ಬೆಂಗಳೂರು : ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತ: ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರ ದಾಖಲಿಸಲು “ಮುಂಗಾರು ರೈತರ ಬೆಳೆ ಸಮೀಕ್ಷೆ 2024” ಆಪ್ ಬಳಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ.
ಜಿಲ್ಲೆಯ ಬಳ್ಳಾರಿ ಮತ್ತು ಕುರುಗೋಡು ತಾಲ್ಲೂಕಿನ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು “ಮುಂಗಾರು ರೈತರ ಬೆಳೆ ಸಮೀಕ್ಷೆ 2024” ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇ-ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದೆ.
ರೈತರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಬಳಸಲು ಈ ರೀತಿ ಅನುಸರಿಸಿ: ಗೂಗಲ್ ಪ್ಲೇ-ಸ್ಟೋರ್‍ನಲ್ಲಿ “ಮುಂಗಾರು ರೈತರ ಬೆಳೆ ಸಮೀಕ್ಷೆ 2024” ಎಂದು ಹುಡುಕಿ ಡೌನ್‍ಲೋಡ್ ಮಾಡಿಕೊಂಡು ಆಧಾರ್ ವಿವರ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ ಸಕ್ರಿಯಗೊಳಿಸಲು ಓಟಿಪಿ ನಮೂದಿಸಬೇಕು. ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.
ನಂತರ ತಮ್ಮ ಜಮೀನಿನ ಸರ್ವೆ ನಂಬರ್‍ಗಳನ್ನು ಸೇರಿಸಿಕೊಳ್ಳಬೇಕು. ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬೇಕು. ಈ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಈಗಾಗಲೇ ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ (ಕೊಟ್ಟಿಗೆ, ಕೃಷಿ ಹೊಂಡ, ಮನೆ ಇತರೆ) ಬಳಕೆಯಾದ ಪ್ರದೇಶದ ವಿವರ ಸಹ ದಾಖಲಿಸಬೇಕಾಗಿರುತ್ತದೆ.
ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ ಎರಡು ಛಾಯಚಿತ್ರಗಳನ್ನು ಸೆರೆಹಿಡಿದು ಅಪ್ಲೋಡ್ ಮಾಡಬೇಕಾಗುತ್ತದೆ. ಅಪ್‍ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು (ಮೇಲ್ವಿಚಾರಕರು) ಪರಿಶೀಲಿಸಿ ರೈತರು ದಾಖಲಿಸಿದ ಬೆಳೆ ವಿವರಕ್ಕೂ, ಛಾಯಚಿತ್ರಕ್ಕೂ ತಾಳೆಹೊಂದಿದಲ್ಲಿ ವಿವರವನ್ನು ಅನುಮೋದಿಸುತ್ತಾರೆ.
ಒಂದು ವೇಳೆ, ರೈತರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಹಾಯ ಮಾಡುವುದಾದರೆ ಅವರ ಸರ್ವೆ ನಂಬರ್‍ಗಳನ್ನು ಸಹ ತಮ್ಮ ಮೊಬೈಲ್ ಆಪ್‍ನಲ್ಲಿ ಸೇರಿಸಿಕೊಂಡು ಅವರ ಜಮೀನಿನ ವಿವರ ದಾಖಲಿಸಲೂ ಸಹ ಮೊಬೈಲ್ ಆಪ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಳೆ ಸಮೀಕ್ಷೆ ಮಾಹಿತಿಯನ್ನು ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್ ಅಡಿಯಲ್ಲಿ ಪ್ರವಾಹ ಮತ್ತು ಬರಗಾಲ ಸಂದರ್ಭದಲ್ಲಿ ನೀಡುವ ನಷ್ಟ ಪರಿಹಾರ ವಿತರಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು, ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಹಾಗೂ ಮುಂತಾದ ಸರ್ಕಾರದ ಯೋಜನೆಗಳಿಗೆ ಬಳಸಲಾಗುತ್ತದೆ.
ರೈತರು ಸದರಿ ಅವಕಾಶ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ತಾವೇ ಸರ್ಕಾರಕ್ಕೆ ನಿಗಧಿತ ಸಮಯದೊಳಗೆ ವರದಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕಂದಾಯ, ಕೃಷಿ, ತೋಟಗಾರಿಕೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.