ಬೆಂಗಳೂರು: ಜರ್ಮನಿ ಸರ್ಕಾರದ ಫೆಡರಲ್ ಸಚಿವಾಲಯ ಇಕಾನಾಮಿಕ್ ಕೋಆಪರೇಶನ್ ಅಂಡ್ ಡೆವಲಪ್ಮೆಂಟ್ (BMZ) ನ ಉನ್ನತ ಮಟ್ಟದ ನಿಯೋಗವು ತಮ್ಮ ಭಾರತದ ಪ್ರವಾಸದ ಭಾಗವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಭೇಟಿ ನೀಡಿತು.
ನಿಯೋಗದ ಸದಸ್ಯರು ದೃಷ್ಟಿ ದೋಷ ಹೊಂದಿದ ಪ್ರಯಾಣಿಕರ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಸಹಾಯಕ ಧ್ವನಿ-ನೇವಿಗೇಶನ್ ಪರಿಹಾರ “ಧ್ವನಿ ಸ್ಪಂದನ – ಆನ್‌ಬೋರ್ಡ್” ಬಗ್ಗೆ ಖುದ್ದು ಮಾಹಿತಿ ಪಡೆದರು.

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ಅವರು ಧ್ವನಿ ಸ್ಪಂದನ ಯೋಜನೆಯ ಕುರಿತು ವಿವರವಾಗಿ ಮಾಹಿತಿ ನೀಡಿ, ಈ ಯೋಜನೆಗೆ ಭಾರತದ ಸರ್ಕಾರದಿಂದ ದೊರೆತ ಪ್ರಶಸ್ತಿಯನ್ನು ತೋರಿಸಿದರು.
ಈ ನಿಯೋಗದಲ್ಲಿ BMZ ನ ಮಾನ್ಯ ಮಹಾ ನಿರ್ದೇಶಕಿ ಮಿಸ್. ಕ್ರಿಸ್ಟೀನ್ ಟೋಟ್‌ಝ್ಕೆ, ಮಿಸ್. ಬಾರ್ಬರಾ ಶಾಫರ್ ಮತ್ತು ಕ್ರಿಸ್ಟೋಫ್ ವಾನ್ ಸ್ಟೆಕೋವ್ ಉಪಸ್ಥಿತರಿದ್ದರು. ರೈಸ್‌ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿಪಡಿಸಿದ ಮತ್ತು GIZ ನ ಗ್ರೀನ್ ಅರ್ಬನ್ ಮೊಬಿಲಿಟಿ ಇನೋವೇಶನ್ ಮುಂದಾಳತ್ವದಲ್ಲಿ ವಿಸ್ತರಿಸಲ್ಪಟ್ಟ ಆನ್‌ಬೋರ್ಡ್ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದ ಮಾಹಿತಿಯನ್ನು ಅವರಿಗೆ ನೀಡಲಾಯಿತು.

ಈ ಭೇಟಿಯ ಸಂದರ್ಭದಲ್ಲಿ, BMZ ನಿಯೋಗವು ಮೈಸೂರು ನಗರ ಬಸ್‌ಗಳಲ್ಲಿ ಕಾರ್ಯಾಚರಣೆಯಲ್ಲಿ ಇರುವ ಸಾಧನವನ್ನು ನೇರವಾಗಿ ಅನುಭವಿಸಿ, ಒಳಗೊಂಡಿರುವ ಎಲ್ಲ ವರ್ಗಗಳಿಗೂ ಅನುಕೂಲವಾಗುವ ಸಂಚಾರ ವ್ಯವಸ್ಥೆ ನಿರ್ಮಾಣದ ನಿಗಮದ ಬದ್ಧತೆಯನ್ನು ಮೆಚ್ಚಿದರು. ಬಳಕೆದಾರ ಕೇಂದ್ರೀಕೃತ, ನವೀನ ಹಾಗೂ ಸುಲಭಪ್ರವೇಶದ mobility ಸಂಚಾರ ಪರಿಹಾರಗಳನ್ನು ಅಳವಡಿಸುವಲ್ಲಿ ನಿಗಮವು ತೋರಿದ ನಾಯಕತ್ವವನ್ನು ಪ್ರಶಂಸಿಸಿ, ಮೈಸೂರು ನಗರ ಸಾರಿಗೆಯ ಈ ವ್ಯವಸ್ಥೆಯನ್ನು ಮುಂದುವರಿಸಿರುವುದಕ್ಕಾಗಿ ಅಭಿನಂದಿಸಿದರು.
ಭೇಟಿಯ ವೇಳೆ ಜರ್ಮನ್ ರಾಯಭಾರ ಕಚೇರಿ ನವದೆಹಲಿಯ ಗೊಟ್‌ಫ್ರೈಡ್ ವಾನ್ ಗೆಮಿಂಗನ್, ಮಿಸ್ ಪಾಮೇಲಾ ಬೈಜಲ್, ಜೋಹಾನ್ಸ್ ಶ್ನೈಡರ್, ಮಿಸ್. ಶೀನಂ ಪುರಿ, ಮಿಸ್ ಜಾಸ್ಮಿನ್ ಕೌರ್ ಹಾಹಾಗೂ ಜಿಐಝಡ್ ದೇಶ ನಿರ್ದೇಶಕಿ ಮಿಸ್ ಜುಲಿ ರೆವಿಯರ್ ಉಪಸ್ಥಿತರಿದ್ದರು.








