ಮಂಡ್ಯ: ಕ್ಷೇತ್ರದ ಸಂಸದರು ಹಾಗೂ ಕೇಂದ್ರದ ಭಾರೀ ಕೈಗಾರಿಕೆ, ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದಲ್ಲಿ ಭಾನುವಾರ ಭತ್ತ ನಾಟಿ ಮಾಡಿದರು.
ಮೂಲತಃ ಕೃಷಿಕರೂ ಆಗಿರುವ ಸಚಿವರು ತಮ್ಮ ಸ್ವಕ್ಷೇತ್ರದಲ್ಲಿ ಭತ್ತನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರಲ್ಲದೆ, ಕೃಷಿಕರ ಜತೆ ಆತ್ಮೀಯವಾಗಿ ಬೆರೆತು ಭತ್ತ ನಾಟಿ ಮಾಡಿದರು. ತಂದೆಗೆ ನಿಖಿಲ್ ಕುಮಾರಸ್ವಾಮಿ ಕೂಡ ಸಾಥ್ ನೀಡಿದರು.
ಬಿಳಿ ಅಂಗಿ, ಪಂಚೆ ಧರಿಸಿದ್ದ ಸಚಿವರು, ನೂರಾರು ರೈತಾಪಿ ಮಹಿಳೆಯರು, ಪುರುಷರ ಜತೆ ಸೇರಿ ಗದ್ದೆಗೆ ಇಳಿದರಲ್ಲದೆ, ಬಹಳ ಹೊತ್ತು ಭತ್ತ ನಾಟಿ ಮಾಡಿದರು. ಜತೆಗೆ, ಭತ್ತ ನಾಟಿ ಯಂತ್ರವನ್ನು ಚಾಲನೆ ಮಾಡಿ ಕೃಷಿಕರಿಗೆ ಉತ್ಸಾಹ ತುಂಬಿದರು.
ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು, ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಶಾಸಕ ಮಂಜುನಾಥ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಸೇರಿದಂತೆ ಅನೇಕ ಮುಖಂಡರು ಭತ್ತ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಮ್ಮ ಹಳ್ಳಿಯಲ್ಲಿ ಭತ್ತ ನಾಟಿ ಮಾಡಲು ಬಂದ ಸಚಿವರಿಗೆ ಆರತಿ ಬೆಳಗಿ ಸ್ವಾಗತ ಕೋರಿದ ಮಹಿಳೆಯರು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು. ಇದೇ ವೇಳೆ ಸಚಿವರು ಕಾವೇರಿ ನದಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.
ಇಡೀ ಸೀತಾಪುರ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ರಸ್ತೆಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಕ್ರೇನ್ ಮೂಲಕ ಬೃಹತ್ ಭತ್ತದ ಹಾರ ಹಾಕುವ ಮೂಲಕ ಸಚಿವರನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಇದೇ ವೇಳೆ ಸಚಿವರು ರಸ್ತೆಯ ಹೋಟೆಲ್ ನಲ್ಲಿ ಚಹಾ ಸೇವನೆ ಮಾಡಿದರು.
ನೂರಾರು ರೈತ ಮಹಿಳೆಯರೊಂದಿಗೆ ಭತ್ತ ನಾಟಿ ಮಾಡುವ ಮುನ್ನ ಸಚಿವರು ಪೈರು, ಕಣಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಜನರು ನೆರೆದಿದ್ದರು.
ನನ್ನ ಬದುಕು ಧನ್ಯ ಎಂದ ಸಚಿವರು
ಭತ್ತ ನಾಟಿ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ಭಾವುಕರಾದ ಕೇಂದ್ರ ಸಚಿವರು, ನಾನು ಧನ್ಯ ಎಂದರು.
2018ರಲ್ಲಿ ನಾನು ಸಿಎಂ ಆಗಿದ್ದಾಗ ಇದೇ ಸೀತಾಪುರ ಗ್ರಾಮದಲ್ಲೇ ಭತ್ತ ನಾಟಿ ಮಾಡಿದ್ದೆ. ಅಂದು ಕೂಡ ಆಗಸ್ಟ್ 11ರಂದೇ ಭತ್ತದ ನಾಟಿ ಮಾಡಿದ್ದೆ. ಈಗ ಅದೇ ದಿನಾಂಕದಲ್ಲಿ ಮತ್ತೆ ಭತ್ತ ನಾಟಿ ಮಾಡಿದೇನೆ. ಇದು ಕಾಕತಾಳೀಯ ಅನ್ನಿಸುತ್ತಿದೆ. ಈಗ ಕೇಂದ್ರ ಸಚಿವನಾಗಿ, ಮಂಡ್ಯ ಜಿಲ್ಲೆ ಸಂಸದನಾಗಿ ಭತ್ತ ನಾಟಿ ಮಾಡಿದ್ದೇನೆ. ಇದಕ್ಕಿಂತ ಮಹಾಭಾಗ್ಯ ಏನಿದೆ? ಎಂದರು ಅವರು.
ರೈತ ಮಹಿಳೆಯರ ಜತೆಗೂಡಿ ಭತ್ತದ ನಾಟಿ ಮಾಡಿದ್ದೇನೆ. ಈ ಭಾಗದ ರೈತರು ನಾಯಕರು ಮತ್ತೆ ನಾಟಿಗೆ ಬನ್ನಿ ಎಂದು ಪ್ರೀತಿಯಿಂದ ಕರೆದರು. ಸಿಎಂ ಆಗಿದ್ದಾಗ ಮೊದಲ ಬಾರಿಗೆ ನಾಟಿ ಮಾಡಿದ್ದೆ. ಈಗ ಕೇಂದ್ರದ ಮಂತ್ರಿ ಆಗಿದ್ದೇನೆ. ರೈತರಿಗೆ ಆತ್ಮಸೈರ್ಯ ತುಂಬಲು ಈ ರೀತಿ ಕೆಲಸ ಮಾಡಬೇಕು. 2018ರಲ್ಲಿ ನಾಟಿ ಮಾಡಿದಾಗ ಉತ್ತಮ ಉಳುವರಿ ಬಂದಿತ್ತು. ನಾಟಿಯ ಜತೆಗೆ ಬೆಳೆಗೆ ಕೈಗೆ ಬಂದಾಗ ಪೂಜೆಯನ್ನು ಸಹ ಮಾಡಿದ್ದೆ. ನಮ್ಮ ರೈತರ ಬದುಕಿನ ಕಷ್ಟಗಳನ್ನು ನೋಡಿ ಅನುಭವಿಸಿದ್ದೇವೆ.
ಎಷ್ಟೇ ಕಷ್ಟ ಬಂದರು ರೈತರು ಬೆಳೆಯನ್ನು ಬೆಳೆಯುತ್ತಾರೆ. ಈ ದೇಶ ಉಳಿಯಲು ರೈತರು ಉಳಿಯಬೇಕು ಎಂದರು ಸಚಿವರು.
ಬಹಳ ಖುಶಿಯಾಗಿದೆ
ಇವತ್ತಿನ ಕಾರ್ಯಕ್ರಮ ವಯಕ್ತಿಕವಾಗಿ ಖುಷಿ ಕೊಟ್ಟಿದೆ. ನಮ್ಮ ಮೂಲ ವೃತ್ತಿಯೇ ರೈತನ ವೃತ್ತಿ. ತಾಯಂದಿರು, ಅಕ್ಕ ತಂಗಿಯರ ಜತೆಯಲ್ಲಿ ನಾಟಿಯಲ್ಲಿ ಭಾಗಿಯಾಗಿದ್ದು ನನ್ನ ಬದುಕಿನಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಾದ ಕ್ಷಣವಾಗಿದೆ. ಇದೆಲ್ಲವೂ ದೇವರ ಇಚ್ಛೆ. ಜನರು ತಮ್ಮ ಮನೆಯ ಮಗನಿಗೆ ಕೊಡುವ ಪ್ರೀತಿ ಕೊಟ್ಟಿದ್ದಾರೆ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಋಣವನ್ನ ಒಳ್ಳೆಯ ಕೆಲಸದ ಮೂಲಕ ತೀರಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಭಾರತಕ್ಕೆ ನುಸುಳುತ್ತಿದ್ದ 11 ಬಾಂಗ್ಲಾದೇಶಿ ಪ್ರಜೆಗಳ ಬಂಧನ: BSF ಮಾಹಿತಿ | Bangladeshi
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್: ಡಿಕೆಶಿ ವಿರುದ್ಧ ಆರ್.ಅಶೋಕ್ ಹಿಗ್ಗಾಮುಗ್ಗಾ ವಾಗ್ಧಾಳಿ