ಮಂಡ್ಯ : ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡೋದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು.
ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ, ಡಿ.ಹೊಸೂರು, ಹಳ್ಳಿಕೆರೆ, ಅಂಕೇಗೌಡನದೊಡ್ಡಿ ಹಾಗೂ ಕೆಂಪೇಗೌಡನದೊಡ್ಡಿ ಗ್ರಾಮಗಳಲ್ಲಿ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆ.ಬೆಳ್ಳೂರು ಗ್ರಾಮದ ಶಾಲಾ ಕಟ್ಟಡ ನಿರ್ಮಾಣಕ್ಕೆ ತಡೆ ಮಾಡುವಂತೆ ನಾನು ಯಾವ ಅಧಿಕಾರಿಗೂ ಧಮ್ಕಿ ಹಾಕಿಲ್ಲ. ಪೂಜೆ ಎಲ್ಲಾ ಮುಗಿದ ಮೇಲೆ ನನಗೆ ಗೊತ್ತಾಯಿತು. ನಾನು ಯಾವುದೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿಲ್ಲ. ನಿರೀಕ್ಷೆಗೂ ಮೀರಿ ಜಾಸ್ತಿ ಕೆಲಸ ಮಾಡೋದು, ಜನರ ಜೊತೆ ಸದಾ ಕಾಲ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿಸೋದು, ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಇರೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸಿದರು.
ಮದ್ದೂರು ಕ್ಷೇತ್ರದಲ್ಲಿ ಯಾರೇ ಬಂದು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲು ಬಂದರೇ ತಾನೇ ಖುದ್ದಾಗಿ ಹೋಗಿ ಸ್ವಾಗತ ಕೋರುತ್ತೇನೆ. ಕ್ಷೇತ್ರದಲ್ಲಿರುವ ನೂರಾರು ಸಮಸ್ಯೆಗಳು ಬಗೆಹರಿಯಬೇಕು. ಎಲ್ಲಾ ಸಮಸ್ಯೆಗಳು ನನ್ನ ಮೇಲಿದೆ.
ಎಷ್ಟು ಸಮಸ್ಯೆ ಕಡಿಮೆಯಾಗುತ್ತೋ ಅಷ್ಟು ನನಗೆ ಒಳ್ಳೆದು ಹೀಗಾಗಿ ಯಾರೇ ಬಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದರೇ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡ್ತಿನಿ ಎಂದರು.
110 ಹಳ್ಳಿಗಳಿಗೆ ವಿಶೇಷ ಅನುದಾನದ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದೇನೆ. ಎರಡುಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು. ಮೂರು ತಿಂಗಳಲ್ಲಿ ಬನ್ನಹಳ್ಳಿ ಏತ ನೀರಾವರಿ ಯೋಜನೆ ಮೂಲಕ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಹಾಗೂ ಈ ಭಾಗದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗೆ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಇನ್ನು ಮದ್ದೂರು ತಾಲೂಕಿನ ಅಂಕೇಗೌಡನದೊಡ್ಡಿ ಗ್ರಾಮಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ಆಗಮಿಸಿದ್ದ ವೇಳೆ ಮಹಿಳೆಯರು ಸಮಸ್ಯೆಗಳಿಗೆ ದೂರುಗಳ ಸುರಿಮಳೆಗೈದರು.
ಈ ಮಹಿಳೆಯರು ಮಾತನಾಡಿ, ಗ್ರಾಮಕ್ಕೆ ಸರ್ಕಾರಿ ಬಸ್ ಬರೋದಿಲ್ಲ. ಬಸ್ ಗಾಗಿ ಮೂರು ಕಿ.ಮೀ ಹೋಗಬೇಕು. ಮನೆಗೆ ಮತ್ತು ವ್ಯವಸಾಯಕ್ಕಾಗಿ ಒಂದು ಸಾವಿರ ಅಡಿ ಬೋರ್ ವೆಲ್ ಕೊರೆದರು ನೀರು ಬರ್ತಿಲ್ಲ. ಪಂಚಾಯಿತಿಯಿಂದ ಕುಡಿಯಲು, ಮನೆ ಬಳಕೆಗೂ ಸಹ ಸರಿಯಾಗಿ ನೀರು ಬಿಡ್ತಿಲ್ಲ. ಬೇಸಿಗೆಗೂ ಮುನ್ನವೇ ಈ ರೀತಿ ತೊಂದರೆಯಾಗುತ್ತಿದ್ದು ನಾವು ಹೇಗೆ ಜೀವನ ಮಾಡೋದು ಎಂದು ಅಂಕೆಗೌಡನದೊಡ್ಡಿ ಗ್ರಾಮದ ಮಹಿಳೆಯರು ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದರು.
ಸಮಸ್ಯೆ ಬಗ್ಗೆ ಮಾತನಾಡಿದ ಶಾಸಕ ಉದಯ್ ಇನ್ನು ಮೂರು ತಿಂಗಳಲ್ಲಿ ಬನ್ನಹಳ್ಳಿ ಏತ ನೀರಾವರಿ ಯೋಜನೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಹೀಗಾಗಿ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗುವುದು. ಗ್ರಾಮದ ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸಿದಾಗ ಬೋರ್ ವೆಲ್ ನಲ್ಲಿ ನೀರು ಹರಿಯಲಿದ್ದು, ಆದಷ್ಟು ಬೇಗ ಕುಡಿಯುವ ನೀರು ಸಮಸ್ಯೆಗೆ ಮುಕ್ತಿ ನೀಡಲಾಗುವುದು. ಹಾಗೂ ಗ್ರಾಮದ ಮೂಲ ಸೌಕರ್ಯ, ಸಾರಿಗೆ ಬಸ್ ಸೌಲಭ್ಯಗಳಿಗೆ ಕೆಲ ದಿನಗಳಲ್ಲೇ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮುಖಂಡರಾದ ಸಂದೀಪ್, ಜಯರಾಂ, ಕೆಂಪರಾಜು, ಅಪ್ಪೇಗೌಡ, ಮಾದೇಶ್, ಮಹೇಂದ್ರ, ಸತೀಶ್, ತಿಮ್ಮಪ್ಪ, ಪಿಡಬ್ಲ್ಯೂಡಿ ಎಇಇ ದೇವಾನಂದ್, ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ದೊಡ್ಡ AI ಪರಿಣಾಮಕ್ಕೆ ಸಿದ್ಧರಾಗಲು ಉದ್ಯೋಗಿಗಳಿಗೆ ಗೂಗಲ್ ಕರೆ: ಸ್ವಯಂಪ್ರೇರಿತ ನಿರ್ಗಮನಕ್ಕೂ ಸುಳಿವು
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








