ಮಂಡ್ಯ : ಮದ್ದೂರು ನಗರದ ರೇಷ್ಮೆ ಇಲಾಖೆ ಜಾಗದಲ್ಲಿ ನೂತನವಾಗಿ ತಾಲೂಕು ನ್ಯಾಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
ನೂತನ ನ್ಯಾಯಾಲಯಗಳ ಸಂಕೀರ್ಣದ ನಿರ್ಮಾಣದ ಸ್ಥಳವನ್ನು ಜಿಲ್ಲಾ ಸೆಷನ್ ನ್ಯಾಯಾಧೀಶ ಡಿ.ಜೆ.ಸುಬ್ರಮಣ್ಯ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಬಿ.ಮೋಹನ್ ಕುಮಾರ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಸಿ.ನಳಿನಿ ಹಾಗೂ ಇನ್ನಿತರ ನ್ಯಾಯಾಧೀಶರುಗಳ ಜೊತೆಗೆ ಆಗಮಿಸಿ ಪರಿಶೀಲಿಸಿದರು.
ಮದ್ದೂರು ತಾಲೂಕು ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ನಿರ್ಮಾಣ ಮಾಡಲು ರೇಷ್ಮೆ ಇಲಾಖೆಯ ಜಾಗದ ಸರ್ವೆ ನಂ 800/1, 800/3, 801 / 1 ರಲ್ಲಿ 4.35 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಇದರಲ್ಲಿ ನ್ಯಾಯಾಲಯದ ಸಂಕೀರ್ಣ, ನ್ಯಾಯಾಧೀಶರ ವಸತಿ ಗೃಹಗಳು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಅವರು ವಿವರಿಸಿದರು.
ಈಗಾಗಲೇ ನ್ಯಾಯಾಲಯದ ನಿರ್ಮಾಣದ ನೀಲನಕ್ಷೆ ಸಿದ್ದವಾಗಿದ್ದು, ಸರ್ಕಾರಕ್ಕೆ 21 ಕೋಟಿ ರೂಗಳ ಅಂದಾಜು ಮೊತ್ತದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸುನೀಲ್ ದತ್ ಯಾದವ್ ಅವರಿಗೆ ಡಾ.ಕುಮಾರ್ ಸಂಪೂರ್ಣ ಮಾಹಿತಿ ನೀಡಿದರು.
ಬಳಿಕ, ಮದ್ದೂರು ನಗರದ ನ್ಯಾಯಾಲಯದ ಸಂಕೀರ್ಣಕ್ಕೆ ತೆರಳಿ ಪರಿಶೀಲನೆ ನಡೆಸಿದ ನ್ಯಾಯಮೂರ್ತಿಗಳು ನಂತರ ವಕೀಲರ ಸಂಘದ ಪದಾಧಿಕಾರಿಗಳ ಜೊತೆಗೆ ಉಭಯ ಕುಶಲೋಪರಿ ನಡೆಸಿದ ಬಳಿಕ ಮಂಡ್ಯ ನಗರದಲ್ಲಿಯೂ ನ್ಯಾಯಾಲಯದ ಸಂಕೀರ್ಣದ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮದ್ದೂರು ನಗರದ ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ಮಾತನಾಡಿ, ನ್ಯಾಯಾಲಯದ ಸಂಕೀರ್ಣ ನಿರ್ಮಾಣ ಸಂಬಂಧ ಹೈಕೋರ್ಟ್ ನಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನು ಎರಡು ಮೂರು ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪ್ರಾರಂಭ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಈಗಿರುವ ನ್ಯಾಯಾಲಯದ ಸಂಕೀರ್ಣ ಸಾಕಷ್ಟು ಕಿರಿದಾಗಿದ್ದು, ನಿರೀಕ್ಷೆಗೂ ಮೀರಿ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲ. ಇದರಿಂದ ನ್ಯಾಯಾಧೀಶರು ಹಾಗೂ ಸಾರ್ವಜನಿಕರಿಗೆ ತುಂಬ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ನಗರದ ರೇಷ್ಮೆ ಇಲಾಖೆ ಜಾಗದಲ್ಲಿ 4 ಎಕರೆಯನ್ನು ಸರ್ಕಾರ ಮಂಜೂರು ಮಾಡಿತ್ತು. ಹೀಗಾಗಿ ಸ್ಥಳಕ್ಕೆ ಶನಿವಾರ ನ್ಯಾಯಾಧೀಶರ ತಂಡ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಿತು ಎಂದು ಹೇಳಿದರು.
ಇದೇ ವೇಳೆ ನ್ಯಾಯಾಧೀಶರಾದ ಪಾರ್ವತಿ, ಕೆ.ಗೋಪಾಲಕೃಷ್ಣ, ಸರ್ಕಾರಿ ಅಭಿಯೋಜಕ ಪ್ರೀತಂ ಡೇವಿಡ್, ಕಪನಿ ನಂಜೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಿಪಿಐಗಳಾದ ನವೀನ್, ನಾರಾಯಿಣಿ, ಪಿಡಬ್ಲ್ಯೂಡಿ ಎಇಇ ದೇವಾನಂದ್, ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಸುಮಂತ್, ಖಜಾಂಚಿ ಪ್ರಸನ್ನ ಹಾಗೂ ಪದಾಧಿಕಾರಿಗಳು, ವಕೀಲರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








