ಬೀದರ್ : ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದರು.
ಜಿಲ್ಲೆಯಲ್ಲಿ 42 ಡಿಗ್ರಿ ಸೆಲ್ಸಿಯಸ್ ಅತಿ ಹೆಚ್ಚು ತಾಪಮಾನ ದಾಖಲಾಗಿದೆ ಇದು ಹೀಗೆ ಇನ್ನೂ ಮುಂದುವರೆಯಲಿದ್ದು, ಜನರು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಗಳ ಈ ಸಮಯದಲ್ಲಿ ಹೆಚ್ಚಾಗಿ ಹೊರಗಡೆ ತಿರುಗಾಡಬಾರದು. ಮತ್ತು ಹೊರಗಡೆ ಹೋಗುವಾಗ ತೆಳುವಾದ ಬಟ್ಟೆ ಹಾಗೂ ಚಪ್ಪಲಿಗಳನ್ನು ಹಾಕಿಕೊಂಡು ಹೋಗಬೇಕು. ತಂಪಾದ ಹಣ್ಣಿನ ರಸ, ಮಜ್ಜಿಗೆ ಹಾಗೂ ಏಳೆ ನೀರನ್ನು ಹೆಚ್ಚಾಗಿ ಸೇವಿಸಬೇಕೆಂದರು.
ತಾಪಮಾನ ಹೆಚ್ಚಾಗಿರುವ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನ ತಹಶಿಲ್ದಾರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ನಗರ ಸಭೆ, ಪುರಸಭೆ, ಗ್ರಾಮ ಪಂಚಾಯತ್ ಮುಖಾಂತರ ಹೆಚ್ಚಿನ ಪ್ರಚಾರ ನೀಡುವ ಮೂಲಕ ಈ ಮಾಹಿತಿಯನ್ನು ಜನರಿಗೆ ತಲುಪಿಸಬೇಕು ಅಂದಾಗ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನನಿಬಿಡ ಪ್ರದೇಶಗಳಾದ ಮಾರ್ಕೆಟ್, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಿAದ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಂಬAಧಿಸಿದ ಆಯಾ ದೇವಾಲಯಗಳ ಮುಖ್ಯಸ್ಥರಿಗೆ ತಿಳಿಸಬೇಕು. ಕಟ್ಟಡ ಕಾರ್ಮಿಕರು ಬಿಸಿಲಿರುವ ಸಂದರ್ಭದಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಗಳ ಅವಧಿಯಲ್ಲಿ ಕೆಲಸ ಮಾಡಬಾರದು ಈ ಕುರಿತು ಕಾರ್ಮಿಕ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಬೇಕೆಂದು ಹೇಳಿದರು.
ಕಳೆದ ವರ್ಷ 38 ಮತ್ತು 39 ಡಿಗ್ರಿ ತಾಪಮಾನ ದಾಖಲಾಗಿತ್ತು, ಈ ವರ್ಷ ಸೆಪ್ಟೆಂಬರ್‌ನಲ್ಲಿ ಮಳೆಯಾಗದ ಕಾರಣ ತಾಪಮಾನ ಹೆಚ್ಚಾಗಿದೆ. ಟೀ, ಕಾಫಿ ಹಾಗೂ ಮಧ್ಯಪಾನದಿಂದ ಜನರು ದೂರ ಇರಬೇಕು. ಸಾಕು ಪ್ರಾಣಿಗಳಿಗೆ ಸಾಕಷ್ಟು ನೀರು ಇಡಬೇಕು. ಸುಸ್ತು, ವಾಂತಿ, ಬೆವರು ಇತರೆ ಯಾವುದೇ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಓ.ಆರ್.ಎಸ್ ಪಾಕೇಟಗಳು ಹೆಚ್ಚಾಗಿ ಇಡಬೇಕು ಮತ್ತು ವೈದ್ಯರು ತಮ್ಮ ಕರ್ತವ್ಯದ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದು, ಜನರಿಗೆ ಯಾವುದೇ ತೊಂದರೆಯಾಗದAತೆ ಸೇವೆ ನೀಡಬೇಕು. ಬಿಸಿಲು ಹೆಚ್ಚಾದಾಗ ಅಗ್ನಿ ಅವಘಡಗಳು ಹೆಚ್ಚಾಗಿ ನಡೆಯುತ್ತವೆ ಹಾಗಾಗಿ ಯಾವುದೇ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳನ್ನು ತೈಯಾರಿಯಲ್ಲಿ ಇರುವಂತೆ ನೋಡಿಕೊಳ್ಳಬೇಕೆಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಅವರು ಮಾತನಾಡಿ ಮೇ- ಜೂನ್ ವರೆಗೆ ಬಿಸಿಲು ಹೆಚ್ಚಾಗಿ ಇರುವುದರಿಂದ ಜನರು ಅನಗತ್ಯವಾಗಿ ಓಡಾಡಬಾರದು. ಜನರು ಹೊಲಗಳಿಗೆ ಹೋಗುವಾಗ ನೀರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು. ಒಳ್ಳೆಯ ಗಾಳಿ ಬೆಳಕು ಇರುವ ಮನೆಗಳಲ್ಲಿ ಇರಬೇಕು. ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ತಮ್ಮ- ತಮ್ಮ ಆಸ್ಪತ್ರೆಗಳಲ್ಲಿ ಇದ್ದು, ಎಲ್ಲಾ ಮೆಡಿಸಿನ್ ಹಾಗೂ ಓ.ಆರ್.ಎಸ್. ಪಾಕೇಟಗಳನ್ನು ಆಸ್ಪತ್ರೆಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಅವರು ಮಾತನಾಡಿ ಎಲ್ಲಾ ಆಸ್ಪತ್ರೆಗಳಲ್ಲಿ ಓ.ಆರ್.ಎಸ್. ಇದೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಡಿ ಹೈಡ್ರೆಟನಿಂದ ಬಳಲುತ್ತಿರುವ ಯಾವುದೇ ಒಂದು ಕೇಸ್ ದಾಖಲಾದರು ಆ ಮಾಹಿತಿಯನ್ನು ನಮ್ಮ ಗಮನಕ್ಕೆ ತರಬೇಕೆಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು.