ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈಗ ಮುಂದಿನ 5 ದಿನಗಳ ಕಾಲ ಕೆಲ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಈ ಕುರಿತಂತೆ ರಾಜ್ಯ ಹವಾಮಾನ ಇಲಾಖೆಯು ಮಾಹಿತಿ ಹಂಚಿಕೊಂಡಿದ್ದು, ಮುಂದಿನ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದಂತ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೇ ಜೂನ್.21 ಹಾಗೂ 22ರಂದು ಆರೆಂಜ್ ಅಲರ್ಟ್, ಜೂನ್.23ರಂದು ರೆಡ್ ಅಲರ್ಟ್ ಅನ್ನು ಈ ಜಿಲ್ಲೆಗಳಲ್ಲಿ ಘೋಷಣೆ ಮಾಡಿದೆ.
ಇನ್ನೂ ಉತ್ತರ ಒಳನಾಡಿನ ಧಾರವಾಡ ಜಿಲ್ಲೆ, ಬೀದರ್ ಹಾಗೂ ಹಾವೇರಿ ಜಿಲ್ಲೆಯಲ್ಲೂ ಜೂನ್.22 ಮತ್ತು 23ರಂದು ಮಳೆಯಾಗಲಿದೆ. ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಕಾರಣ, ಯೆಲ್ಲೋ ಅಲರ್ಟ್ ಅನ್ನು ಹವಾಮಾನ ಇಲಾಖೆ ಘೋಷಣೆ ಮಾಡಿದೆ.
ದಕ್ಷಿಣ ಒಳನಾಡಿನ ಚಾಮರಾಜನಗರದಲ್ಲಿ ಜೂನ್.22ರಂದು ಭಾರೀ ಮಳೆಯಾಗುವ ಕಾರಣ ಯೆಲ್ಲೋ ಅಲರ್ಟ್ ಹಾಗೂ ಜೂನ್.23ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೂನ್.21ರಂದು ಯೆಲ್ಲೋ, 22ರಂದು ಆರೆಂಜ್ ಹಾಗೂ ಜೂನ್.23ರಂದು ಭಾರೀ ಮಳೆಯ ಕಾರಣ ರೆಡ್ ಅಲರ್ಟ್ ಘೋಷಣೆಯನ್ನು ಹವಾಮಾನ ಇಲಾಖೆ ಘೋಷಿಸಿದೆ.
ಮಂಡ್ಯ ಜಿಲ್ಲೆಯಲ್ಲೂ ವರುಣ ಆರ್ಭಟಿಸಲಿದ್ದಾರೆ. ಜೂನ್.22, 23ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ರಾಮನಗರ, ತುಮಕೂರು ಜಿಲ್ಲೆಯಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಜೂನ್.22ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದರೇ, ಜೂನ್.21ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್, 22 ಹಾಗೂ 23ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.