ಬೆಂಗಳೂರು: ನೀವು ಕ್ಲೀನಾಗಿ ಮೈಸೂರು ‘ಮೂಡ’ದ 14 ಸೈಟ್ ನುಂಗಿದ್ದೀರಲ್ಲವೇ? ನೀವ್ಯಾವ ಸೀಮೆಯ ಕ್ಲೀನ್ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.
ಮಂಡ್ಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮೊನ್ನೆ ಬಹಳ ದುಃಖದಿಂದ ನಾನು ಕ್ಲೀನ್ ಎಂದು ಪತ್ರಿಕಾ ಸಂದರ್ಶನದಲ್ಲಿ ಹೇಳಿದ್ದಾರೆ. 40 ವರ್ಷಗಳ ರಾಜಕಾರಣದಲ್ಲಿ ನಾನು ಕ್ಲೀನ್ ಎಂದಿದ್ದಾರೆ ಎಂದು ವ್ಯಂಗ್ಯವಾಡಿದರು. ಹಿಂದೆ ರೀಡೂ ಸಂಬಂಧ ನಾಕೈದು ಸಾವಿರ ಕೋಟಿಯ ಹಗರಣ ಆಗಿತ್ತು. ಆ ಹಗರಣದಲ್ಲಿ ನೀವೇ ನಂಬರ್ ಒನ್. ಆಗ ಕೆಂಪಣ್ಣ ಆಯೋಗ ಮಾಡಿದ್ದೀರಿ. ಆರು ತಿಂಗಳು ಅವಕಾಶ ಕೊಡಲಾಗಿತ್ತು. ಆರು ವರ್ಷವಾದರೂ ವರದಿ ಮಂಡಿಸಿಲ್ಲ; ಇನ್ನು 60 ವರ್ಷ ಆಗಲು ನಾವು ಕಾಯಬೇಕಿದೆ; ಕೆಂಪಣ್ಣ ವರದಿ ಏನು ಹೇಳಿದೆ ಎಂದು ಕಾಯುತ್ತಿದ್ದೇವೆ ಎಂದರು.
ಈಗ ದೇಸಾಯಿ ಆಯೋಗ ಮಾಡಿದ್ದೀರಿ. ಸಿದ್ದರಾಮಯ್ಯನವರು ಈ ಆಯೋಗಕ್ಕೆ ಎಷ್ಟು ತಿಂಗಳು ಕೊಡುತ್ತಾರೆ ಎಂದು ಮೊದಲೇ ತಿಳಿಸಬೇಕು. ಇದಕ್ಕೂ 6 ತಿಂಗಳು, ಆಮೇಲೆ 6 ವರ್ಷ, ನಂತರ 60 ವರ್ಷವೇ ಎಂದು ಪ್ರಶ್ನಿಸಿದರು. ಕ್ಲೀನ್ ಪಟ್ಟವನ್ನು ರಾಜ್ಯದ ಜನರು ಕೊಡಬೇಕಿತ್ತು. ರಾಜ್ಯದ ಜನರು ಕೊಟ್ಟಿಲ್ಲ. ನಿಮ್ಮನ್ನೇ ನೀವೇ ಕ್ಲೀನ್ ಎಂದು ಹೊಗಳಿಕೊಂಡಿದ್ದೀರಿ. ಆ ಪರಿಸ್ಥಿತಿಗೆ ನೀವು ಬಂದುದನ್ನು ನಾವು ನೋಡುತ್ತಿದ್ದೇವೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಮಾಡಿ ಅದನ್ನು ಪುಟಗಟ್ಟಲೆ ಜಾಹೀರಾತಾಗಿ ನೀಡಿದ್ದಾರೆ. ಕರ್ನಾಟಕದ ಯಾವುದೇ ಸಿಎಂ ಈ ಥರ ಮಾಡಿದ್ದಾರಾ? ವಿಧಾನಸಭೆಗೆ ಒಂದು ಗೌರವ, ಪಾವಿತ್ರö್ಯ ಇದೆ. ನೀವು ಅದನ್ನು ಉಲ್ಲಂಘಿಸಿದ್ದೀರಿ ಎಂದು ಆಕ್ಷೇಪಿಸಿದರು. ದುಡ್ಡಿದ್ದ ಶಾಸಕ ಪುಟಗಟ್ಟಲೆ ಬರೆಸಿದರೆ, ಎಂಎಲ್‌ಎ ಆಗಿ ಗೆದ್ದು ಬಂದ ಬಡವÀರ ಕಥೆ ಏನು ಎಂದು ಕೇಳಿದರು. ದುಡ್ಡನ್ನೇ ಅಳತೆಗೋಲು ಮಾಡುವುದು ಎಷ್ಟು ಸರಿ ಎಂದು ಕೇಳಿದರು. ಕಾಂಗ್ರೆಸ್ ಸರಕಾರ ಬಂದ ಬಳಿಕ ಫ್ರೀ ಆಗಿ ದುಡ್ಡು ಹೊಡೆಯುವ ಸ್ಕೀಂಗಳನ್ನು ಜಾರಿಗೊಳಿಸಿದೆ ಎಂದು ಟೀಕಿಸಿದರು.
ಕೆಸರಲ್ಲಿ ಕಾಲಿಟ್ಟ ಸಿದ್ದರಾಮಯ್ಯ..
ಮೂಡದಲ್ಲಿ 14 ದೊಡ್ಡ ನಿವೇಶನಗಳನ್ನು ತಗೊಂಡಿದ್ದೀರಲ್ಲವೇ? ಇದು ಯಾರದು? ನಿಂಗ ಎಂಬವರ 3.16 ಎಕರೆ ಜಮೀನದು. 1936ರಲ್ಲಿ ಅವರಿಗೆ ಒಂದು ರೂಪಾಯಿಗೆ ಲಭಿಸಿದ ಜಮೀನದು. ಅವರ ಪತ್ನಿ 1990ರಲ್ಲಿ ನಿಧನ ಹೊಂದಿದ್ದರು. ನಿಂಗ-ನಿಂಗಮ್ಮರ ಸ್ವಯಾರ್ಜಿತ ಆಸ್ತಿ ಇದಾಗಿದೆ. ಸಿದ್ದರಾಮಯ್ಯನವರು ಎಲ್ಲಿ ಕೆಸರಲ್ಲಿ ಕಾಲಿಟ್ಟರೆಂದು ತಿಳಿಸುವುದಾಗಿ ಆರ್.ಅಶೋಕ್ ಅವರು ಹೇಳಿದರು.
ನಿಂಗರಿಗೆ ಮೈಲಾರಯ್ಯ, ಮಲ್ಲಯ್ಯ, ದೇವರಾಜು ಎಂಬ ಮಕ್ಕಳಿದ್ದು, ಇವತ್ತಿಗೆ ಹಕ್ಕುದಾರರು 27 ಜನ ಇದ್ದಾರೆ ಎಂದು ವಂಶವೃಕ್ಷದೊಂದಿಗೆ ವಿವರಿಸಿದರು. ನೀವು ದೇವರಾಜು ಒಬ್ಬರ ಕೈಯಲ್ಲೇ ಹೇಗೆ ಸಹಿ ಹಾಕಿಸಿಕೊಂಡಿದ್ದೀರಿ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಇದು ಪಿತ್ರಾರ್ಜಿತ ಆಸ್ತಿ ಎಂದು ನೆನಪಿಸಿದರು. 1968ರಲ್ಲಿ ಮಲ್ಲಯ್ಯ ಮತ್ತು ದೇವರಾಜು ಅವರು 464ನೇ ಸರ್ವೇ ನಂಬರ್‌ನ ಮೈಲಾರಯ್ಯ ಅವರ ಹೆಸರಿಗೆ ವರ್ಗಾಯಿಸಿದ್ದರು. 1992ರಲ್ಲಿ ಮುಡಾದವರು ಇದೂ ಸೇರಿದಂತೆ 462 ಎಕರೆ ಜಮೀನನ್ನು ಬಡಾವಣೆಗಾಗಿ ನೋಟಿಫಿಕೇಶನ್ ಮಾಡಿದ್ದರು. ಒಂದು ವರ್ಷ ಅದು ನಿಂಗ ಮತ್ತು ಜವರ ಹೆಸರಲ್ಲೇ ಇತ್ತು. 3,24,700 ರೂ.ಗಳನ್ನು 1998ರಲ್ಲಿ ಹಣ ನೀಡಿದ್ದರು. ಮಲ್ಲಯ್ಯ ಅವರು ಇದಕ್ಕೆ ಸಹಿ ಹಾಕಿ ಸ್ವೀಕರಿಸಿದ್ದರು. ಬಳಿಕ ಅದೇವರ್ಷ ಈ ಸರ್ವೇ ನಂಬರನ್ನು ಡಿನೋಟಿಫೈ ಮಾಡಿದ್ದು, ಗಜೆಟ್‌ನಲ್ಲಿ ಪ್ರಕಟಿಸಿದ್ದರು. ಹೇಗೆ ಡಿನೋಟಿಫಿಕೇಶನ್ ಆಗಿದೆ ಎಂದು ಪ್ರಶ್ನಿಸಿದರು. ಆಗ ಉಪ ಮುಖ್ಯಮಂತ್ರಿ ಆಗಿದ್ದವರು ಯಾರು? ಸಿದ್ದರಾಮಯ್ಯನವರು ಎಂದು ವಿವರ ನೀಡಿದರು. ಇಲ್ಲಿಂದಲೇ ಸಿದ್ದರಾಮಯ್ಯನವರ ಕೈವಾಡ ಶುರುವಾಯಿತು ಎಂದರು.
2001ರಲ್ಲಿ ಲೇ ಔಟ್ ಮಾಡಲು ಎಲ್ ಆಂಡ್ ಟಿಯವರಿಗೆ 11 ಕೋಟಿ 68 ಲಕ್ಷದ 6,632 ರೂಪಾಯಿಗೆ ಆದೇಶವಾಗಿದೆ. ಆಗಲೂ ಸಿದ್ದರಾಮಯ್ಯನವರು ಅದನ್ನು ನೋಡಿಕೊಂಡಿಲ್ಲ. ಬಳಿಕ ದೇವರಾಜ್ ಒಬ್ಬರ ಹೆಸರಿಗೆ ಕಾನೂನುಬಾಹಿರವಾಗಿ ಖಾತೆ ಮಾಡಿಸಿಕೊಂಡರು. 27 ಜನ ಹಕ್ಕುದಾರರಿದ್ದರೂ ಒಬ್ಬರ ಹೆಸರಿಗೆ ಖಾತೆ ಮಾಡಿಸಿದ್ದಾರೆ ಎಂದು ಆಕ್ಷೇಪಿಸಿದರು.
ಮೂಡ ಅಧಿಕಾರಿಯೂ ಪ್ರಳಯಾಂತಕ..
2004ರಲ್ಲಿ ಈ 3.16 ಎಕರೆಯನ್ನು ಸಿದ್ದರಾಮಯ್ಯನವರ ಪತ್ನಿಯ ತಮ್ಮ (ಬಾಮೈದ) ಮಲ್ಲಿಕಾರ್ಜುನಸ್ವಾಮಿ ಬಿನ್ ಮರಿಲಿಂಗಯ್ಯ ಕ್ರಯಕ್ಕೆ ಅಕ್ರಮವಾಗಿ ಪಡೆದಿದ್ದರು ಎಂದು ನೋಂದಣಿ ಪತ್ರವನ್ನು ಪ್ರದರ್ಶಿಸಿದರು. ಲೇ ಔಟ್ ಮಾಡುತ್ತಿರುವಾಗಲೇ ಅದನ್ನು 2005ರಲ್ಲಿ ಅದನ್ನು ಭೂಪರಿವರ್ತನೆ ಮಾಡಲಾಯಿತು. ತಹಸೀಲ್ದಾರ್ ಸ್ಥಳ ಮಹಜರು ಮಾಡಿದ್ದರು. ಮರಗಿಡ ಇಲ್ಲ ಎಂದು ಬರೆದಿದ್ದರು. ಎ.ಸಿ., ಡಿ.ಸಿ ಕೂಡ ಇದನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟಿದ್ದರು. ಎಂಥ ಅಮಾಯಕ-ಅಥವಾ ಬುದ್ಧಿವಂತ ಡಿ.ಸಿ. ಇವರು ಎಂದು ಪ್ರಶ್ನಿಸಿದರು. ಎನ್‌ಒಸಿ ಕೊಟ್ಟಿದ್ದ ಮೂಡ ಅಧಿಕಾರಿಯೂ ಪ್ರಳಯಾಂತಕ ಎಂದು ದೂರಿದರು.
ಇದು ಮೂಲೆಯಲ್ಲಿದ್ದ ಜಾಗ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಅದು ಮಧ್ಯದಲ್ಲೇ ಬರುತ್ತದೆ; ಅದೂ ತಪ್ಪು ಮಾಹಿತಿ ಎಂದು ನಕ್ಷೆ ನೀಡಿ ವಿವರಿಸಿದರು. ಸಿದ್ದರಾಮಯ್ಯನವರು ಈಗ ಏನೆನ್ನುತ್ತಾರೆ ಎಂದು ಕೇಳಿದರು. ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮಾಜಿ ಸಚಿವ ಮತ್ತು ಶಾಸಕ ಗೋಪಾಲಯ್ಯ, ಶಾಸಕ ಅರವಿಂದ ಬೆಲ್ಲದ, ಎಂ.ಎಲ್.ಸಿ. ರಮೇಶ್ ಗೌಡ ಮತ್ತು ಮಂಡ್ಯ ಜಿಲ್ಲೆಯ ಮುಖಂಡರು ಇದ್ದರು.
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024
Paris Olympics 2024: ಅಧಿಕ ತೂಕದಿಂದಾಗಿ ವಿನೇಶ್ ಫೋಗಟ್ 50 ಕೆಜಿ ವಿಭಾಗದಿಂದ ಅನರ್ಹ