ಕಲಬುರಗಿ : ಈ ವರ್ಷದ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಕೆಲವು ತಾಲೂಕುಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಪಂಚಾಯತ್ ಮಟ್ಟದಿಂದಲೂ ಎಲ್ಲಾ ಅಧಿಕಾರಿಗಳೂ ಮುಂಜಾಗ್ರತಾ ಕ್ರಮವಹಿಸಬೇಕು. ಯಾರ ಮೇಲೂ ಬೊಟ್ಟು ತೋರಿಸದೆ ವ್ಯಯಕ್ತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಕಲಬುರಗಿ ಸೇರಿದಂತೆ ಈ ಕಂದಾಯ ವಿಭಾಗದ ಹಲವು ತಾಲೂಕುಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ನದಿಪಾತ್ರದ ಕೆಲ ಗ್ರಾಮಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದು, ಅಧಿಕಾರಿಗಳು ಅವಘಡ ಸಂಭವಿಸುವ ಮುನ್ನ ಮುಜಾಗ್ರತೆ ವಹಿಸಬೇಕು. ಮಳೆ ಬೀಳುವ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಎಲ್ಲಾ ಜೀವಗಳನ್ನೂ ಉಳಿಸುವ ನಿಟ್ಟಿನಲ್ಲಿ ಶ್ರಮವಹಿಸಬೇಕು” ಎಂದರು.
ಬೀದರ್ ಹಾಗೂ ವಿಜಯನಗರ ಜಿಲ್ಲೆಗಳ ಕೆಲ ಪ್ರದೇಶ ಮಳೆಗಾಲದಲ್ಲಿ ಮಾತ್ರ ಹಳ್ಳಗಳಲ್ಲಿ ದಿಢೀರ್ ಪ್ರವಾಹ ಕಂಡು ಬರುವ ಸಾಧ್ಯತೆ ಇದೆ. ಇಂತಹ ಪ್ರವಾಹಗಳೂ ದೊಡ್ಡ ಮಟ್ಟದ ಅನಾಹುತಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಪಂಚಾಯತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಪ್ರವಾಹ ಸಾಧ್ಯತೆಗಳಿರುವ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಪ್ರತಿ ತಾಲೂಕಿನ ಆಡಳಿತದ ಜವಾಬ್ದಾರಿ ತಹಶೀಲ್ದಾರ್ ಅವರದ್ದೇ ಆಗಿದ್ದು, ತಹಶೀಲ್ದಾರ್‌ಗಳು ಪ್ರವಾಹ ಸಂದರ್ಭದಲ್ಲಿ ಜವಾಬ್ದಾರಿ ಅರಿತು ಮುಂದು ನಿಂತು ಕೆಲಸ ಮಾಡಬೇಕು, ಅದನ್ನು ಬಿಟ್ಟು ಜವಾಬ್ದಾರಿಯಿಂದು ನುಣುಚಿಕೊಳ್ಳುವ ಅಥವಾ ಮತ್ತೊಬ್ಬರ ಮೇಲೆ ಬೆರಳು ತೋರಿಸುವ ಕೆಲಸ ಮಾಡಬಾರದು” ಎಂದು ಕಿವಿಮಾತು ಹೇಳಿದರು.
ಅಲ್ಲದೆ, “ ಜನರಿಗೆ ಮೊಬೈಲ್ ಸಂದೇಶದ ಮೂಲಕ ಮಳೆ ಮುನ್ಸೂಚನೆ ನೀಡಿ ಎಚ್ಚರಿಸುವ ಕೆಲಸವಾಗಬೇಕು. ಇದೇ ಸಂದರ್ಭದಲ್ಲಿ ಭೀಮಾ ನದಿಪಾತ್ರದ ಪ್ರದೇಶದಲ್ಲೂ ಹೆಚ್ಚು ಗಮನ ಇರಲಿ. ಅಲ್ಲದೆ, ಬರಗಾಲ ಸಂದರ್ಭದಲ್ಲಿ ಗೋಶಾಲೆ-ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳಿಗೂ ಒಂದು ವಾರದೊಳಗಾಗಿ ಹಣ ಪಾವತಿಸಿ. ಯಾವುದನ್ನೂ ಬಾಕಿ ಉಳಿಸಿಕೊಳ್ಳಬೇಡಿ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪೂರ್ವ ಮಾನ್ಸೂನ್ ಬೆಳೆ ಸಮೀಕ್ಷೆಗೆ ಸೂಚನೆ:
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ, ಕಳೆದ ವರ್ಷಕ್ಕಿಂತ ಭಿತ್ತನೆಯೂ ಗಮನಾರ್ಹವಾಗಿ ಹೆಚ್ಚುತ್ತಿದೆ. ಹೀಗಾಗಿ ಪ್ರಸ್ತುತ ವರ್ಷ ಸರಿಯಾದ ಸಮಯಕ್ಕೆ ಪೂರ್ವ ಮಾನ್ಸೂನ್ ಬೆಳೆ ಸಮೀಕ್ಷೆ ನಡೆಯಬೇಕು. ಬೆಳೆ ಸಮೀಕ್ಷೆ ನಡೆದರೆ ಮಾತ್ರ ಅದರ ಆಧಾರದ ಮೇಲೆ ಪರಿಹಾರ ಅಥವಾ ಬೆಳೆ ವಿಮೆ ನೀಡುವುದು ಸಾಧ್ಯವಾಗುತ್ತದೆ. ಅಲ್ಲದೆ, ಸೂಕ್ತ ರೀತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿದರೆ ಪ್ರವಾಹ-ಬರ ಏನೇಬಂದರೂ ಅಧಿಕಾರಿಗಳಿಗೂ ಕೆಲಸದ ಒತ್ತಡವೂ ಇರುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಇದೇ ವೇಳೆ ರಾಜ್ಯದಲ್ಲಿ ಮುಂಗಾರು ಪೂರ್ವ 115 ಮಿ.ಮೀ ಮಳೆಯಾದರೆ ಜೂನ್ ಮಾಹೆಯಲ್ಲಿ ಒಟ್ಟಾರೆ 148 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ 95 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗ್ಗಿಂತ 40ಮಿ.ಮೀ ಹೆಚ್ಚು. ಅದೇ ರೀತಿ ಉತ್ತರ ಒಳನಾಡಿನಲ್ಲಿ 78 ಮಿ.ಮೀ. ಮಳೆ ವಾಡಿಕೆಯಾದರೆ, ಮಳೆ ಬಿದ್ದಿದ್ದು 134 ಮಿ.ಮೀ. ಇನ್ನು ಮಳೆನಾಡು, ಕರಾವಳಿಯಲ್ಲಿ ವಾಡಿಕೆಯಂತೆ ಮಳೆ ಬೀಳದಿದ್ದರೂ., ಇತ್ತೀಚಿನ 2-3 ದಿನದಲ್ಲಿ ಅಲ್ಲಿ ಮಳೆಯಾಗುತ್ತಿರುವುದರಿಂದ ಅಗತ್ಯಕ್ಕನುಗುಣವಾಗಿ ಅಲ್ಲಿ ಮಳೆಯಾಗಿದೆ ಎಂದು ಸಚಿವರು ಸಭೆಗೆ ಮಾಹಿತಿ ನೀಡಿದರು.
ಆರ್‌ಟಿಸಿಗೆ-ಆಧಾರ್ ಜೋಡಿಸಿ ಭೂ ವಂಚನೆ ತಪ್ಪಿಸಿ
ಕಲಬುರಗಿ ವಿಭಾಗದಲ್ಲಿ ಆರ್‌ಟಿಸಿಗೆ-ಆಧಾರ್ ಜೋಡಿಸಿ ಭೂ ವಂಚನೆ ತಪ್ಪಿಸಿ ಅಲ್ಲದೆ, ಬರ-ನೆರೆ ಪರಿಹಾರ ರೈತರಿಗೆ ಶೀಘ್ರ ತಲುಪಲು ನೆರವಾಗಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರ್‌ಟಿಸಿಗೆ-ಆಧಾರ್ ಜೋಡಣೆ ಬಗ್ಗೆಯೂ ಗಮನ ಸೆಳೆದ ಸಚಿವರು, “ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ತಾಕೀತು ಮಾಡಿದರು.
ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು. ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್, ಇನ್ಪುಟ್ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಆಧಾರ್ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಏನು ಎಂಬ ಕುರಿತು ಕ್ಯಾಂಪೇನ್ ಮಾಡಿ, ಇದರಿಂದ ಒಳ್ಳೆಯ ಸರಳ ಆಡಳಿತ ನೀಡಬಹುದು, ಅಧಿಕಾರಿಗಳ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.
ಅಲ್ಲದೆ, ಆರ್‌ಟಿಸಿ-ಆಧಾರ್ ಲಿಂಕ್ ಮಾಡುವ ಮೂಲಕ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಎಷ್ಟು ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಾಸ್ತವದ ಅಂಕಿ ನೀಡಬಹುದು. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಶೇ.65 ರಿಂದ ಶೇ.70 ರಷ್ಟಿದೆ. ಈ ನಿಖರ ಸಂಖ್ಯೆಯನ್ನು ನೀಡುವ ಮೂಲಕ ಕೇಂದ್ರದಿಂದ ಹೆಚ್ಚಿನ ಬರ ಪರಿಹಾರ ಹಣ ಪಡೆಯಲು ಸಹಕಾರಿಯಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
18 ಲಕ್ಷ ರೈತರಿಗೆ 500 ಕೋಟಿ ರೂ. ಪರಿಹಾರ ವಿತರಣೆ
ಕಲಬುರಗಿ, ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ತುಂಬಾ ಕಂಗಾಲಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರೂ.ಗಳಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕಳೆದ ವರ್ಷ ಅತ್ಯಂತ ಭೀಕರ ಬರಗಾಲದಿಂದ ರೈತ ಸಮುದಾಯ ತತ್ತರಿಸಿತು. ಹೀಗಾಗಿ ರೈತ ಸಮುದಾಯದ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಬರಗಾಲ ಕಾರಣ ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ರೈತರಿಂದ ಅರ್ಜಿ ಕಾಯದೆ ಪರಿಹಾರ ನೀಡದ ಕಾರಣ ಸುಮಾರು 40 ಲಕ್ಷ ರೈತರಿಗೆ ರಾಜ್ಯ ಸರ್ಕಾರವೆ ಈವರೆಗೆ ಎಸ್.ಡಿ.ಆರ್.ಎಫ್. ನಿಧಿಯಡಿ 2,451 ಕೋಟಿ ರೂ. ಬರಗಾಲ ಪರಿಹಾರ ನೀಡಿದೆ. ಇಷ್ಟೊಂದು ಸಂಖ್ಯೆಯಲ್ಲಿ ಬರ ಪರಿಹಾರ ನೀಡಿರುವುದು ಐತಿಹಾಸಿಕ ಕ್ರಮ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್. ಹಣ ಬಿಡುಗಡೆಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಕಾರಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದ ಕಾರಣ ಕೇಂದ್ರ ಹಣ ಬಿಡುಗಡೆ ಮಾಡಿತು. ಅದು ಹಣ ಸಹ ರೈತರಿಗೆ ನೀಡಲಾಗಿದೆ. ಇನ್ನು ಬೆಳೆ ವಿಮೆನಡಿ 1,756 ಕೋಟಿ ರೂ. ಪರಿಹಾರ ರೈತರ ಖಾತೆಗೆ ಹಣ ನೀಡಲಾಗಿದೆ. ಒಟ್ಟಾರೆ ಬರಗಾಲ ಕಾರಣ ಎಸ್.ಡಿ.ಆರ್.ಎಫ್-ಎನ್.ಡಿ.ಆರ್.ಎಫ್ ಹಣ, ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ ಹೀಗೆ ಸುಮಾರು 6,000 ಕೋಟಿ ರೂ. ಪರಿಹಾರ ಅನ್ನದಾತರಿಗೆ ಡಿ.ಬಿ.ಟಿ. ಮೂಲಕ ನೀಡಲಾಗಿದೆ ಎಂದರು.
ಅತಿವೃಷ್ಟಿ ಹಿನ್ನೆಲೆ ಜನ-ಜಾನುವಾರ ಪ್ರಾಣ ಹಾನಿ ತಪ್ಪಿಸುವುದು ಮೊದಲ ಆದ್ಯತೆಯಾಗಲಿ
ಕಲಬುರಗಿ, ಪ್ರಸಕ್ತ ವರ್ಷ ಹೆಚ್ಚಿನ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರವಾಹದಿಂದ ಆಗಬಹುದಾದ ಜನ-ಜಾನುವಾರಗಳ ಹಾನಿ ತಪ್ಪಿಸುವುದು ನಮ್ಮೆಲ್ಲರಮೊದಲ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪ್ರವಾಹದಿಂದ ಹಾನಿಯಿಂದ ನಂತರ ಪರಿಹಾರ ನೀಡುವುದು ನಮ್ಮ ಕರ್ತವ್ಯ. ಆದರೆ ಅಷ್ಟೆ ನಮ್ಮ ಕೆಲಸದ ಸೀಮಿತವಲ್ಲ. ಬದಲಾಗಿ ಪ್ರವಾಹ ಮುನ್ನ ಜನರ ರಕ್ಷಣೆ ಮಾಡಿ ಪ್ರಾಣಿ, ಮಾನವ ಹಾನಿಯಾಗದಂತೆ ತಡೆಯುವುದು ಸರ್ಕಾರದ ಉದ್ದೇಶ. ಇದನ್ನರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಪ್ರವಾಹ ಬಂದ ನಂತರ ತಯ್ಯಾರಿ ಮಾಡುವುದು ಬೇಡ. ಮಳೆ ಮುನ್ಸೂಚನೆ ಮಾಹಿತಿ ನೀಡುವುದು ಬಹಳಷ್ಟು ಸುಧಾರಣೆಯಾಗಿದೆ. ಇದರ ಆಧಾರದ ಮೇಲೆ ಪ್ರವಾಹ ಭೀತಿ ಇರುವ ನದಿ, ಜಲಾಶಯ ಪಕ್ಕದಲ್ಲಿನ ಜನ ಮತ್ತು ಜಾನುವಾರು ಮುಂಚಿತವಾಗಿಯೇ ರಕ್ಷಣೆಗೆ ಮುಂದಾಗಬೇಕು. ಕಂದಾಯ, ಆರ್.ಡಿ.ಪಿ.ಆರ್, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಬೇಕು. ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಕಾಳಜಿ ಕೇಂದ್ರದಲ್ಲಿ ಜನರಿಗೆ ಸೂಕ್ತ ಉಪಚಾರ ಮಾಡಬೇಕು ಎಂದರು.
ತಾಲೂಕಿನ ತಹಶೀಲ್ದಾರರು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುಂದಾಳತ್ವ ವಹಿಸಬೇಕು. ಪೊಲೀಸ್, ಅಗ್ನಿಶಾಮಕ, ಅರ್.ಡಿ.ಪಿ.ಆರ್. ಹೀಗೆ ಎಲ್ಲ ಅಧಿಕಾರಿಗಳ ಸಹಾಯ ಪಡೆದು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕೆಂದು ತಹಶೀಲ್ದಾರರಿಗೆ ಸಚಿವರು ನಿರ್ದೇಶನ ನೀಡಿದರು.
ಭೀಮಾ ಭೀತಿ ಕಲಬುರಗಿ, ವಿಜಯಪುರ ಜಿಲ್ಲೆಗೆ ಹೆಚ್ಚು. ಮಹಾರಾಷ್ಟ್ರದ ಸರ್ಕಾರದೊಂದಿಗೆ ಕಲಬುರಗಿ ಜಿಲ್ಲಾಡಳಿತ ಸತತ ಸಂಪರ್ಕದಲ್ಲಿರಬೇಕು. ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಪ್ರವಾಹ ಭೀತಿ ಗ್ರಾಮಗಳಿಗೆ ಈಗಲೆ ಭೇಟಿ ನೀಡಿ ಪ್ರವಾಹ ಬಂದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಂದಾಜಿಸಿ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗದ ಡಿ.ಸಿ. ಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಇನ್ನು ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಕೈಗೊಳ್ಳುವ ತಾತ್ಕಾಲಿಕ ಪರಿಹಾರ ರೂಪದ ರಸ್ತೆ, ಅಂಗನವಾಡಿ, ಶಾಲೆ ಕಟ್ಟಡ ದುರಸ್ತಿ, ರಸ್ತೆ ಸಂಪರ್ಕ ಜೋಡಣೆ ಇದೆಲ್ಲ ಕಾಮಗಾರಿಗಳು ತಿಂಗಳೊಳಗೆ ಮುಗಿಸಬೇಕು. ಇದನ್ನು ವರ್ಷಗಟ್ಟಲೆ ಎಳೆದಾಡಿದರೆ ಅದಕ್ಕೆ ಅರ್ಥವಿಲ್ಲ ಎಂದು ಡಿ.ಸಿ.ಗಳಿಗೆ ಕಂದಾಯ ಸಚಿವರು ಖಡಕ್ ಸೂಚನೆ ನೀಡಿದರು.
ಕಂದಾಯ ಇಲಾಖೆ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ಜನರ ಬದುಕಿಗೆ ಹೊರೆಯಾಗಬಾರದು. ಹಲವಾರು ಕಂದಾಯ ಪ್ರಕರಣಗಳಲ್ಲಿ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.ಇವರನ್ನ ಸಮಸ್ಯೆಗಳಿಂದ ಹೊರತರಬೇಕಾದ ಕೆಲಸ ತಳ ಹಂತದ ಅಧಿಕಾರಿಗಳು ಮಾಡಬೇಕಿದೆ ಎಂದರು.
ಜಿಲ್ಲಾವಾರು ಪ್ರಗತಿ ಪರಿಶೀಲನೆ ವೇಳೆಯಲ್ಲಿ ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ ಜಿಲ್ಲೆಯಲ್ಲಿ 135 ಗ್ರಾಮ ಪ್ರವಾಹಕ್ಕೆ ತುತ್ತಾಗುವ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿದೆ. ಅಲ್ಲದೆ ತರಬೇತಿ ಸಹ ನೀಡಲಾಗಿದೆ. 2020ರಲ್ಲಿ ಉಜನಿ ಜಲಾಶಯದಿಂದ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟ ಕಾರಣ 11 ಹಳ್ಳಿಗಳು ತುಂಬಾ ಸಮಸ್ಯೆಯಾಗಿದ್ದವು. ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮ ಕೈಗೊಂಡಿದ್ದೇವೆ. 65 ಕಡೆ ಕಾಳಜಿ ಕೇಂದ್ರ, 40 ಕಡೆ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಗೆ ವಿವರಿಸಿದರು.
ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ. ಮಾತನಾಡಿ ತಮ್ಮ ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹಕ್ಕೆ 80 ಹಳ್ಳಿ ಸಂಕಷ್ಟಕ್ಕೆ ಸಿಲುಕಬಹುದೆಂದು ಅಂದಾಜಿಸಿ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಬೀದರ ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಳ್ಳಿ ಮುಳುಗಡೆಯಾಗುವುದಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಬಹುತೇಕ ಮನೆಗಳು ಮಣ್ಣಿನಿಂದ ನಿರ್ಮಾಣ ಮಾಡಿದ್ದರಿಂದ ಸತತ ಮಳೆ ಬಿದ್ದಲ್ಲಿ ಮನೆ ಹಾನಿ ಜೊತೆಗೆ ಬೆಳೆ ಹಾನಿ ಹೆಚ್ಚಲಿದೆ ಎಂದು ಡಿ.ಸಿ. ಗೋವಿಂದರೆಡ್ಡಿ ತಿಳಿಸಿದರು. ಬಳ್ಳಾರಿಯಲ್ಲಿ 19, ಕೊಪ್ಪಳದಲ್ಲಿ 27 ಹಾಗೂ ವಿಜಯನಗರ ಜಿಲ್ಲೆಯಲ್ಲಿ 22 ಹಳ್ಳಿ ಸಮಸ್ಯಾತ್ಮಕ ಇವೆ ಎಂದು ಕ್ರಮವಾಗಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ನಳಿನ್ ಕುಮಾರ ಅತುಲ್ ಹಾಗೂ ಎಂ.ಎಸ್.ದಿವಾಕರ ತಿಳಿಸಿದರು. ಇನ್ನುಳಿದಂತೆ ರಾಯಚೂರು ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ತಾಲೂಕು ಪ್ರವಾಹಕ್ಕೆ ತುತ್ತಾಗುತ್ತವೆ. ಕಳೆದ 2009ರಲ್ಲಿ ನಾರಾಯಣಪುರ ಜಲಾಶಯದಿಂದ 6 ಲಕ್ಷ ನೀರು ಹರಿಬಿಟ್ಟಿದರಿಂದ ಪ್ರವಾಹ ಭೀತಿ ಎದುರಾಗಿತ್ತು. ಭೀತಿಯಿಂದ 70 ಹಳ್ಳಿ ಗುರುತಿಸಿದೆ ಎಂದು ಡಿ.ಸಿ. ಚಂದ್ರಶೇಖರ ನಾಯಕ್ ತಿಳಿಸಿದರು.
ಸರ್ಕಾರಿ ಭೂಮಿ ಬೀಟ್ ಸಿಸ್ಟಂಗೆ ಒತ್ತು
ತಹಶೀಲ್ದಾರರು ಅವರ ಸ್ಥಾನದ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ತಹಶೀಲ್ದಾರರು ತಾಲೂಕು ಮಟ್ಟದ ದಂಡಾಧಿಕಾರಿಗಳೂ ಆಗಿದ್ದು, ಸರ್ಕಾರಿ ಜಮೀನನ್ನು ಉಳಿಸುವ ನಿಟ್ಟಿನಲ್ಲಿ “ಬೀಟ್ ಸಿಸ್ಟಂ” ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡರು ಖಡಕ್ ಸೂಚನೆ ನೀಡಿದರು.
ಸರ್ಕಾರಿ ಜಮೀನುಗಳನ್ನು ಉಳಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಖಡಕ್ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ “ಬೀಟ್ ಸಿಸ್ಟಂ ಆ್ಯಪ್”ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಆ್ಯಪ್ ಮೂಲಕ ಈಗಾಗಲೇ ಶೇ.90 ರಷ್ಟು ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಶೀಘ್ರ ಶೇ.100 ರಷ್ಟು ಜಮೀನನ್ನೂ ಗುರುತಿಸಬೇಕು. ತಹಶೀಲ್ದಾರರೇ ಮುಂದೆ ನಿಂತು ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಶುರು ಮಾಡಬೇಕು ಎಂದರು.
ಅಲ್ಲದೆ, ಹಲವು ಕಡೆಗಳಲ್ಲಿ ಕೆರೆ ಮತ್ತು ಸ್ಮಶಾನ ಜಾಗಗಳನ್ನೇ ಒತ್ತುವರಿ ಮಾಡಲಾಗಿದೆ. ಇಂತಹ ಎಲ್ಲಾ ಜಮೀನಿನಲ್ಲೂ ಒತ್ತುವರಿ ತೆರವುಗೊಳಿಸಬೇಕು, ಅಲ್ಲದೆ, ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರಿ ಜಮೀನಿಗೆ ಬೀಟ್ ಹಾಕಬೇಕು. ಆ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು” ಎಂದು ಒತ್ತಾಯಿಸಿದರು.
ಬಗರ್ ಹುಕುಂ ಅರ್ಜಿ ವಿಲೇಗೆ ಮೂರು ತಿಂಗಳ ಗಡುವು!
ಕಲಬುರಗಿ ವಿಭಾಗದ ಏಳು ಜಿಲ್ಲೆಗಳಲ್ಲಿ ಒಟ್ಟು 1.32 ಲಕ್ಷ ಬಗರ್ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡಿ. ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಬಡವರಿಗೆ, ಭೂ ರಹಿತರಿಗೆ ಹಾಗೂ ಅರ್ಹ ರೈತರಿಗೆ ಭೂಮಂಜೂರು ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ವರ್ಷವಾದರೂ ಈ ಅರ್ಜಿಗಳ ವಿಲೇ ಆಗಿಲ್ಲ. ಹೀಗಾಗಿ ಮುಂದಿನ ಒಂದು ತಿಂಗಳಲ್ಲಿ ಅರ್ಹರಿಗೆ ಭೂ ಮಂಜೂರು ಮಾಡಬೇಕು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳನ್ನು ಮಾತ್ರ ಶೀಘ್ರದಲ್ಲಿ ಶಾಸಕರ ನೇತೃತ್ವದ ಬಗರ್ ಹುಕುಂ ಸಭೆಯ ಮುಂದಿಡಿ. ಯಾರಿಗೆ ಜಮೀನು ನೀಡಬೇಕು? ಯಾರಿಗೂ ಜಮೀನು ನೀಡಬಾರದು? ಎಂಬ ವಿಚಾರವನ್ನು ಸಭೆ ನಿರ್ಧರಿಸಲಿ. ಒಟ್ಟಾರೆ ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡಿ ಎಂದು ಅವರು ತಿಳಿಸಿದರು.
1,000 ವಿ.ಎ.,750 ಸರ್ವೇಯರ್ ಭರ್ತಿ
ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಕಲುಷಿತ ನೀರು ಪೂರೈಕೆಯಾಗಬಾರದು
ಮಳೆಗಾಲ ಹಿನ್ನೆಲೆಯಲ್ಲಿ ಕಲುಷಿತ ನೀರು ಪೂರೈಕೆ ಪ್ರಕರಣಗಳು ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.. ಆದರೆ ಇದನ್ನು ಮೆಟ್ಟಿ ನಿಂತು ಪ್ರತಿ ಹಳ್ಳಿ, ಪಟ್ಟಣದ ಸಾರ್ವಜನಿಕರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಸುವುದು ನಮ್ಮ ಜವಾಬ್ದಾರಿ. ಮುಖ್ಯಮಂತ್ರಿಗಳು ಇತ್ತೀಚಿನ ಕಲುಷಿತ ನೀರು ಸೇವನೆ ಪ್ರಕರಣಗಳಿಂದ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿರಿ, ನಿಣ್ಕಾಳಜಿ ವಹಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ. ರಶ್ಮಿ ಮಹೇಶ್, ಕಂದಾಯ ಇಲಾಖೆಯ ಆಯುಕ್ತ ಪಿ. ಸುನೀಲಕುಮಾರ, ನೋಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತೆ ಡಾ.ಬಿ.ಆರ್.ಮಮತಾ, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್, ಯಾದಗಿರಿ ಡಿ.ಸಿ. ಡಾ.ಸುಶೀಲಾ ಬಿ., ಬೀದರ ಡಿ.ಸಿ. ಗೋವಿಂದರೆಡ್ಡಿ, ರಾಯಚೂರು ಡಿ.ಸಿ. ಚಂದ್ರಶೇಖರ ನಾಯಕ್, ಕೊಪ್ಪಳ ಡಿ.ಸಿ. ನಳಿನ್ ಅತುಲ್, ಬಳ್ಳಾರಿ ಡಿ.ಸಿ. ಪ್ರಶಾಂತಕುಮಾರ ಮಿಶ್ರಾ, ಸಾಮಾಜಿಕ ಪಿಂಚಣಿ ವಿಭಾಗದ ನಿರ್ದೇಶಕ ರಂಗಪ್ಪ, ಕರ್ನಾಟಕ ಪಬ್ಲಿಕ್ ಲ್ಯಾಂಡ್ ಕಾರ್ಪೋರೇಷನ್ ಎಂ.ಡಿ ವಸಂತಕುಮಾರ, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ ಸೇರಿದಂತೆ ವಿಭಾಗದ ಸಹಾಯಕ ಆಯುಕ್ತರು, ತಹಶೀಲ್ದಾರರು, ಡಿ.ಡಿ.ಎಲ್.ಆರ್ ಗಳು ಇದ್ದರು.
2025 ಅಂತ್ಯಕ್ಕೆ ‘ಕಂದಾಯ ಇಲಾಖೆ ದಾಖಲೆ’ಗಳನ್ನು ಡಿಜಿಟಲೀಕರಣ: ಸಚಿವ ಕೃಷ್ಣಬೈರೇಗೌಡ
ನಾನು ಅಧಿಕಾರಕ್ಕಾಗಿ ಚನ್ನಪಟ್ಟಣ ಬಿಟ್ಟು ಓಡಿ ಹೋಗುವವನಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್