ಕಲಬುರ್ಗಿ: 10 ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಂಗಳವಾರದಂದು ಮಹತ್ವದ ರಾಜ್ಯ ಸಚಿವ ಸಂಪುಟ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಎಲ್ಲಾ ಪ್ರಮುಖ ಮುಖ್ಯಾಂಶಗಳನ್ನು ಮುಂದಿದೆ ಓದಿ.
ಬೀದರ್ ಮತ್ತು ರಾಯಚೂರು ಪಟ್ಟಣಗಳನ್ನು ನಗರ ಪಾಲಿಕೆಯನ್ನಾಗಿ ಮಾಡುವಂತ ನಿರ್ಣಯವನ್ನು ಕೈಗೊಳ್ಳಲಾಗಿದೆ. ಬೀದರ್ ಮತ್ತು ಗುಲಬರ್ಗಾದಲ್ಲಿ ಬರುವಂತ ಎಲ್ಲಾ ಜನವಸತಿಗಳಿಗೆ ಕುಡಿಯುವ ನೀರು ಒದಗಿಸಲು 7200 ಕೋಟಿ ರೂಪಾಯಿಗಳನ್ನು ಅನುದಾನ ನೀಡಲಾಗಿದೆ. ನಾರಾಯಣಪುರದಿಂದ ನೀರು ತಂದು, ಕುಡಿಯುವ ನೀರು ಒದಗಿಸಿ ಕೊಡುವಂತ ಯೋಜನೆಯಾಗಿದೆ. ರಾಜ್ಯ ಸರ್ಕಾರ ಅರ್ಧ, ಕೇಂದ್ರ ಸರ್ಕಾರ ಅರ್ಧ ಹಣವನ್ನು ಭರಿಸಲಿದೆ. 7200 ಕೋಟಿಯಲ್ಲಿ ಬೀದರ್, ಗುಲಬರ್ಗ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವಂತ ಕಾರ್ಯ ಮಾಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಸಚಿವಾಲಯ ಮಾಡಬೇಕು ಎನ್ನುವಂತ ಒತ್ತಾಯವಿತ್ತು. ಇದಕ್ಕೆ ಸಂಪುಟ ಒಪ್ಪಿಗೆ ನೀಡಲಾಗಿದೆ. ಪ್ರತ್ಯೇಕ ಸಚಿವಾಲಯ ನಿರ್ಮಾಣಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ 5000 ಕೋಟಿ ರೂಪಾಯಿಗಳನ್ನು ಕೊಡಬೇಕು ಎಂಬ ಮನವಿಯನ್ನು ನೀಡುವಂತ ನಿರ್ಣಯ ಮಾಡಲಾಗಿದೆ ಎಂದರು.
ಖಾಲಿ ಇರುವಂತ ಎಲ್ಲಾ ಹುದ್ದೆಗಳ ಅಂದರೆ ಸುಮಾರು 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. 11,770 ಕೋಟಿ ರೂಪಾಯಿಗಳಲ್ಲಿ ಕೃಷಿ ಇಲಾಖೆಗೆ 100 ಕೋಟಿ, ವಾಣಿಜ್ಯ ಮತ್ತು ಕೈಗಾರಿಕೆ 1550 ಕೋಟಿ, ಅರಣ್ಯ ಇಲಾಖೆಗೆ 32 ಕೋಟಿ, ಆರೋಗ್ಯ ಇಲಾಖೆಗೆ 910 ಕೋಟಿ, ವಸತಿ ಇಲಾಖೆಗೆ 220 ಕೋಟಿ ಸೇರಿದಂತೆ ಇತರೆ ಇಲಾಖೆಗಳಿಗೆ ಅನುದಾನವನ್ನು ಒದಗಿಸಿಕೊಡುವಂತ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಬಳಿಕ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಸರಿ ಮಾಡಿದಂತ ಎಲ್ಲಾ ಅಧಿಕಾರಿ, ನೌಕರರು, ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಕೂಡಲಸಂಗಮದಿಂದ ಎಲ್ಲಾ ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು.
ಹೀಗಿದೆ ಕಲಬುರ್ಗಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್
1. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತಕ್ಕೆ ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ದುಡಿಯುವ ಬಂಡವಾಳ (Working Capital) ರೂ.200/- ಕೋಟಿಗಳ ಬ್ಯಾಂಕ್ ಸಾಲ ಸೌಲಭ್ಯಕ್ಕೆ ದಿನಾಂಕ: 01.04.2024 ರಿಂದ ದಿನಾಂಕ: 31.03.2025 ರವರೆಗೆ ಸರ್ಕಾರದ ಖಾತರಿ ನೀಡಲು;
2. ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತವು ಶೇ.1 ರಷ್ಟು ದಲ್ಲಾಳಿ ವೆಚ್ಚವನ್ನು (Guarantee Commission) Guarantee -1999 ರನ್ವಯ ರೂ.200/- ಕೋಟಿಗಳ ಸರ್ಕಾರದ ಖಾತರಿಗೆ ಸರ್ಕಾರಕ್ಕೆ ಪಾವತಿಸಲು ಅನುಮತಿಸಲು;
3. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ರವರಿಗೆ, ರಸಗೊಬ್ಬರ ಕಾಪು ದಾಸ್ತಾನು ಯೋಜನೆಗೆ ದುಡಿಯುವ ಬಂಡವಾಳ (Working Capital) ರೂ.200/- ಕೋಟಿಗಳ ಬ್ಯಾಂಕ್ ಸಾಲ ಸೌಲಭ್ಯಕ್ಕೆ ದಿನಾಂಕ: 01.04.2024 ರಿಂದ 31.03.2025 ರವರೆಗೆ ಸರ್ಕಾರದ ಖಾತರಿ ನೀಡಲು;
4. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತವು ಶೇ.1 ರಷ್ಟು ದಲ್ಲಾಳಿ ವೆಚ್ಚವನ್ನು (Guarantee Commission) Guarantee -1999 ರನ್ವಯ ರೂ.200/- ಕೋಟಿಗಳ ಸರ್ಕಾರದ ಖಾತರಿಗೆ ಸರ್ಕಾರಕ್ಕೆ ಪಾವತಿಸಲು ಅನುಮತಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಗದಗ, ಕೊಪ್ಪಳ, ಚಾಮರಾಜನಗರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ ಹಾಗೂ ಪಿಠೋಪಕರಣಗಳ್ನು ಖರೀದಿಸಿಸರು ರೂ.149.03 ಕೋಟಿ ಅನುಮೋದನೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ಶಿಕ್ಷಣ ಇಲಾಖೆ ಅಧೀನದಲ್ಲಿನ 22 ವೈದ್ಯಕೀಯ ಕಾಲೇಜು, 11 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು 2 ದಂತ ವೈದ್ಯಕೀಯ ಕಾಲೇಜುಗಳಿಗೆ ಎಂಆರ್ ಐ ಯಂತ್ರಗಳನ್ನು 85.60 ಕೋಟಿ ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಪಿಸುವಂತ ಯೋಜನೆಗಾಗಿ 135 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಪಿಸೋದಕ್ಕೆ ಅನುದಾನ ಒದಗಿಸಲಾಗಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬ್ಯಾಂಕ್ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ 15 ಮಹಿಳಾ ಪದವಿ ಪೂರ್ವ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ರೂ.447.76 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ಸಂಪುಟ ಸಭೆಯಲ್ಲಿ ನೀಡಲಾಗಿದೆ.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2024ಕ್ಕೆ ಅನುಮೋದನೆ ನೀಡಲಾಗಿದೆ. ಇದರಿಂದ ಕುಲಪತಿಗಳ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗಳು ಪ್ರಾಧ್ಯಾಪಕರ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಬೇಕೆಂದು ನಿಯಮಿಸಲಾಗುತ್ತದೆ.
ಪಿಎಂ ಜೆ ಎ ಎನ್ ಎಂ ಎ ಎನ್ ಅಡಿಯಲ್ಲಿ ಪಿಎಂಜಿ ಎಸ್ ವೈ ಮಾದರಿಯಂತೆ 23.766 ಕಿಲೋಮೀಟರ್ ಉದ್ದದ 18 ಸಂಖ್ಯೆಯ ರಸ್ತೆಗಳು ಹಾಗೂ 2 ಸಂಖ್ಯೆಯ ಉದ್ದ ಸೇತುವೆ ಕಾಮಗಾರಿಗಳನ್ನು ರೂ.30.47 ಕೋಟಿ ವೆಚ್ಚದಲ್ಲಿ ನಡೆಸಲು ಅನುಮೋದಿಸಲಾಗಿದೆ.
ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ನಿರ್ಣಯಿಸಿದೆ. ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯಾಧ್ಯಂತ 43 ಕಾರ್ಮಿಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ತಲಾ 1 ರಂತೆ ಸ್ಥಿರ ಮತ್ತು ಸಂಚಾರಿ ಭಾರತ ರತ್ನ ಡಾ.ಬಿಆರ್ ಅಂಬೇಡ್ಕರ್ ಕಾರ್ಮಿಕ ಸೇವಾ ಕೇಂದ್ರಗಳನ್ನು ರೂ.48.08 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿನ ಅಧಿಕಾರಿ, ಸಿಬ್ಬಂದಿಗಳಿಗಾಗಿ ಸಮಗ್ರ ಟೌನ್ ಶಿಪ್ ಯೋಜನೆಯನ್ನು ರೂ.998.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಅನುಮೋದಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು