ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಅವರ ಕೆಲಸ ಮಾತ್ರ, ಸರ್ಕಾರಿ ನೌಕರರಿಗೆ ಮಾದರಿಯಾದಂತದ್ದು. ಹೀಗಾಗಿಯೇ ಇಂದು ಅವರಿಗೆ ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಶಾರದಾಂಬ ಕಲ್ಯಾಣ ಮಂಟಪದಲ್ಲಿ ದಿವಂಗತ ವೆಂಕಟರಮಣ ಆಚಾರ್ ಶಿಷ್ಯ ಬಳಗದ ವತಿಯಿಂದ ಮೊದಲ ಬಾರಿಗೆ ನೀಡುವಂತ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿಯನ್ನು ಬಿಇಒ ಪರಶುರಾಮ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಈ ದೇಶದ ಆಸ್ತಿ ಅಂದ್ರೆ ಅದು ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು. ಸಾಗರ ತಾಲ್ಲೂಕಿನಲ್ಲಿ ಈ ರೀತಿಯ ಪ್ರಾಮಾಣಿಕ ಅಧಿಕಾರಿಯಾಗಿ ಪರಶುರಾಮ್ ಸಿಕ್ಕಿರುವುದು ನಮ್ಮ ಪುಣ್ಯ. ತಮಗೆ ಸಿಕ್ಕಿರುವಂತ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ಸಾಮಾಜಿಕ ಸೇವೆಯ ಜೊತೆಗೆ ಸಾಮಾಜಿಕ ಕಳಕಳಿಯ ಕೆಲಸ ಮಾಡಲಿ ಎಂದರು.
ದಿ.ವೆಂಕಟರಮಣ ಆಚಾರ್ ಅವರು ಸರ್ಕಾರಿ ನೌಕರರಿಗೆ ಎಷ್ಟು ನಿಷ್ಠೆಯಿಂದ ಕೆಲಸ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟು, ಮಾದರಿಯಾಗಿದ್ದಾರೆ. ಅವರ ಸತ್ಯ, ಪ್ರಾಮಾಣಿಕತೆಯನ್ನು, ಕರ್ತವ್ಯ ಬದ್ಧತೆಯನ್ನು ಸರ್ಕಾರಿ ನೌಕರರು ಅಳವಡಿಸಿಕೊಳ್ಳಬೇಕು. ಅವರ ಹೆಸರಿನ ಮೊದಲ ಪ್ರಶಸ್ತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮ್ ಅವರಿಗೆ ನೀಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ದಿ.ವೆಂಕಟರಮಣ ಆಚಾರ್ ಶಿಷ್ಯ ಬಳಗದ ಪ್ರಧಾನ ಸಂಚಾರ ಮಾ.ಸ ನಂಜುಂಡಸ್ವಾಮಿ ಮಾತನಾಡಿ, ಈ ಸಮಾಜದಲ್ಲಿ ದುಷ್ಟರು, ಭ್ರಷ್ಟರು ಬೇಗ ಒಂದಾಗುತ್ತಾರೆ. ಆದ್ರೇ ಸಜ್ಜನರು ಒಂದಾಗೋದು ಕಷ್ಟ. ವೆಂಕಟರಮಣ ಆಚಾರ್ ನಿಧನರಾಗಿ ಒಂದು ವರ್ಷಾಯ್ತು. ಅವರ ನೆನಪಿಗಾಗಿ ಇಂದು ಮೊದಲಿಗೆ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇನ್ಮುಂದೆ ಪ್ರತಿ ವರ್ಷ ನೀಡಲಾಗುತ್ತದೆ. ಈ ವರ್ಷ ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸೋ ಜೊತೆಗೆ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಂತ ಬಿಇಒ ಪರಶುರಾಮ್ ಅವರಿಗೆ ನೀಡಿರುವುದು, ಬಳಗಕ್ಕೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದಂತ ಬಿಇಒ ಪರಶುರಾಮ್, ನಾನು ವೆಂಕಟರಮಣ ಆಚಾರ್ ಅವರಿಂದ ಪ್ರಭಾವಿತನಾದವನಾಗಿದ್ದೇನೆ. ಸರ್ಕಾರಿ ನೌಕರರು ಹೇಗಿರಬೇಕು ಅಂತ ಅವರೇ ಸಾಕ್ಷಾತ್ ಉದಾಹರಣೆಯಾಗಿದ್ದಾರೆ. KCSR ನಿಯಮ ಅರ್ಥ ಮಾಡಿಕೊಂಡು, ಸಂಕಷ್ಟದಲ್ಲಿರುವ ನೌಕರರಿಗೆ ನೆರವು ನೀಡಿದ ಹೆಗ್ಗಳಿಕೆ ಅವರದ್ದು ಆಗಿದೆ. ಅವರ ಹೆಸರಿನ ಪ್ರಶಸ್ತಿ ನೀಡಿದ್ದು, ನನ್ನ ಕೆಲಸಕ್ಕೆ ಹುರುಪು ತುಂಬಿದಂತೆ ಆಗಿದೆ. ನಾನು ಅತ್ಯಂತ ವಿನೀತನಾಗಿ ಸ್ವೀಕರಿಸಿದ್ದೇನೆ ಅಂತ ಹೇಳಿದರು.
ಅಂದಹಾಗೇ ಸಾಗರ ತಾಲ್ಲೂಕಿನ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವಂತ ಪರಶುರಾಮ್ ಅವರು, ತಾಲ್ಲೂಕಿನ ಶೈಕ್ಷಣಿಕ ಕಾರ್ಯಗಳಲ್ಲಿ ಮುಲಾಜಿಗೆ ಒಳಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವಂತವರು. ಸರ್ಕಾರಿ ಅಧಿಕಾರಿಯಾಗಿ ಇವರು ಸಾರ್ವಜನಿಕರೊಂದಿಗೆ ತೋರುವ ನಡೆ ಮಾತ್ರ, ಎಲ್ಲರಿಗೂ ಮಾದರಿ. ಇವರನ್ನು ಭೇಟಿಯಾದ ಪ್ರತಿಯೊಬ್ಬರು ಹೇಳುವ ಮಾತು ಕೂಡ ಅದೇ. ಇಂತಹ ಪರಶುರಾಮ್ ಅವರಿಗೆ ಇಂದು ಪ್ರಾಮಾಣಿಕ ಸರ್ಕಾರಿ ಅಧಿಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು ಮಾತ್ರ, ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದಂತೆ ಆಗಿದೆ ಅನ್ನೋದು ತಾಲ್ಲೂಕಿನ ಜನತೆಯ ಮಾತಾಗಿದೆ.
ಇದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಜಿ.ನಾಗೇಶ್ ಅವರು ಬರೆದಂತ ಲೋಕ ಹಿತಕರ ವೆಂಕಟರಮಣ ಆಚಾರ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ ಸ್ವಾಮಿ, ಪ್ರೇಮಕುಮಾರಿ, ಮಹಬಲೇಶ್ವರ.ಜಿ, ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಹಿಮಾಚಲ ಮೇಘಸ್ಫೋಟ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, 40ಕ್ಕೂ ಹೆಚ್ಚು ಮಂದಿ ನಾಪತ್ತೆ | Himachal cloudbursts