ಬೆಂಗಳೂರು : ದೃಷ್ಟಿಯಿಲ್ಲದ ಯುವತಿಗೆ ಕೆಲಸ, ಬಿಡಿಎ ಫ್ಲಾಟ್, ಬಡವರ ಜಾಗ ರಕ್ಷಣೆಗೆ ಅಧಿಕಾರಿಗಳಿಗೆ ತಾಕೀತು, ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡದ ಅಧಿಕಾರಿಗಳ ತರಾಟೆ, ದಯಾಮರಣ ಕೋರಿ ಬಂದವರಿಗೆ ಸಾಂತ್ವನ, ಆರ್ಥಿಕ ನೆರವು. ಹೀಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟ ಹೊತ್ತು ಬಂದ ಜನರಿಗೆ ಪರಿಹಾರ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಕಾರ್ಯವೈಖರಿ ಮೂಲಕ ಜನರ ಮನಗೆದ್ದರು.
ಯಲಹಂಕ ನ್ಯೂ ಟೌನ್ ನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ “ಬಾಗಿಲಿಗೆ ಬಂತು ಸರಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಮನವಿ ಸಲ್ಲಿಸಲು ಬಂದಂತಹ ಸಾರ್ವಜನಿಕರ ಅಹವಾಲುಗಳನ್ನು ಕೂಲಂಕುಷವಾಗಿ ಆಲಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಸಮಸ್ಯೆಗಳಿಗೆ ಪರಿಹಾರ ಹೇಳಿದರು.
ನಿನ್ನ ಭೂಮಿಯನ್ನು ಯಾರಿಗೂ ಕೊಡಬೇಡ.., ಜಾಗ ಉಳಿಸಿಕೋ…, ಅಳಬೇಡಮ್ಮ ನಮ್ಮ ಸರ್ಕಾರವಿದೆ, ನಾನಿದ್ದೇನೆ, ನಿನ್ನ ಜಾಗದಲ್ಲೇ ಇರು, ಅದನ್ನು ಬಿಡಬೇಡ, ಎಂಜಿನಿಯರ್ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಯಬೇಕು ಎಂಬ ತಾಕೀತು ಮತ್ತು ಸಾಂತ್ವನದ ಮಾತುಗಳು ಕಂಗಾಲಾಗಿ ಬಂದವರ ಮುಖದಲ್ಲಿ ಭರವಸೆಯ ರೇಖೆ ಮೂಡಿಸಿತು.
ಸುಮಾರು 3 ಸಾವಿರ ಮನವಿಗಳನ್ನು ಸ್ವೀಕರಿಸಿದ ಅವರು, ಸ್ಥಳದಲ್ಲೇ ಇದ್ದಂತಹ ಕಂದಾಯ ಅಧಿಕಾರಿಗಳಿಗೆ “ಏನ್ರೀ ಇದು, ಈ ಭಾಗದಲ್ಲಿ ಇಷ್ಟೊಂದು ಭೂಮಿಯ ಸಮಸ್ಯೆ ಇದೆ. ಎಲ್ಲಾ ದಾಖಲೆಗಳು ಸರಿ ಇದ್ದರೂ ಖಾತೆ ಮಾಡಿಕೊಡಲು ಏನಾಗಿದೆ ನಿಮಗೆ” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದೃಷ್ಟಿದೋಷವುಳ್ಳ ಯುವತಿಗೆ ಬಿಡಿಎ ಫ್ಲಾಟ್, ಬಿಬಿಎಂಪಿ ಕೆಲಸ
“ಬಿಬಿಎಂಪಿ ಆಫೀಸ್ ಅಲ್ಲಿ ಕೆಲಸ ಮತ್ತು ಬಿಡಿಎ ಫ್ಲಾಟ್ ಕೊಡುವ ವ್ಯವಸ್ಥೆ ಮಾಡುತ್ತೇನೆ” ಎಂದು ದಾಸರಹಳ್ಳಿಯ ಹಿವ್ಯಾಂಜಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಯ ನೀಡಿದರು.
ದೃಷ್ಟಿದೋಷವಿದ್ದರೂ ಬಿ.ಎ ಪದವಿ ಪೂರ್ಣ ಮಾಡಿದ್ದೇನೆ. ಮನೆ ಮತ್ತು ಕೆಲಸ ಬೇಕು ಎಂದು ಹಿವ್ಯಾಂಜಲಿ ಮನವಿ ಸಲ್ಲಿಸಿದಾಗ, ಬಿಡಿಎ ಆಯುಕ್ತ ಜಯರಾಮ್ ಅವ್ರಿಗೆ “ಅಂಗವಿಲರ ಕೋಟಾದ ಅಡಿಯಲ್ಲಿ ಫ್ಲಾಟ್ ವ್ಯವಸ್ಥೆ ಮಾಡಿ” ಎಂದರು. ಅದೇ ರೀತಿ ಪಾಲಿಕೆಯಲ್ಲಿ ಕೆಲಸ ಕೊಡುವಂತೆ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.
ಇಂತಹ ಅನೇಕ ಭಾವುಕ ಕ್ಷಣಗಳಿಗೆ ಯಲಹಂಕದಲ್ಲಿ ಇಂದು ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮ ಸಾಕ್ಷಿಯಾಯಿತು.
ದಯಾಮರಣ ಕೊಡಲು ಬಂದಿಲ್ಲ, ಸಮಸ್ಯೆ ಬಗೆಹರಿಸಲು ಬಂದಿದ್ದೇನೆ
“ನಾನು ದಯಾಮರಣ ಕೊಡಲು ಬಂದಿಲ್ಲಮ್ಮ. ನಿನ್ನ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ” ಎಂದು ದಾಸರಹಳ್ಳಿಯ ರಾಧಮ್ಮ ಅವರಿಗೆ ಭರವಸೆ ನೀಡಿದರು.
ಬಿಪಿಎಲ್ ಕಾರ್ಡಿಲ್ಲ, ಕಿಡ್ನಿ ಹಾಳಾಗಿರುವುದರಿಂದ ಜೀವನವೇ ಸಾಕಾಗಿದೆ, ದಯಾಮರಣ ಕೊಡಿ ಎಂದು ಕಣ್ಣೀರಾದ ರಾಧಮ್ಮ ಅವರಿಗೆ ಜೇಬಲ್ಲಿ ಕೈಗೆ ಸಿಕ್ಕಷ್ಟು ಹಣ ತೆಗೆದು ನೀಡಿದ ಡಿಸಿಎಂ ಅವರು “ಅಳಬೇಡಮ್ಮ ನಾನಿದ್ದೇನೆ” ಎಂದರು.
“ಸಾರ್ ನಮ್ಮ ಮನೆ ನೀರಿನ ಮೀಟರ್ ಓಡುತ್ತದೆ, ಆದರೆ ನೀರೆ ಬರುತ್ತಿಲ್ಲ” ಎಂಬ ಗಂಗೇಗೌಡ ಅವರ ಮನವಿಗೆ ಸ್ಪಂದಿಸಿದ ಡಿಸಿಎಂ,
“ಜಲಮಂಡಳಿ ಎಂಜಿನಿಯರ್ ಒಂದು ವಾರದೊಳಗೆ ಇವರ ಮನೆ ನೀರಿನ ಸಮಸ್ಯೆ ಬಗೆಹರಿಯಬೇಕು. ಗಂಗೇಗೌಡರೇ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದ ಡಿಸಿಎಂ ಮಾತಿಗೆ ಸಭಿಕರಿಂದ ಚಪ್ಪಾಳೆ
ಮಹಿಳೆಯರಿಗೆ ಕೊಟ್ಟಿದ್ದಕ್ಕೆ ಕಣ್ಣು ಹಾಕುತ್ತಿದ್ದಾರೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದಂತೆ ಪುರುಷರಿಗೂ ನೀಡಿ ಎಂದು ಯಲಹಂಕ ಹಿರಿಯ ನಾಗರಿಕರ ವೇದಿಕೆಯವರ ಮನವಿಗೆ “ಮಹಿಳೆಯರಿಗೆ ಕೊಟ್ಟಿದ್ದಕ್ಕೆ ಕಣ್ಣು ಹಾಕುತ್ತಿದ್ದಾರೆ. ಪುರುಷರಿಗೆ ಕೊಡಲು ಆಗಲ್ಲ” ಎಂದು ನಗುತ್ತಲೇ ಡಿಸಿಎಂ ಉತ್ತರಿಸಿದರು.
ವಿದ್ಯಾರಣ್ಯಪುರದ ಬೀದಿ ಬದಿ ಪಡ್ಡು ವ್ಯಾಪಾರಿ ವಲ್ಲಿಮಾ ಅವರು ರಸ್ತೆ ಬದಿ ವ್ಯಾಪಾರ ಮಾಡಲು ಅವಕಾಶ ನೀಡಿ ಎಂದಾಗ “ತಳ್ಳುವ ಗಾಡಿ ಕೊಡಿಸುತ್ತೇನೆ, ಆಗಬಹುದಾ” ಎಂದರು.
“ಯಾವುದೇ ಕಾರಣಕ್ಕೂ ಜಾಗ ಬಿಡಬೇಡ, ಅಲ್ಲಿಯೇ ಇರು ನಾನಿದ್ದೇನೆ ” ಎಂದು ಲೇಔಟ್ ನವರು ನನ್ನ ಜಾಗ ನುಂಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡ ಗಾಣಿಗರಹಳ್ಳಿಯ ಜಗದೀಶನಿಗೆ ಅಭಯ ನೀಡಿದರು.
“ಸಾರ್ 450 ಅಡಿ ಜಾಗಕ್ಕೆ 1.90 ಲಕ್ಷ ತೆರಿಗೆ ಬಂದಿದೆ ಎಂದು ಹೆಬ್ಬಾಳ ಅಮಾನಿಕೆರೆ ನಿವಾಸಿ ರಾಮಚಂದ್ರ ಅವರ ಮನವಿ ಪಡೆದು ಅಧಿಕಾರಿಗಳ ಬಳಿ ಸಮಾಲೋಚನೆ ನಡೆಸಿ”, ಇಷ್ಟೊಂದು ತೆರಿಗೆ ಹಾಕುವುದು ಅನ್ಯಾಯ. ತೆರಿಗೆಯನ್ನು ಪರಿಷ್ಕರಿಸಿ, ನಂತರದ ಬೆಳವಣಿಗೆಯನ್ನು ನನ್ನ ಗಮನಕ್ಕೆ ತನ್ನಿ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಸೂಚಿಸಿದರು.
“ಸಮಸ್ಯೆ ಬಗೆಹರಿಯಲಿಲ್ಲ ಎಂದರೆ ಡಿಸಿ ಮನೆಗೇ ಹೋಗು, ಅವರನ್ನು ಬಿಡಬೇಡ” ಎಂದು ಜಮೀನು ವಿವಾದ ಬಗೆಹರಿಸಿ ಎಂದು ಮನವಿ ಸಲ್ಲಿಸಿದ ಅರಕೆರೆಯ ಓಬಣ್ಣ ಅವರಿಗೆ ಹೇಳಿದರು.
ನಿವೃತ್ತ ಸೈನಿಕರ ನಿವೇಶನ ತೊಂದರೆ, ರಾಜಕಾಲುವೆ ಒತ್ತುವರಿ, ಶಿವರಾಂ ಕಾರಂತ ಬಡಾವಣೆ ಸಮಸ್ಯೆ ಎನ್ಇಎಸ್ ಮೇಲ್ಸೇತುವೆ ಕಾಮಗಾರಿ, ಅಂಗನವಾಡಿ ಸಮಸ್ಯೆ, ಮಾಶಾಸನ, ಬಿಪಿಎಲ್ ಕಾರ್ಡ್ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಸಿಎಂ ಪರಿಹಾರ ನೀಡಿದರು.
ಸರ್ಕಾರ ಮತ್ತು ಡಿಸಿಎಂ ಅವರ ವಿನೂತನ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರ ಶ್ಲಾಘನೆ
ಬಾಗಿಲಿಗೆ ಬಂತು ಸರಕಾರ ಸೇವೆ ಎನ್ನುವುದು ವಿನೂತನ ಮತ್ತು ವಿಶಿಷ್ಠವಾದ ಕಾರ್ಯಕ್ರಮವಾಗಿದ್ದು, ಇದಕ್ಕೆ ನಮ್ಮ ಬೆಂಬಲಿದೆ ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೆಲಸಕ್ಕೆ ಬೆಂಬಲ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡರ ಪುತ್ರ ಎಂದ ವಿಶ್ವನಾಥ್
ಡಿಸಿಎಂ ಅವರ ಒಂದಷ್ಟು ಗುಣಗಳನ್ನು ನಾನು ಅಳವಡಿಸಿಕೊಂಡಿದ್ದೇನೆ. ಹಿಡಿದ ಕೆಲಸ ಮುಗಿಸುವ ಛಲ ಉಳ್ಳವರು, ಆತ್ಮಸ್ಥೈರ್ಯದಿಂದ ಎಲ್ಲವನ್ನು ಎದುರಿಸುವ ಗುಣ ಉಳ್ಳವರು ಎಂದರು.
ಬೆಂಗಳೂರನ್ನು ಅಭಿವೃದ್ಧಿ ಮಾಡುವ ಇಚ್ಚಾಶಕ್ತಿ, ಧೈರ್ಯ ಮತ್ತು ತಾಕತ್ತು ಎರಡೂ ಡಿ.ಕೆ.ಶಿವಕುಮಾರ್ ಅವರಿಗೆ ಇದೆ. ಬೆಂಗಳೂರಿನ ಅಭಿವೃದ್ಧಿಗೆ ಮುಂದಿನ ಬಜೆಟ್ ಅಲ್ಲಿ ಉತ್ತಮ ಅನುದಾನ ಕೊಡಬೇಕು. ಪಕ್ಷ ಭೇದ ಮರೆತು ನಾವು ಡಿ.ಕೆ.ಶಿವಕುಮಾರ್ ಅವರಿಗೆ ಸಹಕಾರ ಕೊಡುತ್ತೇವೆ ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಅವರು ಹೇಳಿದರು.
ನಿಮ್ಮ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಬೇಕು. ದೇವರಾಜ ಅರಸು, ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಬೆಂಗಳೂರಿಗೆ ಶಾಶ್ವತ ಕೊಡುಗೆ ಕೊಟ್ಟಂತೆ ನೀವೂ ಶಾಶ್ವತ ಕೊಡುಗೆಯನ್ನು ನಿಮ್ಮ ಅವಧಿಯಲ್ಲಿ ಬೆಂಗಳೂರಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಗಮನಿಸಿ: ‘KSRTC ತಾಂತ್ರಿಕ ಸಹಾಯಕ ಹುದ್ದೆ’ಯ ‘ಸಂಭವನೀಯ ಆಯ್ಕೆ ಪಟ್ಟಿ’ ಪ್ರಕಟ