ನವದೆಹಲಿ: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ಭೂಮಿಯಲ್ಲಿನ ಅಪರೂಪದ ಅಯಸ್ಕಾಂತಗಳ (ರೇರ್ ಅರ್ಥ್ ಮೆಟಲ್ಸ್) ಉತ್ಪಾದನೆ-ಬಳಕೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕೆ ದೊಡ್ಡ ಪ್ರಮಾಣದ ಘೋಷಣೆಗಳನ್ನು ಮಾಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು; ಇವಿ ಬ್ಯಾಟರಿಗಳು ಮತ್ತು ಇವಿ ವಾಹನಗಳ ಚಲನಶೀಲತೆಯನ್ನು ಉತ್ತೇಜಿಸಲು ಬಜೆಟ್ ನಲ್ಲಿ ಒತ್ತು ನೀಡಲಾಗಿದ್ದು; ಬ್ಯಾಟರಿ ತಯಾರಿಕೆಗೆ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಮುಂದುವರಿಸಲಾಗಿದೆ. ಅಲ್ಲದೆ; ಬ್ಯಾಟರಿ ಉತ್ಪಾದನೆ ಮತ್ತು ಇವಿ ಪೂರೈಕೆ ಸರಪಳಿಯನ್ನು ಬಲಪಡಿಸಲು ಲಿಥಿಯಂ-ಐಯಾನ್ ಕೋಶಗಳನ್ನು ತಯಾರಿಸಲು ಬಳಕೆ ಮಾಡಲಾಗುವ ಬಂಡವಾಳ ಸರಕುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕ (ಬಿಸಿಡಿ) ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಸೌರ ಗಾಜಿನ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೋನೇಟ್ ಆಮದಿನ ಮೇಲೆ ಮೂಲ ಅಬಕಾರಿ ಸುಂಕ (BCD) ವಿನಾಯಿತಿ ನೀಡಲಾಗಿದೆ. ದೇಶೀಯ ಸೌರ ಉತ್ಪಾದನೆಯನ್ನು ಬಲಪಡಿಸಲು ಮತ್ತು ಇವಿ, ನವೀಕರಿಸಬಹುದಾದ ಪೂರೈಕೆ ಸರಪಳಿಗಳನ್ನು ಬೆಂಬಲಿಸಲು ಉತ್ತೇಜನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭೂಮಿಯಲ್ಲಿನ ಅಪರೂಪದ ಖನಿಜಗಳನ್ನು ಹೊರತೆಗೆದು ಬಳಕೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲಾಗಿದೆ. ಒಡಿಶಾ, ಕೇರಳ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ರೇರ್ ಅರ್ಥ್ ಕಾರಿಡಾರ್ ಗಳನ್ನು ಸ್ಥಾಪಿಸುವ ಬಗ್ಗೆ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ (REPM) ಯೋಜನೆ ಅಡಿಯಲ್ಲಿ ಸಚಿವ ಸಂಪುಟವು ಅನುಮೋದಿಷಸಿರುವ ₹7,280 ಕೋಟಿ ವೆಚ್ಚದ ಯೋಜನೆ ಮುಂದುವರಿದ ಭಾಗವಾಗಿ ರೇರ್ ಅರ್ಥ್ ಕಾರಿಡಾರ್ʼಗಳು ತಲೆ ಎತ್ತಲಿವೆ ಎಂದು ಸಚಿವರು ಹೇಳಿದ್ದಾರೆ.
ಇಂಗಾಲ ಹೊರಸೂಸುವಿಕೆ ಶೂನ್ಯಕ್ಕೆ ಒತ್ತು
ಉಕ್ಕು ಸಚಿವಾಲಯಕ್ಕೆ ಸಂಬಂಧಿಸಿ ಉಕ್ಕು ವಲಯದ ಸುಸ್ಥಿರತೆಯನ್ನು ಉತ್ತೇಜಿಸುವುದು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಬಜೆಟ್ ಒತ್ತು ನೀಡಿದೆ. ಉಕ್ಕು, ಸಿಮೆಂಟ್ ಮತ್ತು ಸಂಸ್ಕರಣಾಗಾರಗಳಿಂದ ಇಂಗಾಲದ ಹೊರಸೂಸುವಿಕೆ ವಲಯಗಳಿಗೆ ₹20,000 ಕೋಟಿಗಳ ಪ್ರಸ್ತಾವಿತ ಹೂಡಿಕೆಯೊಂದಿಗೆ ಇಂಗಾಲದ ನಿವಾರಣೆಗೆ ಒತ್ತು ಕೊಡಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಈ ಉಪಕ್ರಮವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಬೆಂಬಲಿಸುತ್ತದೆ, ಅದೇ ಸಮಯದಲ್ಲಿ ಭಾರತದ ಪ್ರಮುಖ ಕೈಗಾರಿಕೆಗಳು ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಪರಿಸರ ಜವಾಬ್ದಾರಿಯುತವಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.







