ಬೆಂಗಳೂರು : ಬೆಂಗಳೂರಿಗೆ ಬಂದಾಗಲೆಲ್ಲಾ ಎಚ್.ಎಂ.ಟಿ., ಕೆ.ಐ.ಓ.ಸಿ.ಎಲ್. ಬಗ್ಗೆ ಮಾತನಾಡುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, 10 ವರ್ಷವಾದರೂ ಆರಂಭವೇ ಆಗದ ಎನ್.ಎಂ.ಡಿ.ಸಿ. ಉಕ್ಕು ಕಾರ್ಖಾನೆ, ಪುನಶ್ಚೇತನ ಆಗದ ವಿಐಎಸ್ಎಲ್ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಹಿಂದೂಸ್ತಾನ್ ಮಷೀನ್ ಅಂಡ್ ಟೂಲ್ಸ್ (ಹೆಚ್ಎಂಟಿ) ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (ಕೆಐಒಸಿಎಲ್) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಹಸಿ ಸುಳ್ಳು ಹೇಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಚ್.ಎಂ.ಟಿ. ಭೂಮಿ ಡಿನೋಟಿಫಿಕೇಷನ್ ಆಗಿಲ್ಲ ಎಂಬುದು ಸುಳ್ಳೆ? ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದ ಭೂಮಿ ಅರಣ್ಯವಾಗೇ ಉಳಿಯುತ್ತದೆ ಎಂಬುದು ಸುಳ್ಳೇ? ಎಚ್.ಎಂ.ಟಿ. 300 ಕೋಟಿ ರೂ.ಗೆ 165 ಎಕರೆ ಅರಣ್ಯ ಭೂಮಿ ಮಾರಾಟ ಮಾಡಿರುವುದು ಸುಳ್ಳೇ? ಕೆ.ಐ.ಓ.ಸಿ.ಎಲ್. ಗಣಿಗಾರಿಕೆ ಮಾಡುವಾಗ ಲಕ್ಯಾಂಡ್ಯಾಂ, ಅರಣ್ಯ, ಪರಿಸರಕ್ಕೆ ಹಾನಿ ಮಾಡಿರುವುದು ಸುಳ್ಳೇ? ಅರಣ್ಯ ಇಲಾಖೆಗೆ ಕೆಐಓಸಿಎಲ್ ಭೂಮಿಯನ್ನು ಹಸ್ತಾಂತರ ಮಾಡದಿರುವುದು ಸುಳ್ಳೇ? ದೇವದಾರಿ ಗಣಿಗೆ ಅರಣ್ಯ ಭೂಮಿ ನೀಡಬಾರದು ಎಂದು ಅರಣ್ಯ ಇಲಾಖೆ 2020ರ ಜನವರಿ 16ರಂದು ಶಿಫಾರಸ್ಸು ಮಾಡಿರುವುದು ಸುಳ್ಳೆ? ಅರಣ್ಯ ಇಲಾಖೆಯ ವಿರೋಧವಿದ್ದರೂ, ಅಂದಿನ ಬಿಜೆಪಿ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವಂತೆ 2020ರ ಅಕ್ಟೋಬರ್ 9ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸುಳ್ಳೆ? ಅರಣ್ಯ ಇಲಾಖೆಯ ಪ್ರತಿರೋಧವಿದ್ದ ಗಣಿ ಯೋಜನೆಗೆ ಕೇಂದ್ರ ಪರಿಸರ ಸಚಿವಾಲಯ 2021 ಆಗಸ್ಟ್ 13ರಂದು ಅನುಮತಿ ನೀಡಿದ್ದು ಸುಳ್ಳೆ? ಯಾವುದು ಹಸಿಸುಳ್ಳು ಎಂದು ಪ್ರಶ್ನಿಸಿದ್ದಾರೆ.
ಕೆಐಓಸಿಎಲ್.ನ 300 ಹೊರಗುತ್ತಿಗೆ ನೌಕರರ ಉದ್ಯೋಗದ ಬಗ್ಗೆ ಮಾತನಾಡುವ ಕುಮಾರ ಸ್ವಾಮಿ, 50 ಸಾವಿರ ಉದ್ಯೋಗ ಸೃಷ್ಟಿಸುವ ಮತ್ತು ತಾವೇ ನಿರ್ವಹಿಸುತ್ತಿರುವ ಉಕ್ಕು ಸಚಿವಾಲಯದಡಿ ಬರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ)ದ ಉಕ್ಕು ಕಾರ್ಖಾನೆ ಸ್ಥಾಪನೆ ಮತ್ತು ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಪುನಶ್ಚೇತನದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಎನ್.ಎಂ.ಡಿ.ಸಿ. 2014ರಲ್ಲಿಯೇ ಬಳ್ಳಾರಿ ಜಿಲ್ಲೆಯಲ್ಲಿ ಉಕ್ಕು ಕಾರ್ಖಾನೆ ಆರಂಭಿಸುವುದಾಗಿ ಹೇಳಿ ಸಾವಿರಾರು ಎಕರೆ ಭೂಮಿ ಪಡೆದಿದೆ. 10 ವರ್ಷ ಕಳೆದರೂ ಈ ಕಾರ್ಖಾನೆ ಆರಂಭವೇ ಆಗಿಲ್ಲ. ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ಆರ್.ಎನ್.ಐ.ಎಲ್.)ಯನ್ನು, ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಒತ್ತಾಸೆಯ ಮೇರೆಗೆ ಕೇವಲ ನಲವತ್ತೆಂಟು ಗಂಟೆಗಳ ಒಳಗಾಗಿ ಪುನಶ್ಚೇತನ ಮಾಡಿದ್ದಾಗಿ ಅವರು ಹೇಳಿದ್ದಾರೆ. ಎನ್.ಎಂ.ಡಿ.ಸಿ.ಗೆ ಕೇಂದ್ರ ಹಣಕಾಸು ಸಚಿವರಿಂದ ದುಡಿಯುವ ಬಂಡವಾಳ ಕೊಡಿಸಿ ಉಕ್ಕು ಕಾರ್ಖಾನೆ ಆರಂಭಿಸಿದರೆ 50 ಸಾವಿರ ಜನರಿಗೆ ಉದ್ಯೋಗ ಕೊಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಳ್ಳಾರಿ ಬಳಿ ವೇಣಿವೀರಾಪುರದಲ್ಲಿ 2857.54 ಎಕರೆ ಜಮೀನನ್ನು 2014ರಲ್ಲೇ ರಾಜ್ಯ ಸರ್ಕಾರ ಎನ್.ಎಂ.ಡಿ.ಸಿ.ಗೆ ನೀಡಿದೆ. ಭೂ ಸ್ವಾಧೀನಪತ್ರ ದೊರೆತ 5 ವರ್ಷದಲ್ಲಿ ಉಕ್ಕು ಕಾರ್ಖಾನೆ ಆರಂಭವಾಗಬೇಕಿತ್ತು, ಆದರೆ ದಶಕ ಕಳೆದರೂ ಏಕೆ ಕಾರ್ಖಾನೆ ಆರಂಭ ಆಗಿಲ್ಲ. ಇತ್ತ ಈ ಭೂಮಿಯಲ್ಲಿ ರೈತರು ಬೆಳೆಯೂ ಬೆಳೆಯದಂತೆ ಆಗಿದೆ. ಸಾಗುವಳಿ ಮಾಡಲಾಗದೆ, ಕೆಲಸವೂ ಸಿಗದೆ ಸಂಕಷ್ಟದಲ್ಲಿರುವ ರೈತರ ಪರವಾಗಿ ಕುಮಾರಸ್ವಾಮಿ ಮಾತನಾಡಲಿ ಎಂದು ಅರಣ್ಯ ಸಚಿವರು ಹೇಳಿದ್ದಾರೆ.
ದೇವದಾರಿ ದಟ್ಟಡವಿ, ಕುರುಚಲು ಕಾಡಲ್ಲ:
ದೇವದಾರಿ ಗಣಿಗಾರಿಕೆಯ ಸಂಪೂರ್ಣ ಯೋಜನಾ ವೆಚ್ಚವೇ 1783 ಕೋಟಿ. ಈ ಗಣಿ ಆರಂಭವಾದರೆ ಸಾವಿರಾರು ಎಕರೆ ಅರಣ್ಯ ಭೂಮಿ ನಾಶವಾಗಲಿದೆ, ಒಂದು ಲಕ್ಷ ವೃಕ್ಷಗಳಿಗೆ ಕೊಡಲಿ ಪೆಟ್ಟು ಬೀಳಲಿದೆ. ದೇವದಾರಿ ಗಣಿಗೆ ಗುರುತು ಮಾಡಿರುವ ಅರಣ್ಯ ಪ್ರದೇಶ ಕುರುಚಲು ಕಾಡು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅದು ಎಲೆ ಉದುರುವ ನೈಸರ್ಗಿಕ ಕಾನನ ಮೊದಲು ಅವರು ಆ ಕಾಡಿಗೆ ಭೇಟಿ ನೀಡಿ ನೋಡಿ ಬಂದು ನಂತರ ಮಾತನಾಡಲಿ ಎಂದು ಈಶ್ವರ ಖಂಡ್ರೆ ಸಲಹೆ ಮಾಡಿದ್ದಾರೆ.
ಈಗಾಗಲೇ ಎನ್.ಎಂ.ಡಿ.ಸಿ.ಯು ಸಂಡೂರಿನಲ್ಲಿ “ದೋಣಿಮಲೈ ಕಬ್ಬಿಣದ ಅದಿರು ಗಣಿ” ಮತ್ತು “ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ” ಎಂಬ ಎರಡು ಬೃಹತ್ ಗಣಿಗಳನ್ನು ಹೊಂದಿದೆ. ಇವೆರಡರಿಂದ ವಾರ್ಷಿಕ 15.62 ದಶಲಕ್ಷ ಟನ್ ಅದಿರು ಉತ್ಪಾದನೆಯಾಗುತ್ತಿದೆ.
ಬಿಜೆಪಿಯ ವಿಧಾನಪರಿಷತ್ ಸದಸ್ಯರ ನೇತೃತ್ವದ ನಿಯೋಗವೊಂದು ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಎನ್.ಎಂ.ಡಿ.ಸಿ. ಮತ್ತು ಕೆ.ಐ.ಓ.ಸಿ.ಎಲ್. ಕಂಪನಿಗಳನ್ನು ವಿಲೀನ ಮಾಡುವಂತೆ ಮನವಿ ಮಾಡಿದೆ. ಕುಮಾರಸ್ವಾಮಿ ಈ ಎರಡೂ ಕಂಪನಿ ವಿಲೀನ ಮಾಡಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಏಕೆ ವಿಲೀನ ಮಾಡುತ್ತಿಲ್ಲ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ವಿ.ಐ.ಎಸ್.ಎಲ್. ಪುನಶ್ಚೇತನ ಏಕಿಲ್ಲ?
ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರು ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸುವ ಮಾತನಾಡಿದ್ದಾರೆ. ಆದರೆ, ಭದ್ರಾವತಿಯ ವಿಶ್ವೇಶ್ವರ ಕಬ್ಬಿಣ ಕಾರ್ಖಾನೆ–ವಿ.ಐ.ಎಸ್.ಎಲ್. ಪುನರುಜ್ಜೀವನಕ್ಕೆ ಇವರು ಕೈಗೊಂಡ ಕ್ರಮವೇನು? ಕಾರ್ಖಾನೆಯನ್ನು ಮುಚ್ಚುತ್ತಿರುವುದಾಗಿ ಕುಮಾರಸ್ವಾಮಿ ಅವರೇ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ ಇದು ಸುಳ್ಳೇ ಎಂದು ಪ್ರಶ್ನಿಸಿದ್ದಾರೆ.
ಇವರೇ ವಿ.ಐ.ಎಸ್.ಎಲ್.ಗೆ ಭೇಟಿ ನೀಡಿ ಕಂಪನಿ ಪುನಶ್ಚೇತನ ಮಾಡುವುದಾಗಿ ಹೇಳಿ ಬಂದಿದ್ದರು. ದೆಹಲಿಗೆ ಹೋದ ಬಳಿಕ ಕಾರ್ಖಾನೆ ಮುಚ್ಚುವುದಾಗಿ ಸಂಸತ್ತಿಗೆ ಲಿಖಿತ ಉತ್ತರ ನೀಡುತ್ತಾರೆ ಹಾಗಾದರೆ ಹಸಿ ಸುಳ್ಳು ಹೇಳುತ್ತಿರುವುದು ಯಾರು? ಎಂದು ಈಶ್ವರ ಖಂಡ್ರೆ ತಿರುಗೇಟು ನೀಡಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಇಲ್ಲ:
ಅಭಿವೃದ್ಧಿಯ ವಿಚಾರದಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ ಎಂದು ಪುನರುಚ್ಚರಿಸಿರುವ ಅರಣ್ಯ ಸಚಿವರು, ಕೆ.ಐ.ಓ.ಸಿ.ಎಲ್. ಅಧಿಕಾರಿಗಳ ಸಭೆ ಕರೆದು, ಆ ಕಂಪನಿ ಹಿಂದೆ ಗಣಿಗಾರಿಕೆ ಮಾಡುವಾಗ ಏನೆಲ್ಲಾ ಪರಿಸರ ಹಾನಿ ಮಾಡಿದೆ, ಎಷ್ಟು ಭೂಮಿ, ಎಷ್ಟು ಹಣ ಅರಣ್ಯ ಇಲಾಖೆಗೆ ಕೊಡಬೇಕು ಎಂಬ ಬಗ್ಗೆ ಮಾಹಿತಿ ಪಡೆಯಲಿ. ಅವರು ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆ ಉಳಿಸುವ ಮಾತನಾಡುತ್ತಾರೆ. ನಾನು ಅರಣ್ಯ, ಪರಿಸರ ಸಚಿವನಾಗಿ ಅರಣ್ಯ, ಪರಿಸರ ಉಳಿಸುವ ಮಾತನಾಡುತ್ತಿದ್ದೇನೆ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಚರ್ಚೆಗೆ ಸಿದ್ಧ:
ನಂದಗೊಂಡನಹಳ್ಳಿಯಲ್ಲಿ ಅಕ್ರಮವಾಗಿ ಮರ ಕಡಿದವರ ಪರ ವಹಿಸಿ ಕ್ಷುಲ್ಲಕ ರಾಜಕಾರಣ ಮಾಡಿದವರು ಯಾರು ಎಂಬುದು ರಾಜ್ಯಕ್ಕೆ ತಿಳಿದಿದೆ. ನಾನು ಎಂದಿಗೂ ಕ್ಷುಲ್ಲಕ ರಾಜಕಾರಣ ಮಾಡಿಲ್ಲ ಎಂದು ಹೇಳಿರುವ ಈಶ್ವರ ಖಂಡ್ರೆ, ಎಚ್.ಎಂ.ಟಿ. ಪ್ರಕರಣ ಈಗ ಸುಪ್ರೀಂಕೋರ್ಟ್ ನಲ್ಲಿದೆ. ಈ ವಿಚಾರದಲ್ಲಿ ಮಾತುಕತೆ, ಸಂಧಾನ ಸಾಧ್ಯವಿಲ್ಲ. ಇನ್ನು ಕೆಐಓಸಿಎಲ್ ವಿಚಾರದಲ್ಲಿ ಯಾವುದೇ ಚರ್ಚೆಗೆ ಎಲ್ಲ ದಾಖಲೆಗಳೊಂದಿಗೆ ನಾನೂ ಸಿದ್ಧ ಎಂದೂ ಪ್ರತಿ ಸವಾಲು ಹಾಕಿದ್ದಾರೆ.
ED ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್: ಆರ್.ಅಶೋಕ್
BREAKING: ‘ಬಿಲ್ಲವ ಸಮುದಾಯ’ದ ಹೆಣ್ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ‘ಅರಣ್ಯಾಧಿಕಾರಿ ಅರೆಸ್ಟ್’