ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿವಿಧ ಕಾರ್ಮಿಕ ಸಂಘಟನೆಗಳೊಂದಿಗೆ ನಡೆಸಿದ ಸಭೆಯ ಮುಖ್ಯಾಂಶಗಳು:
• ಸಾರಿಗೆ ನಿಗಮದ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಕೆಲವು ಸುತ್ತಿನ ಸಭೆ ನಡೆಸಲಾಗಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ. ನಾಳೆ ಕರೆದಿರುವ ಚಳವಳಿಯನ್ನು ವಾಪಾಸು ಪಡೆಯುವಂತೆ ಮುಖ್ಯಮಂತ್ರಿ ಅವರು ಮನವಿ ಮಾಡಿದರು.
• 2016ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆ ಮಾಡಿದ್ದೆ. ಆಗ ಶೇ. 12.5 ಹೆಚ್ಚಳ ಮಾಡಲಾಗಿತ್ತು. ಬಳಿಕ 2020 ರಲ್ಲಿ ಕೋವಿಡ್ ಕಾರಣಕ್ಕೆ ಅಂದಿನ ಸರ್ಕಾರ ವೇತನ ಪರಿಷ್ಕರಣೆ ಮಾಡಿಲ್ಲ. ದಿನಾಂಕ 01-03-23 ರಲ್ಲಿ ಹಿಂದಿನ ಸರ್ಕಾರ ಇದ್ದಾಗ ವೇತನ ಪರಿಷ್ಕರಣೆ ಒಪ್ಪಂದವಾಗಿತ್ತು. ಆಗ ಮೂಲವೇತನ 15 ಶೇಕಡಾ ಪರಿಷ್ಕರಣೆ ಮಾಡಲು ತೀರ್ಮಾನವಾಗಿತ್ತು. ಆಗ ನೀವು ಅದನ್ನು ಒಪ್ಪಿಕೊಂಡಿದ್ದೀರಿ.
• ವೇತನ ಪರಿಷ್ಕರಣೆ ಕುರಿತಾಗಿ ಶ್ರೀನಿವಾಸ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ದಿನಾಂಕ 01-1-22 ರಿಂದ 28-2-23ರವರೆಗೆ ಬಾಕಿ ವೇತನ ಕೊಡಬಹುದು ಎಂದು ಶಿಫಾರಸು ಮಾಡಿತ್ತು. ಸಾರಿಗೆ ಸಂಘಟನೆಗಳ ಪ್ರತಿನಿಧಿಗಳು ಸಹ ಸಮಿತಿ ಮುಂದೆ ಹಾಜರಾಗಿ ಅಹವಾಲು ಸಲ್ಲಿಸಿದ್ದರು. ಶ್ರೀನಿವಾಸ ಸಮಿತಿಯ ಶಿಫಾರಸ್ಸು ಸರ್ಕಾರ ಒಪ್ಪಿಕೊಂಡಿದೆ. ನೀವು ಸಹ ಸದರಿ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕು.
• ಸಮಿತಿಯ ಶಿಫಾರಸು ಆಧಾರದಲ್ಲಿ ಈ ಕುರಿತು ದಿನಾಂಕ 01-03-23 ರಿಂದ ಜಾರಿಗೆ ಬರುವಂತೆ ಅಂದಿನ ಸರ್ಕಾರ ಅಧಿಸೂಚನೆ ಸಹ ಹೊರಡಿಸಿತ್ತು. ಆದರೆ ಈಗ 38 ತಿಂಗಳ ಬಾಕಿ ವೇತನ ಪಾವತಿಗೆ ಬೇಡಿಕೆ ಇರಿಸಿರುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದರು.
• ನಾವು ಅಧಿಕಾರಕ್ಕೆ ಬಂದಾಗ ಎಲ್ಲಾ ನಿಗಮಗಳಿಗೆ ಒಟ್ಟಾರೆ 4ಸಾವಿರ ಕೋಟಿ ಸಾಲ ಇತ್ತು. 2018ರಲ್ಲಿ ಕೇವಲ ರೂ. 14 ಕೋಟಿ ಮಾತ್ರ ಬಾಕಿಯಿತ್ತು. ಪ್ರಸ್ತುತ ಯಾವ ಸಾರಿಗೆ ನಿಗಮ ಸಹ ಲಾಭದಲ್ಲಿಲ್ಲ. ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲಾ ನಿಗಮದವರು ಸಹಕರಿಸಬೇಕು.
• ಸಾರಿಗೆ ನೌಕರರ ಸಂಘದ ಚುನಾವಣೆ ನಡೆಸುವ ಕುರಿತು ಪರಿಶೀಲನೆ ನಡೆಸಲಾಗುವುದು. ಎಲ್ಲಾ ಅಹವಾಲುಗಳನ್ನು ಮಾತುಕತೆ ಮೂಲಕ ಬಗೆಹರಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
• ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೆಎಸ್ಆರ್ಟಿಸಿ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್, ಎನ್ಡಬ್ಲುಕೆಎಸ್ಆರ್ಟಿಸಿ ಅಧ್ಯಕ್ಷ ರಾಜುಕಾಗೆ, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಅನುತ್ತಮ ಗುಣಮಟ್ಟದ ಔಷಧಿ ಮಾರುಕಟ್ಟೆಯಿಂದ 2 ದಿನಗಳಲ್ಲಿ ವಾಪಾಸ್: ಸಚಿವ ದಿನೇಶ್ ಗುಂಡೂರಾವ್
BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ‘ದರೋಡೆಕೋರರ ಗ್ಯಾಂಗ್’ನಿಂದ ಯುವಕನ ಕೊಲೆ