ನವದೆಹಲಿ: ಇಂದು 2025ರ ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದರು. ಅವರ ಭಾಷಣದ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಈ ಐತಿಹಾಸಿಕ ಸಂದರ್ಭದಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನನಗೆ ಸಂತೋಷವಾಗಿದೆ. ಗಣರಾಜ್ಯೋತ್ಸವದ ಮುನ್ನಾದಿನದಂದು, ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ! 75 ವರ್ಷಗಳ ಹಿಂದೆ ಇದೇ ಜನವರಿ 26ರಂದು ನಮ್ಮ ಸಂಸ್ಥಾಪಕ ದಾಖಲೆಯಾದ ಭಾರತದ ಸಂವಿಧಾನ ಜಾರಿಗೆ ಬಂದಿತು.
ಸಂವಿಧಾನ ರಚನಾ ಸಭೆಯು ಸುಮಾರು ಮೂರು ವರ್ಷಗಳ ಚರ್ಚೆಯ ನಂತರ, 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಿತು. ಆ ದಿನವನ್ನು, ಅಂದರೆ, ನವೆಂಬರ್ 26 ಅನ್ನು 2015ರಿಂದ ʻಸಂವಿಧಾನ ದಿನʼವಾಗಿ ಆಚರಿಸಲಾಗುತ್ತಿದೆ.
ಗಣರಾಜ್ಯೋತ್ಸವವು ನಿಜವಾಗಿಯೂ ಎಲ್ಲಾ ನಾಗರಿಕರಿಗೆ ಸಾಮೂಹಿಕ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಎಪ್ಪತ್ತೈದು ವರ್ಷಗಳು ರಾಷ್ಟ್ರವೊಂದರ ಜೀವಮಾನದಲ್ಲಿ ಒಮ್ಮೆ ಕಣ್ಣು ಮಿಟುಕಿಸುವಷ್ಟು ಸಮಯವಷ್ಟೇ ಎಂದು ಯಾರಾದರೂ ಹೇಳಬಹುದು. ಆದರೆ, ನಾನು ಒಪ್ಪುವುದಿಲ್ಲ. ಅದು ಕಳೆದ 75 ವರ್ಷಗಳ ವಿಚಾರದಲ್ಲಿ ಅನ್ವಯವಾಗುವುದಿಲ್ಲ ಎಂದು ನಾನು ಹೇಳುತ್ತೇನೆ. ಸುದೀರ್ಘ ಕಾಲದಿಂದ ಸುಪ್ತವಾಗಿದ್ದ ಭಾರತದ ಆತ್ಮವು ಮತ್ತೆ ಎಚ್ಚರಗೊಂಡು ಚೈತನ್ಯವನ್ನು ಪಡೆದ ಮತ್ತು ಜಾಗತಿಕ ಸಮುದಾಯದಲ್ಲಿ ತನಗೆ ದೊರೆಯಬೇಕಾದ ಸೂಕ್ತ ಸ್ಥಾನವನ್ನು ಮರಳಿ ಪಡೆಯಲು ದಾಪುಗಾಲು ಹಾಕುತ್ತಿರುವ ಸಮಯವಿದು. ಅತ್ಯಂತ ಹಳೆಯ ನಾಗರಿಕತೆಗಳಲ್ಲಿ ಒಂದಾಗಿರುವ ಭಾರತವನ್ನು ಒಂದು ಕಾಲದಲ್ಲಿ ಜ್ಞಾನ ಮತ್ತು ಬೌದ್ಧಿಕತೆಯ ತವರು ಎಂದು ಕರೆಯಲಾಗುತ್ತಿತ್ತು. ಆದಾಗ್ಯೂ, ಅಂತಹ ದೇಶವೂ ಒಂದು ಕರಾಳ ಕಾಲಘಟ್ಟಕ್ಕೆ ಸಾಕ್ಷಿಯಾಯಿತು. ವಸಾಹತುಶಾಹಿ ಆಳ್ವಿಕೆಯಲ್ಲಿ ಅಮಾನವೀಯ ಶೋಷಣೆಯು ದೇಶದಲ್ಲಿ ಸಂಪೂರ್ಣ ಬಡತನಕ್ಕೆ ಕಾರಣವಾಯಿತು.
ಇಂದು, ನಾವು ಮೊದಲು ನಮ್ಮ ತಾಯಿ ನಾಡನ್ನು ವಿದೇಶಿ ಆಳ್ವಿಕೆಯ ಸಂಕೋಲೆಗಳಿಂದ ಮುಕ್ತಗೊಳಿಸಲು ಬಹುದೊಡ್ಡ ತ್ಯಾಗಗಳನ್ನು ಮಾಡಿದ ಕೆಚ್ಚೆದೆಯ ಕಲಿಗಳನ್ನು ಸ್ಮರಿಸಬೇಕು. ಇವರಲ್ಲಿ ಕೆಲವರು ಚಿರಪರಿಚಿತವಾರಾಗಿದ್ದರೆ, ಮತ್ತೆ ಕೆಲವರ ಪರಿಚಯ ಇತ್ತೀಚಿನವರೆಗೂ ಹೆಚ್ಚಾಗಿ ತಿಳಿದಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಪ್ರತಿನಿಧಿಯಂತೆ ನಿಂತಿರುವ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯನ್ನು ನಾವು ಈ ವರ್ಷ ಆಚರಿಸುತ್ತಿದ್ದೇವೆ, ಆ ಮೂಲಕ ರಾಷ್ಟ್ರೀಯ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ಈಗ ನೈಜ ಪ್ರಮಾಣದಲ್ಲಿ ಗುರುತಿಸಲಾಗುತ್ತಿದೆ.
ಇಪ್ಪತ್ತನೇ ಶತಮಾನದ ಆರಂಭಿಕ ದಶಕಗಳಲ್ಲಿ, ಸ್ವಾತಂತ್ರ್ಯ ವೀರರ ಹೋರಾಟಗಳು ಸಂಘಟಿತಗೊಂಡು ರಾಷ್ಟ್ರವ್ಯಾಪಿ ಸ್ವಾತಂತ್ರ್ಯ ಚಳವಳಿಯ ರೂಪದಲ್ಲಿ ಬಲವರ್ಧನೆಗೊಂಡವು. ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಮಹನೀಯರನ್ನು ಪಡೆದದ್ದು ರಾಷ್ಟ್ರದ ಅದೃಷ್ಟವೇ ಸರಿ. ಅವರು ದೇಶದ ಪ್ರಜಾಪ್ರಭುತ್ವ ನೀತಿಗಳನ್ನು ಮರುಶೋಧಿಸಲು ಸಹಾಯ ಮಾಡಿದರು. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಆಧುನಿಕ ಕಾಲದಲ್ಲಿ ನಾವು ಕಲಿತ ಸೈದ್ಧಾಂತಿಕ ಪರಿಕಲ್ಪನೆಗಳಲ್ಲ; ಅವು ಸದಾ ನಮ್ಮ ನಾಗರಿಕ ಪರಂಪರೆಯ ಭಾಗವಾಗಿವೆ. ಭಾರತವು ಹೊಸದಾಗಿ ಸ್ವತಂತ್ರ ಪಡೆದಾಗ ಸಂವಿಧಾನ ಮತ್ತು ಗಣರಾಜ್ಯದ ಭವಿಷ್ಯದ ಬಗ್ಗೆ ಸಿನಿಕರಾಗಿದ್ದ ಟೀಕಾಕಾರರಿಗೆ ಅವರ ಅಭಿಪ್ರಾಯ ಸಂಪೂರ್ಣ ತಪ್ಪು ಎಂದು ಏಕೆ ಅನಿಸತೊಡಗಿತು ಎಂಬುದನ್ನು ಇದು ವಿವರಿಸುತ್ತದೆ.
ನಮ್ಮ ಸಂವಿಧಾನ ಸಭೆಯ ರಚನೆಯು ನಮ್ಮ ಗಣರಾಜ್ಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ. ಇದು ದೇಶದ ಎಲ್ಲಾ ಭಾಗಗಳಿಂದ ಮತ್ತು ಎಲ್ಲಾ ಸಮುದಾಯಗಳಿಂದಲೂ ಪ್ರತಿನಿಧಿಗಳನ್ನು ಹೊಂದಿತ್ತು. ವಿಶೇಷವೆಂದರೆ, ಸರೋಜಿನಿ ನಾಯ್ಡು, ರಾಜಕುಮಾರಿ ಅಮೃತ್ ಕೌರ್, ಸುಚೇತಾ ಕೃಪಲಾನಿ, ಹನ್ಸಬೆನ್ ಮೆಹ್ತಾ ಮತ್ತು ಮಾಲತಿ ಚೌಧರಿ ಅವರಂತಹ ದಿಗ್ಗಜರು ಸೇರಿದಂತೆ 15 ಮಹಿಳೆಯರು ಅದರ ಸದಸ್ಯರಾಗಿದ್ದರು. ವಿಶ್ವದ ಅನೇಕ ಭಾಗಗಳಲ್ಲಿ ಮಹಿಳಾ ಸಮಾನತೆಯು ಇನ್ನೂ ದೂರದ ಮಾತಾಗಿದ್ದಾಗ, ಭಾರತದಲ್ಲಿ ಮಹಿಳೆಯರು ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದರು.
ಸಹಸ್ರಮಾನಗಳಿಂದಲೂ ನಾಗರಿಕ ಸದ್ಗುಣಗಳು ನಮ್ಮ ನೈತಿಕ ದಿಕ್ಸೂಚಿಯ ಭಾಗವಾಗಿರುವುದರಿಂದ ನಮ್ಮ ಸಂವಿಧಾನವು ಒಂದು ಜೀವಂತ ದಾಖಲೆಯಾಗಿದೆ. ಸಂವಿಧಾನವು ಭಾರತೀಯರಾಗಿ ನಮ್ಮ ಸಾಮೂಹಿಕ ಅಸ್ಮಿತೆಗೆ ಅತ್ಯುತ್ತಮ ಅಡಿಪಾಯವನ್ನು ಒದಗಿಸುತ್ತದೆ; ಇದು ನಮ್ಮನ್ನು ಒಂದು ಕುಟುಂಬವಾಗಿ ಒಟ್ಟಿಗೆ ಹಿಡಿದಿಡುತ್ತದೆ. 75 ವರ್ಷಗಳಿಂದ, ಇದು ನಮ್ಮ ಪ್ರಗತಿಯ ಹಾದಿಯಲ್ಲಿ ಮಾರ್ಗದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಕರಡು ರಚನಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಡಾ. ಅಂಬೇಡ್ಕರ್, ಸಂವಿಧಾನ ಸಭೆಯ ಇತರ ಗೌರವಾನ್ವಿತ ಸದಸ್ಯರು, ಅವರೊಂದಿಗೆ ಸಂಬಂಧ ಹೊಂದಿರುವ ವಿವಿಧ ಅಧಿಕಾರಿಗಳು ಮತ್ತು ಈ ಅತ್ಯದ್ಭುತ ದಾಖಲೆಯನ್ನು ನಮಗೆ ಹಸ್ತಾಂತರಿಸಿದ ಎಲ್ಲರಿಗೂ ವಿನಮ್ರತೆಯಿಂದ ನಮ್ಮ ಕೃತಜ್ಞತೆಯನ್ನು ಸಲ್ಲಿಸೋಣ.
ಪ್ರೀತಿಯ ದೇಶವಾಸಿಗಳೇ,
ಸಂವಿಧಾನದ ಈ 75 ವರ್ಷಗಳು ಯುವ ಗಣರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟಿವೆ. ಸ್ವಾತಂತ್ರ್ಯದ ಸಮಯದಲ್ಲಿ ಮತ್ತು ನಂತರವೂ, ದೇಶದ ಹೆಚ್ಚಿನ ಭಾಗಗಳು ತೀವ್ರ ಬಡತನ ಮತ್ತು ಹಸಿವಿಗೆ ಸಾಕ್ಷಿಯಾಗಿದ್ದವು. ಆದರೆ ನಮಗೆ ಕೊರತೆಯಾಗಿ ಕಾಡದ ಒಂದು ವಿಷಯವೆಂದರೆ ಅದು ನಮ್ಮ ಮೇಲಿನ ನಮ್ಮ ನಂಬಿಕೆ. ಪ್ರತಿಯೊಬ್ಬರೂ ಏಳಿಗೆ ಹೊಂದಲು ಅವಕಾಶವಿರುವಂತಹ ಪರಿಸ್ಥಿತಿಗಳನ್ನು ಸೃಷ್ಟಿಸಲು ನಾವು ದಿಟ್ಟ ಹೆಜ್ಜೆ ಇಟ್ಟೆವು. ನಮ್ಮ ರೈತರು ಕಷ್ಟಪಟ್ಟು ಕೆಲಸ ಮಾಡಿದರು ಮತ್ತು ನಮ್ಮ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದರು. ನಮ್ಮ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯವನ್ನು ಪರಿವರ್ತಿಸಲು ನಮ್ಮ ಕಾರ್ಮಿಕರು ಅವಿರತವಾಗಿ ಶ್ರಮಿಸಿದರು. ಅವರ ಅತ್ಯುತ್ತಮ ಪ್ರಯತ್ನಗಳಿಗೆ ಧನ್ಯವಾದಗಳು, ಭಾರತದ ಆರ್ಥಿಕತೆಯು ಇಂದು ಜಾಗತಿಕ ಆರ್ಥಿಕ ಪ್ರವೃತ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ಇಂದು, ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಅಲಂಕರಿಸುತ್ತಿದೆ. ನಮ್ಮ ಸಂವಿಧಾನವು ರೂಪಿಸಿದ ನೀಲನಕ್ಷೆಯಿಲ್ಲದೆ ಈ ಪರಿವರ್ತನೆ ಸಾಧ್ಯವಾಗುತ್ತಿರಲಿಲ್ಲ.
ಇತ್ತೀಚಿನ ವರ್ಷಗಳಲ್ಲಿ, ಆರ್ಥಿಕ ಬೆಳವಣಿಗೆಯ ದರವು ನಿರಂತರವಾಗಿ ಹೆಚ್ಚಾಗಿದೆ, ಇದು ನಮ್ಮ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ರೈತರು ಮತ್ತು ಕಾರ್ಮಿಕರ ಕೈಗೆ ಹೆಚ್ಚಿನ ಹಣವನ್ನು ನೀಡುತ್ತಿದೆ ಮತ್ತು ಹೆಚ್ಚಿನ ಜನರನ್ನು ಬಡತನದಿಂದ ಮೇಲೆತ್ತುತ್ತಿದೆ. ದಿಟ್ಟ ಮತ್ತು ದೂರದೃಷ್ಟಿಯ ಆರ್ಥಿಕ ಸುಧಾರಣೆಗಳು ಮುಂಬರುವ ವರ್ಷಗಳಲ್ಲಿ ಇದೇ ಪ್ರವೃತ್ತಿಯನ್ನು ಉಳಿಸಿಕೊಳ್ಳುತ್ತವೆ. ಎಲ್ಲರನ್ನೂ ಒಳಗೊಳ್ಳುವುದು ನಮ್ಮ ಬೆಳವಣಿಗೆಯ ಯಶೋಗಾಥೆಯ ಮೂಲಾಧಾರವಾಗಿದೆ, ಅದು ಅಭಿವೃದ್ಧಿಯ ಫಲಗಳನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ವಿತರಿಸುತ್ತದೆ.
ಸರ್ಕಾರವು ಆರ್ಥಿಕ ಸೇರ್ಪಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿರುವುದರಿಂದ, ʻಪ್ರಧಾನಮಂತ್ರಿ ಜನ್ ಧನ್ ಯೋಜನೆʼ, ʻಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆʼ, ʻಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆʼ, ʻಮುದ್ರಾʼ, ʻಸ್ಟ್ಯಾಂಡ್ ಅಪ್ ಇಂಡಿಯಾʼ ಮತ್ತು ʻಅಟಲ್ ಪಿಂಚಣಿ ಯೋಜನೆʼಯಂತಹ ಉಪಕ್ರಮಗಳನ್ನು ಹೆಚ್ಚಿನ ಜನರಿಗೆ ವ್ಯಾಪಕವಾಗಿ ತಲುಪಿಸಲಾಗಿದೆ. ಆ ಮೂಲಕ ವಿವಿಧ ಹಣಕಾಸು ಬೆಂಬಲ ಯೋಜನೆಗಳಿಗೆ ಅವರಿಗೆ ಪ್ರವೇಶ ಒದಗಿಸಲಾಗಿದೆ.
ಅಷ್ಟೇ ಮುಖ್ಯವಾದ ಮತ್ತೊಂದು ವಿಚಾರವೆಂದರೆ, ಸರ್ಕಾರವು ಕಲ್ಯಾಣದ ಕಲ್ಪನೆಯನ್ನು ಮರುವ್ಯಾಖ್ಯಾನಿಸಿದೆ, ವಸತಿ ಮತ್ತು ಕುಡಿಯುವ ನೀರಿನ ಲಭ್ಯತೆಯಂತಹ ಮೂಲಭೂತ ಅವಶ್ಯಕತೆಗಳನ್ನು ಅರ್ಹತೆಯ ವಿಷಯವನ್ನಾಗಿ ಮಾಡಿದೆ. ಸಮಾಜದ ಅಂಚಿನಲ್ಲಿರುವ ಸಮುದಾಯಗಳಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಹಾಯ ಹಸ್ತವನ್ನು ಚಾಚಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಉದಾಹರಣೆಗೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು, ರಾಷ್ಟ್ರೀಯ ಫೆಲೋಶಿಪ್‌ಗಳು, ಸಾಗರೋತ್ತರ ವಿದ್ಯಾರ್ಥಿವೇತನಗಳು, ಹಾಸ್ಟೆಲ್‌ಗಳು ಮತ್ತು ಎಸ್ಸಿ ಸಮುದಾಯಗಳ ಯುವಕರಿಗೆ ತರಬೇತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ʻಪ್ರಧಾನ ಮಂತ್ರಿ ಅನುಸೂಚಿತ್ ಜಾತಿ ಅಭ್ಯುದಯ್ ಯೋಜನೆʼಯು ಉದ್ಯೋಗ ಮತ್ತು ಆದಾಯ ಸೃಷ್ಟಿಯ ಅವಕಾಶಗಳನ್ನು ಒದಗಿಸುವ ಮೂಲಕ ಎಸ್ಸಿ ಸಮುದಾಯಗಳಲ್ಲಿ ಬಡತನವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ʻಧರ್ತಿ ಆಬಾ ಜನ್‌ಜಾತಿಯ ಗ್ರಾಮ ಉತ್ಕರ್ಷ್ ಅಭಿಯಾನʼ ಮತ್ತು ʻಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನʼ(ಪಿಎಂ-ಜನಮಾನ್) ಸೇರಿದಂತೆ ಎಸ್ಟಿ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಅನೇಕ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಅಧಿಸೂಚಿತ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾದ ಅಭಿವೃದ್ಧಿ ಮತ್ತು ಕಲ್ಯಾಣ ಮಂಡಳಿಯನ್ನು ರಚಿಸಲಾಗಿದೆ.
ಏತನ್ಮಧ್ಯೆ, ಕಳೆದ ದಶಕದಲ್ಲಿ ರಸ್ತೆಗಳು ಮತ್ತು ರೈಲ್ವೆಗಳು, ಬಂದರುಗಳು ಮತ್ತು ಸರಕುಸಾಗಣೆ ಕೇಂದ್ರಗಳು ಸೇರಿದಂತೆ ಭೌತಿಕ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ಗಮನ ಹರಿಸಿರುವುದರಿಂದ, ಇದು ಮುಂಬರುವ ದಶಕಗಳವರೆಗೆ ಬೆಳವಣಿಗೆಯನ್ನು ಬೆಂಬಲಿಸುವ ವೇದಿಕೆಯನ್ನು ಸೃಷ್ಟಿಸಿದೆ.
ಹಣಕಾಸು ಕ್ಷೇತ್ರದಲ್ಲಿ ಸರ್ಕಾರ ತಂತ್ರಜ್ಞಾನವನ್ನು ಬಳಸಿದ ರೀತಿ ಅನುಕರಣೀಯವಾಗಿದೆ. ವಿವಿಧ ಡಿಜಿಟಲ್ ಪಾವತಿ ಆಯ್ಕೆಗಳು ಮತ್ತು ಫಲಾನುಭವಿಗಳಿಗೆ ʻನೇರ ಲಾಭ ವರ್ಗಾವಣೆʼ ವ್ಯವಸ್ಥೆಯು ಜನರ ಒಳಗೊಳ್ಳುವಿಕೆಯನ್ನು ಉತ್ತೇಜಿಸಿದೆ, ಗಮನಾರ್ಹ ಸಂಖ್ಯೆಯ ಜನರನ್ನು ಔಪಚಾರಿಕ ವ್ಯವಸ್ಥೆಯೊಳಗೆ ತಂದಿದೆ. ಇದು ವ್ಯವಸ್ಥೆಯಲ್ಲಿ ಅಭೂತಪೂರ್ವ ಪಾರದರ್ಶಕತೆಯನ್ನು ತಂದಿದೆ. ಈ ಪ್ರಕ್ರಿಯೆಯಲ್ಲಿ, ಕೆಲವೇ ವರ್ಷಗಳಲ್ಲಿ ನಾವು ದೃಢವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ರಚಿಸಿದ್ದೇವೆ, ಅದು ವಿಶ್ವದಲ್ಲೇ ಅತ್ಯುತ್ತಮವಾದ ವ್ಯವಸ್ಥೆ ಎನಿಸಿದೆ.
ʻದಿವಾಳಿತನ ಸಂಹಿತೆʼ ಸೇರಿದಂತೆ ಹಲವು ಸರಣಿ ದಿಟ್ಟ ಕ್ರಮಗಳ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಇಂದು ಆರೋಗ್ಯಕರ ಸ್ಥಿತಿಯಲ್ಲಿದೆ, ಇದು ಸಾರ್ವಜನಿಕ ವಲಯದ ವಾಣಿಜ್ಯ ಬ್ಯಾಂಕುಗಳ ಅನುತ್ಪಾದಕ ಆಸ್ತಿಗಳಲ್ಲಿ ಗಣನೀಯ ಇಳಿಕೆಗೂ ಕಾರಣವಾಗಿದೆ.
ಪ್ರೀತಿಯ ದೇಶವಾಸಿಗಳೇ,
ನಾವು 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದರೂ ವಸಾಹತುಶಾಹಿ ಮನಸ್ಥಿತಿಯ ಅನೇಕ ಅವಶೇಷಗಳು ನಮ್ಮ ನಡುವೆ ದೀರ್ಘಕಾಲ ಉಳಿದವು. ಇತ್ತೀಚೆಗೆ, ಆ ಮನಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳನ್ನು ನಾವು ನೋಡುತ್ತಿದ್ದೇವೆ. ಅಂತಹ ಪ್ರಯತ್ನಗಳಲ್ಲಿ ಅತ್ಯಂತ ಗಮನಾರ್ಹವಾದುದು ʻಭಾರತೀಯ ದಂಡ ಸಂಹಿತೆʼ, ʻಕ್ರಿಮಿನಲ್ ಪ್ರಕ್ರಿಯಾ ಸಂಹಿತೆʼ ಮತ್ತು ʻಭಾರತೀಯ ಸಾಕ್ಷ್ಯ ಕಾಯ್ದೆʼಯನ್ನು ʻಭಾರತೀಯ ನ್ಯಾಯ ಸಂಹಿತಾʼ, ʻಭಾರತೀಯ ನಾಗರಿಕ ಸುರಕ್ಷಾ ಸಂಹಿತಾʼ ಮತ್ತು ʻಭಾರತೀಯ ಸಾಕ್ಷ್ಯ ಅಧಿನಿಯಮʼದೊಂದಿಗೆ ಬದಲಾಯಿಸುವ ನಿರ್ಧಾರ. ಭಾರತೀಯ ನ್ಯಾಯಶಾಸ್ತ್ರದ ಸಂಪ್ರದಾಯಗಳನ್ನು ಆಧರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳು, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಶಿಕ್ಷೆಯ ಬದಲು ನ್ಯಾಯ ವಿತರಣೆಗೆ ಹೆಚ್ಚಿನ ಮಹತ್ವ ನೀಡುತ್ತವೆ. ಇದಲ್ಲದೆ, ಹೊಸ ಕಾನೂನುಗಳು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಎದುರಿಸಲು ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ.
ಇಷ್ಟು ಅಗಾಧವಾದ ಸುಧಾರಣೆಗಳಿಗೆ ಕೆಚ್ಚೆದೆಯ ದೂರದೃಷ್ಟಿ ಬೇಕು. ಉತ್ತಮ ಆಡಳಿತದ ನಿಯಮಗಳನ್ನು ಮರುವ್ಯಾಖ್ಯಾನಿಸುವ ಭರವಸೆ ನೀಡುವ ಮತ್ತೊಂದು ಕ್ರಮವೆಂದರೆ ದೇಶದಲ್ಲಿ ಚುನಾವಣಾ ವೇಳಾಪಟ್ಟಿಗಳನ್ನು ಹೊಂದಾಣಿಕೆ ಮಾಡಲು ಸಂಸತ್ತಿನಲ್ಲಿ ಪರಿಚಯಿಸಲಾದ ಹೊಸ ವಿಧೇಯಕ. ‘ಒಂದು ದೇಶ-ಒಂದು ಚುನಾವಣೆʼ ಪದ್ಧತಿಯು ಆಡಳಿತದಲ್ಲಿ ಸ್ಥಿರತೆಯನ್ನು ಉತ್ತೇಜಿಸುತ್ತದೆ, ನೀತಿ ನಿಷ್ಕ್ರಿಯತೆಯನ್ನು ತಡೆಯುತ್ತದೆ, ಸಂಪನ್ಮೂಲ ಸೋರಿಕೆಯನ್ನು ತಗ್ಗಿಸುತ್ತದೆ ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ನಮ್ಮ ನಾಗರಿಕ ಪರಂಪರೆಯೂ ಹೊಸ ಚೈತನ್ಯವನ್ನು ಪಡೆದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ಮಹಾಕುಂಭವನ್ನು ಆ ಪರಂಪರೆಯ ಶ್ರೀಮಂತಿಕೆಯ ಅಭಿವ್ಯಕ್ತಿಯಾಗಿ ನಾವು ಗುರುತಿಸಬಹುದು. ನಮ್ಮ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯಾಕರ್ಷಕ ಉಪಕ್ರಮಗಳು ನಡೆಯುತ್ತಿವೆ.
ಭಾರತವು ದೊಡ್ಡ ಭಾಷಾ ವೈವಿಧ್ಯತೆಯ ಕೇಂದ್ರವಾಗಿದೆ. ಈ ಶ್ರೀಮಂತಿಕೆಯನ್ನು ಸಂರಕ್ಷಿಸಲು ಮತ್ತು ಆಚರಿಸಲು ಸರ್ಕಾರವು ಅಸ್ಸಾಮಿ, ಬಂಗಾಳಿ, ಮರಾಠಿ, ಪಾಲಿ ಮತ್ತು ಪ್ರಾಕೃತವನ್ನು ಶಾಸ್ತ್ರೀಯ ಭಾಷೆಗಳಾಗಿ ಗುರುತಿಸಿದೆ. ಈ ವರ್ಗದಲ್ಲಿ ಈಗಾಗಲೇ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಸೇರಿವೆ. ಸರ್ಕಾರವು ಈಗ 11 ಶಾಸ್ತ್ರೀಯ ಭಾಷೆಗಳಲ್ಲಿ ಸಂಶೋಧನೆಯನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ.
ಗುಜರಾತ್‌ನ ವಡ್ನಗರದಲ್ಲಿ ಭಾರತದ ಮೊದಲ ʻಪುರಾತತ್ವ ಅನುಭವ ವಸ್ತುಸಂಗ್ರಹಾಲಯʼ ನಿರ್ಮಾಣ ಪೂರ್ಣಗೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಕ್ರಿ.ಪೂ 800ರ ಅವಧಿಯದ್ದೆಂದು ಅಂದಾಜಿಸಲಾದ ಮಾನವ ವಸಾಹತುಗಳ ಪುರಾವೆಗಳನ್ನು ತೋರಿಸುವ ಉತ್ಖನನ ಸ್ಥಳದ ಪಕ್ಕದಲ್ಲೇ ಈ ವಸ್ತುಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ವಿವಿಧ ಯುಗಗಳ ವ್ಯಾಪಕ ಶ್ರೇಣಿಯ ಕಲೆಗಳು, ಕರಕುಶಲ ವಸ್ತುಗಳು ಮತ್ತು ಸಾಂಸ್ಕೃತಿಕ ಅಂಶಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ.
ಪ್ರೀತಿಯ ದೇಶವಾಸಿಗಳೇ,
ನಾಳೆಯ ಭಾರತವನ್ನು ರೂಪಿಸಲಿರುವುದು ಇಂದಿನ ನಮ್ಮ ಯುವ ಪೀಳಿಗೆಯೇ. ಶಿಕ್ಷಣವು ಈ ಯುವ ಮನಸ್ಸುಗಳನ್ನು ರೂಪಿಸುತ್ತದೆ. ಆದ್ದರಿಂದ, ಸರ್ಕಾರವು ಶಿಕ್ಷಣದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾನದಂಡವನ್ನು ಸುಧಾರಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಇಲ್ಲಿಯವರೆಗಿನ ಫಲಿತಾಂಶಗಳು ಕೇವಲ ಪ್ರೋತ್ಸಾಹದಾಯವಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲಾಗಿವೆ. ಕಳೆದ ದಶಕದಲ್ಲಿ ಕಲಿಕೆಯ ಗುಣಮಟ್ಟ, ಭೌತಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಸೇರ್ಪಡೆಯ ದೃಷ್ಟಿಯಿಂದ ಶಿಕ್ಷಣದಲ್ಲಿ ಭಾರಿ ಪರಿವರ್ತನೆ ಕಂಡುಬಂದಿದೆ. ಬೋಧನಾ ಮಾಧ್ಯಮಕ್ಕಾಗಿ, ಪ್ರಾದೇಶಿಕ ಭಾಷೆಗಳನ್ನು ಹೆಚ್ಚಿನ ಮಟ್ಟದಲ್ಲಿ ಉತ್ತೇಜಿಸಲಾಗುತ್ತದೆ. ವಿದ್ಯಾರ್ಥಿಗಳ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದು ಆಶ್ಚರ್ಯಕರವೇನಲ್ಲ. ಈ ಪರಿವರ್ತನೆಯಲ್ಲಿ ಮಹಿಳಾ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಏಕೆಂದರೆ ಕಳೆದ ದಶಕದಲ್ಲಿ ಶಿಕ್ಷಕರಾದವರಲ್ಲಿ 60 ಪ್ರತಿಶತಕ್ಕೂ ಹೆಚ್ಚು ಮಹಿಳೆಯರೇ ಇದ್ದಾರೆ.
ವೃತ್ತಿಪರ ಮತ್ತು ಕೌಶಲ್ಯ ಶಿಕ್ಷಣದ ವಿಸ್ತರಣೆ ಹಾಗೂ ಅದನ್ನು ಮುಖ್ಯವಾಹಿನಿಗೆ ತರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಯುವಕರಿಗೆ ಕಾರ್ಪೊರೇಟ್ ವಲಯದಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸುವ ಯೋಜನೆಯನ್ನು ಆರಂಭಿಸಲಾಗಿದೆ.
ಶಾಲಾ ಮಟ್ಟದ ಶಿಕ್ಷಣದಲ್ಲಿ ಬಲವಾದ ಅಡಿಪಾಯ ಹಾಕಲಾಗುತ್ತಿದ್ದು, ಭಾರತವು ಇಂದು ತಂತ್ರಜ್ಞಾನದ ಜೊತೆಗೆ ಜ್ಞಾನದ ವಿವಿಧ ಶಾಖೆಗಳಲ್ಲಿ, ಅದರಲ್ಲೂ ವಿಶೇಷವಾಗಿ ವಿಜ್ಞಾನದಲ್ಲಿ ಹೊಸ ಎತ್ತರಕ್ಕೆ ಏರುತ್ತಿದೆ. ಉದಾಹರಣೆಗೆ, ಬೌದ್ಧಿಕ ಆಸ್ತಿ ಫೈಲಿಂಗ್ ವಿಷಯದಲ್ಲಿ ಭಾರತವು ವಿಶ್ವದಲ್ಲಿ ಆರನೇ ಸ್ಥಾನದಲ್ಲಿದೆ. ʻಜಾಗತಿಕ ನಾವೀನ್ಯತೆ ಸೂಚ್ಯಂಕʼದಲ್ಲಿ ನಾವು ನಿರಂತರವಾಗಿ ನಮ್ಮ ಶ್ರೇಯಾಂಕವನ್ನು ಸುಧಾರಿಸಿದ್ದೇವೆ, 2020ರಲ್ಲಿ 48ನೇ ಸ್ಥಾನದಲ್ಲಿದ್ದ ನಾವು 2024ರಲ್ಲಿ 39ನೇ ಸ್ಥಾನಕ್ಕೆ ಏರಿದ್ದೇವೆ.
ಹೆಚ್ಚುತ್ತಿರುವ ಆತ್ಮವಿಶ್ವಾಸದ ಜೊತೆಗೆ, ಸರಣಿ ಉಪಕ್ರಮಗಳ ಮೂಲಕ ನಾವು ಅತ್ಯಾಧುನಿಕ ಸಂಶೋಧನೆಯಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದ್ದೇವೆ. ತಂತ್ರಜ್ಞಾನದ ಈ ಹೊಸ ಗಡಿಯಲ್ಲಿ ರೋಮಾಂಚಕ ಮತ್ತು ನವೀನ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ನಮ್ಮ ʻರಾಷ್ಟ್ರೀಯ ಕ್ವಾಂಟಮ್ ಮಿಷನ್ʼ ಹೊಂದಿದೆ. ಮತ್ತೊಂದು ಗಮನಾರ್ಹ ಆರಂಭವೆಂದರೆ ʻಅಂತರಶಿಸ್ತೀಯ ಸೈಬರ್ ಭೌತಿಕ ವ್ಯವಸ್ಥೆಯ ರಾಷ್ಟ್ರೀಯ ಯೋಜನೆʼ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ರೊಬಾಟಿಕ್ಸ್ ಮತ್ತು ಸೈಬರ್ ಭದ್ರತೆ ಸೇರಿದಂತೆ ಹಲವಾರು ಸುಧಾರಿತ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸಲು ಇದನ್ನು ರೂಪಿಸಲಾಗಿದೆ. ಈ ತಂತ್ರಜ್ಞಾನಗಳನ್ನು ಇತ್ತೀಚಿನವರೆಗೂ ಭವಿಷ್ಯಕ್ಕೆ ಸಂಬಂಧಿಸಿದವು ಎಂದು ಕರೆಯಲಾಗುತ್ತಿತ್ತು, ಆದರೆ ಅವು ಬಹಳ ವೇಗವಾಗಿ ನಮ್ಮ ದೈನಂದಿನ ಜೀವನದ ಭಾಗವಾಗುತ್ತಿವೆ.
ʻಜಿನೋಮ್ಇಂಡಿಯಾ ಯೋಜನೆʼಯು ಪ್ರಕೃತಿಯನ್ನು ಅನ್ವೇಷಿಸುವಲ್ಲಿ ಒಂದು ರೋಮಾಂಚಕಾರಿ ಉಪಕ್ರಮ ಮಾತ್ರವಲ್ಲ; ಇದು ಭಾರತದ ವಿಜ್ಞಾನದ ಇತಿಹಾಸದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಅಡಿಯಲ್ಲಿ, ಕೇವಲ ಇದೊಂದೇ ತಿಂಗಳಲ್ಲಿ 10,000 ಭಾರತೀಯರ ʻಜೀನೋಮ್ ಸೀಕ್ವೆನ್ಸಿಂಗ್ʼ ಅನ್ನು ಹೆಚ್ಚಿನ ಸಂಶೋಧನೆಗೆ ಲಭ್ಯವಾಗುವಂತೆ ಮಾಡಲಾಗಿದೆ. ಈ ಮಹತ್ವದ ಯೋಜನೆಯು ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದೈತ್ಯ ಹೆಜ್ಜೆ ಇಡುತ್ತಿದೆ. ಈ ತಿಂಗಳು, ʻಇಸ್ರೋʼ ತನ್ನ ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಪ್ರಯೋಗದೊಂದಿಗೆ ಮತ್ತೊಮ್ಮೆ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಭಾರತವು ಈಗ ಈ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ನಾಲ್ಕನೇ ದೇಶವಾಗಿದೆ.
ಒಂದು ರಾಷ್ಟ್ರವಾಗಿ ಹೆಚ್ಚುತ್ತಿರುವ ನಮ್ಮ ಆತ್ಮವಿಶ್ವಾಸದ ಮಟ್ಟವು ಕ್ರೀಡೆ ಮತ್ತು ಆಟಗಳ ಕ್ಷೇತ್ರದಲ್ಲಿಯೂ ಪ್ರತಿಫಲಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಆಟಗಾರರು ರೋಮಾಂಚಕ ಯಶೋಗಾಥೆಗಳನ್ನು ಬರೆದಿದ್ದಾರೆ. ಕಳೆದ ವರ್ಷ, ನಮ್ಮ ಕ್ರೀಡಾಪಟುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಛಾಪು ಮೂಡಿಸಿದರು. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ನಾವು ನಮ್ಮ ಅತಿದೊಡ್ಡ ತಂಡವನ್ನು ಕಳುಹಿಸಿದೆವು ಮತ್ತು ಅವರು ಅತ್ಯುತ್ತಮ ಪ್ರದರ್ಶನದೊಂದಿಗೆ ಮರಳಿದರು. ʻಫಿಡೆ ಚೆಸ್ ಒಲಿಂಪಿಯಾಡ್ʼನಲ್ಲಿ ನಮ್ಮ ಪುರುಷರು ಮತ್ತು ಮಹಿಳೆಯರು ಚಿನ್ನ ಗೆಲ್ಲುವ ಮೂಲಕ ನಮ್ಮ ಚೆಸ್ ಚಾಂಪಿಯನ್‌ಗಳು ಜಾಗತಿಕವಾಗಿ ಗಮನ ಸೆಳೆದರು. 2024ರಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಡಿ.ಗುಕೇಶ್ ಈ ಸಾಧನೆಯ ಕಿರೀಟಪ್ರಾಯವಾಗಿದ್ದಾರೆ.
ತಳಮಟ್ಟದ ತರಬೇತಿ ಸೌಲಭ್ಯದಲ್ಲಿ ಉತ್ತಮ ಸುಧಾರಣೆಯ ನೆರವಿನೊಂದಿಗೆ ಗೆಲುವು ಸಾಧಿಸುತ್ತಿರುವ ಈ ಕ್ರೀಡಾಪಟುಗಳು ನಮ್ಮನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಮುಂದಿನ ಪೀಳಿಗೆಗೆ ಉನ್ನತ ಮತ್ತು ಉನ್ನತ ಗುರಿಯನ್ನು ಹೊಂದಲು ಸ್ಫೂರ್ತಿದಾತರಾಗಿದ್ದಾರೆ.
ವಿದೇಶದಲ್ಲಿ ವಾಸಿಸುವ ನಮ್ಮ ಸಹೋದರ ಸಹೋದರಿಯರು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಶ್ರೇಷ್ಠತೆಯನ್ನು ವಿಶ್ವದ ವಿವಿಧ ಭಾಗಗಳಿಗೆ ಕೊಂಡೊಯ್ದಿದ್ದಾರೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳಿಂದ ನಮಗೆ ಹೆಮ್ಮೆ ತಂದಿದ್ದಾರೆ. ಅವರು ಸದಾ ತಮ್ಮನ್ನು ಭಾರತದ ಯಶೋಗಾಥೆಯ ಒಂದು ಭಾಗವೆಂದು ಪರಿಗಣಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ʻಪ್ರವಾಸಿ ಭಾರತೀಯ ದಿವಸ್ʼನಲ್ಲಿ ನಾನು ಹೇಳಿದಂತೆ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾದ ʻವಿಕಸಿತ ಭಾರತʼವನ್ನು ನಿರ್ಮಿಸುವಲ್ಲಿ ಅವರ ಸಕ್ರಿಯ ಮತ್ತು ಉತ್ಸಾಹಭರಿತ ಭಾಗವಹಿಸುವಿಕೆಯ ಬಗ್ಗೆ ನನಗೆ ವಿಶ್ವಾಸವಿದೆ.
ಪ್ರೀತಿಯ ದೇಶವಾಸಿಗಳೇ,
ವೈವಿಧ್ಯಮಯ ಕ್ಷೇತ್ರಗಳಲ್ಲಿ ಆಗುತ್ತಿರುವ ಗಣನೀಯ ಮತ್ತು ದೃಢವಾದ ಪ್ರಗತಿಗೆ ಧನ್ಯವಾದಗಳು. ನಾವು ನಮ್ಮ ತಲೆಗಳನ್ನು ಮೇಲೆತ್ತಿ ಭವಿಷ್ಯದತ್ತ ಸಾಗುತ್ತಿದ್ದೇವೆ. ನಮ್ಮ ಭವಿಷ್ಯದ ಕೀಲಿಕೈ ನಮ್ಮ ಯುವಕರು ಮತ್ತು ವಿಶೇಷವಾಗಿ ಯುವತಿಯರು. ನಾವು ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸಲಿರುವ ನಾಳಿನ ಭಾರತವನ್ನು ಅವರ ಕನಸುಗಳು ರೂಪಿಸುತ್ತಿವೆ. ಮತ್ತು ಇಂದಿನ ಮಕ್ಕಳು 2050ರ ಜನವರಿ 26ರಂದು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವಾಗ, ʻನಮ್ಮ ಸಾಟಿಯಿಲ್ಲದ ಸಂವಿಧಾನದ ಮಾರ್ಗದರ್ಶನ ಇಲ್ಲದೆ ಈ ಮಹಾನ್ ಸಾಧನೆ ಸಾಧ್ಯವಾಗುತ್ತಿರಲಿಲ್ಲʼ ಎಂದು ಅವರು ತಮ್ಮ ಮುಂದಿನ ಪೀಳಿಗೆಗೆ ಹೇಳುತ್ತಾರೆ.
ನಮ್ಮ ಭವಿಷ್ಯದ ಪೀಳಿಗೆಯು ವಿಶ್ವದಲ್ಲಿ ಸ್ವತಂತ್ರ ಭಾರತದ ಧ್ಯೇಯವನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಮಾತುಗಳಲ್ಲಿ ಹೇಳುವುದಾದರೆ, ಅವರ ಒಂದು ಹೇಳಿಕೆಯನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ:
“ಸ್ವರಾಜ್ಯದ ಉದ್ದೇಶವು ನಮ್ಮನ್ನು ನಾಗರಿಕರನ್ನಾಗಿ ಮಾಡುವುದು ಮತ್ತು ನಮ್ಮ ನಾಗರಿಕತೆಯನ್ನು ಶುದ್ಧೀಕರಿಸುವುದು ಮತ್ತು ಸ್ಥಿರಗೊಳಿಸುವುದು ಅಲ್ಲದಿದ್ದರೆ, ಅಂತಹ ಸ್ವರಾಜ್ಯಕ್ಕೆ ಮೌಲ್ಯವಿಲ್ಲ. ನಮ್ಮೆಲ್ಲಾ ಸಾರ್ವಜನಿಕ ಅಥವಾ ಖಾಸಗಿ ವ್ಯವಹಾರಗಳಲ್ಲಿ ನೈತಿಕತೆಗೆ ನಾವು ಅತ್ಯುನ್ನತ ಸ್ಥಾನವನ್ನು ನೀಡುತ್ತೇವೆ ಎಂಬುದು ನಮ್ಮ ನಾಗರಿಕತೆಯ ಮೂಲತತ್ವವಾಗಿದೆ.ʼʼ
ಇಂದು, ಗಾಂಧೀಜಿಯವರ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಅವರು ನಂಬಿ-ನಡೆದ ಸತ್ಯ ಮತ್ತು ಅಹಿಂಸೆ, ಇಡೀ ಜಗತ್ತಿಗೆ ಪ್ರಸ್ತುತವಾಗಿ ಮುಂದುವರಿಯುತ್ತವೆ. ಹಕ್ಕುಗಳು ಮತ್ತು ಕರ್ತವ್ಯಗಳು ನಾಣ್ಯದ ಎರಡು ಮುಖಗಳು – ವಾಸ್ತವವಾಗಿ, ಹಕ್ಕುಗಳ ನಿಜವಾದ ಮೂಲವೇ ಕರ್ತವ್ಯ ಎಂದು ಅವರು ನಮಗೆ ಕಲಿಸಿದರು. ಇಂದು ನಾವು ಅವರು ಕಲಿಸಿದ ಸಹಾನುಭೂತಿಯ ಪಾಠಗಳನ್ನು ಸಹ ಸ್ಮರಿಸಬಹುದು – ನಮ್ಮ ಮಾನವ ನೆರೆಹೊರೆಯವರ ಬಗ್ಗೆ ಮಾತ್ರವಲ್ಲ, ನಮ್ಮ ಇತರ ನೆರೆಹೊರೆಯವರಾದ ಸಸ್ಯ ಮತ್ತು ಪ್ರಾಣಿಗಳು, ನದಿಗಳು ಮತ್ತು ಪರ್ವತಗಳ ಬಗ್ಗೆಯೂ ಸಹಾನುಭೂತಿ ಹೊಂದಿರಬೇಕು ಎಂದು ಅವರು ಬೋಧಿಸಿದರು.
ಹವಾಮಾನ ಬದಲಾವಣೆಯ ಜಾಗತಿಕ ಅಪಾಯವನ್ನು ಎದುರಿಸುವ ಪ್ರಯತ್ನಗಳಿಗೆ ನಾವು ಪ್ರತಿಯೊಬ್ಬರೂ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಎರಡು ಅನುಕರಣೀಯ ಉಪಕ್ರಮಗಳು ನಡೆದಿವೆ. ಜಾಗತಿಕ ಮಟ್ಟದಲ್ಲಿ, ಪರಿಸರವನ್ನು ಸಂರಕ್ಷಿಸುವಲ್ಲಿ ವ್ಯಕ್ತಿಗಳು ಮತ್ತು ಸಮುದಾಯಗಳನ್ನು ಹೆಚ್ಚು ಸಕ್ರಿಯವಾಗಿರಲು ಹಾಗೂ ಪ್ರೇರೇಪಿಸಲು ಭಾರತವು ʻಪರಿಸರಕ್ಕಾಗಿ ಜೈವನಶೈಲಿʼ ಎಂಬ ಸಾಮೂಹಿಕ ಆಂದೋಲನವನ್ನು ಮುನ್ನಡೆಸುತ್ತಿದೆ. ಕಳೆದ ವರ್ಷ, ವಿಶ್ವ ಪರಿಸರ ದಿನದಂದು, ನಾವು ‘ತಾಯಿಯ ಹೆಸರಲ್ಲಿ ಒಂದು ಮರʼ ಎಂಬ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದು ನಮ್ಮ ತಾಯಂದಿರ ಮತ್ತು ಪ್ರಕೃತಿ ಮಾತೆಯ ಪೋಷಣೆಯ ಶಕ್ತಿಗೆ ಸಲ್ಲಿಸಿದ ಗೌರವ. 80 ಕೋಟಿ ಸಸಿಗಳನ್ನು ನೆಡುವ ಗುರಿಯನ್ನು ಗಡುವಿನ ಮುಂಚಿತವಾಗಿ ಸಾಧಿಸಲಾಗಿದೆ. ಜನರು ತಮ್ಮ ವೈಯಕ್ತಿಕ ಚಳವಳಿಗಳ ಭಾಗವಾಗಿ ಅಳವಡಿಸಿಕೊಳ್ಳುವ ನವೀನ ನಡೆಗಳಿಂದ ಜಗತ್ತು ಸಹ ಕಲಿಯಬಬಹುದಾಗಿದೆ.
ಪ್ರೀತಿಯ ದೇಶವಾಸಿಗಳೇ,
ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ನಮ್ಮ ಗಡಿಗಳನ್ನು ಕಾಯುತ್ತಿರುವ ಸೈನಿಕರಿಗೆ ಮತ್ತು ಗಡಿಯೊಳಗೆ ನಮ್ಮನ್ನು ಸುರಕ್ಷಿತವಾಗಿರಿಸುವ ಪೊಲೀಸ್ ಮತ್ತು ಅರೆಸೈನಿಕ ಸಿಬ್ಬಂದಿಗೆ ನನ್ನ ಅಭಿನಂದನೆಗಳು. ನ್ಯಾಯಾಂಗದ ಸದಸ್ಯರು, ಅಧಿಕಾರಶಾಹಿ ಮತ್ತು ವಿದೇಶದಲ್ಲಿರುವ ನಮ್ಮ ರಾಯಭಾರ ಕಚೇರಿಗಳಿಗೆ ನನ್ನ ಅಭಿನಂದನೆಗಳು. ನಿಮ್ಮ ಎಲ್ಲಾ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು.
ಫೈನಾನ್ಸ್ ನವರನ್ನು ಬಗ್ಗಿಸಿ ಕುಟುಂಬ ಮನೆಗೆ ವಾಪಸ್ ಸೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಇದು ರಾಜ್ಯದಲ್ಲೇ ಮೊದಲು