ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಗ್ರೇಟರ್ ಬೆಂಗಳೂರನ್ನು 5 ಪಾಲಿಕೆಯಾಗಿ ವಿಭಾಗ ಮಾಡುವುದು, ಬೆಂಗಳೂರು ಕಾಲ್ತುಳಿತ ದುರಂತ ಸಂಬಂಧ ಆರ್ ಸಿ ಬಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದು ಸೇರಿದಂತೆ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು. ಆ ಎಲ್ಲಾ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ನಂತ್ರ ಸುದ್ಧಿಗೋಷ್ಠಿಯಲ್ಲಿ ಸಚಿವ ಹೆಚ್.ಕೆ ಪಾಟೀಲ್ ಅವರು ಸಂಪುಟದ ನಿರ್ಧಾರಗಳನ್ನು ಮಾಧ್ಯಮಗಳಿಗೆ ತಿಳಿಸಿದರು. ರಾಯಚೂರು ತಾಲೂಕಿನಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪನೆಗೆ ೨೪.೫೦ ಕೋಟಿಯಲ್ಲಿ ಅಭಿವೃದ್ಧಿ ಪಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದರು.
ಜಿಲ್ಲಾ ಖನಿಜ ಪ್ರತಿಷ್ಟಾನ ತಿದ್ದುಪಡಿ ನಿಯಮಗಳು- 2025 ವಿವರವಾಗಿ ಚರ್ಚೆ ಮಾಡಲಾಗಿದೆ. ಕೆಲವು ತಾಂತ್ರಿಕ ವಿವರಗಳ ಅವಶ್ಯಕತೆ ಇರುವುದರಿಂದ ಮುಂದೂಡಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಎನ್.ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಇಡೀ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಆ ಸ್ಥಳಗಳ ಅಧ್ಯಯನ ಮಾಡಲು ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ. 3 ಸ್ಥಳಗಳ ಪರಿಶೀಲನೆಗೆ ಎನ್ಟಿಪಿಸಿ ಸಲಹೆ ಮಾಡಲಾಗಿದೆ. ಆದರೆ ಇಡೀ ಕರ್ನಾಟಕದಲ್ಲಿ ಒಟ್ಟಾರೆ ಸ್ಥಳ ಪರಿಶೀಲನೆ ಅಧ್ಯಯನ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. NTPC ಸಲಹೆ ನೀಡಿದ್ದ ಸ್ಥಳಗಳು ಕೊಪ್ಪಳ, ರಾಯಚೂರು, ವಿಜಯಪುರ, ಇದನ್ನು ಒಪ್ಪದೇ ತನ್ನದೇ ಸ್ಥಳಗಳ ಪರಿಶೀಲನೆಗೆ ರಾಜ್ಯ ಕ್ಯಾಬಿನೆಟ್ ನಿರ್ಧಾರ ಕೈಗೊಂಡಿದೆ ಎಂದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಐದು ಪಾಲಿಕೆ ಮಾಡೋಕೆ ತೀರ್ಮಾನ ಮಾಡಲಾಗಿದೆ. ಆಯುಷ್ ಇಲಾಖೆಯ ಆಯುರ್ವೇದ, ಸಿದ್ಧ ಮತ್ತು ಯುನಾನಿ (ASU) ಔಷಧಗಳ ಅಮಲುಜಾರಿ ವಿಭಾಗ ಹಾಗೂ ಪರೀಕ್ಷಾ ಪ್ರಯೋಗಾಲಯವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಇಲಾಖೆಯ ಜೊತೆಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ 2021ನೇ ಸಾಲಿನ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ, “ಹಿಂದುಳಿದ ವರ್ಗಗಳಿಗೆ” ಮೀಸಲಿರಿಸಲಾಗಿದ್ದು ಭರ್ತಿ ಆಗದೆ ಖಾಲಿ ಉಳಿದಿರುವ “ಉರ್ದು ಭಾಷಾ ಸಹಾಯಕ ಪ್ರಾಧ್ಯಾಪಕರ” ಹುದ್ದೆಗಳನ್ನು “ಸಾಮಾನ್ಯ ಅಭ್ಯರ್ಥಿ”ಗಳಿಂದ ಒಂದು ಬಾರಿಯ ಕ್ರಮವಾಗಿ ಭರ್ತಿ ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.
ನ್ಯಾಯ ವಿಜ್ಞಾನ ಪ್ರಯೋಗಾಲಯಗಳ 32 ನಿರ್ದೇಶನಾಲಯಕ್ಕೆ ಅವಶ್ಯವಿರುವ ಸಂಖ್ಯೆಯ ಮೊಬೈಲ್ ಪೋರೆನ್ಸಿಕ್ ವಾಹನಗಳನ್ನು (Fabrication + SOC ಗಳೊಂದಿಗೆ) 2.20.40 ಮೊತ್ತದಲ್ಲಿ ಖರೀದಿಸುವ ಬಗ್ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ, 2022”ನ್ನು ಹಿಂಪಡೆದ ಸರ್ಕಾರ ನಿರ್ಧರಿಸಿದೆ. Food Park ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿ 28.3 ಎಕರೆ ಪ್ರದೇಶದಲ್ಲಿ ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಳ ಬಹು ಉತ್ಪನ್ನಗಳ ನಿರ್ವಹಣೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣಾ ಘಟಕ ಸ್ಥಾಪನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (PPP) ಮಾದರಿಯಡಿ 23.5 ಕೋಟಿಗಳ ಮೊತ್ತದಲ್ಲಿ ‘Common Infrastructure for Industrial Parks (Food Park)’ ಸ್ಥಾಪಿಸಲು ಅನುಮೋದನೆ ನೀಡಿದೆ ಎಂದರು.
ಬೆಂಗಳೂರು ನಗರದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಜಿಲ್ಲೆಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಒಟ್ಟು 126 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಯ 5 ವರ್ಷಗಳ ಪೋಷಣೆ ಮತ್ತು ನಿರ್ವಹಣೆ (O&M) ಕಾಮಗಾರಿಯನ್ನು ರೂ.128.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ವಸತಿ ಶಾಲೆ/ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಒಟ್ಟು 264.00 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಕಿತ್ತೂರು ಕೋಟೆ ಆವರಣದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯನ್ನು ರೂ.30 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ತಾಲ್ಲೂಕು, ಮಂಡಿಕಲ್ಲು ಹೋಬಳಿ, ಯರಮಾರೇನಹಳ್ಳಿ ಗ್ರಾಮದಲ್ಲಿ 5-23 ಎಕರೆ/ಗುಂಟೆ ಸರ್ಕಾರಿ ಬೀಳು ಜಮೀನನ್ನು ಅಕ್ಷಯ ಪಾತ್ರೆ ಅಡುಗೆ ಮನೆ ಮತ್ತು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಇಸ್ಕಾನ್ ಬೆಂಗಳೂರು ಇವರಿಗೆ ಮಂಜೂರು ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ವೀರಭದ್ರನ ಪಾಳ್ಯ ಗ್ರಾಮದ ಸ.ನಂ. 66ರಲ್ಲಿ 15 ಗುಂಟೆ ಖರಾಬು ಜಮೀನನ್ನು ಕಾಂಗ್ರೆಸ್ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಇವರಿಗೆ ಗುತ್ತಿಗೆ ನೀಡಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಮ್ಮಿಂಜೆ ಗ್ರಾಮದ ಸ.ನಂ. 138/4ರಲ್ಲಿ 3 ಎಕರೆ ಗೋಮಾಳ ಜಮೀನನ್ನು ಬಂಟರ ಸಂಘ, ಪುತ್ತೂರು ತಾಲ್ಲೂಕು ಇವರಿಗೆ ಮಂಜೂರು ಮಾಡಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವತಿಯಿಂದ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಲಾಗಿರುವ ಸಮರ್ಪಕವಾಗಿ ಕಾರ್ಯನಿರ್ವಹಿಸದ 1,530 ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರಗಳ ಉಪಕರಣಗಳನ್ನು ರೂ.19.89 ಕೋಟಿಗಳ ಅಂದಾಜು ಮೊತ್ತದಲ್ಲಿ ಬದಲಿಸಿ ಹೊಸದಾಗಿ ಸ್ಥಾಪಿಸುವ ಬಗ್ಗೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಪೀಠವನ್ನು ರೂ.10 ಕೋಟಿಗಳ ಅಂದಾಜು ಮೊತ್ತದಲ್ಲಿ ಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಉತ್ತರ ಕರ್ನಾಟಕ ಪ್ರವಾಸಿ ವೃತ್ತ ಪಿಪಿಪಿ ಮಾದರಿಯಲ್ಲಿ 166.22 ಕೋಟಿ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಬದಾಮಿ ಐಹೊಳೆ ಹಂಪಿ ಪಟ್ಟದಕಲ್ಲು ಬಿಜಾಪುರ ಒಳಗೊಂಡ ಉತ್ತರ ಕರ್ನಾಟಕ ಪ್ರವಾಸಿ ವೃತ್ತ ಎಂದರು.
ಗ್ರೇಟರ್ ಬೆಂಗಳೂರು ವ್ಯಾಪ್ತಿ ಯಲ್ಲಿನ ಪ್ರದೇಶದಲ್ಲಿ ಎ ಖಾತಾ- ಬಿ ಖಾತಾ ನೀಡುವ ಬಗ್ಗೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ಕಾನೂನು ಬಾಹಿರ ಕಟ್ಟಡ ನಿರ್ಮಾಣ, ಅನಧಿಕೃತ ಬಡಾವಣೆ ನಿರ್ಮಾಣ ಸ್ಥಾಪನೆ ತಡೆಯಲು ಎ ಖಾತಾ ಮತ್ತು ಬಿ ಖಾತಾ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆ ನಿಯಂತ್ರಣ ತಿದ್ದುಪಡಿ ವಿಧೇಯಕ 2025 ಅನುಮೋದನೆ ನೀಡಲಾಗಿದೆ. ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ವಿಧೇಯಕ, (ತಿದ್ದುಪಡಿ) 2025″ ಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದರು.
ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿನ ಬೋಧಕ ಮತ್ತು ಶೈಕ್ಷಣಿಕ ಸಿಬ್ಬಂದಿಗಳ ನೇಮಕಾತಿ ಮತ್ತು ಮುಂಬಡ್ತಿಯ ಕನಿಷ್ಠ ಅರ್ಹತೆ ಹಾಗೂ ‘ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸುವ ಕ್ರಮಗಳು) ವಿನಿಯಮಗಳು, 2025″ನ್ನು ಹಿಂಪಡೆಯುವ ವಿಧಾನಮಂಡಲದ ಅಧಿಕೃತ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಯು.ಜಿ.ಸಿ.ಗೆ ತಿಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದರು.
ಅಂತರ್ಜಲ ಬಳಕೆಗೆ ನಿರಾಕ್ಷೇಪಣಾ ನೀಡುವ ಸಂಬಂಧ ಕೇಂದ್ರೀಯ ಅಂತರ್ಜಲ ಪ್ರಾಧಿಕಾರ ಇವರು ಹೊರಡಿಸಿರುವ ಮಾರ್ಗಸೂಚಿಯನ್ನು ಸೂಕ್ತ ಮಾರ್ಪಾಡುಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ ಎಂದರು.
BDA ಭೂ ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳನ್ನು ನಿಯಮಬಾಹಿರವಾಗಿ ಭೂಸ್ವಾಧೀನ ಕಾಯ್ದೆ 1984ರ ಕಲಂ 48 (1)ರಡಿಯಲ್ಲಿ ಭೂಸ್ವಾಧೀನದಿಂದ ಕೈ ಬಿಟ್ಟು ಹೊರಡಿಸಲಾದ ಅಧಿಸೂಚನೆಗಳನ್ನು (29 ಪ್ರಕರಣಗಳು) ಹಿಂಪಡೆಯಲು ಕ್ಯಾಬಿನೆಟ್ ಅನುಮೋದಿಸಿದೆ ಎಂದರು.
ಕನಕಪುರದ ಮಹಾತ್ಮ ಗಾಂಧಿ ರಸ್ತೆ ಅಗಲೀಕರಣದಿಂದ ಬಾಧಿತರಾದವರಿಗೆ ಕನಕಪುರ ಗ್ರಾಮದ ಸ.ನಂ. 807 (ಹಳೆ ನಂ.505) ರಲ್ಲಿನ 9 ಎಕರೆ 30 ಗುಂಟೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಿರುವ ಬಡಾವಣೆಯನ್ನು ಸ್ಥಿರೀಕರಿಸಲು ಕ್ಯಾಬಿನೆಟ್ ಅನುಮೋದಿಸಲಾಗಿದೆ ಎಂದರು.
ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಹುಲುಗುಂದ ಗ್ರಾಮದ ಬಳಿ ಕಮಾನು ಸೇತುವೆ (Arch Bridge) 36.50 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ಹಾರಂಗಿ ಜಲಾಶಯದ ಎಡದಂಡೆ ಕಾಲುವೆಯ 1 ರಿಂದ 18ರವರೆಗಿನ ವಿತರಣಾ ನಾಲೆಗಳನ್ನು ಅಭಿವೃದ್ಧಿಪಡಿಸುವ ರೂ.49.90 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಹೇಮಾವತಿ ಯೋಜನೆಯಡಿಯಲ್ಲಿನ ನಾಗಮಂಗಲ ಶಾಖಾ ನಾಲೆಯ ಸರಪಳಿ 78.46 ಕಿಮೀ ಅಭಿವೃದ್ಧಿಪಡಿಸುವ ರೂ.560.00 ಕೋಟಿಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.
ಕುನ್ಹಾ ವರದಿ ಕ್ಯಾಬಿನೆಟ್ ಗೆ ಸಲ್ಲಿಕೆಯಾಗಿದೆ. ಅದರ ಬಗ್ಗೆ ಅಧ್ಯಯನ ಮಾಡಿ ಚರ್ಚಿಸಲು ಮುಂದಿನ ಕ್ಯಾಬಿನೆಟ್ ಗೆ ತರಲು ನಿರ್ಧಾರ ಕೈಗೊಳ್ಳಲಾಗಿದೆ. ಶಿಫಾರಸುಗಳನ್ನು ಅನುಷ್ಟಾನಕ್ಕೆ ತರುವ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಜುಲೈ.19ರಂದು ಆಗಮ ಘಟಿಕೋತ್ಸವ: 2103 ಅರ್ಚಕರಿಗೆ ಸಿಎಂ ಪ್ರಮಾಣಪತ್ರ ವಿತರಣೆ- ಸಚಿವ ರಾಮಲಿಂಗಾರೆಡ್ಡಿ
LIFE STYLE: ನೀವು ಗರ್ಭಿಣಿಯಾಗುತ್ತಿಲ್ಲವೇ? ಹಾಗಾದ್ರೇ ಇವು ಕೂಡ ಕಾರಣ ಇರಬಹುದು..!