಟಿ ಕುಟುಂಬಗಳು ಅಂದರೆ ನೂರು ಕೋಟಿ ಜನರ ವಾರ್ಷಿಕ ಆದಾಯ 87000 ರೂಪಾಯಿಗಿಂತ ಕಡಿಮೆ ಇದೆ ಎನ್ನುವ ವರದಿ ಬಂದಿದೆ. ಅಸಮಾನತೆ ಅಷ್ಟರ ಮಟ್ಟಿಗೆ ಇದೆ. ದೇಶದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇರುವವರೆಗೆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ . ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡುವ ಸಾರ್ವತ್ರಿಕ ಮೂಲ ಆದಾಯ ತತ್ವ ಅಗತ್ಯ. ಆರ್ಥಿಕ, ಸಾಮಾಜಿಕ ಶಕ್ತಿಯನ್ನು ಜನರಲ್ಲಿ ತುಂಬಿದರೆ ಜನರ ಹಾಗೂ ರಾಜ್ಯದ ಅಭಿವೃದ್ಧಿ ಸಾಧ್ಯ. ನಾವು ಸಮಾಜದ 90% ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಿದ್ದೇವೆ. ನೀವು ಸಮಾಜದ 10% ಜನರಿಗೆ ಶಕ್ತಿ ತುಂಬುತ್ತಿದ್ದೀರಿ.
94 ರಲ್ಲಿ 34% ಇದ್ದ ಶ್ರೀಮಂತರ ಸಂಖ್ಯೆ ಈಗ 57% ಗೆ ಹೆಚ್ಚಾಗಿದೆ. 50% ಜನರಿಗೆ ಇರುವ ಆರ್ಥಿಕ ಶಕ್ತಿ 15% ಗೆ ಕುಸಿದಿದೆ. ಇದು ಆತಂಕಕಾರಿ ಸಂಗತಿ ಅಲ್ಲವೇ? ಶ್ರೀಮಂತರು ಶ್ರೀಮಂತರಾದರೆ, ಬಡವರು ಬಡವರಾಗುತ್ತಿದ್ದಾರೆ. ಈ ಅಸಮಾನತೆಯನ್ನು ತೊಡೆದು ಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದ ಬಡವರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು ಮಾತ್ರವಲ್ಲ, ಸ್ವಾಭಿಮಾನ ಹೆಚ್ಚುತ್ತಿದೆ. ಜನರು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಭಯವಾಗಿ, ಅವರ ಬದುಕು ಸುಧಾರಣೆಯಾಗಿದೆ. ಸಮಾನತೆಯ ಭಾವ ಉಂಟಾಗುತ್ತಿದೆ ಎಂದರು.
ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದು, ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ನಮಗೆ ಆರ್ಥಿಕ ಸಾಮಾಜಿಕ ಸ್ವಾತಂತ್ಯ ಸಿಕ್ಕಿಲ್ಲ. ಅದು ಸಿಗಬೇಕಾದರೆ ಕಟ್ಟ ಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕೆಲಸವಾಗಬೇಕು ಎಂದು ಅಂಬೇಡ್ಕರ್ ಹೇಳಿದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿಯವರಂತೆ ನಾವು ಕೇವಲ 10% ಜನರ ಕೈಹಿಡಿದು ಶೇ90% ರಷ್ಟು ಜನರ ಕೈ ಬಿಟ್ಟಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ನ ಆರ್ಥಿಕ ನೀತಿ, ನಿಲುವುಗಳು ಯಾರ ಪರವಾಗಿವೆ ಎನ್ನುವ ವ್ಯತ್ಯಾಸವನ್ನು ವಿವರಿಸಿದರು.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 11 ವರ್ಷಗಳಾದರೂ ಕೇಂದ್ರ ಸರ್ಕಾರ ವಿಧವಾ ವೇತನ, ಅಂತ್ಯೋದಯ ಯೋಜನೆ, ವೃದ್ಧಾಪ್ಯ ವೇತನವನ್ನು ಒಂದು ರೂಪಾಯಿ ಹೆಚ್ಚಿಸಿಲ್ಲ. ವಸತಿ ಯೋಜನೆಗಳಿಗೆ ಹೆಚ್ಚಳ ಮಾಡಿಲ್ಲ: ಸಿಎಂ
ಕೇಂದ್ರ ಸರ್ಕಾರ 72 ಸಾವಿರ ಕೊಟ್ಟರೆ ರಾಜ್ಯ ಸರ್ಕಾರ 42 ಸಾವಿರ ಕೊಡುತ್ತದೆ. ಕರ್ನಾಟಕ 2025-26 ನೇ ಸಾಲಿಗೆ 5ಲಕ್ಷ ಕೋಟಿ ರೂಪಾಯಿ ತೆರಿಗೆ ಕೊಡುತ್ತಿದ್ದೇವೆ.
ನಮಗೆ ಅಂದಾಜು 51 ಸಾವಿರ ಕೋಟಿ ವಾಪಸ್ಸು ಬರಬೇಕಾಗುತ್ತದೆ. ಹಾಗೆಂದು ಕೇಳಿದರೆ ಕೇಂದ್ರ ಸರ್ಕಾರದ್ದು ಮಾತನಾಡಬಾರದೆಂದು ಅಶೋಕ್ ಪ್ರಶ್ನಿಸುತ್ತಾರೆ.
ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಬಡವರಿಗೆ ಕೊಡುವ ಈ ಯೋಜನೆಗಳಿಗೆ ಒಂದು ರೂಪಾಯಿ ಹೆಚ್ಚಳವಾಗಿಲ್ಲ.
ರಾಜ್ಯಕ್ಕೆ 15 ನೇ ಹಣಕಾಸು ಯೋಜನೆಯಡಿ ಅನುದಾನದಲ್ಲಿ ಆಗಿರುವ ಅನ್ಯಾಯವನ್ನು ನಾವು ಪ್ರಶ್ನಿಸಬಾರದಂತೆ. ಅನ್ಯಾಯ ಸರಿ ಮಾಡಿ ಎಂದು ಕೇಳಬಾರದಾ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆರ್ಥಿಕವಾಗಿ ಹೆಚ್ಚು ಅನುದಾನ ನೀಡಲು ಸಾಧ್ಯವಾಗದೆ ಇರುವುದು ಬಿಜೆಪಿ ಸರ್ಕಾರದಿಂದ. ಬಿಜೆಪಿ ಅಧಿಕಾರದಲ್ಲಿದ್ದಾಗ ಕ್ಯಾಪಿಟಲ್ ಹೂಡಿಕೆಗಳಿಗೆ 2,70,695 ಕೋಟಿ ಕಾಮಗಾರಿಗಳನ್ನು ಅನುದಾನ ಒದಗಿಸದೇ ತೆಗೆದುಕೊಂಡಿರಿ. ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ 1,66,426 ಕೋಟಿ ನೀಡಲಾಗಿದೆ. 36 ಸಾವಿರ ಕೋಟಿ ಬಾಕಿ ಬಿಲ್ಲುಗಳು ನಿಮ್ಮ ಬಳುವಳಿ. ನಿಮ್ಮಿಂದ ನಾವು ಕಷ್ಟ ಪಡುವ ಸಂದರ್ಭ ಒದಗಿದೆ ಎಂದು ಲೆಕ್ಕ , ದಾಖಲೆ ಮಂಡಿಸಿದರು.
ನೀವು ಕೇಂದ್ರದಿಂದಲೂ ಅನುದಾನ ತಂದಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು 15 ನೇ ಹಣಕಾಸು ಆಯೋಗದ ಅಧ್ಯಕ್ಷರು 11495 ಕೋಟಿ ಶಿಫಾರಸ್ಸು ಮಾಡಿದರು. ನೀವು ಈ ಬಗ್ಗೆ ಕೇಳಲಿಲ್ಲ ಎಂದರು.
ಜನವರಿಯಲ್ಲಿ ಶೇ.2.31ರಷ್ಟಿದ್ದ ಸಗಟು ಹಣದುಬ್ಬರ ಫೆಬ್ರವರಿಯಲ್ಲಿ ಶೇ.2.38ಕ್ಕೆ ಏರಿಕೆ | inflation
ಹಾಸನದಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವು: ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ- ಸಚಿವ ಈಶ್ವರ್ ಖಂಡ್ರೆ ಘೋಷಣೆ